ಇಂದಿರಾ ಹೇರಿದ ಕರಾಳ ತುರ್ತುಪರಿಸ್ಥಿತಿ ಟೀಕಿಸುವ ಭರದಲ್ಲಿ ಎಡವಿದರೆ ಶಶಿ ತರೂರ್?

ವರ್ತಮಾನವನ್ನು ಭೂತಕಾಲದೊಂದಿಗೆ ಹೋಲಿಸುವ ಗಡಿಬಿಡಿಯಲ್ಲಿ ಅವರು ಎಡವಿಬಿದ್ದಿದ್ದಾರೆ. ಇಂದಿರಾ ಗಾಂಧಿ ಅವರ ಬಳಿಕ ಬಂದ ಸರ್ಕಾರಗಳು ಸೌಮ್ಯವಾದ ರೀತಿಯಲ್ಲಿ ಅತ್ಯಂತ ಕ್ರೂರ ಪರಿಸ್ಥಿತಿಗಳನ್ನು ಹೇರಿಲ್ಲವೇ?;

Update: 2025-08-01 03:44 GMT
ಶಶಿ ತರೂರ್ ಅವರ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಅನೇಕರು ಇದನ್ನು ಕಾಂಗ್ರೆಸ್ ಪಕ್ಷ ಮತ್ತು ಹೈಕಮಾಂಡ್ ವರ್ಚಸ್ಸನ್ನು ಹಾಳುಮಾಡುವ ಪ್ರಯತ್ನ ಎಂದು ಭಾವಿಸಿದರು.

ತೃಣಮಾತ್ರದ ಕರುಣೆಯೇ ಇಲ್ಲದ ತುರ್ತುಪರಿಸ್ಥಿತಿಯನ್ನು ಹೇರಿದ ಐವತ್ತನೇ ವಾರ್ಷಿಕೋತ್ಸವವನ್ನು ಗುರುತಿಸಲು ಆ ಕರಾಳ ಅವಧಿಯನ್ನು ನೆನಪಿಸಿಕೊಳ್ಳುವಾಗ ಅಥವಾ ಪುನರಾವಲೋಕನ ಮಾಡುವಾಗ, ಪ್ರಸ್ತುತ ದೇಶದ ಪ್ರಬಲ ರಾಜಕೀಯ ನಿಲುವಿಗೆ ಅಂಟಿಕೊಂಡ ಪಕ್ಷಪಾತಿಗಳು ಮಾತ್ರ ಉದ್ದೇಶಪೂರ್ವಕವಾಗಿ ದೇಶದ ಈಗಿನ ಪರಿಸ್ಥಿತಿಯಿಂದ ದೂರವಿದ್ದರು. ಯಾಕೆ ಮಾತು ಹೇಳುತ್ತಿದ್ದೇನೆಂದರೆ ಈಗ ಇರುವ ಪರಿಸ್ಥಿತಿ ಆ 21 ತಿಂಗಳನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತದೆ.

ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿಯನ್ನು ಘೋಷಿಸಲು, ನಾಗರಿಕರ ಮೂಲಭೂತ ಹಕ್ಕುಗಳನ್ನು ರದ್ದು ಮಾಡುವುದು ಅಗತ್ಯವಾಗಿತ್ತು ಎಂದು ಈಗಲೂ ಸಮರ್ಥಿಸುವವರು ದೇಶದಲ್ಲಿ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇರುವವರ ಸಂಖ್ಯೆ ಬಹಳ ಕಡಿಮೆ.

ಆದರೆ 1975ರ ಜೂನ್ ಕೊನೆಯ ವಾರದಲ್ಲಿ ಐತಿಹಾಸಿಕ ವಿದ್ಯಮಾನದ ಬಗ್ಗೆ ಪ್ರತಿಕ್ರಿಯೆ ನೀಡಲು ಅವಕಾಶ ಸಿಕ್ಕಿದಾಗ ಅವರಲ್ಲಿ ಹೆಚ್ಚಿನವರು ಮೊರೆ ಹೋಗಿದ್ದು ಮೌನಕ್ಕೆ.

