ಆರ್ಥಿಕ ನೀತಿ: ಬಿಜೆಪಿ, ಕಾಂಗ್ರೆಸ್ ನಡುವೆ ಹೆಚ್ಚೇನೂ ಭಿನ್ನತೆಯಿಲ್ಲ

ಬಿಜೆಪಿ-ಕಾಂ‌ಗ್ರೆಸ್‌:‌ ನಾಮಮಾತ್ರ ವ್ಯತ್ಯಾಸದ ಜೋಡಿ;

By :  TK Arun
Update: 2024-04-29 11:37 GMT

ಸಾಮಾಜಿಕ ಮಾಧ್ಯಮವು ಕಾಂಗ್ರೆಸ್ ಮತ್ತು ಬಿಜೆಪಿ ಯ ಆರ್ಥಿಕ ಕಾರ್ಯಕ್ರಮಗಳ ಅರ್ಹತೆ ಮತ್ತು ವೈಲಕ್ಷಣದ ಹುಸಿ ಹೇಳಿಕೆಗಳಿಂದ ತುಂಬಿ ಹೋಗಿದೆ. 

ಬಿಜೆಪಿ ಅಭಿವೃದ್ಧಿ ಪರವಾಗಿದೆ. ಕಾಂಗ್ರೆಸ್ ಜನಕಲ್ಯಾಣ ಮತ್ತು ಪುನರ್ವಿತರಣೆಗೆ ನಿಂತಿದೆ; ಬಿಜೆಪಿ ಮಾರುಕಟ್ಟೆ ಪರ, ಕಾಂಗ್ರೆಸ್ ಸಮಾಜವಾದಿ; ಬಿಜೆಪಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತದೆ. ಕಾಂಗ್ರೆಸ್ ಹೂಡಿಕೆದಾರರನ್ನು ಓಡಿಸುತ್ತದೆ; ಬಿಜೆಪಿ ಕೋಟ್ಯಧಿಪತಿಗಳ ಪರ, ಕಾಂಗ್ರೆಸ್ ಬಡವರ ಪರ; ಬಿಜೆಪಿ ಭಾರತೀಯ ವಿಜ್ಞಾನಿಗಳನ್ನು ಪ್ರೋತ್ಸಾಹಿಸುತ್ತದೆ, ಕಾಂಗ್ರೆಸ್ ದೇಶದ ವೈಜ್ಞಾನಿಕ ಪ್ರಗತಿ ಬಗ್ಗೆ ಕಾಳಜಿ ವಹಿಸುವುದಿಲ್ಲ; ಕಾಂಗ್ರೆಸ್ ಹೆಚ್ಚು ತೆರಿಗೆ ವಿಧಿಸುತ್ತದೆ, ಬಿಜೆಪಿ ಕಡಿಮೆ ತೆರಿಗೆಯ ಪರವಾಗಿದೆ.....ಇತ್ಯಾದಿ. 

ಪೇಲವ ಸಮರ್ಥನೆಗಳು: ಇಂಥ ಪ್ರತಿಯೊಂದು ಪ್ರತಿಪಾದನೆಯೂ ಹಲವು ಪದರಗಳಿಂದಾಗಿವೆ ಮತ್ತು ಎರಡು ಪಕ್ಷಗಳ ನಿಲುವುಗಳ ನಡುವಿನ ವಿಭಾಗವು ಸಂಶಯಾ ಸ್ಪದವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಆರ್ಥಿಕ ಕಾರ್ಯತಂತ್ರಗಳ ನಡುವೆ ಸಾಗರದಷ್ಟು ವ್ಯತ್ಯಾಸವಿಲ್ಲ; ಬದಲಾಗಿ, ವಾಸ್ತವವೆಂದರೆ, ಹಾಳೆಯೊಂದನ್ನು ತುಂಬುವಷ್ಟು ವ್ಯತ್ಯಾಸವೂ ಇಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಇರುವುದು ರಾಜಕೀಯದಲ್ಲಿ ಮತ್ತು ಆರ್ಥಿಕತೆಯು ಕಾರ್ಯನಿರ್ವಹಿಸಲು ಅಗತ್ಯವಾದ ಸಾಮಾಜಿಕ ಸಾಮರಸ್ಯವನ್ನು ರೂಪಿಸುವಲ್ಲಿ. ಇಲ್ಲಿ ವ್ಯತ್ಯಾಸ ನಿಜವಾಗಿಯೂ ಭಾರಿ ಯಾಗಿದೆ.

ಬಿಜೆಪಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸಿದ್ಧಾಂತದಿಂದ ಪ್ರೇರಿತವಾಗಿದೆ, ಜನಸಂಖ್ಯೆಯ ಶೇ.14 ರಷ್ಟು ಮಂದಿ ಮೇಲೆ ವ್ಯವಸ್ಥಿತ ಹಗೆತನವನ್ನು ಸೃಷ್ಟಿಸುತ್ತದೆ. ಧರಿಸುವ ವಸ್ತ್ರದಿಂದಲೂ ಗುರುತಿಸಬಹುದಾದ ಅವರ ಮೇಲಿನ ದ್ವೇಷವನ್ನು ಸರ್ವಾಧಿಕಾರ ಹಾಗೂ ಪ್ರಜಾಪ್ರಭುತ್ವ ವಿರೋಧಿ ತರ್ಕದಿಂದ ಮಾಡಲಾಗುತ್ತದೆ.

ಸಂಘದ ಆದರ್ಶವಾದ ಹಿಂದು ರಾಷ್ಟ್ರವು ಎಲ್ಲ ನಾಗರಿಕರಿಗೂ ಸಮಾನತೆ ಹಾಗೂ ನಂಬಿಕೆಗೆ ಸಂಬಂಧವಿಲ್ಲದ ಪೌರತ್ವಕ್ಕೆ ಹೊಂದಿಕೆ ಆಗುವುದಿಲ್ಲ. ಪ್ರಜಾಪ್ರಭುತ್ವವನ್ನು ಮೊಟಕುಗೊಳಿಸುವುದರ ಮೂಲಕವಷ್ಟೇ ಭಾರತವನ್ನು ಅಲ್ಪಸಂಖ್ಯಾತರಿಗೆ ಮಾತ್ರವಲ್ಲದೆ ಎಲ್ಲರಿಗೂ ಹಿಂದೂ ರಾಜ್ಯವಾಗಿ ಪರಿವರ್ತಿಸಬಹುದು.

ಎರಡು ಪಕ್ಷಗಳ ಆರ್ಥಿಕ ನೀತಿಗಳ ಮೇಲೆ ಕೇಂದ್ರೀಕರಿಸೋಣ.

ಕಾಂಗ್ರೆಸ್ ಸಮಾಜವಾದಿಯೇ?: ಕಾಂಗ್ರೆಸ್ ಸಮಾಜವಾದಿಯೇ? ನೆಹರು ಸಮಾಜದ ಸಮಾಜವಾದಿ ಮಾದರಿ ಬಗ್ಗೆ ಮಾತನಾಡಿದರು ಮತ್ತು ಸಾರ್ವಜನಿಕ ವಲಯವನ್ನು ಆರ್ಥಿಕತೆಯ ಉನ್ನತ ಸ್ಥಾನದಲ್ಲಿ ಇರಿಸಿದರು. ಇಂದಿರಾ ಗಾಂಧಿಯವರು ಬ್ಯಾಂಕುಗಳನ್ನು ರಾಷ್ಟ್ರೀ ಕರಣಗೊಳಿಸಿದರು ಮತ್ತು ಸಂವಿಧಾನದ ಪೀಠಿಕೆಯಲ್ಲಿ 'ಸಮಾಜವಾದಿ' ಪದವನ್ನು ಸೇರಿಸಿದರು. ಆದ್ದರಿಂದ, ಕಾಂಗ್ರೆಸ್ ಸಮಾಜವಾದಿ. ಅಲ್ಲವೇ?

