ಉಡುಪಿ-ಚಿಕ್ಕಮಗಳೂರು ಕ್ಷೇತ್ರ | ಶೋಭಾ ಕರಂದ್ಲಾಜೆ ಟಿಕೆಟ್‌ಗೆ ಘಟಾನುಘಟಿಗಳ ಅಡ್ಡಗಾಲು!
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಬಾರದು ಎಂದು ಅವರದೇ ಪಕ್ಷದ ನಾಯಕರು ಅಭಿಯಾನಗಳಿಗೆ ಚಾಲನೆ ನೀಡಿದ್ದಾರೆ.;
ಕೇಂದ್ರ ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ತಮ್ಮದೇ ಕ್ಷೇತ್ರದಲ್ಲಿ ಮನೆ ಗೆದ್ದು ಮಾರು ಗೆಲ್ಲಬೇಕಾದ ಸವಾಲು ಎದುರಾಗಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಶೋಭಾ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದೆಂಬ ಕೂಗು ಕ್ಷೇತ್ರದ ಉದ್ದಕ್ಕೂ ಜೋರಾಗಿ ಕೇಳಿಬರುತ್ತಿದೆ. ಅಷ್ಟು ಮಾತ್ರವಲ್ಲ; ಉಡುಪಿಯ ಕಡಲ ತಡಿಯಿಂದ ಚಿಕ್ಕಮಗಳೂರಿನ ಕಾಫಿ ಕಣಿವೆಯವರೆಗೆ ಕ್ಷೇತ್ರದ ಉದ್ದಗಲಕ್ಕೂ ಪಕ್ಷದ ಕಾರ್ಯಕರ್ತರು ತಮ್ಮದೇ ಪಕ್ಷದ ಸಂಸದೆಯ ವಿರುದ್ಧ ದಿನಕ್ಕೊಂದು ಹೋರಾಟ, ಅಭಿಯಾನ ನಡೆಸಿ ಟಿಕೆಟ್ ನೀಡದಂತೆ ಬಿಜೆಪಿ ಹೈಕಮಾಂಡ್ ಗಮನ ಸೆಳೆಯುತ್ತಿದ್ದಾರೆ.
ಬಿಜೆಪಿಯ ಭದ್ರ ಕೋಟೆಯಾಗಿರುವ ಪ್ರಸ್ತುತ ಕ್ಷೇತ್ರದ ಮೇಲೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ಡಿ ಎನ್ ಜೀವರಾಜ್ ಮೊದಲಾದವರ ಕಣ್ಣಿದ್ದು, ಸಂಘಪರಿವಾರದ ಪ್ರಾಬಲ್ಯದ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲುವ ಲೆಕ್ಕಾಚಾರದಲ್ಲಿ ಪೈಪೋಟಿ ಜೋರಾಗಿದೆ. ಆದರೆ, ಅದಕ್ಕಿಂತ ಮುಖ್ಯವಾಗಿ ಸಂಸದೆ ಶೋಭಾ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಹೋದ ಮೇಲೆ ಕ್ಷೇತ್ರದತ್ತ ಮುಖ ಹಾಕಿದ್ದೇ ವಿರಳ ಎಂಬ ಸಂಗತಿ ಟಿಕೆಟ್ ಆಕಾಂಕ್ಷಿಗಳಿಗೆ ಉಮೇದು ತಂದಿದೆ.
ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಬೆಳವಣಿಗೆಗಳೂ ಅದನ್ನೇ ಸೂಚಿಸುತ್ತಿವೆ. ಚಿಕ್ಕಮಗಳೂರಿನಲ್ಲಿ ಶೋಭಾ ವಿರುದ್ಧ ನಡೆದ ʼಗೋಬ್ಯಾಕ್ ಶೋಭಾʼ ಚಳವಳಿಯ ಹಿಂದೆ ಸಿ ಟಿ ರವಿ ಬಣದ ಕೈವಾಡವಿದೆ ಎಂಬ ಮಾತುಗಳು ಕೇಳಿ ಬರುತ್ತಿರುವುದರ ನಡುವೆಯೇ, ಸ್ಥಳೀಯ ಅಭ್ಯರ್ಥಿಗಳಿಗೆ ಈ ಬಾರಿ ಮಣೆ ಹಾಕಬೇಕೆಂದು ಆಗ್ರಹಿಸಿ ಉಡುಪಿ ಮೂಲದ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದ್ದಾರೆ.
