ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಯಾಕೆ ಆಡಳಿತ ಪಕ್ಷದ ದಿಕ್ಕು ತಪ್ಪಿಸುವ ತಂತ್ರ?
ಜನರು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆ ಕಡೆ ಸೆಳೆಯುವ ಉದ್ದೇಶದಿಂದ ಕೃತಕ ವಿವಾದವನ್ನು ಸೃಷ್ಟಿಸಲು ಈ ಮಸೂದೆಯನ್ನು ರಚಿಸಲಾಗಿದೆ ಎಂಬುದು ಸ್ಪಷ್ಟ.;
ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಸರ್ಕಾರದ ನುಣುಚಿಕೊಳ್ಳುವ ತಂತ್ರವಲ್ಲದೇ ಮತ್ತೇನೂ ಅಲ್ಲ. ಆಡಳಿತ ಪಕ್ಷವು ಇತ್ತೀಚಿನ ದಿನಗಳಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ವಿರೋಧ ಪಕ್ಷದ ಆಕ್ರೋಶವನ್ನು ತಣಿಸಲು ಸರ್ಕಾರವೇ ಸೃಷ್ಟಿಸಿದ ಕೃತಕ ವಿವಾದ ಇದಾಗಿದೆ.
ಈ ಮಸೂದೆಯ ಮೇಲೆ ಯಾವುದೇ ಪ್ರಮುಖ ಪ್ರತಿಭಟನೆ ನಡೆಸದಂತೆ ವಿರೋಧ ಪಕ್ಷವು ಎಚ್ಚರಿಕೆ ವಹಿಸಬೇಕು ಪ್ರಧಾನಿ ನರೇಂದ್ರ ಮೋದಿ ಅವರ ಪರಮಾಪ್ತ ಡೋನಾಲ್ಡ್ ಟ್ರಂಪ್ ಅವರ ಕೋಪದಿಂದ ಭಾರತದ ರಫ್ತುದಾರರನ್ನು ರಕ್ಷಿಸಲು ಸರ್ಕಾರದ ವೈಫಲ್ಯ, ಲಕ್ಷಾಂತರ ಮಂದಿ ನಾಗರಿಕರ ಮತದಾನದ ಹಕ್ಕನ್ನು ನಿರಾಕರಿಸಿರುವ ಚುನಾವಣಾ ಆಯೋಗದ ಕ್ರಮ ಮತ್ತು ಹಣಕಾಸು ಆಯಾಮದ ದೃಷ್ಟಿಯಿಂದ ಆನ್ಲೈನ್ ಗೇಮ್-ಗಳನ್ನು ಏಕಾಏಕಿ ನಿಷೇಧಿಸುವ ಮೂಲಕ ಲಕ್ಷಾಂತರ ಉದ್ಯೋಗಳನ್ನು ಕಿತ್ತುಕೊಳ್ಳುವುದರ ಜೊತೆಗೆ ಅಧಿಕ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿರುವುದರಿಂದ ಗಮನವನ್ನು ಬೇರೆ ಕಡೆಗೆ ಸೆಳೆಯದಂತೆ ವಿರೋಧ ಪಕ್ಷಗಳು ಜಾಗೃತವಾಗಬೇಕು.
ಮಸೂದೆಯ ಉದ್ದೇಶ:
ಐದು ವರ್ಷಗಳ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧಗಳಿಗಾಗಿ ಬಂಧಿಸಲ್ಪಟ್ಟ ಮತ್ತು ಆ ಬಳಿಕ ಕನಿಷ್ಠ 30 ದಿನಗಳ ವರೆಗೆ ಜೈಲುವಾಸ ಅನುಭವಿಸಿದ ಸಚಿವರನ್ನು ಹುದ್ದೆಯಿಂದ ತೆಗೆದುಹಾಕಲು ರಾಷ್ಟ್ರಪತಿ/ರಾಜ್ಯಪಾಲರಿಗೆ ಅಧಿಕಾರವನ್ನು ನೀಡುವ ಉದ್ದೇಶದಿಂದ ಸಂವಿಧಾನಕ್ಕೆ ತಿದ್ದುಪಡಿಯನ್ನು ತರಲು ಈ ಮಸೂದೆಯನ್ನು ಮಂಡಿಸಲಾಗಿದೆ.