ಅನೇಕರು ಹಾಗೆ ಮಾಡಿದರು ಕೂಡ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಆರಂಭಿಸಿ ಬಿಜೆಪಿಯ ಸಾಕಷ್ಟು ನಾಯಕರಿಗೆ ಪ್ರಜಾಪ್ರಭುತ್ವದ ಮತ್ತು ಸಾಂಸ್ಥಿಕ ಸಮಗ್ರತೆಯ ಸಮರ್ಥ ಪ್ರತಿಪಾದಕರೆಂದು ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಇದರಿಂದ ಅವಕಾಶ ದೊರೆಯುತ್ತದೆ ಎಂಬ ಅರಿವು ಇದ್ದರೂ ಕೂಡ ಹಾಗೆ ಮಾಡಿದರು.

ಇವೆಲ್ಲಕ್ಕೆ ವ್ಯತಿರಿಕ್ತವಾಗಿ ಶಶಿ ತರೂರ್ ಅವರು ಹುಟ್ಟಿಕೊಂಡರು. ಅವರು ತಮ್ಮ ಇತ್ತೀಚಿನ ಲೇಖನದಲ್ಲಿ ತುರ್ತುಪರಿಸ್ಥಿತಿಯನ್ನು ಕಟುಮಾತುಗಳಲ್ಲಿ ಟೀಕಿಸಿದರು.

ಆದರೆ ಇದು ಕೆಟ್ಟ ಕಾರಣಕ್ಕೆ ಸುದ್ದಿಯಾಯಿತು; ಕಾಂಗ್ರೆಸ್ ನಾಯಕರೊಬ್ಬರು ಇದನ್ನು “ಭಯಾನಕ ತೀರ್ಪು” ಎಂದು ಟೀಕಿಸಿದರು. ಹಾಗೆ ಹೇಳಿದ್ದು ಪತ್ರಿಕಾ ಸ್ವಾತಂತ್ರ್ಯವನ್ನು ‘ಹತ್ತಿಕ್ಕಲು’ ಮತ್ತು ರಾಜಕೀಯ ಭಿನ್ನಾಭಿಪ್ರಾಯವನ್ನು “ಕ್ರೂರವಾಗಿ ನಿಗ್ರಹಿಸಲು” ದಾರಿಮಾಡಿಕೊಟ್ಟಿತು.

ತರೂರ್ ಅವರ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಅನೇಕರು ಕಾಂಗ್ರೆಸ್ ಮತ್ತು ಅದರ ಹೈಕಮಾಂಡ್ ನ್ನು ಮುಜುಗರಕ್ಕೀಡು ಮಾಡುವ ಪ್ರಯತ್ನವಿದು ಎಂದು ಭಾವಿಸಿದರು.

ತರೂರ್ ಮತ್ತೆ ಪ್ರತಿಪಾದಿಸಿದರು. ಅವರು ಹಾಗೆ ಮಾಡಿದ್ದು ಸರಿಯಾಗಿತ್ತು ಕೂಡ. “ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಉಸಿರು ಬಿಗಿ ಹಿಡಿದು ಕುಳಿತಿತ್ತು. ಯಾಕೆಂದರೆ ಅದರ ಸಾಂವಿಧಾನಿಕ ಭರವಸೆಯ ಮೂಲ ಸತ್ವವಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಅಗ್ನಿಪರೀಕ್ಷೆಗೆ ಒಳಗಾಯಿತು.”