ಹಾಗಿದ್ದಲ್ಲಿ, ಜನ ಏನು ಮಾಡುತ್ತಾರೆ ಎನ್ನುವುದಕ್ಕಿಂತ ಅವರು ಏನು ಹೇಳುತ್ತಾರೆ ಎಂಬುದನ್ನು ಪರಿಗಣಿಸಿದರೆ, ಭಾರತದ ಶೋಧನೆಯ ಮನ್ನಣೆಯನ್ನು ಕ್ರಿಸ್ಟೋಫರ್ ಕೊಲಂಬಸ್‌ ಗೆ ನೀಡಬೇಕಾಗುತ್ತದೆ; ಅಮೆರಿಕದ ಆವಿಷ್ಕಾರಕ್ಕಲ್ಲ. ಸ್ಪೇನ್‌ನ ರಾಜ ಮತ್ತು ರಾಣಿ, ಪೂರ್ವದ ಭಾರತವನ್ನು ತಲುಪಲು ಕೊಲಂಬಸ್‌ ನನ್ನುನಿಯೋಜಿಸಿದರು. ಬಹಾಮಾಕ್ಕೆ ಬಂದಿಳಿದ ಕೊಲಂ ಬ‌‌ಸ್‌, ಭಾರತವನ್ನು ತಲುಪಿದ್ದೇನೆ ಎಂದುಕೊಂಡು ಸ್ಥಳೀಯರನ್ನು ಭಾರತೀಯರು ಎಂದು ಕರೆದರು. ಮೂಲ ಭಾರತೀಯರಾದ ನಮಗೆ ಈ ಗೊಂದಲ ಮುಖ್ಯವಾಗಬೇಕು. ಹಾಗಿದ್ದಲ್ಲಿ, ನೆಹರೂ ನೇತೃತ್ವದಲ್ಲಿ ಭಾರತದಲ್ಲಿ ಬಂಡವಾಳಶಾಹಿ ವರ್ಗವನ್ನು ಬೆಳೆಸಿದ ಶ್ರೇಯ ಕಾಂಗ್ರೆಸ್ಸಿಗೆ ಸಲ್ಲಬೇಕೇ ಹೊರತು ಸಮಾಜವಾದವನ್ನು ಕಟ್ಟಿದ್ದಕ್ಕಲ್ಲ.

ನೆಹರೂ ನೀತಿ: ನೆಹರೂ ಅವರ ಸರ್ಕಾರವು ಹೆಚ್ಚು ಸುಂಕ ಮತ್ತು ಆಮದು ನಿರ್ಬಂಧದ ಮೂಲಕ ವಿದೇಶಿ ಉತ್ಪಾದಕರಿಂದ ದೇಶಿ ಉದ್ಯಮಕ್ಕೆ ರಕ್ಷಣೆ ನೀಡಿತು. ಖಾಸಗಿ ಉದ್ಯಮದ ಉತ್ಪನ್ನಗಳಿಗೆ ಸಾರ್ವಜನಿಕ ವಲಯದ ವೆಚ್ಚದಿಂದ ಬೇಡಿಕೆಯನ್ನು ಸೃಷ್ಟಿಸಲಾಯಿತು. ಇದು ಭಾರತೀಯ ಬಂಡವಾಳಶಾಹಿ ವರ್ಗ ಸೃಷ್ಟಿಸಲಾಗದ ಅಗತ್ಯ ಮೂಲಸೌಕರ್ಯ, ಉಕ್ಕು ಉತ್ಪಾದನೆ ಮತ್ತು ಯಂತ್ರೋಪಕರಣಗಳನ್ನು ನಿರ್ಮಿಸಿತು. ರಾಜ್ಯದ ರಕ್ಷಣೆಯಿಂದ ಕೈಗಾರಿಕಾ ಉತ್ಪನ್ನಗಳು ಅಗತ್ಯಕ್ಕಿಂತ ಹೆಚ್ಚು ದುಬಾರಿಯಾದವು. 