ಒಬ್ಬ ಆರೋಪಿ/ಬಂಧಿತ ವ್ಯಕ್ತಿಯನ್ನು ಕಚೇರಿಯ ಸ್ಥಾನಕ್ಕೆ ನೈತಿಕವಾಗಿ ಅನರ್ಹ ಎಂದು ಪರಿಗಣಿಸುವ ಮೊದಲು ಆತನನ್ನು ಸಂಪೂರ್ಣವಾಗಿ ವಿಚಾರಣೆಗೆ ಒಳಪಡಿಸಿ ಅಪರಾಧಿ ಎಂದು ಸಾಬೀತುಪಡಿಸಿ ಶಿಕ್ಷಿಸಬೇಕು ಎಂಬ ಯಾವುದೇ ಅಗತ್ಯತೆಯನ್ನು ಈ ಮಸೂದೆಯು ಸಂಪೂರ್ಣವಾಗಿ ತಳ್ಳಿಹಾಕುತ್ತದೆ.
ಸಂವಿಧಾನಕ್ಕೆ ತಿದ್ದುಪಡಿ ತರಲು, ಕನಿಷ್ಠ ಮೂರನೇ ಎರಡರಷ್ಟು ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ವಿಶೇಷ ಬಹುಮತ ಮತ್ತು ಸದನದ ಬಹುಮತದ ಬೆಂಬಲ ಬೇಕಾಗುತ್ತದೆ. ಆದರೆ, ಸರ್ಕಾರಕ್ಕೆ ಯಾವುದೇ ಸದನದಲ್ಲೂ ಇಂತಹ ಬಹುಮತ ಇಲ್ಲ.
ಸರ್ಕಾರದ ಪ್ರಮುಖ ಬೆಂಬಲಿಗರಲ್ಲಿ ಒಬ್ಬರಾದ, ಟಿಡಿಪಿ ನಾಯಕ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ವಿರೋಧ ಪಕ್ಷದಲ್ಲಿದ್ದಾಗ ಭ್ರಷ್ಟಾಚಾರದ ಪ್ರಕರಣದಲ್ಲಿ ಬಂಧಿತರಾಗಿ 52 ದಿನಗಳ ಕಾಲ ಕಸ್ಟಡಿಯಲ್ಲಿದ್ದರು. ತಮ್ಮಂತಹವರನ್ನು ಆಡಳಿತ ಪಕ್ಷದ ಇಚ್ಛೆಗೆ ಒತ್ತೆಯಾಳಾಗಿ ಹಿಡಿದಿಡುವಂತಹ ಯಾವುದೇ ನಡೆಯನ್ನು ನಾಯ್ಡು ಬೆಂಬಲಿಸುವ ಸಾಧ್ಯತೆ ಇಲ್ಲ.
ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಿದ ಪ್ರಕರಣಗಳಲ್ಲಿ ಬಹಳ ಕಡಿಮೆ ಅಪರಾಧ ಸಾಬೀತಾಗಿವೆ ಮತ್ತು ರಾಜಕಾರಣಿಗಳನ್ನು ಭ್ರಷ್ಟಾಚಾರದ ಆರೋಪದಲ್ಲಿ ಬಂಧಿಸುವ ವಿಷಯದಲ್ಲಿ ವಿರೋಧ ಪಕ್ಷದ ನಾಯಕರ ಮೇಲೆ ಪೂರ್ವಗ್ರಹಕ್ಕೆ ಒಳಗಾಗಿದೆ. ಆಡಳಿತ ಪಕ್ಷದ ಪರವಾಗಿ ರಾಜಕೀಯ ಸೇಡಿನ ಕ್ರಮವಾಗಿ ಇಡಿ ಬಳಕೆಯಾಗಬಹುದು ಎಂಬುದರ ಅರಿವಿದ್ದರೂ, ನಾಯ್ಡು ಅವರು ಇಂತಹ ಸಂವಿಧಾನ ತಿದ್ದುಪಡಿಯನ್ನು ಯಾಕಾದರೂ ಬೆಂಬಲಿಸುತ್ತಾರೆ?