ಹಾಗಿದ್ದೂ ತರೂರು ಎಡವಿದ್ದರು; ವರ್ತಮಾನವನ್ನು ಭೂತಕಾಲದೊಂದಿಗೆ ಹೋಲಿಕೆ ಮಾಡುವಲ್ಲಿ ಅವರು ವಿಫಲರಾಗಿದ್ದರು ಅಥವಾ ಪರ್ಯಾಯ ರಾಜಕೀಯ ಮಾರ್ಗವನ್ನು ಹುಡುಕುವ ನಿಟ್ಟಿನಿಂದ ತೆಗೆದುಕೊಂಡ ಪ್ರಜ್ಞಾಪೂರ್ವಕ ನಿರ್ಧಾರದಲ್ಲಿ ಅವರು ಸೋತಿದ್ದರು. ಅಷ್ಟು ಬಿಟ್ಟರೆ ಅವರು ತಮ್ಮ ಅತ್ಯುತ್ತಮವಾದ ಬರಹದಲ್ಲಿ ಪುನರಾವಲೋಕನ ಮಾಡಿದ್ದರು; ಓದುಗರು ನಿಘಂಟಿನ ಮೊರೆ ಹೋಗುವಂತೆ ಮಾಡಲಿಲ್ಲ.

‘ಆಪರೇಷನ್ ಸಿಂಧೂರ್’ ಬಳಿಕ ತಾವು ಸಿಲುಕಿರುವ ರಾಜಕೀಯ ಪರಿಸ್ಥಿತಿಯ ಕಾರಣದಿಂದ ಮತ್ತು ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಅನುಭವಿಸುತ್ತಿರುವ ದುರದೃಷ್ಟಕರ ಹಾಗೂ ಅನಗತ್ಯ ಅವಗಣನೆಯ ಫಲವಾಗಿ ಅವರು ಹೀಗೆ ಮಾಡಿರಲೂಬಹುದು. ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಸದಸ್ಯರಾಗಿರುವ ಅವರು ಈ ಅವಧಿಯಲ್ಲಿ ನಾಲ್ಕು ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.

ತುರ್ತುಪರಿಸ್ಥಿತಿಯನ್ನು ‘ಘೋಷಿಸಲಾಯಿತು’ ಎಂದು ಹೇಳುವ ಮೂಲಕ ಆರಂಭವಾಗುವ ಅವರ ಲೇಖನದ ಸಮಸ್ಯೆ ಅಲ್ಲಿಂದಲೇ ಶುರುವಾಗುತ್ತದೆ. ಇಂದಿರಾ ಗಾಂಧಿ ಅವರು ಬಳಸಿದ ತಂತ್ರಗಳು ಆ ಬಳಿಕ ಬಂದ ಸರ್ಕಾರಗಳಿಗೆ ಪಾಠವಾಗಬೇಕಿತ್ತು, ಅಂತಹ ಕಠಿಣಾತಿಕಠಿಣ ಪರಿಸ್ಥಿತಿಗಳನ್ನು ಔಪಚಾರಿಕವಾಗಿ ಹೇರುವುದು ಅನಿವಾರ್ಯವಲ್ಲ, ಇದೇ ರೀತಿಯ ನಿಯಂತ್ರಣಗಳನ್ನು ಇನ್ನೂ ಹೆಚ್ಚು ಸೌಮ್ಯವಾದ ವಿಧಾನಗಳನ್ನು ನಾಗರಿಕರ ಮೇಲೆ ಹೇರಬಹುದಿತ್ತು ಎಂಬುದನ್ನು ಕಲಿಸಿದೆ ಎಂಬ ಮಾತನ್ನು ಅವರು ತಮ್ಮ ಲೇಖನದ ಯಾವ ಹಂತದಲ್ಲಿಯೂ ಹೇಳಿಲ್ಲ.

“ಮೂಲಭೂತ ಹಕ್ಕುಗಳನ್ನು ರದ್ದುಗೊಳಿಸಲಾಗಿತ್ತು” ಎಂಬ ಅಂಶವನ್ನು ಲೇಖನವು ಉಲ್ಲೇಖಿಸುತ್ತದೆ. ಅಂತಹ ಕರಾಳ ತಿಂಗಳುಗಳಲ್ಲಿ ಆ ಅಗತ್ಯ ಹಕ್ಕುಗಳು ರದ್ದಾಗಿದ್ದವು ಎಂದು ಹೇಳುವ ಯಾವುದೇ ಲೇಖಕನು, ಈ ಮೂಲಭೂತ ಹಕ್ಕುಗಳನ್ನು ದೇಶದ ಉನ್ನತ ಸ್ಥಾನದಲ್ಲಿ ಇರುವವರು ಕೂಡ ಕಡೆಗಣಿಸಲು ಪ್ರಯತ್ನಿಸಿದರು ಎಂಬುದನ್ನು ಓದುಗರಿಗೆ ನೆನಪಿಸದೇ ಹೋದರೆ ಸಂವಿಧಾನದಲ್ಲಿ ಅವುಗಳನ್ನು ಪ್ರತಿಷ್ಠಾಪನೆ ಮಾಡಿರುವುದಕ್ಕೆ ದ್ರೋಹ ಬಗೆದಂತೆ. ಈ ದೇಶದ ನಾಗರಿಕರು ಕೇವಲ ಹಕ್ಕುಗಳನ್ನು ಮಾತ್ರ ಕೇಳುವುದಲ್ಲ, ಬದಲಿಗೆ ತಮ್ಮ ಕರ್ತವ್ಯಗಳನ್ನು ಮೊದಲು ನಿರ್ವಹಿಸಬೇಕು ಎನ್ನುವ ದೃಷ್ಟಿಯಿಂದ ಇದನ್ನು ಮಾಡಲಾಗಿದೆ.

ಇಂತಹುದೊಂದು ವಾದವನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಮಾಜಿ ಉಪರಾಷ್ಟ್ರಪತಿ ಹಾಗೂ ನರೇಂದ್ರ ಮೋದಿ ಅವರೂ ಸೇರಿದಂತೆ ಬಿಜೆಪಿ ಜೊತೆ ಸಂಬಂಧ ಹೊಂದಿರುವ ಬಹುತೇಕ ಇತರ ರಾಜಕೀಯ ಕಾರ್ಯಕರ್ತರು ಪ್ರತಿಪಾದಿಸಿದ್ದಾರೆ.

ಒಬ್ಬ ವ್ಯಕ್ತಿಯ ಹಕ್ಕುಗಳಿಗಾಗಿ ಪ್ರತಿಪಾದಿಸುವುದು ಅಥವಾ ರಕ್ಷಿಸುವುದು ಅಥವಾ ರಾಜ್ಯದಿಂದ ಇವುಗಳು ಉಲ್ಲಂಘನೆಯಾಗದ ರೀತಿಯಲ್ಲಿ ಜಾಗರೂಕರಾಗಿರುವುದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದುದು ಎಂದು ಬಹುತೇಕ ಬಿಂಬಿಸಲಾಗಿದೆ.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನದ (42ನೇ ತಿದ್ದುಪಡಿ) ಕಾಯ್ದೆಯ ಮೂಲಕ ಸಂವಿಧಾನದ ಭಾಗ-IV A- ಇದರಲ್ಲಿ ಪರಿಚಯಿಸಲಾದ ಮೂಲಭೂತ ಕರ್ತವ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಅವುಗಳನ್ನು ರದ್ದುಪಡಿಸದೇ ‘ಕಡೆಗಣಿಸಬಹುದು’ ಎಂಬ ಸಂಗತಿಯನ್ನು ಗಮನಿಸುವಲ್ಲಿ ತರೂರ್ ವಿಫಲರಾಗಿದ್ದಾರೆ.

“ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು ಮತ್ತು ರಾಜಕೀಯ ಭಿನ್ನಾಭಿಪ್ರಾಯವನ್ನು ಕ್ರೂರವಾಗಿ ನಿಗ್ರಹಿಸಲಾಯಿತು” ಎಂದು ತರೂರ್ ತಮ್ಮ ಲೇಖನದಲ್ಲಿ ಉಲ್ಲೇಖ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಅವರು 2018ರಲ್ಲಿ ಬರೆದ ‘The Paradoxical Prime Minister: Narendra Mod And His India ಕೃತಿಯನ್ನು ಪ್ರಸ್ತಾಪಮಾಡುವುದು ಅನಿವಾರ್ಯವಾಗುತ್ತದೆ.

ಈ ಕೃತಿಯಲ್ಲಿರುವ ‘Trial of and By the Media’ಎಂಬ ಅಧ್ಯಾಯದಲ್ಲಿ ಶಶಿ ತರೂರ್ ಅವರು, “ನಮ್ಮ ಮಾಧ್ಯಮದ ಸ್ಥಿತಿಯು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವು (ಮುಕ್ತ ಮತ್ತು ಆರೋಗ್ಯವಂತ ಪತ್ರಿಕಾ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಮೂಲಕ ಗತಿಶೀಲ ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವವನ್ನು ಖಾತರಿಪಡಿಸಲು) ಎಷ್ಟು ಕಳಪೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಎಂದು ಹೇಳುತ್ತಾರೆ.

ಜಾಗತಿಕ ಮಾಧ್ಯಮದ ಸೂಚ್ಯಂಕದಲ್ಲಿ ಕುಸಿತ ಉಂಟಾಗಿರುವುದಕ್ಕೆ “ಪತ್ರಕರ್ತರ ಹತ್ಯೆ ಮತ್ತು ದಬ್ಬಾಳಿಕೆ, ಸುಳ್ಳು ಸುದ್ದಿ, ದ್ವೇಷ ಭಾಷಣ ಹಾಗೂ ಸಂಪಾದಕರು ಹಾಗೂ ಮಾಧ್ಯಮ ಸಂಸ್ಥೆಗಳ ಮಾಲೀಕರ ಬೆದರಿಕೆಗಳೇ ಮುಖ್ಯ ಕಾರಣ” ಎಂದು ಅವರು ಮುಂದುವರಿದು ಹೇಳುತ್ತಾರೆ.

ಇತ್ತೀಚೆಗಿನ ವರ್ಷಗಳಲ್ಲಿ ಮುಖ್ಯವಾಹಿನಿ ಮಾಧ್ಯಮದ ನಿಷ್ಪಕ್ಷಪಾತ ಧೋರಣೆ ಮತ್ತು ಹೋರಾಟದ ಮನೋಭಾವ ಗಣನೀಯವಾಗಿ ನೆಲಕಚ್ಚಿದೆ ಎಂಬ ಸಂಗತಿಯನ್ನು ಸಾಮಾನ್ಯ ನಾಗರಿಕರೂ ಒಪ್ಪುತ್ತಾರೆ. ಹಾಗಿದ್ದೂ ತರೂರ್ ಅವರು, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾಧ್ಯಮದ ಮೇಲಾದ ದಾಳಿಯನ್ನು ಮಾತ್ರ ಉಲ್ಲೇಖಿಸಿ ಅದೊಂದು ಏಕಕಾಲಿಕ ಘಟನೆ ಎಂಬಂತೆ ಬಿಂಬಿಸಿದ್ದಾರೆ.

ಇನ್ನು ಭಿನ್ನಾಭಿಪ್ರಾಯದ ವಿಷಯಕ್ಕೆ ಬಂದಾಗ ಅದನ್ನು ಇತ್ತೀಚಿನ ವರ್ಷಗಳಲ್ಲಿ ಕೇವಲ ಹತ್ತಿಕ್ಕಿ ನಿಂದಿಸಲಾಗಿಲ್ಲ, ಬದಲಾಗಿ ಸರ್ಕಾರದ ನೀತಿಗಳು, ಯೋಜನೆಗಳು ಅಥವಾ ಸಿದ್ಧಾಂತಗಳನ್ನು ಟೀಕಿಸುವ ಜನರ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ನಿರ್ದೇಶಿಸಲು ಬಿಜೆಪಿಯ ಪ್ರಚಾರ ಮತ್ತು ಸಾಮಾಜಿಕ ಮಾಧ್ಯಮ ವಿಭಾಗಗಳು ಹಾಗೂ ಸರ್ಕಾರ ನಿರಂತರವಾಗಿ ಪ್ರೋತ್ಸಾಹಿಸುತ್ತ ಬಂದಿವೆ. ಇವೆಲ್ಲವೂ ಕೂಡ ಈಗಿನ ಆಡಳಿತವು ದೇಶದ್ರೋಹದಿಂದ ಕೂಡಿದ್ದು ಎಂದು ಒಂದೇ ಏಟಿಗೆ ಬಿಂಬಿಸಿದೆ.

ಅವರು ತಮ್ಮ ಲೇಖನದಲ್ಲಿ ಮತ್ತೆ ಮುಂದುವರಿದು ಹೇಳುವುದು ಏನೆಂದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತಾವು ಭಾರತದಲ್ಲಿದ್ದು ಬಳಿಕ ಉನ್ನತ ವ್ಯಾಸಂಗಕ್ಕಾಗಿ ತೆರಳಿದೆ ಎಂದು. ಹಾಗಿದ್ದೂ ಅವರು “ಉಳಿದ ಅವಧಿಯನ್ನು ದೂರದಿಂದಲೇ ಗಮನಿಸಿದೆ, ತೀವ್ರವಾದ ಆತಂಕದಿಂದ ನನ್ನ ಮನಸ್ಸು ಕಲಕಿಹೋಯಿತು, ಭಾರತೀಯ ಸಾರ್ವಜನಿಕ ಜೀವನದ ಕ್ರಿಯಾಶೀಲತೆ, ಸತ್ವಯುತವಾದ ಚರ್ಚೆ ಮತ್ತು ಮುಕ್ತ ಅಭಿವ್ಯಕ್ತಿಗೆ ಒಗ್ಗಿಕೊಂಡಿದ್ದ ವಾತಾವರಣದಲ್ಲಿ ಇದ್ದಕ್ಕಿದ್ದಂತೆ ಭಯಾನಕ ಮೌನ ಆವರಿಸಿಬಿಟ್ಟಿತು” ಎಂದು ಅವರು ಹೇಳುತ್ತಾರೆ.

ವಿಷಾದದ ಸಂಗತಿ ಎಂದರೆ, ಪ್ರತಿಬಂಧಕ ಬಂಧನದ ಮೂಲಕವಾಗಲಿ ಅಥವಾ ಕಿರುಕುಳದ ಭಯದಿಂದಲಾಗಲಿ ಎಷ್ಟು ಜನ ಮೌನಕ್ಕೆ ಶರಣಾದರು ಎಂಬುದರ ಬಗ್ಗೆ ತರೂರ್ ಯಾವುದೇ ಉಲ್ಲೇಖ ಮಾಡುವುದಿಲ್ಲ. ಉದಾಹರಣೆಗೆ ಪತ್ರಕರ್ತರ ವಿರುದ್ಧ ಅಥವಾ ನಾಗರಿಕ ಸಮಾಜದ ಕಾರ್ಯಕರ್ತರ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆಯನ್ನು ಸುಮ್ಮನೆ ನೆನಪಿಸಿಕೊಳ್ಳಿ; ಭಾರತದ ರಾಜಧಾನಿಯಲ್ಲಿ 2020ರ ಫೆಭ್ರವರಿ ಗಲಭೆಗಳಲ್ಲಿ ಸಂಚು ರೂಪಿಸಿದ ಆರೋಪದ ಮೇಲೆ ಅವರಿನ್ನೂ ಜೈಲಿನಲ್ಲಿದ್ದಾರೆ.

“ನ್ಯಾಯಾಂಗವು ತೀವ್ರವಾದ ಒತ್ತಡಕ್ಕೆ ಮಣಿಯಿತು” ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ಇತ್ತೀಚಿನ ವರ್ಷಗಳಲ್ಲಿ ನಿವೃತ್ತ ನ್ಯಾಯಾಧೀಶರಿಗೆ ರಾಜ್ಯಪಾಲರಂತಹ ಹುದ್ದೆಗಳು ಅಥವಾ ರಾಜ್ಯಸಭೆಗೆ ನಾಮನಿರ್ದೇಶನದಂತಹ ಅವಕಾಶಗಳು ದೊರೆತಿವೆ. ಇದಕ್ಕೆ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರೇ ಉದಾಹರಣೆ.

