ಟ್ರಂಪ್ ಶರಣಾಗತಿಗೆ ಯಾಕೆ ಕಾದಿದ್ದಾರೆ ಅಮೆರಿಕದ ವಾಣಿಜ್ಯ ಪಾಲುದಾರರು?
ಅಮೆರಿಕಕ್ಕೆ ರಫ್ತು ಮಾಡುವ ಪ್ರಮುಖ ದೇಶಗಳಾದ ಚೀನಾ, ಕೆನಡಾ, ಮೆಕ್ಸಿಕೊ, ಐರೋಪ್ಯ ಒಕ್ಕೂಟ, ಜಪಾನ್ ಟ್ರಂಪ್ ಒಡ್ಡಿರುವ ಬ್ಲಾಕ್-ಮೇಲ್ ತಂತ್ರಕ್ಕೆ ಮಂಡಿಯೂರದೇ ಇದ್ದರೆ ಅಮೆರಿಕ ಅಧ್ಯಕ್ಷರಿಗೆ ಶರಣಾಗದೇ ಅನ್ಯಮಾರ್ಗವಿಲ್ಲ.;
“Frankly, my dear, I don`t give a damn” (“ನಿಜ ಹೇಳಬೇಕೆಂದರೆ ನನ್ನ ಪ್ರಿಯತಮೆ, ನನಗೆ ಇದರ ಬಗ್ಗೆ ನನಗೆ ಎಳ್ಳಷ್ಟೂ ಚಿಂತೆಯಿಲ್ಲ”) ‘ಗಾನ್ ವಿದ್ ದಿ ವಿಂಡ್’ ಎಂಬ ಪ್ರಸಿದ್ಧ ಚಿತ್ರದಲ್ಲಿ ಕ್ಲಾರ್ಕ್ ಗೇಬಲ್-ನ ರೆಟ್ ಬಟ್ಲರ್ ವಿವಿಯನ್ ಲೀ ಅವರ ಸ್ಕಾರ್ಲೆಟ್ ಓರಾಗೆ ಹೇಳಿದ ಮಾತಿದು.
ಅಮೆರಿಕದ್ದೇ ಆದ ಈ ಚಲನಚಿತ್ರದ ಮಾತನ್ನು ಜಗತ್ತು ಉಲ್ಲೇಖಿಸಿ, ಬಾಯಿ ಮುಚ್ಚಿಕೊಂಡು ಇರುವಂತೆ ಮತ್ತು ನಿಮ್ಮ ಸುಂಕದ ನೀತಿಯೊಂದಿಗೆ ಏನು ಬೇಕೋ ಅದನ್ನು ಮಾಡಿಕೊಳ್ಳಿ ಎಂದು ಡೊನಾಲ್ಡ್ ಟ್ರಂಪ್ ಅವರಿಗೆ ಹೇಳಿದರೆ ಏನಾಗುತ್ತದೆ?
ಇಡೀ ಅಮೆರಿಕೇತರ ಜಗತ್ತಿನ ಮೇಲೆ ಟ್ರಂಪ್ ಅಧಿಕ ಸುಂಕವನ್ನು ಘೋಷಿಸಿಬಿಟ್ಟಿದ್ದಾರೆ. ಇದರಿಂದ ಅಮೆರಿಕಕ್ಕೆ ರಫ್ತುಮಾಡುವವರಿಗೆ ಒಂದು ರೀತಿಯಲ್ಲಿ ಸಮಾನ ಅವಕಾಶವನ್ನು ಸೃಷ್ಟಿಸಿದಂತಾಗಿದೆ. ಈ ದೇಶಗಳು ಟ್ರಂಪ್ ಮತ್ತು ಅವರ ದಬಾವಣೆ ಮಾಡುವ ಅಧಿಕಾರಿಗಳ ಗುಂಪಿನ ಜೊತೆ ಮಾತುಕತೆಯನ್ನೇ ನಿಲ್ಲಿಸಿಬಿಡಬಹುದು. ಇದರಿಂದ ಅಮೆರಿಕ ಸರ್ಕಾರವು ತಾನೇ ನಿರ್ಮಿಸಿಕೊಂಡ ಖೆಡ್ಡಾದಲ್ಲಿ ಸಿಲುಕಿಕೊಳ್ಳುತ್ತದೆ. ಯಾಕೆಂದರೆ ಎಲ್ಲ ಆಮದು ಏಕಾಏಕಿ ಮೊದಲಿಗಿಂತ ಶೇ.20ರಿಂದ 30ರಷ್ಟು ಹೆಚ್ಚು ದುಬಾರಿಯಾಗುತ್ತದೆ.