ಈ ತಿಂಗಳ ಆರಂಭದಲ್ಲಿ, ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಉಜ್ವಲ್ ಭುಯಾನ್, ಇಡಿ ಸಲ್ಲಿಸಿದ 400 ಜಾರಿ ಪ್ರಕರಣದ ಮಾಹಿತಿ ವರದಿಗಳಲ್ಲಿ ಕೇವಲ 10ರಲ್ಲಿ ಮಾತ್ರ ಅಪರಾಧ ಸಾಬೀತಾಗಿವೆ ಎಂಬುದನ್ನು ಗಮನಿಸಿದರು. ಇದರರ್ಥ ಅಪರಾಧದ ದರ ಕೇವಲ 2.5 ಪ್ರತಿಶತ. ಅದೇ ವೇಳೆ, ಜನರು ನಾಲ್ಕರಿಂದ ಐದು ವರ್ಷಗಳ ಕಾಲ ಜೈಲಿನಲ್ಲಿ ಇರುವಂತೆ ಮಾಡುವಲ್ಲಿ ಇ.ಡಿ ಯಶಸ್ವಿಯಾಗಿದೆ, ಆದರೆ ನಂತರ ಅವರು ನಿರ್ದೋಷಿಗಳೆಂದು ಬಿಡುಗಡೆಯಾಗಿದ್ದಾರೆ ಎಂಬುದರ ಕಡೆಗೆ ನ್ಯಾಯಾಧೀಶರು ಬೊಟ್ಟು ಮಾಡಿದ್ದರು.
ಮೂರನೇ ಎರಡರಷ್ಟು ಬಹುಮತದ ಕೊರತೆ
ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಲೋಕಸಭೆಯಲ್ಲಿ 543 ಸ್ಥಾನಗಳಲ್ಲಿ 293 ಸ್ಥಾನಗಳನ್ನು ಹೊಂದಿದೆ, ಇದು ಮೂರನೇ ಎರಡರಷ್ಟು ಬಹುಮತಕ್ಕೆ (362) ಬಹಳ ಕಡಿಮೆಯಾಗಿದೆ. ರಾಜ್ಯಸಭೆಯಲ್ಲೂ ಇದೇ ಪರಿಸ್ಥಿತಿ ಇದೆ. ಹೀಗಾಗಿ, 130ನೇ ಸಂವಿಧಾನ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವಾಗುವ ಸಾಧ್ಯತೆ ಕ್ಷೀಣ.
ಹಾಗಿದ್ದರೂ, ಅಂತಹ ಸಂದರ್ಭದಲ್ಲಿ ಈ ಮಸೂದೆಯನ್ನು ಏಕೆ ಮಂಡಿಸಲಾಗುತ್ತಿದೆ?
ಇದರಿಂದಲೇ ನಾವು ಖಚಿತವಾಗಿ ಹೇಳಬಹುದು; ಭ್ರಷ್ಟಾಚಾರದ ಮೇಲಿನ ನೈತಿಕ ಆಕ್ರೋಶವು ಮಸೂದೆಗೆ ಪ್ರೇರಣೆಯಾಗಿಲ್ಲ ಎಂದು. ರಾಜಕೀಯ ನಿಧಿಯ ಬಗ್ಗೆ ಯಾವುದೇ ಪಾರದರ್ಶಕ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರವಲ್ಲದೆ ದಿನದ 24 ಗಂಟೆಯೂ ಸಂಗ್ರಹಿಸುವ ಮತ್ತು ವ್ಯಯಮಾಡುವ ಹಣದ ಭಾರೀ ಮೊತ್ತ ಯಾವ ಮೂಲಗಳಿಂದ ಬರುತ್ತವೆ ಎನ್ನುವ ಬಗ್ಗೆ ಲೆಕ್ಕವೇ ಸಿಗುವುದಿಲ್ಲ.
ತನ್ನ ಪ್ರಚಾರವನ್ನು ಪೂರ್ತಿಗೆ ಪೂರ್ತಿಗೆ ಪಕ್ಷವೇ ನಡೆಸುವ, ಚುನಾವಣೆ ಪ್ರಚಾರಕ್ಕೆ ಬೇಕಾದ ಹಣಕಾಸಿನ ಯಾವುದೇ ಮೊತ್ತವನ್ನು ತಾನೇ ಸಂಗ್ರಹಿಸುವ ಅಗತ್ಯವಿಲ್ಲದ ಮರಿ ರಾಜಕಾರಣಿ ಮಾತ್ರ ರಾಜಕೀಯಕ್ಕೆ ಶಕ್ತಿ ತುಂಬುವ ಬೇನಾಮಿ ಹಣದ ಬಗ್ಗೆ ಯಾವುದೇ ಅರಿವಿಲ್ಲ ಎಂದು ಹೇಳಿಕೊಳ್ಳಬಹುದು. ಅಂತಹ ಮಾತನ್ನು ಅಮಿತ್ ಶಾ ಅಥವಾ ಮೋದಿ ಅವರಾಗಲಿ ರಾಜಕೀಯದಲ್ಲಿ ಅನನುಭವಿಗಳಲ್ಲ. ಅದೇ ರೀತಿ ರಾಹುಲ್ ಗಾಂಧಿ ಕೂಡ ಅಥವಾ ವಿರೋಧ ಪಕ್ಷದ ಇತರ ಯಾವ ನಾಯಕನೂ ಅಲ್ಲ.