ಇದು ಕೃಷಿ ವಿರುದ್ಧ ವ್ಯಾಪಾರವನ್ನು ಮುಖಾಮುಖಿ ಆಗಿಸಿತು; ಒಂದು ಚೀಲ ರಸಗೊಬ್ಬರ ಖರೀದಿಸಲು ರೈತರು ಎರಡು ಚೀಲ ಧಾನ್ಯದ ಬದಲು ಐದು ಚೀಲ ಪಾವತಿಸಬೇಕಾಯಿತು. ಈ ಮೂಲಕ ಕೃಷಿಯ ಹೆಚ್ಚುವರಿಯನ್ನು ಉದ್ಯಮಕ್ಕೆ ವರ್ಗಾಯಿಸಲಾಯಿತು ಮತ್ತು ಉದ್ಯ ಮದಲ್ಲಿ ಬಂಡವಾಳ ಕ್ರೋಡೀಕರಣಕ್ಕೆ ನೆರವಾಯಿತು. 

ನೆಹರೂ ಸರ್ಕಾರ ಭಾರತೀಯ ಉದ್ಯಮಕ್ಕೆ ಬಂಡವಾಳ ಲಭ್ಯವಾಗುವಂತೆ ಐಎಫ್‌ಸಿಐ, ಐಸಿಐಸಿಐ ಮತ್ತು ಐಡಿವಿಐನಂಥ ಸಾಲ ನೀಡುವ ಸಂಸ್ಥೆಗಳನ್ನು ಸ್ಥಾಪಿಸಿತು. ಬ್ಯಾಂಕ್‌ಗಳಲ್ಲಿ ಸಾರ್ವಜನಿಕರು ಠೇವಣಿ ಮಾಡಿದ ಉಳಿತಾಯ ಹಣವನ್ನು ಈ ಸಂಸ್ಥೆಗಳಿಗೆ ವರ್ಗಾಯಿಸಲು ಉತ್ತೇಜಿಸಿತು. ಎಸ್‌ಎಲ್‌ಆರ್ ಅರ್ಹತೆ, ಅಂದರೆ, ಬ್ಯಾಂಕ್‌ಗಳು ತಮ್ಮ ಒಟ್ಟು ಸಾಲದ ಕನಿಷ್ಠ ಪ್ರಮಾಣವನ್ನು ಸರ್ಕಾರಕ್ಕೆ ನೀಡಬೇಕೆಂದು ಹೇಳುವ ಮೂಲಕ ಶಾಸನಾತ್ಮಕ ದ್ರವ್ಯತೆ ಅನುಪಾತವನ್ನು ಪರಿಚಯಿಸಿತು.

'ಟಾಟಾ-ಬಿರ್ಲಾ ಸರ್ಕಾರ್': ಭಾರತೀಯ ಬಂಡವಾಳಶಾಹಿ ವರ್ಗಕ್ಕೆ ವಶವರ್ತಿ ಮಾರುಕಟ್ಟೆ,ಅಗತ್ಯ ಬಂಡವಾಳ, ಅವರ ಸರಕುಗಳಿಗೆ ಬೇಡಿಕೆ ಮತ್ತು ತಂತ್ರಜ್ಞಾನ ಮತ್ತು ನಿರ್ವಹಣೆಯಲ್ಲಿ ತರಬೇತಿ ಪಡೆದ ಮಾನವಶಕ್ತಿಯನ್ನು ಸರ್ಕಾರಿ ಸಂಸ್ಥೆಗಳಲ್ಲಿಒದಗಿಸುವ ಮೂಲಕ ಬಂಡವಾಳಶಾಹಿಗಳನ್ನು ನಿರ್ಮಿಸುವುದು ಸಮಾಜವಾದವಾಗಿದ್ದರೆ, ಕಾಂಗ್ರೆಸ್ ನ್ನು ಸಮಾಜವಾದಿ ಎನ್ನಬಹುದಾಗಿತ್ತು. 