ಇದರ ಪರಿಣಾಮವಾಗಿ ಅಮೆರಿಕದ ಆಮದುದಾರರಿಗೆ ಸರಕುಗಳು ದುಬಾರಿಯಾಗುತ್ತದೆ. ಅಂತಿಮವಾಗಿ ಇದರ ಪರಿಣಾಮ ಬೀರುವುದು ಗ್ರಾಹಕರ ಮೇಲೆ. ಹಾಗಾದರೆ ರಫ್ತುದಾರರಿಗೆ? ಅವರ ವ್ಯವಹಾರ ಎಂದಿನಂತೆ ಮುಂದುವರಿಯುತ್ತದೆ. ಬೆಲೆಗಳು ತೀವ್ರ ಸ್ವರೂಪದಲ್ಲಿ ಏರಿಕೆ ಕಂಡಾಗ ಜನ ಬಳಕೆಯ ಪ್ರಮಾಣವನ್ನು ಕಡಿಮೆಮಾಡುತ್ತಾರೆ. ಆದ್ದರಿಂದ ಅಗತ್ಯವಿರದ ವೆಚ್ಚದ ವಸ್ತುಗಳ ಮಾರುಕಟ್ಟೆ ಕುಸಿಯಬಹುದು.
ಅಮೆರಿಕವು X ದೇಶದಿಂದ ಆಮದು ಮಾಡಿಕೊಳ್ಳುವ ಸುಂಕವನ್ನು ಹೆಚ್ಚಿಸುವ ಬೆದರಿಕೆ ಕೆಲಸ ಮಾಡುತ್ತದೆ. ಯಾಕೆಂದರೆ X ದೇಶವು ಅಮೆರಿಕದ ಒಟ್ಟು ರಫ್ತುಗಳಲ್ಲಿ ತನ್ನ ರಫ್ತಿನ ಪಾಲು ಕುಸಿಯುತ್ತದೆ ಎಂದು ಊಹಿಸುತ್ತದೆ. ಆ ದೇಶದ ಪಾಲನ್ನು ಅದರ ನಿಕಟ ರಫ್ತು ಪ್ರತಿಸ್ಪರ್ಧಿ ರಾಷ್ಟ್ರ ಬಾಚಿಕೊಳ್ಳುತ್ತದೆ. ಯಾಕೆಂದರೆ ಅದರ ರಫ್ತು ಈಗ ಏರಿಕೆ ಕಂಡಿರುತ್ತದೆ.
ಆದರೆ, ಆ ರಫ್ತು ಪ್ರತಿಸ್ಪರ್ಧಿ ರಾಷ್ಟ್ರ ಕೂಡ X ದೇಶಕ್ಕೆ ಬೆದರಿಕೆ ಹಾಕಿರುವಷ್ಟೇ ಕಠಿಣ ಸುಂಕಗಳನ್ನು ಎದುರಿಸಬೇಕಾಗಿ ಬಂದರೆ ಏನು ಮಾಡುತ್ತದೆ?
ಅಮೆರಿಕದ ಆಮದುದಾರರಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಕಿತ್ತಳೆ ಬಣ್ಣದ ವಿನಾಶಕಾರಿ ಚೆಂಡು ಜಾಗತಿಕ ವ್ಯಾಪಾರ ವ್ಯವಸ್ಥೆ ಮೇಲೆ ಅಪ್ಪಳಿಸುವ ಮೊದಲು ಎರಡೂ ಕಡೆಯ ಆಮದುದಾರರ ಸ್ಪರ್ಧಾತ್ಮಕತೆ ಅಬಾಧಿತವಾಗಿ ಉಳಿದಿತ್ತು.
