ಅಮೆರಿಕ-ಇಸ್ರೇಲ್ ಒಕ್ಕೂಟದ ಭೌಗೋಳಿಕ ರಾಜಕೀಯ ಚದುರಂಗದಾಟ; ಇರಾನ್ ಮೂಲೆಗುಂಪು
ಇರಾನ್ನ ಪರಮಾಣು ಮಹತ್ವಾಕಾಂಕ್ಷೆಗಳ ಮೇಲೆ ನಿರ್ಬಂಧ ಹೇರುವ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವು ಟೆಹ್ರಾನ್ನ ಬೆನ್ನುಮೂಳೆ ಮುರಿಯುವ ಅಂತಿಮ ಅಸ್ತ್ರವೇ? ಇದರಿಂದ ಇಸ್ರೇಲ್ ಈ ವಲಯದಲ್ಲಿ ಏಕೈಕ ಪ್ರಾದೇಶಿಕ ಸೂಪರ್ಪವರ್ ಆಗಿ ಹೊರಹೊಮ್ಮುವುದೇ?;
ಮಧ್ಯಪ್ರಾಚ್ಯದಲ್ಲಿನ ಭೌಗೋಳಿಕ ಬದಲಾವಣೆಗಳು ಇತ್ತೀಚೆಗೆ ತೀವ್ರ ಗಮನ ಸೆಳೆಯುತ್ತಿವೆ. ಯಾಕೆಂದರೆ ಇರಾನ್ ತನ್ನನ್ನು ತಾನು ಹೆಚ್ಚು ಹೆಚ್ಚು ಮೂಲೆಗುಂಪು ಮಾಡಿಕೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ನ ಸತತ ಒತ್ತಡ ಹಾಗೂ ಈ ವಲಯದಾದ್ಯಂತ ನಡೆದಿರುವ ಪ್ರಾಕ್ಸಿ ಸೋಲುಗಳ ಕಾರಣದಿಂದಾಗಿ ಇಸ್ಲಾಮಿಕ್ ಗಣರಾಜ್ಯ ಮಿಲಿಟರಿ ಹಾಗೂ ರಾಜತಾಂತ್ರಿಕವಾಗಿ ಹಿಂದೆಂದಿಗಿಂತಲೂ ದುರ್ಬಲವಾಗಿ ಕಾಣುತ್ತಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಕ್ರಮಣಕಾರಿಯಾದ ಇರಾನ್ ವಿರೋಧಿ ನಿಲುವು ಅತ್ಯಂತ ಗಮನಾರ್ಹವಾದ ರೀತಿಯಲ್ಲಿ ವ್ಯೂಹಾತ್ಮಕ ಫಲಿತಾಂಶಗಳನ್ನು ನೀಡಿದೆ ಎಂಬುದರ ಕಡೆಗೆ ಅವರ ಇತ್ತೀಚಿನ ಸಂಚಿಕೆ ಗಮನಹರಿಸುತ್ತದೆ. ಇರಾನಿನ ಪ್ರಾದೇಶಿಕ ಮೈತ್ರಿಗಳ ವಿಘಟನೆಯಿಂದ ಆರಂಭಿಸಿ ಹೊಸ ಪರಮಾಣು ಒಪ್ಪಂದದ ಅವಕಾಶಗಳವರೆಗೆ ಭೌಗೋಳಿಕ ರಾಜಕೀಯ ‘ಚದುರಂಗದಾಟ’ಕ್ಕೆ ಮರುರೂಪ ನೀಡಲಾಗುತ್ತಿದೆ ಮತ್ತು ಅದು ಇರಾನಿನ ಪರವಾಗಿಲ್ಲ ಎನ್ನುವುದು ಗಮನಾರ್ಹ.
ಸಿರಿಯಾದ ಬಶರ್ ಅಲ್ ಅಸ್ಸಾದ್, ಲೆಬನಾನಿನ ಹಿಜ್ಬುಲ್ಲಾ, ಪ್ಯಾಲೆಸ್ತೇನಿನ ಹಮಾಸ್ ಮತ್ತು ಯೆಮೆನ್ನಿನ ಹೌತಿಗಳೊಂದಿಗೆ ‘ಪ್ರತಿರೋಧದ ಅಕ್ಷರೇಖೆ’ಯನ್ನು ನಿರ್ಮಿಸಲು ಇರಾನ್ ದಶಕಗಳಿಂದ ನಡೆಸಿದ ಪ್ರಯತ್ನವೆಲ್ಲವೂ ನಿಷ್ಫಲವಾಗುತ್ತಿದೆ. ಇಸ್ರೇಲ್ ನ್ನು ತನ್ನ ಮಗ್ಗುಲಲ್ಲಿ ಇಟ್ಟುಕೊಂಡೇ ಅದರ ಒಂದೊಂದು ಆಧಾರಸ್ತಂಭಗಳನ್ನು ನಿಷ್ಕ್ರಿಯಗೊಳಿಸಿದೆ.
