ಮುಸ್ಲಿಮರಿಗೆ ಬಿರಿಯಾನಿ ಉಳಿದವರಿಗೆ ಉಪ್ಪಿನಕಾಯಿ: ನಿಖಿಲ್ ಕುಮಾರಸ್ವಾಮಿ
ಸಿದ್ದರಾಮಯ್ಯ ಅಲ್ಪಸಂಖ್ಯಾತರಲ್ಲಿಯೇ ಒಡೆದು ಆಳುವ ನೀತಿ ಅನುಸರಿಸಿದ್ದಾರೆ. ಹದಿನಾರು ಕಾರ್ಯಕ್ರಮಗಳನ್ನು ಕೊಡುವ ಮೂಲಕ ಮುಸ್ಲಿಮರಿಗೆ ಈದ್ ಬಿರಿಯಾನಿ ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಡಕೌಟ್ ಬಜೆಟ್ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ. ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಬಿರಿಯಾನಿ ನೀಡಿದ್ದಾರೆ. ಉಳಿದ ಅಲ್ಪಸಂಖ್ಯಾತ ಸಮುದಾಯಗಳಿಗೆ ಉಪ್ಪಿನಕಾಯಿ ಕೊಟ್ಟು ಚಪ್ಪರಿಸಿಕೊಳ್ಳಿ ಎಂದು ಹೇಳಿದ್ದಾರೆ. ಇಂತಹ ಬಜೆಟ್ ಕೊಟ್ಟವರಿಗೆ ನಾಚಿಕೆಯಾಗಬೇಕು ಎಂದು ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿದ್ದಾರೆ.
ಶನಿವಾರ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭನವದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಓಲೈಕೆ ಮಾಡುವುದಕ್ಕೂ ಒಂದು ಮಿತಿ ಇದೆ. ಇದನ್ನು ಸಿದ್ದರಾಮಯ್ಯ ಅವರ ಹದಿನಾರನೇ ಬಜೆಟ್ ಎಂದು ಎಲ್ಲರೂ ಹೇಳಿದ್ದಾರೆ. ಅದನ್ನು ದಾಖಲೆ ಎಂದು ಹೊಗಳುತ್ತಿದ್ದಾರೆ. ಆದರೆ, ಮುಸ್ಲಿಮರಿಗೆ ಹದಿನಾರು ಕಾರ್ಯಕ್ರಮಗಳನ್ನು ಕೊಟ್ಟು ತಮ್ಮ ನಿರ್ದಿಷ್ಟ ಕಾರ್ಯಸೂಚಿ ಏನು ಎಂಬುದನ್ನು ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಸಮಾಜವನ್ನು ಹೇಗೆ ಒಡೆಯಬೇಕು ಎಂಬುದನ್ನು ಅವರು ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರ ಬಜೆಟ್ ಕುರಿತು ಅಭಿಪ್ರಾಯಪಟ್ಟರು.
ಈ ಬಜೆಟ್ ಚುನಾವಣೆಗೆ ಸಿದ್ಧಪಡಿಸಿದ ಬಜೆಟ್ ನಂತೆ ಇದೆ. ಕೇವಲ ಘೋಷಣೆಗಳಿಗೆ ಸೀಮಿತವಾದ ಪುಸ್ತಕ. ಒಂದು ಸಮುದಾಯವನ್ನು ತುಷ್ಟೀಕರಣ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಜೆಟ್ ಮಂಡನೆ ಮಾಡಿದ್ದಾರೆ. ಬರೋಬ್ಬರಿ 4.09 ಲಕ್ಷ ಕೋಟಿ ರೂ. ಮೌಲ್ಯದ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ 1.15 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಭಾರತದಲ್ಲಿಯೇ ಅತಿ ದೊಡ್ಡ ಬಜೆಟ್ ಅಂತ ಮಾನ್ಯಸಿದ್ದರಾಮಯ್ಯ ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುತ್ತಿದ್ದಾರೆ, ಇದಕ್ಕೆ ಕಾರಣ ರಾಜ್ಯದ ಕನ್ನಡಿಗರು ಎಂದರು.