ತೈಲ ಬೆಲೆ ಏರಿಕೆ ಕತ್ತಿ
ಈ ಬೆದರಿಕೆ ಭಾರತಕ್ಕೆ ಹೆಚ್ಚು ಪ್ರಸ್ತುತವಾಗಿದೆ ಎಂದು ಪರಿಗಣಿಸಿ. ಮುಂದಿನ ಐವತ್ತು ದಿನಗಳಲ್ಲಿ ಉಕ್ರೇನ್ ಮೇಲಿನ ಯುದ್ಧವನ್ನು ಕೊನೆಗೊಳಿಸದೇ ಇದ್ದರೆ, ರಷ್ಯಾದಿಂದ ಯಾರು ತೈಲವನ್ನು ಖರೀದಿ ಮಾಡುತ್ತಾರೋ ಅಂತಹ ರಾಷ್ಟ್ರಗಳ ಮೇಲೇ ಶೇ.100ರಷ್ಟು ಸುಂಕ ಹಾಕಲಾಗುತ್ತದೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಭಾರತವು ರಷ್ಯಾದಿಂದ ಪ್ರತಿ ದಿನ ಸುಮಾರು 18 ಲಕ್ಷ ಬ್ಯಾರೆಲ್ ತೈಲವನ್ನು ಖರೀದಿಸುತ್ತದೆ. ಚೀನಾ ಪ್ರತಿ ದಿನ ಆಮದುಮಾಡಿಕೊಳ್ಳುವ ತೈಲ 20 ಲಕ್ಷ ಬ್ಯಾರೆಲ್. ನ್ಯಾಟೊ ರಾಷ್ಟ್ರಗಳಾದ ಇಟೆಲಿ, ಫ್ರಾನ್ಸ್, ಹಂಗರಿ, ಟರ್ಕಿ ಮತ್ತು ಝೆಕಿಯಾ ರಷ್ಯಾದಿಂದ ಅನಿಲವನ್ನು ಆಮದು ಮಾಡಿಕೊಳ್ಳುತ್ತವೆ.
ಈ ದ್ವಿತೀಯ ನಿರ್ಬಂಧಗಳಿಂದಾಗಿ ಇಂಧನ ಆಮದು ಸ್ಥಗಿತವಾದರೆ ತೈಲ ಮತ್ತು ಅನಿಲದ ಬೆಲೆಗಳು ಗಗನಕ್ಕೇರುವುದು ನಿಶ್ಚಿತ. ಆಗ ಭಾರತ ಮತ್ತು ಚೀನಾ ತಮ್ಮ ಆಮದು ಬೇಡಿಕೆಯನ್ನು ರಷ್ಯವನ್ನು ಹೊರತುಪಡಿಸಿದ ತೈಲ ಉತ್ಪಾದಕ ರಾಷ್ಟ್ರಗಳ ಕಡೆಗೆ ತಿರುಗಿಸಬೇಕಾಗುತ್ತದೆ ಮತ್ತು ಐರೋಪ್ಯ ರಾಷ್ಟ್ರಗಳು ತಮ್ಮ ಅನಿಲ ಬೇಡಿಕೆಯನ್ನು ರಷ್ಯವನ್ನು ಹೊರತುಪಡಿಸಿದ ಅನಿಲ ಉತ್ಪಾದಕರ ಕಡೆಗೆ ತಿರುಗಿಸಬೇಕಾಗುತ್ತದೆ.
ಈ ಹೈಡ್ರೋಕಾರ್ಬನ್ ಉತ್ಪಾದಿಸುವ ರಷ್ಯೇತರ ರಾಷ್ಟ್ರಗಳು ರಷ್ಯಾ ಮತ್ತು ಚೀನಾವನ್ನು ಹೊರತುಪಡಿಸಿ ವಿಶ್ವದ ಬೇಡಿಕೆಯನ್ನು ಪೂರೈಸುತ್ತವೆ.