ಇಸ್ರೇಲಿನ ನಿಖರವಾದ ದಾಳಿಯಿಂದ ಹಸನ್ ನಸ್ರಲ್ಲಾ ಸೇರಿದಂತೆ ಹಿಜ್ಬುಲ್ಲಾದ ನಾಯಕರ ದಂಡು ಧೂಳೀಪಟವಾಗಿದೆ. ಹಮಾಸ್ ನ ಮಾಜಿ ಪ್ರಧಾನಿ ಇಸ್ಮಾಯಿಲ್ ಹನಿಯಾಹ್ ಟೆಹ್ರಾನ್ ನಲ್ಲಿಯೇ ಹತರಾದಾಗ ಅದಕ್ಕೆ ಉಂಟಾದ ಆಘಾತ ಬಹುದೊಡ್ಡದು. ಇರಾನ್ ನಿಂದ ಸುದೀರ್ಘ ಕಾಲದಿಂದ ಬೆಂಬಲಕ್ಕೆ ಒಳಗಾಗಿದ್ದ ಸಿರಿಯಾದ ಅಲ್-ಅಸದ್ ಸರ್ಕಾರ ಅಮೆರಿಕದಿಂದ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲ್ಪಟ್ಟಿರುವ ಹಯಾತ್ ತಹ್ರೀರ್ ಅಲ್-ಶಮ್ ಗೆ ಪತನಗೊಂಡಿತು. ಇದು ಕಳೆದ ವರ್ಷದ ಕೊನೆಯಲ್ಲಿ ಡಮಾಸ್ಕಸ್ ನ್ನು ವಶಪಡಿಸಿಕೊಂಡಿತು.
“ಇರಾನ್ ತನ್ನ ಅತಿದೊಡ್ಡ ಪ್ರಾದೇಶಿಕ ಮಿತ್ರನನ್ನು ಕಳೆದುಕೊಂಡಿತು” ಎಂದು ದಕ್ಷಿಣಾ ಮೂರ್ತಿ ಅವರು ಸಿರಿಯಾದ ಪತನವನ್ನು ಉಲ್ಲೇಖಿಸಿ ಹೇಳುತ್ತಾರೆ. “ಅಮೆರಿಕದ ತೀವ್ರ ಬಾಂಬ್ ದಾಳಿಗೆ ಒಳಗಾದ ಹೌತಿಗಳು ಕೂಡ ಕೆಂಪು ಸಮುದ್ರದಿಂದ ಹಿಂದೆ ಸರಿಯಲು ಒಪ್ಪಿಕೊಂಡಿದ್ದಾರೆ” ಎಂಬುದರತ್ತ ಬೊಟ್ಟು ಮಾಡುತ್ತಾರೆ.
ತನ್ನ ಮಿತ್ರರೆಲ್ಲ ನಿರಾಯುಧರಾದ ಬಳಿಕ ಇರಾನ್ ಈಗ ಬಟಾಬಯಲಾಗಿದೆ. ಇರಾನ್ ಮೇಲೆ ನೇರ ದಾಳಿ ಮಾಡಬೇಕು ಎಂದು ಇಸ್ರೇಲ್ ಮುಂದಿಟ್ಟಿರುವ ಬೇಡಿಕೆಗಳನ್ನು ಟ್ರಂಪ್ ಆಡಳಿತ ಮನ್ನಿಸುತ್ತಿಲ್ಲವಾದರೂ ಇರಾನಿನ ವಿಷದ ಹಲ್ಲನ್ನು ಸಂಪೂರ್ಣ ಕಿತ್ತುಹಾಕುವ ಪರಮಾಣು ಒಪ್ಪಂದಕ್ಕೆ ಹೆಚ್ಚಿನ ಒತ್ತಡ ಹೇರುತ್ತಿದೆ. ಕುತೂಹಲದ ಸಂಗತಿ ಎಂದರೆ ಬರಾಕ್ ಒಬಾಮಾ ನೇತೃತ್ವದಲ್ಲಿ ಸಹಿಹಾಕಲಾದ 2015ರ ಅಣು ಒಪ್ಪಂದದಿಂದ ಟ್ರಂಪ್ ಹಿಂದೆ ಸರಿದ ನಂತರ ಬಂದಿದ್ದಾಗಿದೆ.
