ಲೋಕಸಭಾ ಚುನಾವಣೆಯಲ್ಲಿ ತರೂರ್ ವಿರುದ್ಧ ಶೋಭನಾ ಸ್ಪರ್ಧೆ ಇಲ್ಲ
ಶೋಭನಾ ನನ್ನ ಸ್ನೇಹಿತೆ. ಸ್ಪರ್ಧಿಸುವುದಿಲ್ಲ ಎಂದು ಫೋನ್ ಮೂಲಕ ತಿಳಿಸಿದ್ದಾರೆ ಎಂದು ತಿರುವನಂತಪುರದಿಂದ ಮೂರು ಬಾರಿ ಸಂಸದರಾಗಿರುವ ಶಶಿ ತರೂರ್ ಹೇಳಿದ್ದಾರೆ.
ಹಿರಿಯ ನಟಿ ಶೋಭನಾ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿಂದ ಶಶಿ ತರೂರ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿಗೆ ಈಗ ಉತ್ತರ ಸಿಕ್ಕಿದೆ.
ಈ ಉತ್ತರ ಬಂದಿರುವುದು ನಟಿ ಅಥವಾ ಬಿಜೆಪಿಯಿಂದ ಅಲ್ಲ. ಬದಲಾಗಿ, ಶಶಿ ತರೂರ್ ಅವರಿಂದ. ಆಕೆ ಬಿಜೆಪಿ ಅಭ್ಯರ್ಥಿ ಅಲ್ಲ ಎಂದು ಶಶಿ ತರೂರ್
ಹೇಳಿದ್ದಾರೆ.
ಶೋಭನಾ ನನ್ನ ಗೆಳತಿ. ಅವರು ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಫೋನ್ ಮೂಲಕ ತಿಳಿಸಿದ್ದಾರೆ ಎಂದು ತರೂರ್ ತಿಳಿಸಿದ್ದಾರೆ.
ವದಂತಿ ಆರಂಭವಾಗಿದ್ದು ಹೇಗೆ?
ಶೋಭನಾ ಜನವರಿಯ ಆರಂಭದಲ್ಲಿ ತ್ರಿಶೂರ್‌ನಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಕಾಣಿಸಿಕೊಂಡಿದರು. ಮಹಿಳಾ ಮೀಸಲು ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ಅವರು ಮೋದಿ ಸರ್ಕಾರವನ್ನು ಶ್ಲಾಘಿಸಿದ್ದರು. ಇದರಿಂದ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹ ಪ್ರಾರಂಭವಾಯಿತು.
ಕೇರಳದಲ್ಲಿ ನೆಲೆಯೂರಲು ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿದ್ದು, ಕೇಸರಿ ಪಕ್ಷದಲ್ಲಿ ಯಾರನ್ನು ಕಣಕ್ಕಿಳಿಸಬಹುದು ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.
ಸುರೇಶ್ ಗೋಪಿ ಅವರ ಮಾತು
ಶೋಭನಾ ಅವರನ್ನು ಹೊರತುಪಡಿಸಿ, ಈ ಸ್ಥಾನಕ್ಕೆ ಕೇಳಿಬರುತ್ತಿರುವ ಹೆಸರುಗಳೆಂದರೆ ನಿರ್ಮಾಪಕ ಜಿ ಸುರೇಶ್ ಕುಮಾರ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ಆದರೆ, ನಟ-ರಾಜಕಾರಣಿ ಸುರೇಶ್ ಗೋಪಿ ಅವರು ಲೋಕಸಭೆ ಚುನಾವಣೆಯಲ್ಲಿ ಶೋಭನಾ ಸ್ಪರ್ಧಿಸಲು ಬಯಸುವುದಾಗಿ ಹೇಳಿದ ನಂತರ ವದಂತಿಗಳು ಆರಂಭವಾದವು. ಈ ಬಗ್ಗೆ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ ಎಂದು ಗೋಪಿ ಹೇಳಿದ್ದರು.
ಆದರೆ, ಶಶಿ ತರೂರ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ʻಬಿಜೆಪಿ ಅಭ್ಯರ್ಥಿಗಳಾಗಿ ಹಲವು ಹೆಸರುಗಳು ಹರಿದಾಡುತ್ತಿವೆ. ಆದರೆ, ಬಿಜೆಪಿಯ ದ್ವೇಷದ ರಾಜಕಾರಣ ಕೇರಳದಲ್ಲಿ ಕೆಲಸ ಮಾಡುವುದಿಲ್ಲʼ ಎಂದು ಪ್ರತಿಪಾದಿಸಿದರು.