ಆ ಕಾಲದ ಪ್ರಮುಖ ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರದ ಸಮಾಜವಾದಿ ಎಂಬ ಹೇಳಿಕೆಗೆ ಮಣಿಯಲಿಲ್ಲ: ʻಟಾಟಾ-ಬಿರ್ಲಾ ಕಿ ಸರ್ಕಾರ್ʼ ಎಂದು ಘೋಷಣೆ ಕೂಗಿದವು. ಟಾಟಾ, ಬಿರ್ಲಾ ಮತ್ತು ಇನ್ನಿತರ ಕೈಗಾರಿಕಾ ಗುಂಪುಗಳು ಏಳಿಗೆ ಹೊಂದಿದವು. ಆನಂತರ, ಅಂಬಾನಿಗಳಂಥ ಹೊಸಬರು ಬಂದರು. ಗೌತಮ್ ಅದಾನಿ ಅವರು ಶರದ್ ಪವಾರ್ ಅವರನ್ನು ತಮ್ಮ ಮಾರ್ಗದರ್ಶಕ ಎಂದು ಸಾರ್ವಜನಿ ಕವಾಗಿ ಶ್ಲಾಘಿಸಿದ್ದಾರೆ. ರಾಜೀವ್ ಗಾಂಧಿ ಅಧಿಕಾರಾವಧಿಯಲ್ಲಿ ಈ ಗುಂಪು ಶುರುವಾಯಿತು. 

ಉದಾರೀಕರಣದ ಆರಂಭ: ಭಾರತೀಯ ಉದ್ಯಮಗಳು ನಿಯಂತ್ರಣ ವ್ಯವಸ್ಥೆಯಲ್ಲಿನ ಎಲ್ಲಾ ದೌರ್ಬಲ್ಯಗಳನ್ನು ಬಳಸಿಕೊಳ್ಳುವಷ್ಟು ಬೆಳೆದಾಗ, ಉದಾರೀಕರಣ ಪ್ರಾರಂಭವಾಯಿತು. ಮೊದಲು ರಾಜೀವ್ ಗಾಂಧಿ, ಆನಂತರ ಪಿ.ವಿ. ನರಸಿಂಹ ರಾವ್ ಅವರ ಅಧಿಕಾರಾವಧಿ ಯಲ್ಲಿ. ದೇಶ ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯುಟಿಒ)ಗೆ ಸೇರ್ಪಡೆಗೊಂಡಿತು ಮತ್ತು ಆರ್ಥಿಕತೆಯನ್ನು ಜಾಗತಿಕ ಸ್ಪರ್ಧೆಗೆ ತೆರೆಯಿತು. 

ಟೆಲಿಕಾಂ ಕ್ಷೇತ್ರದಲ್ಲಿ ಅದ್ಭುತ ಯಶಸ್ಸಿನ ನಂತರ ಮೂಲಭೂತ ಸೌಕರ್ಯಗಳನ್ನು ಖಾಸಗಿ ವಲಯಕ್ಕೆ ತೆರೆಯಲಾಯಿತು. ಖಾಸಗಿಯವರು ಶುಲ್ಕವನ್ನು ಕಡಿಮೆ ಮಾಡಲು ಸ್ಪರ್ಧಿಸಿದರು ಮತ್ತು ಇದರಿಂದ ಎಲ್ಲರ ಕೈಗೂ ಫೋನ್‌ ಬಂದಿತು. 

ಬಿಜೆಪಿಯ ಆರಂಭಿಕ ಪ್ರತಿಕ್ರಿಯೆ ಬಾಂಬೆ ಕ್ಲಬ್‌ನೊಂದಿಗೆ ಹೊಂದಾಣಿಕೆ ಮತ್ತು ಸುಧಾರಣೆಗಳಿಗೆ ವಿರೋಧ. ಆನಂತರ ಬಿಜೆಪಿ ಕೂಡ ಸುಧಾರಣೆ ವಾಹನಕ್ಕೆ ಏರಿತು. ಅಟಲ್ ಬಿಹಾರಿ ವಾಜಪೇಯಿ ಅವರ ಅಡಿಯಲ್ಲಿ ಸುಧಾರಣೆ ಪ್ರಕ್ರಿಯೆ ವಿಸ್ತರಿಸಿತು. 