ಮಾತುಕತೆಗೆ ಮತ್ತೆ ಚಾಲನೆ ನೀಡಲು ಇರಾನ್ ಒಪ್ಪಿಕೊಂಡಿದೆಯಾದರೂ ಅದು ತನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕೈಬಿಡಲು ಸುತಾರಾಂ ಒಪ್ಪುತ್ತಿಲ್ಲ. ಅಮೆರಿಕ ತಪಾಸಣೆಕಾರರು ಬಂದು ತನ್ನಲ್ಲಿರುವ ಅಣು ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಬಹುದು ಎಂದೂ ಅದು ಹೇಳಿಬಿಟ್ಟಿದೆ. ಅಂದರೆ ಟೆಹ್ರಾನ್ ಯಾವ ಮಟ್ಟಿನ ಒತ್ತಡಕ್ಕೆ ಒಳಗಾಗಿದೆ ಎಂಬುದು ವೇದ್ಯವಾಗುತ್ತದೆ.
“ಇರಾನ್ ಈಗ ಹಿಂದೆಂದೂ ಕಾಣದಷ್ಟು ದುರ್ಬಲವಾಗಿ ಹೋಗಿದೆ” ಎಂದು ಹೇಳುವ ದಕ್ಷಿಣಾ ಮೂರ್ತಿ ಅವರು, ಅದಕ್ಕೆ ಬೆಂಬಲ ನೀಡಬೇಕಾಗಿದ್ದ ರಷ್ಯಾ ಮತ್ತು ಚೀನಾ ಇನ್ನೆಲ್ಲೋ ತಲ್ಲೀನವಾಗಿದೆ. ರಷ್ಯಾವಂತೂ ಉಕ್ರೇನ್ ನ ಜಂಜಾಟದಲ್ಲಿ ಸಿಕ್ಕಿಹಾಕಿಕೊಂಡಿದೆ ಮತ್ತು ಚೀನಾ ಅಮೆರಿಕದ ವಿರುದ್ಧದ ಮೇಲಾಟದಲ್ಲಿ ಬಂಧಿಯಾಗಿದೆ” ಎಂದು ವಿಶ್ಲೇಷಿಸುತ್ತಾರೆ.
ಇರಾನಿನ ಸೋಲು ಇಸ್ರೇಲಿನ ಲಾಭವೇ?
ಈ ನಾಟಕೀಯವಾದ ಪ್ರಾದೇಶಿಕ ಮರುಹೊಂದಾಣಿಕೆಯಲ್ಲಿ ಯಾರು ನಿಜವಾದ ವಿಜೇತರು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇವರಲ್ಲಿ ಮುಖ್ಯವಾಗಿ ಕಾಣಿಸುವುದು ಇಸ್ರೇಲ್. ಅದೀಗ ಮಿಲಿಟರಿ ಮತ್ತು ರಾಜಕೀಯ ವಿಷಯದಲ್ಲಿಯೂ ಅಪ್ರತಿಮವಾಗಿದೆ ಎಂದರೆ ತಪ್ಪಲ್ಲ. ತನ್ನ ಪರಮಾಣು ಕಾರ್ಯಕ್ರಮದಿಂದ ಇರಾನ್ ಹಿಂದಕ್ಕೆ ಸರಿಯುವುದು ಬಹುತೇಕ ನಿಶ್ಚಿತ. ಹಾಗಾಗಿ ಈ ವಲಯದಲ್ಲಿ ಏಕೈಕ ಪರಮಾಣು-ಸಶಸ್ತ್ರ ರಾಷ್ಟ್ರವಾಗುವ ಹಾದಿಯಲ್ಲಿ ಇಸ್ರೇಲ್. ಹಾಗಂತ ಅದೇನು ಅಧಿಕೃತವಾಗಿ ತಾನು ಪರಮಾಣು ಅಸ್ತ್ರ ಹೊಂದಿದ ರಾಷ್ಟ್ರವೆಂದು ಘೋಷಿಸಿಕೊಂಡಿಲ್ಲ.
