ಸದೃಢ ಅರ್ಥ ವ್ಯವಸ್ಥೆಯನ್ನು ಕಟ್ಟಲು ಭಾರತ ಯಾಕೆ ಟ್ರಂಪ್ ಗೆ ಸೆಡ್ಡು ಹೊಡೆಯಬೇಕು?
ಅಮೆರಿಕಕ್ಕೆ ಆಘಾತ ನೀಡುವ ರೀತಿಯಲ್ಲಿ ಭಾರತ ಜನರಿಕ್ ಔಷಧಿಗಳ ಮೇಲೆ ರಫ್ತು ಸುಂಕವನ್ನು ವಿಧಿಸಬಹುದು. ಇದರ ಜೊತೆಗೆ ಹೊಸ ಮಾರುಕಟ್ಟೆಯನ್ನು ಕಂಡುಕೊಳ್ಳಲು ರಫ್ತುದಾರರಿಗೆ ವೆಚ್ಚವನ್ನು ತಗ್ಗಿಸಲು ಉತ್ತೇಜನ ನೀಡಬಹುದು. ರಕ್ಷಣಾ ತಂತ್ರಜ್ಞಾನಕ್ಕೆ ಮತ್ತು ಉತ್ಪಾದನೆಗೆ ದೇಶೀಯ ಸ್ಪರ್ಶ ನೀಡುವ ಮೂಲಕ ಟ್ರಂಪ್ ಗೆ ತಕ್ಕ ಸಂದೇಶ ರವಾನೆ ಮಾಡಬೇಕು.;
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಾಮಾಜಿಕ ಮಾಧ್ಯಮ ‘ಟ್ರುಥ್ ಸೋಷಿಯಲ್’ನಲ್ಲಿ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ.25ರಷ್ಟು ಸುಂಕವನ್ನು ವಿಧಿಸಿರುವುದಾಗಿ ಘೋಷಿಸಿದ್ದಾರೆ. ಇದು ಜಾರಿಗೆ ಬರಬಹುದು ಅಥವಾ ಬಾರದೇ ಇರಬಹುದು.
ಒಂದು ವೇಳೆ ಭಾರತ ಈ ಬಗ್ಗೆ ಮಾತುಕತೆ ನಡೆಸದೇ ಹೋದರೆ, ಅಮೆರಿಕದಲ್ಲಿ ನಮ್ಮ ನಷ್ಟದ ಪ್ರಮಾಣವನ್ನು ಕಡಿತಗೊಳಿಸಬಹುದು, ಹೊಸ ಮಾರುಕಟ್ಟೆಗಳ ಪರಿಶೋಧನೆ ಮಾಡಬಹುದು ಮತ್ತು ಅಮೆರಿಕದಲ್ಲಿಯೂ ಪೈಪೋಟಿಗೆ ಇಳಿಯಲು ಉತ್ಪಾದನಾ ವೆಚ್ಚವನ್ನು ತಗ್ಗಿಸಬಹುದು.
ಭಾರತ ತಿರುಗೇಟು ನೀಡಲಿ
ಆದರೆ ರಷ್ಯಾದಿಂದ ಶಸ್ತ್ರಾಸ್ತ್ರ ಅಥವಾ ತೈಲ ಖರೀದಿ ಮಾಡುವುದನ್ನು ನಿಲ್ಲಿಸಬೇಕು ಎಂಬ ಟ್ರಂಪ್ ಒತ್ತಡಕ್ಕೆ ಭಾರತ ಮಣಿಯಬಾರದು. ಭಾರತವು ತನ್ನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಸಾರ್ವಭೌಮ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಭಾರತದ ಸರಕುಗಳ ಮೇಲೆ ಅಮೆರಿಕದ ದಂಡದ ಶುಲ್ಕವನ್ನು ವಿಧಿಸಲು ಮುಂದಾದರೆ ಭಾರತ ತಿರುಗೇಟು ನೀಡಬೇಕು.
ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಜನರಿಕ್ ಔಷಧಗಳ ಮೇಲೆ ರಪ್ತು ಸುಂಕವನ್ನು ವಿಧಿಸಬೇಕು. ಭಾರತದ ಜನರಿಕ್ ಔಷಧದ ರಪ್ತಿಗೆ ಪರ್ಯಾಯವಾಗಿ ಯಾವುದೇ ದೇಶವು ತರಾತುರಿಯಲ್ಲಿ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಇಸ್ರೇಲ್ ಅಥವಾ ಐರ್ಲೆಂಡ್ ನಿಂದ ಇದು ತಕ್ಷಣಕ್ಕೆ ಸಾಧ್ಯವಿಲ್ಲದ ಮಾತು. ಇದರಿಂದ ಅಮೆರಿಕದಲ್ಲಿ ಸಹಜವಾಗಿ ಆರೋಗ್ಯ ಸೇವಾ ವೆಚ್ಚಗಳು ಗಗನಕ್ಕೇರುತ್ತವೆ. ಜೊತೆಗೆ 2026ರಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಮತ್ತು ಅವರ ಬೆಂಬಲಿಗರು ಇದರ ಪರಿಣಾಮವನ್ನು ಎದುರಿಸುವುದು ಖಚಿತ. ತಾನು ‘ಚಕ್ರವರ್ತಿ ಟ್ರಂಪ್’ ಎಂಬ ಭ್ರಮೆಯಲ್ಲಿ ಬೀಗುತ್ತಿರುವ ಅಮೆರಿಕದ ಅಧ್ಯಕ್ಷರ ಗಾಳಿಯಲ್ಲಿ ತೇಲುವ ಬಲೂನಿಗೆ ನಿಶ್ಚಿತವಾಗಿ ಸೂಜಿಯನ್ನು ಚುಚ್ಚಬೇಕು.
ಭಾರತದಿಂದ ಆಮದಾಗುವ ಹೆಚ್ಚಿನ ಉತ್ಪನ್ನಗಳ ಮೇಲೆ ಅಮೆರಿಕವು ಶೇ.25ರಷ್ಟು ಸುಂಕ ವಿಧಿಸಿದರೆ ನಮ್ಮ ರಫ್ತು ಶೇ.25ರಷ್ಟು ದುಬಾರಿಯಾಗುತ್ತವೆ ಎಂದು ನಾವು ಅರ್ಥಮಾಡಿಕೊಳ್ಳಬಾರದು. ಬದಲಾಗಿ, ಶೇ.25ರ ಸುಂಕವು ಪ್ರತಿ ವಲಯದಲ್ಲಿ ಭಾರತದ ಸ್ಪರ್ಧಾತ್ಮಕ ರಾಷ್ಟ್ರಗಳ ಮೇಲೆ ವಿಧಿಸಿರುವ ಸುಂಕಕ್ಕಿಂತ ಎಷ್ಟು ಹೆಚ್ಚು ಎಂಬುದನ್ನು ಪರಿಗಣಿಸಬೇಕು.
ಉದಾಹರಣೆಗೆ, ಅಮೆರಿಕವು ಬಾಂಗ್ಲಾದೇಶದ ರಫ್ತಿನ ಮೇಲೆ ಶೇ.35, ಶ್ರೀಲಂಕಾ ಮತ್ತು ಪಾಕಿಸ್ತಾನದ ಸರಕುಗಳ ಮೇಲೆ ಕ್ರಮವಾಗಿ ಶೇ.30 ಮತ್ತು ಶೇ.29 ಹಾಗೂ ಥೈಲ್ಯಾಂಡ್ ಸರಕುಗಳ ಮೇಲೆ ಶೇ.36ರಷ್ಟು ಸುಂಕ ವಿಧಿಸುತ್ತಿದೆ. ಈ ದೇಶಗಳಿಗೆ ಹೋಲಿಸಿದರೆ ಭಾರತದ ರಫ್ತುದಾರರು ಇನ್ನೂ ಅನುಕೂಲಕರ ಸ್ಥಾನದಲ್ಲಿದ್ದಾರೆ. ಆದಾಗ್ಯೂ ಇಂಡೋನೇಷ್ಯಾದ ಸರಕುಗಳ ಮೇಲಿನ ಸುಂಕಕ್ಕಿಂತ ಭಾರತದ ಸರಕುಗಳ ಮೇಲೆ ಶೇ.6ರಷ್ಟು ಮತ್ತು ವಿಯೆಟ್ನಾಂ ಸುಂಕಕ್ಕಿಂತ ಶೇ.5ರಷ್ಟು ಹೆಚ್ಚು ಸುಂಕವನ್ನು ವಿಧಿಸಲಾಗುತ್ತಿದೆ.