ತೈಲ ಬೆಲೆಯನ್ನು ಏರಿಸಲು ಉತ್ಪಾದನೆಯನ್ನು ನಿಯಂತ್ರಿಸಿದ ಒಪೆಕ್ ರಾಷ್ಟ್ರಗಳಲ್ಲಿ ಕೆಲವು ಹೆಚ್ಚುವರಿ ಮತ್ತು ಬಳಕೆಯಾಗದೇ ಇರುವ ಸಾಮರ್ಥ್ಯ ನಿಜಕ್ಕೂ ಇದೆ. ಇದು ಸತ್ಯ ಕೂಡ. ಒಟ್ಟಾರೆ ಇದರ ಸಿದ್ಧಾಂತವೇನೆಂದರೆ ಉತ್ಪಾದನೆಯನ್ನು ಹೆಚ್ಚಿಸುವಂತೆ ಅವರನ್ನು ಒತ್ತಾಯಿಸಲು ಸಾಧ್ಯವಿದೆ. ಆದರೆ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯಲ್ಲಿ ರಷ್ಯಾಕ್ಕೆ ಹೆಗಲಾಗಿವೆ. ರಷ್ಯಾ ಒಪೆಕ್+1 ಗುಂಪಿನ ಭಾಗವಾಗಿದೆ. ಅಗತ್ಯವಾಗಿರುವ ರಷ್ಯಾದ ಉತ್ಪಾದನೆಯನ್ನು ಸರಿದೂಗಿಸಲು ಒಪೆಕ್ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಸಾಧ್ಯತೆ ಬಹಳ ಕಡಿಮೆ.
ಇದರ ಪರಿಣಾಮ ಸ್ಪಷ್ಟ
ಅಮೆರಿಕವೂ ಸೇರಿದಂತೆ ಜಗತ್ತಿನ ಎಲ್ಲ ಭಾಗಗಳಲ್ಲಿ ತೈಲ ಮತ್ತು ಅನಿಲದ ಬೆಲೆ ಗಗನಮುಖಿಯಾಗುತ್ತದೆ.
ಅಮೆರಿಕದಲ್ಲಿ ಹಣದುಬ್ಬರ ದರ ಏರುತ್ತಲೇ ಇದೆ. ಅದು ಈಗಾಗಲೇ ಶೇ.2.7ಕ್ಕೆ ತಲುಪಿದೆ. ಅಮೆರಿಕದ ಫೆಡರಲ್ ಮೀಸಲು ನೀತಿ ದರವನ್ನು ಕಡಿತಗೊಳಿಸಬೇಕು ಎಂಬುದು ಟ್ರಂಪ್ ಅವರ ತೀವ್ರ ಬಯಕೆ. ಆದರೆ ಏನು ಮಾಡುವುದು ಏರುತ್ತಿರುವ ಹಣದುಬ್ಬರದ ಪ್ರವೃತ್ತಿಯಿಂದಾಗಿ ಫೆಡರಲ್ ಕೈಕಟ್ಟಿಹಾಕಿದೆ.
ಆರು ಪ್ರಮುಖ ಕರೆನ್ಸಿಗಳಾದ ಯೂರೋ, ಜಪಾನಿನ ಯೆನ್, ಬ್ರಿಟಿಷ್ ಪೌಂಡ್, ಕೆನಡಾದ ಡಾಲರ್, ಸ್ವಿಝರ್ಲಂಡಿನ ಫ್ರಾಂಕ್ ಮತ್ತು ಸ್ವೀಡಿಶ್ ನ ಕ್ರೋನಾಗೆ ಪ್ರತಿಯಾಗಿ ಡಾಲರ್ ಮೌಲ್ಯವನ್ನು ಅಳೆಯುವ ಸೂಚ್ಯಂಕವು ವರ್ಷದ ಆರಂಭದ ಮಟ್ಟದಿಂದ (ವರ್ಷದಿಂದ ಈ ದಿನಾಂಕದ ವರೆಗೆ ಅಥವಾ YTD ಪರಿಭಾಷೆಯಲ್ಲಿ) ಶೇ.9ರಷ್ಟು ಕುಸಿತ ಕಂಡಿದೆ.
ಇದಕ್ಕೆ ಕಾರಣ ಹಣಕಾಸು ಹೂಡಿಕೆದಾರರಲ್ಲಿ ಟ್ರಂಪ್ ಹುಟ್ಟುಹಾಕಿದ ಆತಂಕ. ಈ ಹೂಡಿಕೆದಾರರು ಅಮೆರಿಕದ ಖಜಾನೆಯನ್ನು ಹಳ್ಳಹಿಡಿಸಿದ್ದಾರೆ.