ಜಾತಿ ಟ್ರಂಪ್ ಕಾರ್ಡ್ ಬಳಸಿದ ಪ್ರಮೋದ್ ಮಧ್ವರಾಜ್
ಮೊಗವೀರ ಭವನದಿಂದ ಶುರುವಾಗಲಿರುವ ಬೈಕ್ ರ‍್ಯಾಲಿಯ ಹಿಂದೆ ಮೊಗವೀರ ಸಮುದಾಯದ ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಬೆಂಬಲಿಗರ ಕೈವಾಡವಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಆ ಹಿನ್ನೆಲೆಯಲ್ಲಿ ʼಫೆಡೆರಲ್- ಕರ್ನಾಟಕʼ ಪ್ರಮೋದ್ ಮಧ್ವರಾಜ್ ಅವರನ್ನು ಮಾತನಾಡಿಸಿದಾಗ, ಅವರು "ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ನಾನು ಸಿದ್ಧ. ನನಗೆ ಟಿಕೆಟ್ ನೀಡದಿದ್ದರೆ ಪಕ್ಷ ಯಾರಿಗೆ ಟಿಕೆಟ್ ನೀಡುತ್ತೋ ಅವರಿಗೆ ಬೆಂಬಲಿಸುತ್ತೇನೆ. ಆದರೆ, ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ರ‍್ಯಾಲಿ ಬಗ್ಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಿಳಿದು ಬಂದಿದೆ. ನನಗೂ ಅದಕ್ಕೂ ಸಂಬಂಧವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಈ ಬೈಕ್ ರ‍್ಯಾಲಿ ಹಿಂದೆ ಮಧ್ವರಾಜ್ ಬೆಂಬಲಿಗರೇ ಇದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಕ್ರಿಯಾಶೀಲರಾಗಿಲ್ಲ ಎಂದು ಕಿಡಿ ಕಾರಿದ್ದ ಅಖಿಲ ಭಾರತ ಮೀನುಗಾರರ ಸಂಘದ ಕಾರ್ಯದರ್ಶಿ ಕಿಶೋರ್ ಡಿ ಸುವರ್ಣ ನೇತೃತ್ವದಲ್ಲಿ ಈ ರ‍್ಯಾಲಿ ಆಯೋಜಿಸಲಾಗಿದೆ. ಕಿಶೋರ್ ಅವರು ಈ ಹಿಂದೆ ಪ್ರಮೋದ್ ಮಧ್ವರಾಜ್ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದರು ಎಂದು ಸ್ಥಳೀಯ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೇಲೆ ಸಿ.ಟಿ ರವಿ ಕಣ್ಣು?
2023ರ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವಿ ಅವರು ತಮ್ಮ ಒಕ್ಕಲಿಗ ಗುರುತನ್ನು ಟ್ರಂಪ್ ಕಾರ್ಡ್ ಆಗಿಟ್ಟುಕೊಂಡು ರಾಷ್ಟ್ರ ರಾಜಕಾರಣಕ್ಕೆ ಜಿಗಿಯುವ ಲೆಕ್ಕಚಾರದಲ್ಲಿದ್ದಾರೆ. ಎಲ್ಲಾ ದೃಷ್ಟಿಯಿಂದಲೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಅವರಿಗೆ ಅತ್ಯಂತ ಸೂಕ್ತ ಕ್ಷೇತ್ರವಾಗಿದ್ದು, ಹೀಗಾಗಿ, ಅವರ ಕಣ್ಣೂ ಈ ಕ್ಷೇತ್ರದ ಮೇಲೆ ಬಿದ್ದಿದೆ.
ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿರುವ ಅಭಿಯಾನದಲ್ಲಿ ಸಿ.ಟಿ ರವಿ ಅವರ ಕೈವಾಡ ಇದೆಯೆಂಬ ಮಾತುಗಳು ಪಕ್ಷದ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದ್ದರೂ, ರವಿ ಅವರು ತಾನು ಈವರೆಗೆ ಟಿಕೆಟ್ ಕೇಳಿಲ್ಲ ಎಂದಿದ್ದಾರೆ. ಆದರೆ, ಸದ್ಯ ಮೋದಿ ಅವರಿಗೆ ಬಿಟ್ಟರೆ ಬೇರೆ ಯಾರಿಗೂ ಬಿಜೆಪಿಯಲ್ಲಿ ಟಿಕೆಟ್ ಖಾತ್ರಿ ಆಗಿಲ್ಲ ಎನ್ನುವ ಮೂಲಕ ಶೋಭಾ ಅವರಿಗೂ ಟಿಕೆಟ್ ಖಾತರಿ ಆಗಿಲ್ಲ ಎಂದು ಪರೋಕ್ಷ ಹೇಳಿಕೆ ನೀಡಿದ್ದಾರೆ. ಜೊತೆಗೆ, ಶೋಭಾ ಅವರ ಬೆನ್ನಿಗೆ ನಿಂತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪರೋಕ್ಷ ತಿರುಗೇಟು ನೀಡಿರುವ ಸಿಟಿ ರವಿ, ನನ್ನ 36 ವರ್ಷದ ರಾಜಕಾರಣದಲ್ಲಿ ಇದುವರೆಗೂ ಪಕ್ಷಕ್ಕೆ ನಿಷ್ಠಯಿಂದ ಇದ್ದೇನೆ, ಒಂದೊಂದು ಚುನಾವಣೆಯಲ್ಲಿ ಒಂದೊಂದು ರೀತಿ ವರ್ತಿಸಿಲ್ಲ ಎಂದಿದ್ದಾರೆ.
ಶೋಭಾ ಅವರು ಕ್ಷೇತ್ರದಲ್ಲಿ ಜನಸಂಪರ್ಕ ಹೊಂದಿಲ್ಲ. ಗೆದ್ದು ಹೋದ ಬಳಿಕ ಕ್ಷೇತ್ರದ ಸಮಸ್ಯೆಗಳಿಗೆ ಕಿವಿಗೊಟ್ಟಿಲ್ಲ ಎಂಬ ಅಂಶವನ್ನೇ ಮುಂದಿಟ್ಟುಕೊಂಡು, ಕ್ಷೇತ್ರದಲ್ಲಿ ಅವರ ವಿರುದ್ಧ ಪ್ರಬಲ ಅಲೆ ಇದೆ ಎಂಬಂತೆ ಬಿಂಬಿಸಿ ಅವರಿಗೆ ಟಿಕೆಟ್ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿರುವಾಗ ಸಿ ಟಿ ರವಿ ಅವರ ಬೆಂಬಲಿಗರು ಕೂಡ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಬಹಿರಂಗ ಹೇಳಿಕೆ, ಪತ್ರ ಚಳವಳಿ ನಡೆಸುತ್ತಿರುವುದು ಗಮನಾರ್ಹ.
ಮಾಜಿ ಸಚಿವ ಡಿಎನ್ ಜೀವರಾಜ್ ಟವೆಲ್ ಹಾಕಿದ್ದಾರೆ!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಮತಗಳ ಅಂತರದಲ್ಲಿ ಸೋತಿದ್ದ ಮಾಜಿ ಸಚಿವ ಡಿಎನ್ ಜೀವರಾಜ್ ಕೂಡಾ ಇದೀಗ ತಮ್ಮ ಹಕ್ಕು ಮಂಡಿಸುತ್ತಿದ್ದು, ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ತಾವೂ ಒಬ್ಬರು ಎಂದು ಸ್ವತಃ ಹೇಳಿಕೆಕೊಂಡಿದ್ದಾರೆ.