ಅಡುಗೆಮನೆಯ ಪಾತ್ರೆಗಳು ಹಾಗೂ ಬಳಸಿದ ಭಕ್ಷ್ಯಗಳನ್ನು ಸ್ವಚ್ಛಗೊಳಿಸುವುದರಿಂದ ಹೊರಬರುವ, ಮೂಲತಃ ಹಂದಿಗಳಿಗೆ ಆಹಾರವಾಗಿ ನೀಡಲಾಗುತ್ತಿದ್ದ ಪೌಷ್ಟಿಕಾಂಶರಹಿತ ದ್ರವದಂತೆ ಮಸೂದೆಗೆ ಇರುವ ಎಲ್ಲ ನೈತಿಕ ನೆಪವನ್ನು ಒತ್ತಟ್ಟಿಗೆ ಇಡೋಣ.
ದೇಶದ ಮುಂದಿನ ಸಮಸ್ಯೆಗಳು ಹಲವು
ಅಂದರೆ ಮಸೂದೆಯನ್ನು ಮಂಡಿಸುವುದರ ಹಿಂದಿನ ಏಕೈಕ ಉದ್ದೇಶ ನಮ್ಮೆಲ್ಲ ಗಮನವನ್ನು ಬೇರೆಡೆಗೆ ಸೆಳೆಯುವುದೇ ಆಗಿದೆ. ದೇಶದ ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ, ಉದ್ಯೋಗ ದೊರೆಯುತ್ತಿಲ್ಲ, ಅರ್ಥ ವ್ಯವಸ್ಥೆ ಹದಗೆಟ್ಟಿರುವ ಕಾರಣದಿಂದಾಗಿ ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವು ಕ್ಷೇತ್ರಗಳಲ್ಲಿ ಕೆಳಹಂತದ ಉದ್ಯೋಗಗಳನ್ನು ಕೃತಕ ಬುದ್ಧಿಮತ್ತೆ (AI) ಕಸಿದುಕೊಳ್ಳುತ್ತಿದೆ. ‘ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವಾಗಿ ಮಾಡುವ’ ಭ್ರಮೆಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಸುಂಕಗಳ ಪರಿಣಾಮವೂ ಗಂಭೀರವಾಗಿದೆ.
ಇವೆಲ್ಲಕ್ಕೆ ಸರ್ಕಾರದ ಪ್ರತಿಕ್ರಿಯೆಯಾದರೂ ಏನು? ‘ವಿಕಾಸ’ದ ಕನಸನ್ನು ಮಾರುತ್ತ, ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟಿ ಹಿಂದಿ ಭಾಷೆಯ ಪರ ಮತ್ತು ವಿರೋಧವಾಗಿ ಭಾಷೆಯ ಪ್ರೇಮವನ್ನು ಪ್ರಚೋದಿಸುವುದು ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಮಹನೀಯರನ್ನು ವೈಭವೀಕರಿಸಿ ಜಾತಿ ವಿಭಜನೆಗಳನ್ನು ಬಳಸಿಕೊಳ್ಳುವುದು.
ವಿರೋಧ ಪಕ್ಷಗಳು ಆಡಳಿತ ಪಕ್ಷವು ತೋಡಿರುವ ಖೆಡ್ಡಕ್ಕೆ ಬೀಳುವುದಕ್ಕೆ ಬದಲಾಗಿ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ನಡೆಸಬೇಕು.