ಹೆಚ್ಚುತ್ತಲೇ ಇರುವ ಆತಂಕ
ಮೇ 26ರಂದು ಅಮೆರಿಕದ ಸಾಲದ ರೇಟಿಂಗ್ ನ್ನು ಮೂಡೀಸ್ ಅದರ ಹಿಂದಿನ AAA ರೇಟಿಂಗ್ ನಿಂದ ಒಂದೇ Aಗೆ ಇಳಿಸಿದ್ದರಿಂದ ಡಾಲರ್ ದುರ್ಬಲವಾಗಿತ್ತು.
ಹಿಂದಿನ ಸಂದರ್ಭಗಳಲ್ಲಿ, ಅಂದರೆ S&P ಮತ್ತು ಆ ಬಳಿಕ Fitch ಕ್ರಮವಾಗಿ 2011 ಮತ್ತು 2023ರಲ್ಲಿ ಅಮೆರಿಕ ಸರ್ಕಾರದ ಸಾಲದ ದರವನ್ನು ಕಡಿತಮಾಡಿದಾಗ ಆತಂಕಕ್ಕೆ ಒಳಗಾದ ಹಣಕಾಸು ಮಾರುಕಟ್ಟೆಗಳು ಅಮೆರಿಕದ ಸರ್ಕಾರಿ ಬಾಂಡ್ ಗಳಿಗೆ ಬಂಡವಾಳವನ್ನು ಹರಿಸಿಬಿಟ್ಟಿದ್ದವು. ಈ ಬಾಂಡ್ ಅವುಗಳಿಗೆ ಸುರಕ್ಷಿತ ತಾಣವಾಗಿತ್ತು. ಇದರಿಂದ ಹೆಚ್ಚಾಗಿದ್ದು ಡಾಲರ್ ವಿನಿಮಯ ದರ. ಈ ಬಾರಿ ಹಾಗಾಗಲಿಲ್ಲ, ಬಲಗೊಳ್ಳುವ ಬದಲು ಅಮೆರಿಕದ ರೇಟಿಂಗ್ ಕುಸಿಯಿತು. ಇದರಿಂದಾಗಿ ಡಾಲರ್ ದುರ್ಬಲಗೊಂಡಿತು.
ಬಹುಷಃ ಅಮೆರಿಕದ ಜಾಗತಿಕ ಹಣಕಾಸು ಪ್ರಾಬಲ್ಯದ ಕುಸಿತವನ್ನು ದಾಖಲಿಸುವ ಒಂದು ಮಹತ್ವದ ತಿರುವಾಗಬಹುದು.
ಇನ್ನೂ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ರಷ್ಯಾದ ಹೈಡ್ರೋಕಾರ್ಬನ್ ಗಳನ್ನು ಖರೀದಿಸಲು (ಅಮೆರಿಕ ತನ್ನ ಅಣು ವಿದ್ಯುತ್ ಸ್ಥಾವರಗಳಿಗೆ ರಷ್ಯಾದಿಂದ ಯುರೇನಿಯಂ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದೆ) ಚೀನಾ ಮತ್ತು ಭಾರತದ ಮೇಲೆ ಶೇ.100ರಷ್ಟು ಸುಂಕ ವಿಧಿಸುವ ಅಮೆರಿಕದ ಬೆದರಿಕೆಯು ಡಾಲರ್ ಸೂಚ್ಯಂಕವನ್ನು ಮತ್ತಷ್ಟು ಕುಸಿಯುವಂತೆ ಮಾಡುವುದರಲ್ಲಿ ಅನುಮಾನವಿಲ್ಲ.