“ಕಳೆದ ಬಾರಿ ಕೇವಲ 200 ಮತಗಳ ಅಂತರದಲ್ಲಿ ನಾನು ಸೋತಿದ್ದೇನೆ. 100 ಮತಗಳನ್ನು ಹೆಚ್ಚು ಪಡೆದಿದ್ದರೆ ನಾನೇ ಗೆಲ್ಲುತ್ತಿದ್ದೆ. ನಾನು ರಾಜಕೀಯ ಸನ್ಯಾಸಿಯಲ್ಲ. ಪಕ್ಷ ಅವಕಾಶ ಕೊಟ್ಟಲ್ಲಿ ಗೆಲ್ಲುವ ವಿಶ್ವಾಸ ನನಗಿದೆ” ಎಂದು ಡಿ.ಎನ್.ಜೀವರಾಜ್ ಹೇಳಿದ್ದಾರೆ.
ಕ್ಷೇತ್ರದಲ್ಲಿ ನಮ್ಮವರೇ ಸಂಸದರು ಇದ್ದಾರೆ. ಅವರಿಗೇ ಟಿಕೆಟ್ ಕೊಟ್ಟರೂ ನಾವು ಅವರ ಪರ ಕೆಲಸ ಮಾಡುತ್ತೇವೆ. ನಮ್ಮಿಂದ ಯಾವುದೇ ಗೊಂದಲ ಸೃಷ್ಟಿ ಆಗಲ್ಲ. ಪಕ್ಷದ ಚೌಕಟ್ಟಿನಲ್ಲಿ ನಾನು ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷ ಸೂಚಿಸಿದರೆ ಮಾತ್ರ ಚುನಾವಣೆಗೆ ಸ್ಪರ್ಧಿಸುವೆ ಎಂದೂ ಅವರು ಹೇಳಿದ್ದಾರೆ.
ಶೋಭಾ ಕರಂದ್ಲಾಜೆಗೆ ಬಿಎಸ್‌ವೈ ಅಭಯ
ಬಿಎಸ್‌ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆ ಅವರ ಹಿಂದೆ ಬಿಎಸ್‌ವೈ ಅವರು ಈ ಬಾರಿಯೂ ಧೃಡವಾಗಿ ನಿಲ್ಲುವ ಸೂಚನೆ ನೀಡಿದ್ದಾರೆ. ʼಗೋಬ್ಯಾಕ್ ಶೋಭಾʼ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ್ದ ಬಿಎಸ್‌ವೈ, ಇಂಥ ಅಭಿಯಾನಕ್ಕೆ ಹೆದರಬೇಕಿಲ್ಲ. ಶೋಭಾ ಕರಂದ್ಲಾಜೆ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದು ಕೂಡಾ ಷಡ್ಯಂತ್ರದ ಒಂದು ಭಾಗ. ಶೋಭಾ ಕರಂದ್ಲಾಜೆ ಅವರು ಮೋದಿ ಸಂಪುಟದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿಯೂ ಶೋಭಾ ಕರಂದ್ಲಾಜೆ ಭಾರೀ ಅಂತರದಿಂದ ಗೆಲ್ಲುತ್ತಾರೆ” ಎಂದಿದ್ದಾರೆ.
ಶೋಭಾಗೆ ಯಾಕಿಷ್ಟು ವಿರೋಧ?