ಪರಿಣಾಮ ತಡೆಯುವ ಪರಿ ಹೇಗೆ
ಹಾಗಾಗಿ ಒಂದು ವೇಳೆ ಭಾರತದ ಸುಂಕದ ಕೊರತೆಯು ಶೇ.25ರಷ್ಟು ಸುಂಕಕ್ಕಿಂತ ಬಹಳ ಕಡಿಮೆಯಿದ್ದರೆ ಲಾಜಿಸ್ಟಿಕ್ಸ್ ಅನ್ನು ಸುಧಾರಿಸುವ ಮೂಲಕ ಶೇ.3ರಿಂದ 4ರಷ್ಟನ್ನು ಸರಿದೂಗಿಸಬಹುದು. ಪ್ರತಿಯೊಬ್ಬ ರಫ್ತುದಾರನು ಕೂಡ ಟಿವಿಎಸ್ ಸಪ್ಲೈ ಚೈನ್ ಸೊಲುಷನ್ಸ್ ಲಿಮಿಟೆಡ್ ನಂತಹ ಮಾರಾಟಗಾರರಿಂದ ಲಭ್ಯವಿರುವ ಪರಿಪೂರ್ಣವಾದ ಲಾಜಿಸ್ಟಿಕ್ಸ್ ನಿರ್ವಹಣೆಯನ್ನು ಅಳವಡಿಸಿಕೊಂಡರೆ ಇದನ್ನು ಸರಿದೂಗಿಸಲು ಕಷ್ಟವಾಗುವುದಿಲ್ಲ.
ಭಾರತವು ಕೇವಲ ಕಡಿಮೆ ವೇತನವನ್ನು ನಿಯಂತ್ರಿಸಲು ಪ್ರಯತ್ನಿಸುವುದನ್ನು ನಿಲ್ಲಿಸಿ ಪ್ರತಿಯೊಬ್ಬ ಕೆಲಸಗಾರನು ದುಡಿಯುವ ಯಂತ್ರೋಪಕರಣಗಳಲ್ಲಿ ಹಾಗೂ ಕೆಲಸಗಾರರ ತರಬೇತಿಯಲ್ಲಿ ಹೂಡಿಕೆ ಮಾಡುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವ ಕಡೆಗೆ ಗಮನ ಹರಿಸಬಹುದು. ಇದರಿಂದ ಉತ್ಪಾದಕತೆ ಹಾಗೂ ಕೆಲಸಗಾರರ ಗಳಿಕೆಯಲ್ಲಿಯೂ ಸುಧಾರಣೆಯನ್ನು ತರುತ್ತದೆ. ಇಷ್ಟು ಮಾತ್ರವಲ್ಲದೆ ಉದ್ಯೋಗದಾತ ಮತ್ತು ಉದ್ಯೋಗಿಯ ನಡುವೆ ನಿಷ್ಠೆ ವರ್ಧಿಸುವಂತೆ ಮಾಡುತ್ತದೆ.
ಈಗ ಉಂಟಾಗಿರುವ ಸುಂಕದ ಆಘಾತವು ಭಾರತೀಯ ರಫ್ತುದಾರರು ತಮ್ಮ ‘ಯಥಾಸ್ಥಿತಿ’ ವ್ಯವಹಾರವನ್ನು ಮರೆತು ಉತ್ಪಾದನಾ ಪ್ರಕ್ರಿಯೆಯಲ್ಲಿ ಹೂಡಿಕೆ ಮಾಡಲು, ಉತ್ತಮ ಸಂಪನ್ಮೂಲ ಸಂಗ್ರಹಿಸಲು ಮತ್ತು ಹೊಸ ಮಾರುಕಟ್ಟೆಯನ್ನು ಹುಡುಕಲು, ಪೋಷಿಸಲು ಪ್ರೇರಣೆಯನ್ನು ನೀಡಬೇಕು.
ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಹಾಗೂ ಹೊಸ ಸದಸ್ಯ ಇರಾನ್ ಸೇರಿದಂತೆ ಎಲ್ಲ ಮೂಲ ಬ್ರಿಕ್ಸ್ ರಾಷ್ಟ್ರಗಳು ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿವೆ. ಒಂದು ವೇಳೆ ಡಾಲರ್-ಗೆ ಪರ್ಯಾಯವಾಗಿ ಹೊಸ ಕರೆನ್ಸಿಯನ್ನು ಸೃಷ್ಟಿಸುವ ಪ್ರಯತ್ನಗಳನ್ನೇನಾದರೂ ಮುಂದುವರಿಸಿದರೆ ಬ್ರಿಕ್ಸ್ ದೇಶಗಳ ಮೇಲೆ ವಿಶೇಷ ದಂಡದ ಸುಂಕಗಳ ಪ್ರಹಾರ ಮಾಡುವುದಾಗಿ ಟ್ರಂಪ್ ಎಚ್ಚರಿಕೆಯನ್ನು ನೀಡಿದ್ದಾರೆ.
ಇಂತಹ ಬೆದರಿಕೆಗೆ ಎದೆಗುಂದುವ ಬದಲು ಬ್ರಿಕ್ಸ್ ರಾಷ್ಟ್ರಗಳು ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಡಾಲರ್ ಪ್ರಾಬಲ್ಯವನ್ನು ತಗ್ಗಿಸಲು ಅಗತ್ಯವಿರುವ ಹೆಜ್ಜೆಗಳನ್ನು ದಿಟ್ಟವಾಗಿ ಇಡಬೇಕು. ಇದಕ್ಕಾಗಿ ಐರೋಪ್ಯ ಒಕ್ಕೂಟ ಮತ್ತು ಕೆನಡಾವನ್ನು ಹಾಗೂ ಸಾಧ್ಯವಾದರೆ ಜಪಾನ್-ನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
ಸ್ಟೇಬಲ್-ಕಾಯಿನ್ ಜಾರಿಗೆ ಬರಲಿ
ಡಾಲರ್-ಗೆ ಸೂಕ್ತವಾದ ಪರ್ಯಾಯವೆಂದರೆ ಸ್ಟೇಬಲ್-ಕಾಯಿನ್ (Stablecoin). ಇದರ ಮೌಲ್ಯವನ್ನು ಡಾಲರ್ ಕೂಡ ಸೇರಿದಂತೆ ಪ್ರಮುಖ ಕರೆನ್ಸಿಗಳ ಸಮತೋಲಿತ ಗುಂಪಿಗೆ ಕ್ರಿಯಾತ್ಮಕ ಸಂಪರ್ಕ ಹೊಂದಿರಬೇಕು. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಘಟಕವಾದ ಎಸ್.ಡಿ.ಆರ್. ಅನ್ನು ಐದು ಕರೆನ್ಸಿಗಳ ಗುಂಪಿಗೆ ಅನುಗುಣವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಆ ಐದು ಕರೆನ್ಸಿಗಳೆಂದರೆ ಡಾಲರ್, ಯೂರೊ, ಜಪಾನ್-ನ ಯೆನ್, ಚೀನಾದ ಯುವಾನ್ ಮತ್ತು ಬ್ರಿಟಿಷ್-ನ ಪೌಂಡ್.