ಶ್ರೇಷ್ಠತೆಯ ವ್ಯಸನ
ಅಮೆರಿಕದ ಮತ ಚಲಾಯಿಸುವ ಜನ ಡಾಲರ್ ಸೂಚ್ಯಂಕದ ಬಗ್ಗೆ ಅತಿಯಾದ ನಿಗಾ ಇಡದೇ ಇದ್ದರೂ ಕೂಡ ಡಾಲರ್ ಸೂಚ್ಯಂಕವನ್ನು ಕೆಳಕ್ಕಿಗಿಳಿಸುವ ಅದೇ ಕ್ರಿಯೆಯ ಮತ್ತೊಂದು ಪರಿಣಾಮದ ಬಗ್ಗೆ ಅವರು ಗಮನಿಸದೇ ಹೋಗುವುದಿಲ್ಲ-ಅದು ಬಡ್ಡಿ ದರಗಳ ಏರಿಕೆ. ಹೂಡಿಕೆದಾರರು ತಮ್ಮ ದೀರ್ಘಾವಧಿ ಅಮೆರಿಕ ಸರ್ಕಾರಿ ಬಾಂಡ್ ಗಳನ್ನು ಮಾರಾಟಮಾಡಿದಾಗ ಸಹಜವಾಗಿ ಅವುಗಳ ಬೆಲೆ ಕುಸಿಯುತ್ತವೆ ಮತ್ತು ಇಳುವರಿಯನ್ನು ಹೆಚ್ಚಿಸುತ್ತದೆ. ಇದು ನಿಜಕ್ಕೂ ಟ್ರಂಪ್ ಅವರನ್ನು ಭಯ ಹುಟ್ಟಿಸುವ ಸಂಗತಿ.
ತಮ್ಮ ನೀತಿ ಏನಿದ್ದರೂ ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವಾಗಿ ಮಾಡುವುದು (Make America Great Again-MAGA) ಎಂದು ಅವರು ಅಮೆರಿಕದ ಜನತೆಗೆ ಭರವಸೆ ನೀಡಿದ್ದರು. ಈಗ ಅವರು ಮಾಡುತ್ತಿರುವ ತೆರಿಗೆ ಕಡಿತಗಳು ಅರ್ಥ ವ್ಯವಸ್ಥೆಗೆ ವೇಗವನ್ನು ತುಂಬುತ್ತವೆ ಎಂಬುದು ಅವರು ಮಾಡುತ್ತಿರುವ ವಂಚನೆ ಎಂಬುದು ಬಯಲಾಗುವುದು ನಿಶ್ಚಿತ.
ವಾಸ್ತವವಾಗಿ ಟ್ರಂಪ್ ರಷ್ಯಾದ ತೈಲ ಮತ್ತು ಅನಿಲವನ್ನು ಸರಬರಾಜು ವಲಯದಿಂದ ಹೊರಗಿಡುವ ಧೈರ್ಯ ಮಾಡುವುದಿಲ್ಲ. ಅದರಿಂದ ಬೆಲೆಗಳನ್ನು ಈಗಿರುವಂತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅವರ ಲೆಕ್ಕಾಚಾರ.
ಅಮೆರಿಕಕ್ಕೆ ರಫ್ತು ಮಾಡುವ ಪ್ರಮುಖ ದೇಶಗಳಾದ ಚೀನಾ, ಕೆನಡ, ಮೆಕ್ಸಿಕೊ, ಐರೋಪ್ಯ ಒಕ್ಕೂಟ ಮತ್ತು ಜಪಾನ್ ಟ್ರಂಪ್ ಮುಂದಿಟ್ಟಿರುವ ಸುಂಕದ ದಬಾವಣೆ ತಂತ್ರಕ್ಕೆ ಮಣಿಯುವುದಿಲ್ಲ ಎಂದು ನಿರ್ಧರಿಸಿಬಿಟ್ಟರೆ ಟ್ರಂಪ್ ಅವರಿಗೆ ಶರಣಾಗದೇ ಬೇರೆ ದಾರಿ ಇಲ್ಲ. ಆದರೆ ಅದು ಹಾಗೆ ಆಗುವುದೇ ಎನ್ನುವುದು ಬೇರೆ ಮಾತು.
ಯಾರು ಶರಣಾಗುತ್ತಾರೆ?
