ರಾಜ್ಯಸಭಾ ಚುನಾವಣೆ: ಅಡ್ಡ ಮತದಾನ ಎಂದರೇನು? ಮತ ಮೌಲ್ಯವೇನು?

ಎರಡು ದಿನಗಳ ಹಿಂದಿನವರೆಗೆ ಕರ್ನಾಟಕ ವಿಧಾನಸಭೆಯ ಒಟ್ಟು ಸ್ಥಾನಬಲ 224 ಇತ್ತು. ಆದರೆ, ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಸಾವಿನಿಂದಾಗಿ ಈಗ 223ಕ್ಕೆ ಕುಸಿದಿದೆ. ಆದಾಗ್ಯೂ ರಾಜ್ಯಸಭೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರತಿ ಅಭ್ಯರ್ಥಿಗೆ ಕನಿಷ್ಟ ೪೫ ಪ್ರಥಮ ಪ್ರಾಶಸ್ತ್ಯದ ಮತ ಬೇಕು.

Update: 2024-02-26 13:14 GMT
Click the Play button to listen to article

ರಾಜ್ಯದ ವಿಧಾನಸಭೆಯಿಂದ ಆಯ್ಕೆ ಮಾಡುವ ರಾಜ್ಯಸಭೆಯ ಸ್ಥಾನಗಳಿಗೆ ಮಂಗಳವಾರ(ಫೆ.27) ಮತದಾನ ನಡೆಯಲಿದೆ. ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಲೇ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಶಾಸಕರು ಅಡ್ಡ ಮತದಾನ ಮಾಡದಂತೆ ನೋಡಿಕೊಳ್ಳಲು ವಿಪ್‌ ಜಾರಿ, ರೆಸಾರ್ಟ್‌ ವಾಸ್ತವ್ಯ, ಆಮಿಷಗಳ ಸುರಿಮಳೆಯಂತಹ ತಂತ್ರಗಳ ಮೊರೆಹೋಗಿವೆ.

ನಾಲ್ವರು ಪಕ್ಷೇತರರ ಮತಗಳನ್ನು ಕೀಳಲು ಕೂಡ ಹೊಂಚುತ್ತಿರುವ ಪಕ್ಷಗಳು, ಆ ಮೂಲಕ ತಮಗೆ ಕೊರತೆ ಬೀಳುವ ಮತಗಳನ್ನು ಸರಿದೂಗಿಸಿಕೊಳ್ಳಲು ಯತ್ನಿಸುತ್ತಿವೆ. ಆದರೆ, ಸದ್ಯದ ಸ್ಥಿತಿಯಲ್ಲಿ ಆ ನಾಲ್ವರ ಮತಗಳೂ ಕಾಂಗ್ರೆಸ್‌ ಕಡೆ ಮುಖ ಮಾಡಿವೆ. ಆದರೆ, ವಿಪ್‌, ಪಕ್ಷದ ಶಿಸ್ತು ಉಲ್ಲಂಘನೆ, ಶಾಸಕತ್ವಕ್ಕೆ ಕುತ್ತು ಮುಂತಾದ ಯಾವ ಭಯವೂ ಇಲ್ಲದ ಆ ನಾಲ್ವರು ಪಕ್ಷೇತರರ ಮತಗಳು ಮತದಾನಕ್ಕೆ ಕೊನೇ ಕ್ಷಣದಲ್ಲೂ ಬದಲಾಗಬಹುದು!

ಅಡ್ಡ ಮತದಾನ ಎಂದರೇನು?