ಅಮೆರಿಕದ ಈ ಅಧಿಕಾರದ ಸಮತೋಲನವು ಇಸ್ರೇಲ್ ಮಟ್ಟಿಗೆ ಅನುಕೂಲವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ‘ಅದು ಟ್ರಂಪ್ ಆಗಿರಲಿ ಅಥವಾ ಅಮೆರಿಕದ ಯಾವುದೇ ಅಧ್ಯಕ್ಷರಾಗಿರಲಿ, ಇಸ್ರೇಲಿನ ಪ್ರಾಬಲ್ಯವನ್ನು ಭದ್ರಪಡಿಸುವ ನೀತಿ ಯಾವತ್ತೂ ಸ್ಥಿರವಾಗಿರುತ್ತದೆ” ಎಂದು ಮೂರ್ತಿ ಅವರು ಅವಲೋಕಿಸುತ್ತಾರೆ.
ದುರ್ಬಲವಾಗಿ ಇರಾನ್ ಇನ್ನು ಮುಂದೆ ಶಿಯಾ ಪಾರುಪತ್ಯದ ಮೇಲೆ ಹಿಡಿತ ಸಾಧಿಸುವುದಿಲ್ಲ ಎನ್ನುವುದು ಸೌದಿ ಅರೇಬಿಯಾ ಮತ್ತು ಟರ್ಕಿಗೆ ಲಾಭವೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಗಮನಿಸಿದರೆ ಸುನ್ನಿ ಶಕ್ತಿಯ ಉದಯ ನಿಶ್ಚಿತವೆಂದು ಕಾಣುತ್ತದೆ.
ಆಂತರಿಕ ಅಪಾಯ
ತನ್ನ ಪ್ರಾದೇಶಿಕ ಅಧಿಕಾರ ಜಾಲದಲ್ಲಿ ಕುಸಿತ ಉಂಟಾಗಿರುವುದರಿಂದ ಇರಾನ್ ದೇಶೀಯವಾಗಿಯೂ ಪರಿಣಾಮಗಳನ್ನು ಎದುರಿಸಲಿದೆ. ದೇಶದ 46 ವರ್ಷಗಳಷ್ಟು ಹಳೆಯದಾದ ಇಸ್ಲಾಮಿಕ್ ಆಡಳಿತವು ತನ್ನ ಕಾರ್ಯತಂತ್ರದ ಗಹನತೆ ಮತ್ತು ಅಂತಾರಾಷ್ಟ್ರೀಯ ಪ್ರಭಾವದಲ್ಲಿ ಆಗಿರುವ ನಷ್ಟವನ್ನೆಲ್ಲ ನುಂಗಿಕೊಂಡು ಅಸ್ತಿತ್ವ ಉಳಿಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗಳು ಈಗ ಕಾಡುತ್ತಿವೆ.
ಸಾರ್ವಜನಿಕವಾಗಿ ಇರಾನ್ ಪ್ರತಿರೋಧದ ತಂತ್ರವನ್ನು ತೋರುತ್ತಿದ್ದರೂ ಕೂಡ ಪರಮಾಣು ಅಸ್ತ್ರದ ವಿಚಾರದಲ್ಲಿ ಅದರ ಮಾತುಕತೆ ಏನಿದ್ದರೂ ಒತ್ತಡಕ್ಕೆ ಸಿಲುಕಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ.
“ಈ ಆರಂಭಿಕ ಸೂಚನೆಗಳನ್ನು ಗಮನಿಸಿದರೆ 1979ರಿಂದೀಚೆಗೆ ಇರಾನ್ ತೀರಾ ದುರ್ಬಲ ಸ್ಥಿತಿ ತಲುಪಿದಂತೆ ಕಾಣಿಸುತ್ತಿದೆ” ಎಂದು ಹೇಳುವ ಮೂಲಕ ದಕ್ಷಿಣಾ ಮೂರ್ತಿ ಅವರು ತಮ್ಮ ವಿಶ್ಲೇಷಣೆಯನ್ನು ಕೊನೆಗೊಳಿಸುತ್ತಾರೆ.
ಲೇಖಕ ಕೆ.ಎಸ್. ದಕ್ಷಿಣಾಮೂರ್ತಿ ಅವರ Worldly-Wise ವಿಶ್ಲೇಷಣೆಗೆ ಈ ವಿಡಿಯೋ ಲಿಂಕ್ ಕ್ಲಿಕ್ ಮಾಡಿ