ನಮ್ಮ ರಾಜ್ಯದಲ್ಲಿ 1.8 ಲಕ್ಷ ಕೋಟಿ ರೂ. ರಾಜ್ಯದಿಂದ ತೆರಿಗೆ ಹಣ ಸಂಗ್ರಹ ಆಗುತ್ತಿದೆ. ಕೇಂದ್ರದಲ್ಲಿ ರಾಜ್ಯದಿಂದ 68 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ಗೆ ಕನ್ನಡಿಗರು ಕಾರಣ. ಇದರಲ್ಲಿ ಸುಮಾರು 4 ಸಾವಿರ ಕೋಟಿ ರೂ.ಗಳಷ್ಟು ಬಂಡವಾಳ ಸರ್ಕಾರಕ್ಕೆ ಹೋಗುತ್ತದೆ. ಗ್ಯಾರಂಟಿಗಳಿಗೆ 52,000 ಕೋಟಿ ರೂ. ಕೊಟ್ಟಿದ್ದಾರೆ. ಉಳಿದ 17,000 ಕೋಟಿ ರೂ.ಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಮತ್ತು ಶಾಸಕರಿಗೆ ಅನುದಾನ ನೀಡಬೇಕು. ಕಳೆದ ವರ್ಷ 1.05 ಲಕ್ಷ ಕೋಟಿ ರೂ. ಸಾಲ ಆಗಿದೆ. ಈ ಬಜೆಟ್ ನಲ್ಲಿ 1.16 ಕೋಟಿ ರೂ.ಗಳಷ್ಟು ಸಾಲ ಆಗಿದೆ ಎಂದು ವಿವರಿಸಿದರು.
ಮಹಾರಾಷ್ಟ್ರದಲ್ಲಿ ಒಂದು ಯೂನಿಟ್ ವಿದ್ಯುತ್ ಅನ್ನು 3 ರೂ. ದರದಲ್ಲಿ ಕೊಡುತ್ತಾರೆ. ಕರ್ನಾಟಕದಲ್ಲಿ ಒಂದು ಯೂನಿಟ್ಗೆ 7 ರೂ. ಹಾಕುತ್ತಾರೆ. ದೊಡ್ಡ ದೊಡ್ಡ ಕಾರ್ಖಾನೆಗಳು ನಮ್ಮಲ್ಲಿ ಇದೇ ಕಾರಣಕ್ಕೆ ಬರುತ್ತಿಲ್ಲ. ಇದರ ಲೋಪದೋಷಗಳು ಏನು? ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ದೊಡ್ಡ ಪ್ರಮಾಣದ ಬಜೆಟ್ ಕೊಟ್ಟಿದ್ದೇನೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.
ಈ ಬಜೆಟ್ ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಜನರಿಗೆ ಇನ್ನು ಸ್ವಲ್ಪ ದಿನದಲ್ಲೇ ಸತ್ಯ ಏನೆಂದು ಗೊತ್ತಾಗುತ್ತದೆ. ಬೆಂಗಳೂರು ನಗರದ ಸುರಂಗ ಯೋಜನೆಗೆ 40,000 ಕೋಟಿ ರೂ.ಕೊಡುತ್ತೇವೆ ಎಂದು ಹೇಳಿದ್ದಾರೆ. ಎಲ್ಲಿಂದ ಹಣ ಕೊಡುತ್ತಾರೆ? ಇಷ್ಟು ಹಣವನ್ನು ಎಲ್ಲಿಂದ ತರುತ್ತಾರೆ. ಇದು ನಿಜಕ್ಕೂ ಆಗುತ್ತಾ? ಅಥವಾ ಕನಸಾಗಿಯೇ ಉಳಿಯುತ್ತಾ? ಎಂದು ನಿಖಿಲ್ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದರು.
ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ವಿಶೇಷವಾಗಿ 16 ಯೋಜನೆಯನ್ನ ಕೊಟ್ಟಿದ್ದಾರೆ. ಆದರೆ ಉಳಿದ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದಾರೆ. ಬಜೆಟ್ ನ ಪ್ರತಿ ಅಂಶದಲ್ಲಿಯೂ ಓಲೈಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಮಾಡಿರುವ ಸಾಮಾಜಿಕ ನ್ಯಾಯವಿದು ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ವಿಶ್ವವಿದ್ಯಾನಿಲಯಗಳನ್ನು ಮುಚ್ಚುತ್ತಿರುವ ವಿಚಾರಕ್ಕೆ ಮಾತನಾಡಿದ ಅವರು; ಉರ್ದು ಶಾಲೆಗಳನ್ನು ಉದ್ಧಾರ ಮಾಡುವುದಕ್ಕೆ ಹಣ ಇದೆ. ಆದರೆ, ವಿವಿಗಳಿಗೆ ಕೊಡಲು ದುಡ್ಡಿಲ್ಲ. ವಕ್ಫ್ ಕಟ್ಟಡಕ್ಕೆ ಅನುದಾನ ಕೊಟ್ಟಿದ್ದಾರೆ. ಆದರೆ ಎಲ್ಲಾ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ವಿವಿಗಳಿಗೆ ಕೊಡಲು ಇವರಿಗೆ ಕೈ ಬರಲ್ಲ ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.