ಹಿಮಾಚಲ ಪ್ರದೇಶ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ: ಕಾಂಗ್ರೆಸ್

Update: 2024-03-04 13:38 GMT

ಹಿಮಾಚಲ ಪ್ರದೇಶದ ಸರ್ಕಾರ ತನ್ನ ಅವಧಿ ಪೂರೈಸುತ್ತದೆ ಎಂದಿರುವ ಕಾಂಗ್ರೆಸ್‌, ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ರಾಜೀನಾಮೆಯನ್ನು ತಳ್ಳಿಹಾಕಿದೆ. 

ಸರ್ಕಾರದಿಂದ ಹೊರಬಂದಿರುವ ಸಚಿವ ವಿಕ್ರಮಾದಿತ್ಯ ಸಿಂಗ್, ಎಐಸಿಸಿ ನಾಯಕತ್ವದೊಂದಿಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ʻಕಾಂಗ್ರೆಸ್ ನಾಯಕತ್ವವು ಸುಖು ಮತ್ತು ಅವರು ಮಾಡಿರುವ ಕೆಲಸದ ಮೇಲೆ ನಂಬಿಕೆ ಇಟ್ಟಿದೆ. ಸದ್ಯಕ್ಕೆ ನಾಯಕತ್ವ ಬದಲಾವಣೆ ಅಸಂಭವ. ಸರ್ಕಾರವು ಬಹುಮತ ಹೊಂದಿದ್ದು, ಐದು ವರ್ಷ ಹಿಮಾಚಲ ಪ್ರದೇಶದ ಜನರಿಗೆ ಸೇವೆ ಸಲ್ಲಿಸುತ್ತದೆ. ಹಣದ ಬಲದಿಂದ ಜನಾದೇಶವನ್ನು ಹತ್ತಿಕ್ಕುವ ಯಾವುದೇ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಬಂಡಾಯ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ,ʼ ಎಂದು ಮೂಲಗಳು ತಿಳಿಸಿವೆ. 

ಬಹುಮತ ಸಾಬೀತು: ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಆರು ಶಾಸಕರನ್ನು ಅನರ್ಹಗೊಳಿಸಿದ ನಂತರ, ಸದನದಲ್ಲಿ ಒಟ್ಟು ಶಾಸಕರ ಸಂಖ್ಯೆ 62. ಸರ್ಕಾರವು ಬಹುಮತದ ಸಂಖ್ಯೆ 32 ಕ್ಕಿಂತ ಹೆಚ್ಚಿನ ಬೆಂಬಲವನ್ನು ಹೊಂದಿದೆʼ ಎಂದು ಮೂಲಗಳು ತಿಳಿಸಿವೆ. 

ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರ ಪುತ್ರ, ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಎಐಸಿಸಿ ನಾಯಕರೊಂದಿಗೆ ಮಾತನಾಡಿ ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ. ಸುಕು ಸರ್ಕಾರ ನೌಕರರ ಕಲ್ಯಾಣಕ್ಕಾಗಿ ಹಳೆಯ ಪಿಂಚಣಿ ಯೋಜನೆ ಜಾರಿ, ಉದ್ಯೋಗ ಸೃಷ್ಟಿ ಮತ್ತು ರಾಜ್ಯದ ಆದಾಯ ಹೆಚ್ಚಳದಂತಹ ಕಾರ್ಯಕ್ರಮಗಳನ್ನು ಕೈಗೊಂಡಿದೆ. 

ರಾಜ್ಯಸಭೆ ಚುನಾವಣೆಯಲ್ಲಿ ಬಿರುಗಾಳಿ: ಫೆಬ್ರವರಿ 27 ರಂದು ಕಾಂಗ್ರೆಸ್‌ನ ಆರು ಶಾಸಕರು ಸೇರಿದಂತೆ ಒಂಬತ್ತು ಶಾಸಕರು ಬಿಜೆಪಿಗೆ ಮತ ಹಾಕಿದ ನಂತರ, ಕೇವಲ 25 ಶಾಸಕರನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಸುಧೀರ್ ಶರ್ಮಾ, ರವಿ ಠಾಕೂರ್, ರಾಜಿಂದರ್ ರಾಣಾ, ಇಂದರ್ ದತ್ ಲಖನ್‌ಪಾಲ್, ಚೈತನ್ಯ ಶರ್ಮಾ ಮತ್ತು ದೇವಿಂದರ್ ಕುಮಾರ್ ಭುಟ್ಟೊ ಎಂಬ ಆರು ಕಾಂಗ್ರೆಸ್ ಶಾಸಕರನ್ನು ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಗುರುವಾರ ಅನರ್ಹಗೊಳಿಸಿದ್ದಾರೆ.

ವಿಕ್ರಮಾದಿತ್ಯ ಸಿಂಗ್ ಅವರು ರಾಜೀನಾಮೆ ನೀಡಿದರು. ಆದರೆ, ಕಾಂಗ್ರೆಸ್ ವೀಕ್ಷಕರನ್ನು ಭೇಟಿಯಾದ ನಂತರ ರಾಜೀನಾಮೆ ಹಿಂಪಡೆದರು.

Tags:    

Similar News