2014 ರಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶೋಭಾ ಕರಂದ್ಲಾಜೆ ಅವರು ಸ್ಥಳೀಯ ಕಾರ್ಯಕರ್ತರಿಂದ ವಿರೋಧವನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. 2019 ರ ಲೋಕಸಭಾ ಚುನಾವಣೆಗೂ ಮುನ್ನವೂ ʼಗೋಬ್ಯಾಕ್ ಶೋಭಾʼ ಅಭಿಯಾನ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯವರಾದ ಶೋಭಾಗೆ ಟಿಕೆಟ್ ನೀಡಬಾರದು, ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಕೂಗು ಬಿಜೆಪಿಯ ಕಾರ್ಯಕರ್ತರಿಂದಲೇ ಕೇಳಿ ಬಂದಿತ್ತು. ಅದಾಗ್ಯೂ, ಕಾರ್ಯಕರ್ತರ ವಿರೋಧದ ನಡುವೆಯೂ ಶೋಭಾರನ್ನೇ ಕಣಕ್ಕಿಳಿಸಿದ್ದ ಬಿಜೆಪಿ, ಮೋದಿ ಅಲೆಯ ಮೇಲೆ ಭರ್ಜರಿ ಜಯಭೇರಿ ಕಂಡಿತ್ತು.
ಕಳೆದ ಬಾರಿ ಗೆಲುವು ಕಂಡ ಬಳಿಕವೂ ಶೋಭಾ ಅವರು ಸ್ಥಳೀಯ ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕ್ಷೇತ್ರದ ಜನತೆಯೊಂದಿಗೆ ಸಂಪರ್ಕದಲ್ಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಂಸದರು ಮೂರು ತಿಂಗಳಿಗೊಮ್ಮೆ ನಡೆಸುವ ಅಭಿವೃದ್ಧಿ ಪರಿಶೀಲನಾ ಸಭೆಯನ್ನೂ ಅವರು ಮಾಡುತ್ತಿಲ್ಲ ಎಂದು ಹೇಳಲಾಗಿದೆ. ಕಳೆದ 5 ವರ್ಷದಲ್ಲಿ ಕೇವಲ ಮೂರು ಸಭೆಗಳನ್ನು ಮಾತ್ರ ಅವರು ಮಾಡಿದ್ದಾರೆ. ಜಿಲ್ಲೆಯ ಬರ, ನೆರೆ, ಕೃಷಿ ಬಿಕ್ಕಟ್ಟು, ಕಾರ್ಮಿಕ ಸಮಸ್ಯೆಗಳ ಕುರಿತು ಯಾವತ್ತೂ ಜನರ ನೋವಿಗೆ ಸ್ಪಂದಿಸಿಲ್ಲ ಎಂಬುದು ಅವರ ಬಗ್ಗೆ ಜನಸಾಮಾನ್ಯರಿಂದ ಕೇಳಿಬರುತ್ತಿರುವ ದೊಡ್ಡ ಅಸಮಾಧಾನ.
ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ಮೀನುಗಾರರಿಗೆ ಸಂಬಂಧಪಟ್ಟ ಸಮಸ್ಯೆಗಳು, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಗಾರರಿಗೆ ಸಂಬಂಧಪಟ್ಟ ಸಮಸ್ಯೆಗಳು ಇದ್ದರೂ ದೆಹಲಿಯಲ್ಲಿ ಕೂತು ಪತ್ರಿಕಾ ಪ್ರಕಟನೆ ಮಾಡುವುದು ಬಿಟ್ಟರೆ ಬೇರೆ ಯಾವ ಕೆಲಸಗಳೂ ಅವರಿಂದ ಆಗುತ್ತಿಲ್ಲ. ಇದು ಸ್ಥಳೀಯ ಬಿಜೆಪಿ ಕಾರ್ಯಕರ್ತರಲ್ಲಿ ನಿರಾಶೆ ತಂದಿದೆ. ಕಳೆದ ಬಾರಿ ಶೋಭಾ ಬೆನ್ನಿಗೆ ನಿಂತವರು ಕೂಡಾ ಈ ಬಾರಿ ಅವರ ಕಾರ್ಯವೈಖರಿಯಿಂದ ಹತಾಶರಾಗಿದ್ದಾರೆ ಎಂದು ಹೆಸರು ಹೇಳಲಿಕ್ಕಿಚ್ಛಿಸದ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.