ಎರಡು ದಿನಗಳ ಹಿಂದಿನವರೆಗೆ ಕರ್ನಾಟಕ ವಿಧಾನಸಭೆಯ ಒಟ್ಟು ಸ್ಥಾನಬಲ 224 ಇತ್ತು. ಆದರೆ, ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಸಾವಿನಿಂದಾಗಿ ಈಗ ೨೨೩ಕ್ಕೆ ಕುಸಿದಿದೆ. ಆದಾಗ್ಯೂ ರಾಜ್ಯಸಭೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರತಿ ಅಭ್ಯರ್ಥಿಗೆ ಕನಿಷ್ಟ 45 ಪ್ರಥಮ ಪ್ರಾಶಸ್ತ್ಯದ ಮತ ಬೇಕು. ಅಂದರೆ, ೪೫ ಶಾಸಕರ ಮತ ಪಡೆದರೆ ಮಾತ್ರ ಗೆಲುವು. ಆ ಲೆಕ್ಕಾಚಾರದಲ್ಲಿ ಸದ್ಯ 134ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌, ಕಣದಲ್ಲಿರುವ ತನ್ನ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಒಂದು ಮತದ ಕೊರತೆ ಎದುರಿಸುತ್ತಿದೆ. ಆದರೆ, ಪಕ್ಷೇತರ ಶಾಸಕರ ಪೈಕಿ ಮೂವರು ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಸದ್ಯ ಸೋಲಿನ ಭೀತಿ ಇಲ್ಲ.

ಆದರೆ, ಮತ ನಷ್ಟ, ಅನಿವಾರ್ಯ ಗೈರು, ಅಡ್ಡಮತದಾನ ಎಂಬ ಆತಂಕಗಳು ಕಾಂಗ್ರೆಸ್‌ ಕಾಡುತ್ತಿವೆ. ಒಂದು ಮತ ವ್ಯತ್ಯಾಸವಾದರೂ ಅದರ ಒಬ್ಬ ಅಭ್ಯರ್ಥಿ ಸೋಲು ಖಚಿತ. ಹಾಗಾಗಿ ಇತರೆ ಪಕ್ಷಗಳಿಗಿಂತ ಕಾಂಗ್ರೆಸ್‌ ಗೆ ಅಡ್ಡಮತದಾನ, ಮತ ನಷ್ಟದ ಆತಂಕ ಕಾಡುತ್ತಿದೆ.

ಅಡ್ಡ ಮತದಾನ ಎಂದರೆ; ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಶಾಸಕರು ಇತರೆ ಪಕ್ಷಗಳ ಅಭ್ಯರ್ಥಿಗಳಿಗೆ ತಮ್ಮ ಆತ್ಮಸಾಕ್ಷಿಯ ಹೆಸರಲ್ಲಿ ಮತದಾನ ಮಾಡುವುದು. ಆದರೆ, ಹೀಗೆ ಮತದಾನ ಮಾಡುವುದರಿಂದ ವಿಪ್‌ ಉಲ್ಲಂಘನೆಯಾಗುತ್ತದೆ. ಜೊತೆಗೆ ಈ ಮತದಾನದಲ್ಲಿ ಮತದಾರ ಶಾಸಕರು ಮತಪತ್ರದಲ್ಲಿ ಅಭ್ಯರ್ಥಿಯ ಚಿಹ್ನೆಯ ಮುಂದೆ ಮತ ಚಲಾಯಿಸಿದ ಗುರುತು ಹಾಕಿದ ಬಳಿಕ ತಮ್ಮ ಪಕ್ಷದ ಮತಗಟ್ಟೆ ಏಜೆಂಟರಿಗೆ ತೋರಿಸಿ ಬಳಿಕ ಮತ ಪೆಟ್ಟಿಗೆಗೆ ಹಾಕಬೇಕಾಗುತ್ತದೆ. ಹಾಗಾಗಿ ಯಾರು ಯಾರಿಗೆ ಮತ ಹಾಕಿದರು ಎಂಬುದು ಬಹಿರಂಗವಾಗಿ ದಾಖಲಾಗುತ್ತದೆ. ಅದರಿಂದ ಪಕ್ಷದ ಅಭ್ಯರ್ಥಿಗೆ ಸೋಲಾದಲ್ಲಿ ಪಕ್ಷ ಅವರಿಗೆ ಮತ ಹಾಕದ ತನ್ನ ಶಾಸಕರ ವಿರುದ್ಧ ವಿಪ್‌ ಉಲ್ಲಂಘನೆಯ ಕ್ರಮ ಜರುಗಿಸಿ, ಅವರ ಶಾಸಕತ್ವ ರದ್ದು ಮಾಡಲು ಸಭಾಪತಿಗಳಿಗೆ ಮನವಿ ಮಾಡುತ್ತದೆ. ಆಗ ಶಾಸಕತ್ವ ಕೈತಪ್ಪಿಹೋಗುವುದು ಬಹುತೇಕ ಶತಸಿದ್ಧ. ಹಾಗಾಗಿ ಅಡ್ಡ ಮತದಾನ ಮಾಡುವವರು ಸಾಮಾನ್ಯವಾಗಿ ಪಕ್ಷದಿಂದ ಒಂದು ಕಾಲು ಹೊರಗಿಟ್ಟವರೇ ಆಗಿರುತ್ತಾರೆ.

ಮತ ಮೌಲ್ಯ ಹೇಗೆ ನಿರ್ಧಾರವಾಗುತ್ತದೆ?

ರಾಜ್ಯಸಭಾ ಚುನಾವಣೆ ಅಂದುಕೊಂಡಷ್ಟು ಸರಳವಲ್ಲ. ನೇರ ಆಯ್ಕೆಯಲ್ಲಿ ಮತದಾರರಾದ ಜನ ಸಾಮಾನ್ಯರ ಮತಗಳಿಗೆ ಒಂದಕ್ಕೆ ಒಂದೇ ಮೌಲ್ಯ. ಆದರೆ, ಜನಪ್ರತಿನಿಧಿಗಳ ಪರೋಕ್ಷ ಆಯ್ಕೆಯ ರಾಜ್ಯಸಭಾ ಚುನಾವಣೆಗಳಲ್ಲಿ ಮತದಾರರ ಮತಕ್ಕೆ ಮೌಲ್ಯ ನಿರ್ಧಾರವಾಗುವುದು ಆ ರಾಜ್ಯದ ಒಟ್ಟು ಜನಸಂಖ್ಯೆ ಮತ್ತು ಆ ಜನ ಆರಿಸಿ ಕಳಿಸಿರುವ ವಿಧಾನಸಭಾ ಸದಸ್ಯರ ಒಟ್ಟು ಸಂಖ್ಯಾಬಲದ ಮೇಲೆ. ಹಾಗಾಗಿ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಶಾಸಕರ ಮತದ ಮೌಲ್ಯ ರಾಜ್ಯದಿಂದ ರಾಜ್ಯಕ್ಕೆ ಬೇರೆಬೇರೆಯಾಗಿರುತ್ತದೆ.