ಬ್ರಿಕ್ಸ್ ದೇಶಗಳು ಈ ಐದು ಕರೆನ್ಸಿಗಳನ್ನು ಒಳಗೊಂಡಿರುವ ಸ್ಟೇಬಲ್-ಕಾಯಿನ್ ಜಾರಿಗೆ ತರಲು ಐರೋಪ್ಯ ಒಕ್ಕೂಟ, ಜಪಾನ್, ಕೆನಡಾ, ಸ್ವಿಝರ್ಲಂಡ್, ಮತ್ತು ಬ್ರಿಟನ್-ನ್ನು ಸಹಭಾಗಿಗಳನ್ನಾಗಿ ಮಾಡಬೇಕು. ಈ ಎಲ್ಲ ಸಹಭಾಗಿಗಳು ಬಂಡವಾಳ ಹೂಡಿಕೆ ಮಾಡಿ ಎಸ್.ಡಿ.ಆರ್. ಗುಂಪಿನಲ್ಲಿರುವ ಕರೆನ್ಸಿ ಮತ್ತು ಸರ್ಕಾರಿ ಬಾಂಡ್ ಗಳಲ್ಲಿ ಹೂಡಿಕೆ ಮಾಡಬೇಕು.
ಅಷ್ಟು ಮಾತ್ರವಲ್ಲದೆ ಇದು ಅಮೆರಿಕದ ಜೀನಿಯಸ್ ಆ್ಯಕ್ಟ್ (genius Act)ನಲ್ಲಿ ನಿಗದಿಪಡಿಸಲಾದ ನಿಯಮಗಳಿಗೆ ಸಂಪೂರ್ಣವಾಗಿ ಬದ್ಧವಾಗಿರಬೇಕು. ಈ ಕಾಯ್ದೆಯ ನಿಯಮಕ್ಕೆ ಅನುಸಾರವಾಗಿ ಸ್ಟೇಬಲ್ ಕಾಯಿನ್ ವಿತರಕರು ಬಿಡುಗಡೆ ಮಾಡಿದ ಕರೆನ್ಸಿಯ ಮೌಲ್ಯಕ್ಕೆ ಸಮನಾದ ಆಸ್ತಿಗಳನ್ನು ಹೊಂದಿರಬೇಕು. ಈ ಎಸ್.ಡಿ.ಆರ್-ಗೆ ಸಮಾನವಾದ ಸ್ಟೇಬಲ್ ಕಾಯಿನ್ (ಇದಕ್ಕೆ ಬ್ರೆಟನ್ ವುಡ್ಸ್ ಸಮ್ಮೇಳನದಲ್ಲಿ ವ್ಯಾಪಾರ ಅಸಮತೋಲನಗಳಿಗೆ ಪರಿಹಾರವಾಗಿ ಕೆಯಾನ್ಸ್ ಪ್ರಸ್ತಾಪ ಮಾಡಿದ bancor ಹೆಸರನ್ನು ಬಳಕೆ ಮಾಡಬಹುದು) ಅನ್ನು ಅಮೆರಿಕವು ಪಾಲ್ಗೊಳ್ಳದೇ ಇರುವ ವಹಿವಾಟುಗಳಿಗೆ ಬಳಕೆ ಮಾಡಬಹುದು ಹಾಗೂ ಇದೇ ಕರೆನ್ಸಿಯ ಮೂಲಕ ಕಚ್ಛಾ ತೈಲ ಬೆಲೆಗಳನ್ನು ಕೂಡ ನಿಗದಿಮಾಡಬಹುದು.
ಬ್ರಿಕ್ಸ್ ರೀಇನ್ಶೂರೆನ್ಸ್, ಮತ್ತು ಬ್ರಿಕ್ಸ್ ಕ್ಲಿಯರ್ ಸಂಸ್ಥೆಗಳಿಗೆ ಚಾಲನೆ ನೀಡಬೇಕು ಹಾಗೂ ಈಗ ಅಸ್ತಿತ್ವದಲ್ಲಿರುವ ಪ್ರಮುಖ ವಿಮಾ ಕಂಪನಿಗಳು ಮತ್ತು ಯೂರೋ ಕ್ಲಿಯರ್‌ನಂತಹ ಕ್ಲಿಯರಿಂಗ್ ಮತ್ತು ಹೋಲ್ಡಿಂಗ್ ಏಜೆನ್ಸಿಗಳೊಂದಿಗೆ ಸೇರಿ ಕೆಲಸ ಮಾಡಬೇಕು.
