ಸಿಎಂ ಅಧಿಕಾರ ಹಂಚಿಕೆ ಮಾತು ಮತ್ತೆ ಶುರು | ಹೈಕಮಾಂಡ್ ಚರ್ಚಿಸಿದೆ: ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ (ಮಾ. 7) ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆಯ ಉತ್ಸಾಹದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಶುರುವಾಗಿದೆ.;

Update: 2025-03-06 14:47 GMT
ಪ್ರಾತಿನಿಧಿಕ ಚಿತ್ರ (ಡಿ.ಕೆ. ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ, ಟಿ.ಬಿ. ಜಯಚಂದ್ರ ಮತ್ತು ಸಿದ್ದರಾಮಯ್ಯ)

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ (ಮಾ. 7) ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆಯ ಉತ್ಸಾಹದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಶುರುವಾಗಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ಮತ್ತೊಮ್ಮೆ ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ ಪರವಾಗಿ ಮಾತನಾಡಿದ್ದಾರೆ.

"ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ರಾಜ್ಯದವರು. ಯಾವ ರೀತಿ ಸರ್ಕಾರಗಳನ್ನು ಮುಂದಕ್ಕೆ ನಡೆಸಬೇಕು ಎಂಬ ಅರಿವು ಅವರಿಗಿದೆ. ನಮ್ಮಿಂದ ಅವರು ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಸಚಿವ ಸ್ಥಾನಕ್ಕಾಗಿ ನಾನು ಜಾತಿಯ ಕಾರ್ಡ್​ ಅನ್ನು ಪ್ರಯೋಗಿಸಿಲ್ಲ. ಎಲ್ಲವೂ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಗೊತ್ತಿದೆ. ಅವರೊಂದಿಗೆ ನಾನು ವಿರೋಧ ಪಕ್ಷದ ಉಪನಾಯಕನಾಗಿ ಕೆಲಸ ಮಾಡಿದ್ದೇನೆ. ಅವರು ಈಗಾಗಲೇ ನಮಗೆಲ್ಲರಿಗೂ 'ಬಾಯಿ ಮುಚ್ಚಿಕೊಂಡಿರಿ' ಎಂದು ಸೂಚಿಸಿದ್ದಾರೆ. ಹೀಗಾಗಿ ನಾನು ಈ ವಿಚಾರದ ಕುರಿತು ಏನೂ ಮಾತನಾಡುವುದಿಲ್ಲ," ಎಂದು ಜಯಚಂದ್ರ ಹೇಳಿದ್ದಾರೆ.

"ಹೈಕಮಾಂಡ್ ಮಟ್ಟದಲ್ಲಿ ಸಿಎಂ ಅಧಿಕಾರ ಹಂಚಿಕೆ ಸೇರಿದಂತೆ ಅನೇಕ ವಿಚಾರಗಳು ಚರ್ಚೆ ಆಗಿವೆ. ಎಲ್ಲವನ್ನೂ ಮಾದ್ಯಮಗಳ ಮುಂದೆ ಹೇಳುವುದಕ್ಕೆ ಆಗುವುದಿಲ್ಲ," ಎನ್ನುವ ಮೂಲಕ ಜಯಚಂದ್ರ ಅವರು ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಪರವಾಗಿ ಮಾತನಾಡಿದ್ದಾರೆ. ಅವರ ಈ ಹೇಳಿಕೆಯಿಂದ ಅಧಿಕಾರ ಹಂಚಿಕೆ ವಿಚಾರ ಇನ್ನೂ ಹೈಕಮಾಂಡ್ ಮಟ್ಟದಲ್ಲಿಯೂ ಜೀವಂತವಿದೆ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದಂತಾಗಿದೆ.

ಸಿಎಂ ಬದಲಾವಣೆ, ಅಧಿಕಾರ ಹಸ್ತಾಂತರದ ಕುರಿತು ಈಗಾಗಲೇ ರಾಜ್ಯ ಕಾಂಗ್ರೆಸ್​ನಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. ಈಗಲೂ ಆ ಚರ್ಚೆಗಳು ಮುಂದುವರೆದಿವೆ. ಮುಖ್ಯಮಂತ್ರಿ ಹುದ್ದೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಕಾಂಕ್ಷಿಯಾಗಿರುವುದು ಬಹಿರಂಗ ಸತ್ಯ. ಆದರೆ ಇದೇ ವಿಚಾರದ ಕುರಿತು ಪದೇ ಪದೇ ಮಾತನಾಡುವುದು ಬೇಡ ಎಂಬ ಸೂಚನೆಯನ್ನು ಹೈಕಮಾಂಡ್ ಕೊಟ್ಟ ಬಳಿಕ ಸಾರ್ವಜನಿಕವಾಗಿ ಆ ಚರ್ಚೆ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. ಇದೀಗ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಗಳು ನಿಚ್ಛಳವಾಗಿವೆ.

ಬಜೆಟ್ ಅಧಿವೇಶನ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗುವ ಸಾಧ್ಯತೆಗಳಿವೆ. ಹೀಗಾಗಿ ಈ ಸಂದರ್ಭದಲ್ಲಿ ಟಿ.ಬಿ. ಜಯಚಂದ್ರ ಅವರು ವಿಧಾನಸೌಧದಲ್ಲಿ "ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ಎದುರು ಚರ್ಚೆಗಳಾಗಿವೆ" ಎಂಬ ಹೇಳಿಕೆ ಕೊಟ್ಟಿರುವುದು ಕುತೂಹಲ ಮೂಡಿಸಿದೆ.

ಈ ಹಿಂದೆ ಸಿದ್ದರಾಮಯ್ಯ ಅವರು ಎಡರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸುವ ಮುನ್ನ ಡಿ.ಕೆ . ಶಿವಕುಮಾರ್‌ ಅವರು ಸಿಎಂ ಆಗಲು ಪ್ರಯತ್ನ ನಡೆಸಿದ್ದರು. ಆ ಸಂದರ್ಭದಲ್ಲಿ ಇಷ್ಟು ಸಿದ್ದರಾಮಯ್ಯ ಅವರು ಇಂತಿಷ್ಟು ಅವಧಿ ಬಳಿಕ ಡಿ.ಕೆ. ಶಿವಕುಮಾರ್‌ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕೆಂದು ಮಾತುಕತೆ ನಡೆದಿತ್ತು ಎಂಬ ಬಗ್ಗೆ ಕಾಂಗ್ರೆಸ್‌ ಪಕ್ಷದೊಳಗೆ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಗಾಗ ಅಧಿಕಾರ ಹಸ್ತಾಂತರ ಕುರಿತ ಹೇಳಿಕೆಗಳು ಕಾಂಗ್ರೆಸ್‌ ನಾಯಕರಿಂದ ಬರುತ್ತಲೇ ಇವೆ.

Tags:    

Similar News