ಕರ್ನಾಟಕದ ಒಟ್ಟು ವಿಧಾನಸಭಾ ಸದಸ್ಯರ ಸಂಖ್ಯಾಬಲ ೨೨೪. ಆ ಪ್ರಕಾರ ಶಾಸಕರ ಒಂದು ಮತದ ಮೌಲ್ಯ 100. ಹಾಗಾದರೆ, ಮತಮೌಲ್ಯದ ಲೆಕ್ಕಾಚಾರದ ಪ್ರಕಾರ ಒಬ್ಬ ರಾಜ್ಯಸಭಾ ಅಭ್ಯರ್ಥಿಯು ಗೆಲುವಿಗೆ ಗಳಿಸಬೇಕಾದ ಮತ ಮೌಲ್ಯ 4481. ಆದರೆ, ರಾಜಾ ವೆಂಕಟಪ್ಪ ನಾಯಕರ ನಿಧನದಿಂದಾಗಿ ಒಟ್ಟು ವಿಧಾನಸಭಾ ಸದಸ್ಯಬಲ 223ಕ್ಕೆ ಕುಸಿದಿದೆ. ಹಾಗಾಗಿ ಅಭ್ಯರ್ಥಿಯ ಗೆಲುವಿಗೆ ಬೇಕಾದ ಮತ ಮೌಲ್ಯ 4461. ಆ ಪ್ರಕಾರ ಕನಿಷ್ಟ45ಶಾಸಕರ ಮತ ಪಡೆದವರು ಮಾತ್ರ ಜಯಗಳಿಸುತ್ತಾರೆ. ಅಂದರೆ ಒಬ್ಬ ಅಭ್ಯರ್ಥಿ ಕನಿಷ್ಟ 45 ಶಾಸಕರ ಮತ ಪಡೆದರೆ ಆ ಮತಗಳ ಒಟ್ಟು ಮೌಲ್ಯ 4500 ಆಗುತ್ತದೆ, ಅಂದರೆ ಗೆಲುವಿಗೆ ಬೇಕಾದ ಮತಮೌಲ್ಯಕ್ಕಿಂತ 39 ಮತ ಮೌಲ್ಯ ಹೆಚ್ಚುವರಿಯಾಗಿ ಬೀಳುತ್ತದೆ.

ಕುಪೇಂದ್ರ ರೆಡ್ಡಿ ರಂಗಪ್ರವೇಶಕ್ಕೆ ಕಾರಣವೇನು?

ವಾಸ್ತವವಾಗಿ ಈ ಹೆಚ್ಚುವರಿ ಮತಮೌಲ್ಯದ ಮೇಲೆ ಕಣ್ಣಿಟ್ಟೇ ಕುಪೇಂದ್ರ ರೆಡ್ಡಿ ರಾಜ್ಯಸಭಾ ಚುನಾವಣೆಯ ರಂಗಪ್ರವೇಶ ಮಾಡಿರುವುದು. ಬಿಜೆಪಿಯ ಒಟ್ಟು 66 ಶಾಸಕರ ಪೈಕಿ ಅದರ ಒಬ್ಬ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲಲು ಬೇಕಾದ ೪೫ ಮತಗಳು ಬೀಳುತ್ತವೆ. ಜೊತೆಗೆ ಹೆಚ್ಚುವರಿಯಾಗಿ 39 ಮತಮೌಲ್ಯ ಮಿತ್ರಪಕ್ಷ ಜೆಡಿಎಸ್‌ನ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ವರ್ಗಾವಣೆಯಾಗುತ್ತವೆ. ಜೊತೆಗೆ 21 ಮಂದಿ ಬಿಜೆಪಿ ಶಾಸಕರು ಮತ್ತು 19 ಮಂದಿ ಜೆಡಿಎಸ್‌ ಶಾಸಕರ ಮತ ಮತ್ತು ತಾವು ತಂತ್ರಗಾರಿಕೆಯ ಮೂಲಕ ಸೆಳೆಯಬಹುದಾದ ಕಾಂಗ್ರೆಸ್‌ ಪಾಳೆಯ ಅಡ್ಡಮತಗಳು ರೆಡ್ಡಿಗೆ ಜೀವಾಳ.

ಒಟ್ಟಾರೆ, ಒಬ್ಬ ಶಾಸಕರ ಒಂದು ಮತದ ಮೌಲ್ಯ ಒಂದಲ್ಲ; ಬದಲಾಗಿ ನೂರು. ಇದೇ ಅಂಶ ಮತ್ತು ಹೆಚ್ಚುವರಿ ಮತಮೌಲ್ಯ ವರ್ಗಾವಣೆಯ ತಾಂತ್ರಿಕತೆಗಳೇ ಮೂರೂ ಪಕ್ಷಗಳ ಪಾಲಿಗೆ ಈ ಚುನಾವಣೆ ದೊಡ್ಡ ಕಸರತ್ತಾಗಿ ಪರಿವರ್ತಿಸಿರುವುದು!

Tags:    

Similar News