ಆಧಾರ್, ಜಿಎಸ್‌ಟಿಗೆ ಬಿಜೆಪಿ ವಿರೋಧ: ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರ ಅಭಿವೃದ್ಧಿಯ ಸಾಮಾಜಿಕ ನೆಲೆಯನ್ನು ವಿಸ್ತರಿಸಿತು. ಆಡಳಿತವನ್ನು ಮೊದಲಿಗಿಂತ ಸ್ವಲ್ಪ ಹೆಚ್ಚು ಒಳಗೊಳ್ಳುವಂತೆ ಮಾಡಿತು. ಉದ್ಯೋಗ ಖಾತರಿ, ಅರಣ್ಯ ಹಕ್ಕುಗಳು, ಮಾಹಿತಿ ಹಕ್ಕು, ಮತ್ತು ಮೂಲಸೌಕರ್ಯ ಹೆಚ್ಚಳ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳು ಮತ್ತು ಅಲ್ಟ್ರಾ ಮೆಗಾ ವಿದ್ಯುತ್‌ ಘಟಕಗಳಂಥ ಅದ್ಭುತಗಳನ್ನು ಸೃಷ್ಟಿಸಿದೆ.

ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ ಪಿಸಿಐ) 2009 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು ಮತ್ತು ಆಧಾರ್ ನ್ನು ಆವಿಷ್ಕರಿಸಲಾಯಿತು; ಆಧಾರ್ ಆಧಾರಿತ ಡಿಜಿಲಾಕರ್ ಮತ್ತು ಯುಪಿಐನಂತಹ ಅಪ್ಲಿಕೇಶನ್‌ಗಳನ್ನು ರೂಪಿಸಲಾಯಿತು. ಭಾರತೀಯರು ಹೆಮ್ಮೆಪಡಬಹುದಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಬಹುಪಾಲು ರೂಪುಗೊಂಡವು. ಬಿಜೆಪಿ ಆಧಾರ್ ನ್ನು ವಿರೋಧಿಸಿತು, ಸರಕು ಮತ್ತು ಸೇವಾ ತೆರಿಗೆಯನ್ನು ವಿರೋಧಿಸಿತು.

ಜಾಗತಿಕ ಪ್ರತಿಷ್ಠೆ ಹೆಚ್ಚಳ: ಭಾರತದ ಜಾಗತಿಕ ಖ್ಯಾತಿ ಹೆಚ್ಚಲು ತಾನು ಕಾರಣ ಎಂದು ಬಿಜೆಪಿ ಹೇಳುತ್ತದೆ. ಆದರೆ, ಅಲಿಪ್ತ ಚಳವಳಿ (ಎನ್‌ಎಎಂ) ನಾಯಕನಾಗಿ ಭಾರತವು ಜಾಗತಿಕ ವೇದಿಕೆಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಬಾಂಗ್ಲಾ ದೇಶದ ವಿಮೋಚನೆ ಸಮಯದಲ್ಲಿ ಭಾರತವನ್ನು ಹೆದರಿಸಲು ಅಮೆರಿಕ ಏಳನೇ ನೌಕಾಪಡೆಯನ್ನು ಕಳುಹಿಸಿತ್ತು. ಆದರೆ, ಪಾಕಿ ಸ್ತಾನದ ಮೂರು ದಶಲಕ್ಷ ಜನರ ಹತ್ಯೆಯ ರಕ್ತಸಿಕ್ತ ಚರಿತ್ರೆಯನ್ನು ಇಂದಿರಾ ಗಾಂಧಿ ಅವರು ಸೋವಿಯತ್ ಬೆಂಬಲದಿಂದ ಹಿಮ್ಮೆಟ್ಟಿಸಿದರು ಮತ್ತು ಬಂಗಾಳ ಕೊಲ್ಲಿಯಿಂದ ಅಮೆರಿಕನ್ ನೌಕೆಗಳನ್ನು ಓಡಿಸಿದರು. ವಿಯೆಟ್ನಾಂ ಮತ್ತು ಕ್ಯೂಬಾ ಮಾತ್ರ ಅಮೆರಿಕದ ಶಕ್ತಿ ವಿರುದ್ಧ ನಿಂತ ಮತ್ತು ಮೇಲುಗೈ ಸಾಧಿಸಿದ ಇತರ ದೇಶಗಳಾಗಿವೆ.