ಅಯೋಧ್ಯೆ ಪ್ರಕರಣದಲ್ಲಿ ಅವರು ಮುಖ್ಯ ನ್ಯಾಯಾಧೀಶರಾಗಿದ್ದರು ಎಂಬುದು ಕೇವಲ ಕಾಕತಾಳೀಯವೇ? ಆ ಪ್ರಕರಣದಲ್ಲಿ ಅವರು, 1992ರ ಡಿಸೆಂಬರ್ ನಲ್ಲಿ ನಡೆದ ದ್ವಂಸದಂತಹ ಕ್ರಿಮಿನಲ್ ಕೃತ್ಯಕ್ಕೂ ಮುನ್ನ ಅಲ್ಲಿ ಮಸೀದಿ ಇತ್ತು ಎಂಬುದನ್ನು ಒಪ್ಪಿಕೊಂಡಿದ್ದರೂ ವಿವಾದಿತ ಆಸ್ತಿಯನ್ನು ಹಿಂದುಗಳಿಗೆ ಹಸ್ತಾಂತರಿಸಿದ್ದರು.

ತುರ್ತು ಪರಿಸ್ಥಿತಿಯ ಘೋಷಣೆಯ 50ನೇ ವರ್ಷಾಚರಣೆಯು “ಗಾಢವಾದ ದ್ರುವೀಕರಣ ಮತ್ತು ಪ್ರಜಾಪ್ರಭುತ್ವದ ನಿಯಮಗಳಿಗೆ ಸವಾಲೊಡ್ಡುವ ಸಮಯದಲ್ಲಿ ಬಂದಿದೆ” ಎಂಬುದನ್ನು ಶಶಿ ತರೂರ್ ಅವರು ಒಪ್ಪಿಕೊಳ್ಳುತ್ತಾರೆ. ಆ ಬಳಿಕ, “ಇದು ಅನೇಕ ರಾಷ್ಟ್ರಗಳಲ್ಲಿ ಸಂಭವಿಸುತ್ತಿದೆ” ಎಂದು ಹೇಳುವ ಮೂಲಕ ತಮ್ಮ ವಾದವನ್ನು ಸಾರ್ವತ್ರಿಕಗೊಳಿಸುವ ಮೂಲಕ ಲೇಖನವನ್ನು ಕೊನೆಗೊಳಿಸುತ್ತಾರೆ.

ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಶೀಲನೆ (SIR) ನಡೆಸುವುದಕ್ಕಾಗಿ ಭಾರತದ ಚುನಾವಣಾ ಆಯೋಗ ಕೈಗೊಂಡ ಅಭಿಯಾನದ ಬಗ್ಗೆ ಭಾರಿ ವಿವಾದ ತಲೆದೋರಿರುವ ಹೊತ್ತಿನಲ್ಲೇ ಅವರ ಈ ಲೇಖನ ಪ್ರಕಟವಾಗಿದ್ದರೂ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸಿರುವ ಕಡೆಗೆ ಬೊಟ್ಟುಮಾಡುತ್ತಾರೆ. ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಅನೇಕ ಮಂದಿ ಮಾಜಿ ಚುನಾವಣಾ ಆಯುಕ್ತರು ಪ್ರಶ್ನಿಸಿದ್ದಾರೆ.

ಶಶಿ ತರೂರ್ ಅವರು ಬಹುಶಃ ಈ ಲೇಖನದಲ್ಲಿ ಮಾಡಿದಂತೆ ಸಾಮಾನ್ಯ ಸಂದರ್ಭಗಳಲ್ಲಿ ಈಗಿನ ಆಡಳಿತದ ಬಗ್ಗೆ ಮೃದು ಧೋರಣೆ ತಳೆಯುತ್ತಿರಲಿಲ್ಲ. ಈ ನಿರ್ದಿಷ್ಟ ಸಂದರ್ಭದಲ್ಲಿ ಭೂತಕಾಲವನ್ನು ವರ್ತಮಾನದೊಂದಿಗೆ ಹೋಲಿಕೆ ಮಾಡದೇ ಇರುವುದು ತುರ್ತಾಗಿ ಅಗತ್ಯವಿತ್ತು.

ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್ಸಿನ ಹಲವಾರು ಮಂದಿ ನಾಯಕರು ಹೈಕಮಾಂಡ್ ಸುತ್ತ ಒಂದು ವರಿಷ್ಠ ಗುಂಪನ್ನು ರಚಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಅವರೆಲ್ಲರೂ ತರೂರ್ ಅವರ ಚುರುಕುತನ ಮತ್ತು ಜನಪ್ರಿಯತೆಯಿಂದ ತಮ್ಮ ಸ್ಥಾನಗಳಿಗೆ ಚ್ಯುತಿ ಬರುತ್ತದೆ ಎಂಬ ಭಾವನೆ ಹೊಂದಿದ್ದಾರೆ ಎಂಬುದು ಸ್ಪಷ್ಟ.

ಸಮರ್ಥವಾಗಿ, ಕರಾರುವಕ್ಕಾಗಿ ಮಾತನಾಡುವ, ಪ್ರಜಾಸತ್ತಾತ್ಮಕ ಮನೋಭಾವವನ್ನು ಹೊಂದಿರುವ ಮತ್ತು ಜ್ಯಾತ್ಯತೀತ ನಾಯಕರೊಬ್ಬರು ತಮ್ಮ ಹೃದಯದ ಮಾತು ಕೇಳದೆ ಲೆಕ್ಕಾಚಾರದ ಮನಸ್ಸಿನಿಂದ ನಿರ್ಧಾರ ಕೈಗೊಳ್ಳುವ ಸ್ಥಿತಿಗೆ ತಲುಪಿರುವುದು ದುರದೃಷ್ಟದ ಸಂಗತಿ. ಆಪರೇಷನ್ ಸಿಂಧೂರ್ ಬಳಿಕ ವಿದೇಶಕ್ಕೆ ಭೇಟಿ ನೀಡುವ ನಿಯೋಗದ ಭಾಗವಾಗಲು ಸರ್ಕಾರ ನೀಡಿದ ಆಹ್ವಾನವನ್ನು ತಕ್ಷಣ ಒಪ್ಪಿಕೊಳ್ಳುವ ವಿಷಯದಲ್ಲಾಗಲಿ ಅಥವಾ ತುರ್ತುಪರಿಸ್ಥಿತಿ ಕುರಿತ ಅವರ ಲೇಖನವಾಗಿರಲಿ, ಎರಡರಲ್ಲಿಯೂ ಇದು ಸತ್ಯ.

ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ರಚಿಸಿದ ಪಕ್ಷದ ನಾಯಕರ ನಿಯೋಗಗಳಲ್ಲಿ ತರೂರ್ ಅವರ ಹೆಸರು ಇಲ್ಲದೇ ಇರುವುದು ವಿಷಾದದ ಸಂಗತಿ. ಕಾಂಗ್ರೆಸ್ ನಾಯಕತ್ವ ಮತ್ತು ತರೂರ್ ನಡುವೆ ಏನು ತೊಂದರೆ ಉಂಟಾಗಿದೆ ಎಂಬುದು ಬೇರೆಯೇ ವಿಷಯ.

ನಿರಂಕುಶ ಮತ್ತು ಬಹುಸಂಖ್ಯಾತ ಆಡಳಿತದ ವಿರುದ್ಧ ಶಕ್ತಿಗಳು ಕೈಜೋಡಿಸಬೇಕಾದ ಕಾಲಘಟ್ಟದಲ್ಲಿ ಇಂತಹುದೊಂದು ಬೆಳವಣಿಗೆ ಅಕಾಲಿಕ ಎಂದೇ ಹೇಳಬೇಕಾಗುತ್ತದೆ.


Tags:    

Similar News