ಭಾರತ್ ಜೋಡೋ | ಛತ್ತೀಸ್‌ಗಢದಿಂದ ರಾಹುಲ್ ನ್ಯಾಯ್ ಯಾತ್ರೆ ಪುನರಾರಂಭ

ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಭಾನುವಾರ ಪುನರಾರಂಭಗೊಂಡಿದೆ.;

Update: 2024-02-11 12:09 GMT
ಭಾರತ್ ಜೋಡೋ | ಛತ್ತೀಸ್‌ಗಢದಿಂದ ರಾಹುಲ್ ನ್ಯಾಯ್ ಯಾತ್ರೆ ಪುನರಾರಂಭ
SS/twitter/RahulGandhi

ಎರಡು ದಿನಗಳ ವಿರಾಮದ ನಂತರ ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಭಾನುವಾರ ಪುನರಾರಂಭಗೊಂಡಿದೆ.

ಇಲ್ಲಿನ ಗಾಂಧಿ ಚೌಕ್‌ನಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಯಾತ್ರೆಯು ಜಿಲ್ಲೆಯ ಖರ್ಸಿಯಾ ವಿಧಾನಸಭಾ ಕ್ಷೇತ್ರಕ್ಕೆ ಸಾಗಿದೆ.

ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರ ಬೃಹತ್ ಗುಂಪು ಚೌಕದಲ್ಲಿ ಜಮಾಯಿಸಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿನ್ ಪೈಲಟ್, ಪಕ್ಷದ ಮುಖ್ಯಸ್ಥ ದೀಪಕ್ ಬೈಜ್ ಮತ್ತು ವಿರೋಧ ಪಕ್ಷದ ನಾಯಕ ಚರಣ್ ದಾಸ್ ಮಹಂತ್ ಮೊದಲಾದವರು ರಾಹುಲ್ ಗಾಂಧಿ ಅವರಿಗೆ ಸಾಥ್‌ ನೀಡಿದರು.

ಜನಸಂಪರ್ಕ ಕಾರ್ಯಕ್ರಮವಾದ ಈ ಯಾತ್ರೆಯು ಒಡಿಶಾದಿಂದ ಗುರುವಾರ ರಾಯಗಢವನ್ನು ಪ್ರವೇಶಿಸಿತ್ತು. ಎರಡು ದಿನಗಳ ವಿರಾಮದ ನಂತರ ಭಾನುವಾರ ಮಧ್ಯಾಹ್ನ ಪುನರಾರಂಭವಾಗಿದೆ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಎದುರು ಭಾರಿ ಸೋಲನ್ನು ಅನುಭವಿಸಿದ ನಂತರ ಈ ಯಾತ್ರೆ ಪಕ್ಷದ ಕಾರ್ಯಕರ್ತರ ನೈತಿಕ ಬಲವನ್ನು ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್ ನಾಯಕರು ಭರವಸೆ ಇಟ್ಟಿದ್ದಾರೆ.

ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿರುವ ರಾಯ್‌ಗಢ್ ಜಿಲ್ಲೆಯ ರೆಂಗಾರ್‌ಪಾಲಿ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ಯಾತ್ರೆ ರಾಜ್ಯವನ್ನು ಪ್ರವೇಶಿಸಿದ್ದು, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅನ್ಯಾಯವನ್ನು ಉತ್ತೇಜಿಸುವುದು ಮತ್ತು ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದು ಆಡಳಿತ ಪಕ್ಷದ ಎರಡು ಯೋಜನೆಗಳು ಎಂದು ಅವರು ಹೇಳಿದರು.

ಯಾತ್ರೆಯು ಫೆಬ್ರವರಿ 14 ರಂದು ಜಾರ್ಖಂಡ್‌ಗೆ ಪ್ರವೇಶಿಸುವ ಮೊದಲು ರಾಯ್‌ಗಢ್, ಶಕ್ತಿ, ಕೊರ್ಬಾ, ಸೂರಜ್‌ಪುರ, ಸುರ್ಗುಜಾ ಮತ್ತು ಬಲರಾಮ್‌ಪುರ ಜಿಲ್ಲೆಗಳ ಮೂಲಕ ಛತ್ತೀಸ್‌ಗಢದಲ್ಲಿ 536 ಕಿಮೀ ಕ್ರಮಿಸಲಿದೆ.

Tags:    

Similar News