ಸ್ವಾಯತ್ತತೆಯ ಕಾರ್ಯತಂತ್ರ ಅಗತ್ಯ
ಭಾರತವು ತನ್ನ ರಕ್ಷಣಾ ತಂತ್ರಜ್ಞಾನ ಮತ್ತು ಉತ್ಪಾದನೆಯನ್ನು ದೇಶೀಯವಾಗಿ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ದುಪ್ಪಟ್ಟುಗೊಳಿಸುವ ಸಂದರ್ಭದಲ್ಲಿ, ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದಿಂದ ಬರುವ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತಡೆಯುವಲ್ಲಿ ಪರಿಣಾಮಕಾರಿ ಎಂದು ಕಂಡುಬಂದ ರಷ್ಯಾದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಹೆಚ್ಚುವರಿ ಬ್ಯಾಟರಿಗಳಿಗೆ ಭಾರತವು ಆದೇಶ ನೀಡಬೇಕು. ಇದು ಅಧ್ಯಕ್ಷ ಟ್ರಂಪ್ ಭಾರತಕ್ಕೆ ವ್ಯೂಹಾತ್ಮಕ ನಿರ್ಬಂಧಗಳನ್ನು ಹೇರಲು ಮುಂದಾದಾಗ ಎಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದರ ಬಗ್ಗೆ ಸ್ಪಷ್ಟ ಸಂದೇಶ ರವಾನೆ ಮಾಡುತ್ತದೆ.
ಅಮೆರಿಕದ ಜಿಪಿಎಸ್ ಸೇವೆಯಿಂದ ಒದಗಿಸಲಾಗುವ ಜಿಯೋಲೊಕೇಶನ್ ಸೇವೆಗೆ ಸರಿಸಮಾನವಾದ ರೀತಿಯಲ್ಲಿ ಭಾರತವು ತನ್ನ ನಾವಿಕ್ ಉಪಗ್ರಹಗಳ ದೊಡ್ಡ ವಿಸ್ತರಣೆಯನ್ನು ಘೋಷಿಸಬೇಕು. ಇಂತಹ ಉದ್ದೇಶಕ್ಕಾಗಿ ಈಗಾಗಲೇ ಯುರೋಪ್ ಗ್ಯಾಲಿಲಿಯೋ, ರಷ್ಯಾ ಗ್ಲೊನಾಸ್ ಮತ್ತು ಚೀನಾ ಬೈದು ಉಪಗ್ರಹಗಳನ್ನು ಹೊಂದಿದೆ. ಇಸ್ರೇಲ್ ಜೊತೆಗಿನ ಕಿರು ಸಮರದ ಸಂದರ್ಭದಲ್ಲಿ ತನ್ನ ಜಿಪಿಎಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದನ್ನು ಇರಾನ್ ಪತ್ತೆಮಾಡಿತ್ತು. ಹಾಗಾಗಿ ಇನ್ನು ಮುಂದೆ ಅಧಿಕೃತ ಉದ್ದೇಶಗಳಿಗಾಗಿ ಜಿಪಿಎಸ್ ಬಳಸುವುದಿಲ್ಲ ಎಂದು ಅದು ಘೋಷಿಸಿದೆ.
ಭಾರತದಲ್ಲಿ ಮಾರಾಟವಾಗುವ ಎಲ್ಲ ಮೊಬೈಲ್ ಫೋನ್ ಗಳು ಜಿಪಿಎಸ್ ಜೊತೆ ಜೊತೆಗೇ ಗ್ಲೊನಾಸ್ ಮತ್ತು ನಾವಿಕ್ ಉಪಗ್ರಹಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು. ಹೀಗೆ ಮಾಡುವುದರಿಂದ ನಾವಿಕ್ ಜಾಲ ವಿಸ್ತರಿಸುತ್ತ ವ್ಯವಸ್ಥಿತ ರೂಪಪಡೆದಾಗ ಕ್ರಮೇಣ ಜಿಪಿಎಸ್ ತ್ಯಜಿಸಲು ದಾರಿಮಾಡಿಕೊಡುತ್ತದೆ.
ಹಾಳುಗೆಡಹಿದ್ದು ಒಂದೆರಡಲ್ಲ
ಅಮೆರಿಕ ಜಾಗತಿಕ ವ್ಯಾಪಾರ ವ್ಯವಸ್ಥೆಯನ್ನೇ ಹಾಳುಗೆಡಹಿದೆ. ಎಲ್ಲ ವ್ಯಾಪಾರ ಸಂವಾದಿಗಳಿಗೆ ಸಮಾನವಾದ ಆದ್ಯತೆಯನ್ನು ನೀಡುವ ಅತ್ಯಂತ ಮೆಚ್ಚಿನ-ರಾಷ್ಟ್ರ ಪರಿಕಲ್ಪನೆಗೆ ಅಮೆರಿಕ ತೋರಿದ ಅಗೌರವ ಆಘಾತಕಾರಿ. ವಿಶ್ವ ವ್ಯಾಪಾರ ಸಂಘಟನೆಯ ವಿವಾದ ಇತ್ಯರ್ಥ ಕಾರ್ಯವಿಧಾನದ ಮೇಲ್ಮನವಿ ಸಂಸ್ಥೆಗೆ ನೇಮಕ ಮಾಡಲು ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿಯೇ ನಿರಾಕರಿಸಿದರು. ಇದರ ಪರಿಣಾಮವಾಗಿ ಆ ಸಂಸ್ಥೆಯೇ ಜಡವಾಗಿ ಹೋಯಿತು. ಈಗವರು ನಿಯಮ ಆಧಾರಿತ ವ್ಯಾಪಾರದ ಮೇಲಿನ ಗೌರವಕ್ಕೆ ಸಂಪೂರ್ಣ ತಿಲಾಂಜಲಿ ನೀಡಿದ್ದಾರೆ.
ಇದೆಲ್ಲದರ ಪರಿಣಾಮವಾಗಿ ಅಮೆರಿಕ ವಿಶ್ವ ವ್ಯಾಪಾರ ಸಂಘಟನೆಯಿಂದ ಹೊರಗುಳಿದಿದೆ. ಇದಕ್ಕೆ ತಕ್ಕ ಶಾಸ್ತಿ ಮಾಡಬೇಕಾದರೆ ಇತರ ಸದಸ್ಯ ರಾಷ್ಟ್ರಗಳು ಅಮೆರಿಕವನ್ನು ಹೊರಗಿಟ್ಟು ಇನ್ನೊಂದು ವಿಶ್ವ ವ್ಯಾಪಾರ ಸಂಸ್ಥೆಯನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ ನಿಯಮ ಆಧಾರಿತ ವ್ಯಾಪಾರದ ಸಂಪೂರ್ಣ ವ್ಯವಸ್ಥೆಯನ್ನೇ ಹಾಳುಮಾಡದಂತೆ ಟ್ರಂಪ್ ಅವರಿಗೆ ನಿರ್ಬಂಧ ವಿಧಿಸಬಹುದು. ಈ ನಿಟ್ಟಿನಲ್ಲಿ ಬ್ರಿಕ್ಸ್ ರಾಷ್ಟ್ರಗಳು ಮುಂದಾಳತ್ವ ವಹಿಸಬೇಕು.
ಭಾರತವು ಅನೇಕ ಮುಕ್ತ ವ್ಯಾಪಾರ ಒಪ್ಪಂದ (FTA)ಗಳಲ್ಲಿ ತನ್ನ ಅನಗತ್ಯವಾದ ರಕ್ಷಣಾವಾದಿ ಮಾರ್ಗವನ್ನು ತೊರೆದಿರುವ ಕಾರಣ ಈಗ ಅದು ಇನ್ನಷ್ಟು ದಿಟ್ಟ ಹೆಜ್ಜೆಗಳನ್ನು ಇಡಲು ಕಾಲ ಸನ್ನಿಹಿತವಾಗಿದೆ. ಆ ಮೂಲಕ ಅದು ಅಮೆರಿಕವನ್ನು ಹೊರತುಪಡಿಸಿದ ಸಮಗ್ರ ಹಾಗೂ ಪ್ರಗತಿಪರ ಟ್ರಾನ್ಸ್ ಪೆಸಿಫಿಕ್ ಪಾಲುದಾರಿಕೆ (CPTPP) ಒಪ್ಪಂದಕ್ಕೆ ಕೈಜೋಡಿಸಬೇಕು.