ಕೋಳಿ ಅಂಕದಲ್ಲಿ ಒಬ್ಬ ಆಟಗಾರ ಕೋಳಿಯನ್ನು ಹಿಂದಕ್ಕೆ ಸೆಳೆದಾಗ ಮಾತ್ರ ಅದು ಕೊನೆಗೊಳ್ಳುತ್ತದೆ. ಈ ಗೇಮ್ ಆಫ್ ಚಿಕನ್ ಅನ್ನು ಸರಳವಾಗಿ ಹೀಗೂ ಹೇಳಬಹುದು; ಇಬ್ಬರು ವ್ಯಕ್ತಿಗಳು ತಮ್ಮ ಕಾರುಗಳನ್ನು ಫುಲ್ ಸ್ಪೀಡ್ ನಲ್ಲಿ ಒಬ್ಬರಿಗೊಬ್ಬರು ಪೈಪೋಟಿ ನಡೆಸುತ್ತ ಓಡಿಸುತ್ತಿರುತ್ತಾರೆ. ಅಂತಿಮ ಕ್ಷಣದಲ್ಲಿ ಇವರಲ್ಲಿ ಯಾರಾದರೊಬ್ಬರು ದಾರಿಯಿಂದ ಹಿಂದೆ ಸರಿಯದೇ ಹೋದರೆ ಭೀಕರ ಅಪಘಾತ ನಿಶ್ಚಿತ. ಯಾರು ದಾರಿಯಿಂದ ಹಿಂದೆ ಸರಿಯುತ್ತಾರೋ ಅವರೇ ನಿಜವಾದ ಚಿಕನ್. (ಅವನನ್ನೇ ಹೇಡಿ ಅಥವಾ ಸೋತವನು ಪರಿಗಣಿಸಲಾಗುತ್ತದೆ).
(The Game of Chicken ಎಂಬ ಇಂಗ್ಲಿಷ್ ರೂಪಕದಲ್ಲಿ ಇಬ್ಬರು ಕಟ್ಟಾಳುಗಳು ತಾನೇ ಮೇಲು ಎಂಬಂತೆ ಸಂಘರ್ಷಕ್ಕೆ ನಿಂತಿರುತ್ತಾರೆ. ಯಾರೊಬ್ಬರೂ ಮೊದಲು ಶರಣಾಗಲು ಒಪ್ಪುವುದಿಲ್ಲ. ಯಾರು ಮುಖಾಮುಖಿ ಅಥವಾ ಸಂಘರ್ಷದಿಂದ ಹಿಂದೆ ಸರಿಯುತ್ತಾರೋ ಅವರನ್ನೇ ಪುಕ್ಕಲ ಅಥವಾ ಹೇಡಿ ಎಂದು ಕರೆಯಲಾಗುತ್ತದೆ)
ಟ್ಯಾಕೊ ಎನ್ನುವುದೊಂದು ಮೆಕ್ಸಿಕನ್ ಖಾದ್ಯ. ಅದು ಸಣ್ಣ ಟೊರ್ಟಿಲೊ (ಮುಖ್ಯವಾಗಿ ಮೆಕ್ಕೆಜೋಳದಿಂದ ಮಾಡಿದ ರೋಟಿ ಅಥವಾ ಚಪಾತಿ) ಒಳಗೆ ಮಾಂಸ ಅಥವಾ ಬಗೆಬಗೆಯ ತರಕಾರಿಗಳನ್ನು ಹಾಕಿ ರೋಲ್ ಮಾಡಲಾಗುತ್ತದೆ. ಟ್ರಂಪ್ ಅವರನ್ನು ಮೀಮ್ ತಯಾರಕರು ಈ ಟ್ಯಾಕೊ ರಾಯಭಾರಿಯನ್ನಾಗಿ ಮಾಡಿದ್ದಾರೆ. ಯಾಕೆಂದರೆ ಟ್ರಂಪ್ ಯಾವಾಗಲೂ chicken out (ಪುಕ್ಕಲ) ಆಗುತ್ತಾರೆ ಎಂಬುದಕ್ಕೆ ರೂಪಕವಾಗಿ ಅವರನ್ನು ಟ್ಯಾಕೊಗೆ ಹೋಲಿಸಿದ್ದಾರೆ.
ಮೀಮ್ ತಯಾರಕರಿಗೆ ಜಿಂದಾಬಾದ್!