ಸೋವಿಯತ್ ಒಕ್ಕೂಟದ ಅವನತಿ ಮತ್ತು ಚೀನಾದ ಉದಯದಿಂದ ವಿದೇಶಿ ನೀತಿಯಲ್ಲಿ ಹೊಸ ಆದ್ಯತೆಗಳು ಮತ್ತು ಹೊಸ ಅವಕಾಶಗಳು ಸೃಷ್ಟಿಯಾದವು. ನರಸಿಂಹ ರಾವ್ ಅವರು ʼಪೂರ್ವದೆಡೆಗೆ ನೋಟʼ ನೀತಿಯನ್ನು ರೂಪಿಸಿದರು (ನರೇಂದ್ರ ಮೋದಿ ನಂತರ ಇದನ್ನು 'ಆಕ್ಟ್ ಈಸ್ಟ್' ಎಂದು ಬದಲಿಸಿದರು). ಚೀನಾವನ್ನು ನಿಯಂತ್ರಿಸಲು ಪ್ರಬಲ ಭಾರತದ ಅಗತ್ಯವಿದೆ ಎಂಬುದು ಪ್ರಮುಖ ಶಕ್ತಿಗಳಿಗೆ ಅರ್ಥವಾಯಿತು.

ಪರಮಾಣು ಒಪ್ಪಂದ: ಅಮೆರಿಕದ ಜಾರ್ಜ್ ಬುಷ್ ಆಡಳಿತ ಭಾರತದೊಂದಿಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿತು. ಪರಮಾಣು ಒಪ್ಪಂದವು ವಿಶ್ವದ ರಾಷ್ಟ್ರಗಳಲ್ಲಿ ದೇಶದ ಗೌರವವನ್ನು ಹೆಚ್ಚಿಸಿದ ಮಹತ್ವದ ತಿರುವು. ಇದು ಭಾರತಕ್ಕೆ ವಿಧಿಸಿದ್ದ ತಂತ್ರಜ್ಞಾನ ನಿರಾಕರಣೆಯಿಂದ ಮುಕ್ತಗೊಳಿಸಿತು.ಕ್ವಾಡ್‌ನಲ್ಲಿ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯದೊಂದಿಗೆ ಪಾಲುದಾರಿಕೆಗೆ ಬಾಗಿಲು ತೆರೆಯಿತು.

ಪರಮಾಣು ಒಪ್ಪಂದವನ್ನು ಕೆಡಿಸಲು ಯಾವ ಪಕ್ಷ ಹೋರಾಟ ನಡೆಸಿತು ಮತ್ತು ಅದನ್ನು ರಕ್ಷಿಸಲು ಯಾವ ಪಕ್ಷ ಮುಂದಾಯಿತು? ಬಿಜೆಪಿ ಮತ್ತು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ಪರಮಾಣು ಒಪ್ಪಂದದ ವಿರುದ್ಧ ಇದ್ದರು; ಮನಮೋಹನ್ ಸಿಂಗ್ ಸರ್ಕಾರವು ಪರಮಾಣು ಒಪ್ಪಂದವನ್ನು ಜಾರಿಗೊಳಿಸಲು, ