ಪಳೆಯುಳಿಕೆ ಇಂಧನರಹಿತ ಜಗತ್ತು ಸಾಧ್ಯವೇ?

ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತಹಂತವಾಗಿ ಕಡಿಮೆಗೊಳಿಸುವುದನ್ನು ಒಪ್ಪಿಕೊಳ್ಳುವಲ್ಲಿ ಸಿಒಪಿ28 ವಿಫಲವಾಗಿದೆ. ಶ್ರೀಮಂತ ಜಗತ್ತು ಪಳೆಯುಳಿಕೆ ಇಂಧನಗಳ ಅತಿ ದೊಡ್ಡ ಬಳಕೆದಾರ.

Update: 2024-02-05 06:30 GMT

ಪಳೆಯುಳಿಕೆ ಇಂಧನರಹಿತ ಜಗತ್ತು ಸಾಧ್ಯವೇ?

-ಟಿ.ಕೆ.ಅರುಣ್

ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯ 28 ನೇ ಅಧಿವೇಶನದಲ್ಲಿ ಹವಾಮಾನ ಬದಲಾವಣೆಯನ್ನು ಎದುರಿಸುವ ಪ್ರಯತ್ನಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.

ಹವಾಮಾನ ವಿಜ್ಞಾನಿಗಳು ಸೂಚಿಸಿದಂತೆ ಇಂಗಾಲ ತುಂಬುವಿಕೆಯನ್ನು ನಿಲ್ಲಿಸುವುದನ್ನು ಬೆಂಬಲಿಸಲಾಯಿತು; ಇದೊಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ. ವಾತಾವರಣಕ್ಕೆ ಹಸಿರುಮನೆ ಅನಿಲಗಳ ತುಂಬುವಿಕೆಯನ್ನು ನಿಲ್ಲಿಸುವುದರ ಪ್ರಾಮುಖ್ಯತೆಯನ್ನು ಗುರುತಿಸಿರುವುದು ಶ್ಲಾಘನೀಯ. ಆದರೆ, ಶೃಂಗಸಭೆ ತೈಲ ಕಂಪನಿಯ ಸಿಇಒ ನೇತೃತ್ವದಲ್ಲಿ ಮತ್ತು ದುಬೈನಲ್ಲಿ ನಡೆದಿರುವುದು ಪರಿಸರ ಕಾರ್ಯಕರ್ತರಿಂದ ಟೀಕೆಗೆ ಗುರಿಯಾಗಿದೆ.

ಶೃಂಗಸಭೆಯು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿತ್ತು, ಆದರೆ, ಬಳಕೆ ಎಂದಿನಂತೆ ಮುಂದುವರಿಯಲಿದೆ. ಗಾಳಿ, ಸೌರ, ಪರಮಾಣು ಮತ್ತು ಜಲಜನಕದ ಬಳಕೆಯ ಉತ್ತೇಜನ, ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ನ್ನು ತೆಗೆದುಹಾಕುವ ಬಗ್ಗೆ ಶೃಂಗಸಭೆ ನಿರ್ಧಾರ ತೆಗೆದುಕೊಳ್ಳದೆ ಇರುವುದು ನಿರಾಶೆಗೆ ಕಾರಣವಾಗಿದೆ.

ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕ್ರಮೇಣ ತೆಗೆದುಹಾಕುವ ಬೇಡಿಕೆಗೆ ದೇಶಗಳಿಂದ ಸಾಕಷ್ಟು ಬೆಂಬಲವಿದೆ. ಪೆಟ್ರೋಲಿಯಂ ನಿಕ್ಷೇಪವಿರುವ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ದೇಶಗಳು ಪ್ರತಿರೋಧ ವ್ಯಕ್ತಪಡಿಸುತ್ತಿವೆ. ವಾಸ್ತವವೆಂದರೆ, ನವೀಕರಿಸಬಹುದಾದ ಇಂಧನ ಮೂಲಗಳು ಪ್ರಪಂಚದ ಒಟ್ಟು ಶಕ್ತಿ ಬಳಕೆಯ ಐದನೇ ಒಂದು ಭಾಗವನ್ನು ಮಾತ್ರ ಪೂರೈಸುತ್ತಿವೆ; ಉಳಿಕೆ ಶೇ. 80 ತೈಲ, ಅನಿಲ, ಕಲ್ಲಿದ್ದಲು ಮತ್ತು ಲಿಗ್ನೈಟ್ ಸುಡುವಿಕೆಯಿಂದ ಬರುತ್ತದೆ. ಸಿಒಪಿ 28 ಪಳೆಯುಳಿಕೆ ಇಂಧನ ಕಡಿತದ ಕ್ಷಿಪ್ರ ಹಂತಗಳನ್ನು ಒಪ್ಪಿಕೊಳ್ಳಲು ವಿಫಲವಾಯಿತು.

ಯುರೋಪ್ ತನ್ನನ್ನು ಹಸಿರು ಚಾಂಪಿಯನ್ ಎಂದುಕೊಳ್ಳುತ್ತದೆ ಮತ್ತು ನಾಗರಿಕರ ಪರಿಸರ ಪ್ರಜ್ಞೆ ಬಗ್ಗೆ ಹೆಮ್ಮೆ ಪಡುತ್ತದೆ. ಆದರೆ, ತನ್ನ ಅರ್ಧದಷ್ಟು ವಿದ್ಯುತ್ ನ್ನು ಪಳೆಯುಳಿಕೆ ಇಂಧನಗಳಿಂದ ಪಡೆಯುತ್ತದೆ. ಆದರೆ, ಜರ್ಮನಿಯು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದ ಆದ ಅನಿಲ ಮತ್ತು ತೈಲದ ಕೊರತೆಯನ್ನು ಎದುರಿಸಲು ಕಲ್ಲಿದ್ದಲಿಗಿಂತ ಹೆಚ್ಚು ಮಲಿನಕರ ಲಿಗ್ನೈಟ್ ನ್ನು ಬಳಸಲು ನಿರ್ಧರಿಸಿತು.

ಪಳೆಯುಳಿಕೆ ಇಂಧನಗಳ ಅಗತ್ಯ:

ಇದರರ್ಥವೇನೆಂದರೆ, ಕಾರ್ಯಸಾಧ್ಯವಾದ ಪರ್ಯಾಯ ಲಭ್ಯವಾಗುವವರೆಗೆ, ಜನ ಪಳೆಯುಳಿಕೆ ಇಂಧನಗಳನ್ನು ಬಳಸಬೇಕಾಗುತ್ತದೆ. ಪಳೆಯುಳಿಕೆ ಇಂಧನಗಳ ದಹನದಿಂದ ಶ್ರೀಮಂತ ಜಗತ್ತು ಅಭಿವೃದ್ಧಿಗೊಂಡಿದೆ. ಇಂದಿಗೂ ಅವರ ಜೀವನಶೈಲಿಯು ಅಪಾರ ಶಕ್ತಿಯನ್ನು ಬಳಸುತ್ತದೆ ಮತ್ತು ಅದರ ಉತ್ಪಾದನೆಯಿಂದ ಹಸಿರುಮನೆ ಅನಿಲ ಹೊರಸೂಸುತ್ತದೆ.

ಉತ್ತರ ಅಮೆರಿಕನ್ನರು ವರ್ಷಕ್ಕೆ 17 ಟನ್ ಇಂಗಾಲದ ಡೈಆಕ್ಸೈಡ್‌ ಹೊರಸೂಸುತ್ತಾರೆ. ಯುರೋಪ್ ಸುಮಾರು 8 ಟನ್‌, ದಕ್ಷಿಣ ಏಷ್ಯಾ 1.5 ಟನ್‌ ಮತ್ತು ಆಫ್ರಿಕ ಒಂದು ಟನ್‌ಗಿಂತ ಕಡಿಮೆ ಇಂಗಾಲದ ಡೈಆಕ್ಸೈಡ್‌ ಹೊರಸೂಸುತ್ತದೆ. ಕಳೆದ ವರ್ಷ ಭಾರತವು ಚೀನಾ ಹೊರತುಪಡಿ ಸಿ , ಅಧಿಕ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಸೇರಿಸಿತು.

ಆದರೆ, ಶ್ರೀಮಂತ ದೇಶಗಳು ಬಡ ದೇಶಗಳ ಮೇಲೆ ನಿಯಂತ್ರಣಗಳನ್ನು ಹೇರುತ್ತಿವೆ. ಆದರೆ, ಯಾವುದೇ ತಾಂತ್ರಿಕ ಅಥವಾ ಹಣಕಾಸಿನ ನೆರವು ನೀಡಲು ಸಿದ್ಧವಿಲ್ಲ. ಇದು ಭಾರತದಂತಹ ರಾಷ್ಟ್ರದ ಪ್ರಗತಿಯ ದರವನ್ನು ಕಡಿಮೆ ಮಾಡುತ್ತದೆ. ಜೀವನದ ಗುಣಮಟ್ಟ ಹೆಚ್ಚಿಸಲು ಶಕ್ತಿ ಬಳಕೆಯನ್ನು ಹೆಚ್ಚಿಸಬೇಕು. ಪಳೆಯುಳಿಕೆ ಇಂಧನಗಳನ್ನು ಆಧರಿಸಿದ ವಿದ್ಯುತ್ ಸ್ಥಾವರಗಳನ್ನು ಮುಚ್ಚುವುದು ಎಂದರೆ ಶತಕೋಟಿ ಜನರ ಜೀವನ ಅನಿಶ್ಚಿತಗೊಳಿಸುವುದು ಎಂದರ್ಥ.

ಸುಲಭ ಪರ್ಯಾಯಗಳು ಲಭ್ಯವಾಗುವವರೆಗೆ ಜಗತ್ತು ಪಳೆಯುಳಿಕೆ ಇಂಧನಗಳನ್ನು ಅವಲಂಬಿಸಬೇಕಾಗುತ್ತದೆ. ಸರಾಸರಿ ಜಾಗತಿಕ ತಾಪಮಾನ ಸುಮಾರು 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎನ್ನಲಾಗಿದೆ. ಏರಿಕೆಯನ್ನು ಕಡಿಮೆ ಮಾಡಲು 500 ಗಿಗಾ ಟನ್‌ ಕಾರ್ಬನ್ ಬಜೆಟ್ ಪ್ರಸ್ತಾಪಿಸಲಾಗಿದೆ. ಇದು ಹೆಚ್ಚುವರಿ ಇಂಗಾಲದ ಡೈಆಕ್ಸೈಡ್ ನ್ನು ತೆಗೆದುಹಾಕುವ ಮೂಲಕ ತಾತ್ಕಾಲಿಕ ಪರಿಹಾರ ನೀಡುತ್ತದೆ. ಚರ್ಚೆಯಿಲ್ಲ.

ಸಿಒಪಿ28 ನಲ್ಲಿ ಬಡ ದೇಶಗಳು ಹವಾಮಾನ ಬದಲಾವಣೆಯ ನಷ್ಟ ಮತ್ತು ಹಾನಿಯನ್ನು ನಿಭಾಯಿಸಲು ಜಾಗತಿಕ ನಿಧಿ ರಚಿಸಲಾಗಿದೆ. ಆದರೆ, ಒದಗಿಸಿದ ಅನುದಾನ 100 ಶತಕೋಟಿ ಡಾಲರ್‌ ಬಹಳ ಕಡಿಮೆ. ಆದರೆ, ಸಿಡಿಆ‌ರ್(ಕಾರ್ಬನ್ ಡೈಆಕ್ಸೈಡ್ ರಿಮೂವಲ್) ನಲ್ಲಿ ಲಭ್ಯವಿರುವ ಪ್ರತಿಯೊಂದು ಡಾಲರ್ ನ್ನು ಬಳಸಬೇಕಿದೆ. ಸಿಡಿಆರ್‌ ಎನ್ನುವುದು ವಿವಿಧ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಬಳಸಿ ಎಸೆಯುವ ವಸ್ತುಗಳನ್ನು ವಾಣಿಜ್ಯಿಕ ಉತ್ಪನ್ನವಾಗಿ ಪರಿವರ್ತಿಸಲು ಬಳಸುವ ತಂತ್ರಜ್ಞಾನ. ವಿಶ್ವವಿದ್ಯಾಲಯಗಳು ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳಲ್ಲಿ ಈ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿ ನಡೆಯುತ್ತದೆ. ಇದಕ್ಕೆ ಕಡಿಮೆ ಹಣದ ಅಗತ್ಯವಿರುತ್ತದೆ.

ಇಂಥ ಸಂಶೋಧನೆ ಅಮೆರಿಕ ಮತ್ತು ಯುರೋಪಿಗೆ ಸೀಮಿತಗೊಳಿಸಬಾರದು. ವಾತಾವರಣದ ಇಂಗಾಲವನ್ನು ಪರಿವರ್ತಿಸಲು ಮತ್ತು ಶಕ್ತಿಯನ್ನು ಉತ್ಪಾದಿಸುವಿಕೆ ಕುರಿತ ಸಂಶೋಧನೆಗಳು ಪಶ್ಚಿಮ ದೇಶದಲ್ಲಿ ನಡೆಯುತ್ತಿದೆ. ಇಂಗಾಲದ ಡೈಆಕ್ಸೈಡ್‌ ಬಳಸಿ ಎಥಿಲೀನ್ ಮತ್ತು ಸಂಬಂಧಿತ ರಾಸಾಯನಿಕಗಳನ್ನು ಉತ್ಪಾದಿಸಲಾಗುತ್ತಿದೆ.

ಹವಾಮಾನ ಬದಲಾವಣೆಯ ಹಾನಿಕಾರಕ ಪರಿಣಾಮಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಪಶ್ಚಿಮದ ಹಣ ಅಥವಾ ತಂತ್ರಜ್ಞಾನವನ್ನು ಅವಲಂಬಿಸುವುದು ಸೂಕ್ತವಲ್ಲ. ಅಂತಾರಾಷ್ಟ್ರೀಯ ಶೃಂಗಸಭೆಗಳು ಮ್ಯಾಜಿಕ್ ಪರಿಹಾರ ನೀಡುವುದಿಲ್ಲ. ಸೌರ ಮತ್ತು ಪವನ ಶಕ್ತಿಯಂತಹ ನವೀಕರಿಸಬಹುದಾದ ಶಕ್ತಿ ಮೂಲಗಳಾಗಿವೆ. ಪಳೆಯುಳಿಕೆ ಇಂಧನವನ್ನು ಹಂತಹಂತವಾಗಿ ಪರ್ಯಾಯಗಳಿಂದ ಬದಲಾಯಿಸಬೇಕಿದೆ. ಇಲ್ಲವಾದಲ್ಲಿ, ಬಡ ರಾಷ್ಟ್ರಗಳ ಬೆಳವಣಿಗೆ ಸ್ಥಗಿತಗೊಳ್ಳುತ್ತದೆ.

………………………………………….


(ಫೋಟೋ: ದುಬೈನಲ್ಲಿ ನಡೆದ COP28 ಶೃಂಗಸಭೆ‌ ಹೊರಗೆ ಕಾರ್ಯಕರ್ತರು ಮಾನವ ಸರಪಳಿಯನ್ನು ರಚಿಸಿ‌, ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡಲು ಒತ್ತಾಯಿಸಿದರು. ಫೋಟೋ: ಎಕ್ಸ್)

Similar News