ಬಿಹಾರದಲ್ಲಿ ಮತದಾರರ ಅರ್ಹತೆಯ ದಾಖಲೆಯಾಗಿ ಆಧಾರ್ ಕಾರ್ಡ್ ಬಳಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ವಿಶೇಷ ತೀವ್ರ ಪರಿಷ್ಕರಣೆಯ ಸಮಸ್ಯೆಯನ್ನು ಬಹುತೇಕ ನಿವಾರಣೆ ಮಾಡಿದಂತಾಗಿದೆ. ಹಾಗಿದ್ದೂ, ಅನೇಕ ಸ್ಥಳಗಳಲ್ಲಿ ಸಂಜೆ ಐದು ಗಂಟೆಯ ಬಳಿಕ ದಾಖಲಾದ ಮತದಾನದ ಹೆಚ್ಚಳದ ಪ್ರಮಾಣಕ್ಕೆ ಕಾರಣಗಳನ್ನು ಕಂಡುಹಿಡಿಯಲು ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳ ವಿವರ ಕಲೆಹಾಕಲು ಆಯೋಗ ಇನ್ನೂ ಅನುಮತಿ ನೀಡದೇ ಇರುವುದು ಸಮಸ್ಯೆ ಬಗೆಹರಿಯದೇ ಉಳಿಯುವಂತೆ ಮಾಡಿದೆ.
ಚುನಾವಣಾ ಆಯೋಗದ ಮೂರ್ಖತನ
ಮತ ಚಲಾಯಿಸಿದ ಮಹಿಳೆಯರ ಗೌರವವನ್ನು ಕಾಪಾಡುವ ದೃಷ್ಟಿಯಿಂದ ಚುನಾವಣಾ ಆಯೋಗವು ಮತಗಟ್ಟೆಗಳ ಸಿಸಿಟಿವೆ ದೃಶ್ಯಾವಳಿಗಳನ್ನು ಮತ ಎಣೆಕೆ ಬಳಿಕ ನಾಶಪಡಿಸುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಇದು ತೀರಾ ಮೂರ್ಖತನದ್ದು ಮಾತ್ರವಲ್ಲದೆ ಮಹಿಳೆಯರಿಗೆ ಮಾಡುವ ಅವಮಾನವೂ ಆಗಿದೆ. ಇಲ್ಲಿ ನಾವು ಪ್ರಶ್ನೆ ಮಾಡುತ್ತಿರುವುದು ಮತಗಟ್ಟೆಗಳಿಗೆ ಸಂಬಂಧಿಸಿದ ಸಿಸಿಟಿ ದೃಶ್ಯಾವಳಿಗಳೇ ಹೊರತು ಅವರ ಮನೆಯ ಖಾಸಗಿ ಸ್ಥಳಗಳಿಗೆ ಸಂಬಂಧಿಸಿದ್ದಲ್ಲ.
ಮಹಿಳೆಯರು ಸಾರ್ವಜನಿಕ ಸ್ಥಳದ ಭಾಗವಾಗಲು ಅವಕಾಶ ನೀಡುವುದರಿಂದ ಅವರಿಗೆ ಅವಮಾನ ಮಾಡಿದಂತಾಗುತ್ತದೆ ಎನ್ನುವುದು ಅವರ ಮೇಲೆ ಪರ್ದಾ ಪದ್ಧತಿಯ ತರ್ಕವನ್ನು ಹೇರಿದಂತೆ. ಮತ್ತು ಆ ಕಾರಣಕ್ಕಾಗಿ ವಂಚನೆಯ ಆರೋಪಗಳನ್ನು ದೃಢೀಕರಿಸುವ ಅಥವಾ ವಜಾಗೊಳಿಸಬಹುದಾದ ಸಾಕ್ಷ್ಯಕ್ಕೆ ತಡೆಯೊಡ್ಡುವುದು ಆಕ್ಷೇಪಾರ್ಹವಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಮಚ್ಚಿಡಲು ಪ್ರಯತ್ನಿಸುತ್ತಿರುವ ಅದರ ತಂತ್ರಗಳ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗವು ದೂರು ದಾಖಲಿಸಬೇಕು.
ಈಗಿರುವ ಜ್ವಲಂತ ಸಮಸ್ಯೆಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸಿ. ಆಡಳಿತ ಪಕ್ಷವು ತನ್ನ ಮನಸ್ಸಿಗೆ ಬಂದಂತೆ ಎಸೆಯುವ ಅನಗತ್ಯ ವಿಚಾರಗಳ ಹಿಂದೆ ವಿರೋಧ ಪಕ್ಷಗಳು ಓಡಬಾರದು.
(ದ ಫೆಡರಲ್ ಎಲ್ಲಾ ದೃಷ್ಟಿಕೋನಗಳಿಂದ ಲೇಖನಗಳನ್ನು ಪ್ರಕಟಿಸುತ್ತದೆ. ಈ ಲೇಖನದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿದ್ದು, ದಿ ಫೆಡರಲ್‌ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ.)