ಜಾಗತಿಕ ಜಿಡಿಪಿಯ ಕಾಲು ಭಾಗವನ್ನು ಅಮೆರಿಕ ಹೊಂದಿದ್ದರೂ ಜಾಗತಿಕ ಆಮದಿನಲ್ಲಿ ಅದರ ಪಾಲು ಕೇವಲ ಅರ್ಧದಷ್ಟು ಮಾತ್ರ. ವಿಶ್ವ ವ್ಯಾಪಾರದ ಶೇಕಡ 88ರಷ್ಟು ಭಾಗ ಮುಕ್ತ ಹಾಗೂ ನಿಯಮ ಆಧಾರಿತವಾಗಿ ಇಡುವುದು ಮುಖ್ಯ. ಅಮೆರಿಕದ ಗೈರುಹಾಜರಿಯಲ್ಲಿ ರಕ್ಷಣೆಯ ಬಗ್ಗೆ ಯುರೋಪ್ ಕೂಡ ತತ್ತರಿಸಿರುವ, ಗೊಂದಲಕ್ಕೆ ಒಳಗಾಗಿರುವ ಮತ್ತು ಅಭದ್ರತೆಯಿಂದ ಕೂಡಿರುವ ಇಂತಹ ಸಂದರ್ಭದಲ್ಲಿ ಬ್ರಿಕ್ಸ್ ಮುಂದಾಳತ್ವ ವಹಿಸಬೇಕು.
‘ಡೊನಾಲ್ಡ್ ಟ್ರಂಪ್’ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿರುವ ನಿಕಟವಾದ ಸ್ನೇಹವು ಭಾರತದ ಮೇಲೆ ವಿಧಿಸಲಾಗಿರುವ ತೀವ್ರ ಸುಂಕದಿಂದ ತಪ್ಪಿಸಿಕೊಳ್ಳಲು ದಾರಿ ಮಾಡುತ್ತದೆ ಎಂಬ ಆಸೆಯಲ್ಲಿದ್ದವರು ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ. ಉನ್ನತ ಮಟ್ಟದಲ್ಲಿ ಹೊಂದಿದ ವ್ಯಕ್ತಿಗತವಾದ ಭಾವನೆಗಳಿಂದ ರಾಷ್ಟ್ರಗಳ ನಡುವಿನ ಸಂಬಂಧವನ್ನು ರೂಪಿಸಬಹುದು ಎಂಬ ಕಲ್ಪಿತ ಸಾಮ್ರಾಜ್ಯದಲ್ಲಿ ತೇಲುತ್ತಿದ್ದವರಿಗೆ ಈಗ ವಾಸ್ತವದ ಅರಿವಾಗಿದೆ. ಇಂತಹ ಕಲ್ಪನೆಯಲ್ಲಿ ಇದ್ದವರು ಹಾರಾಡುತ್ತಿರುವ ರತ್ನಗಂಬಳಿಯ ಜೊತೆಗೇ ಗಗನಚುಂಬಿ ಗೋಪುರದ ಕಡೆಗೆ ಹಾರಾಟ ನಡೆಸಿದಂತಾಗಿದೆ. ಇಂತಹ ವಿಲಕ್ಷಣ ಹಾರಾಟದ ವೇಳೆ ಏನಾದರೂ ಕೆಳಗೆ ಬಿದ್ದು ತಳಮಟ್ಟದಲ್ಲಿ ತೇಲುವುದನ್ನು ನೋಡಬಹುದೇ?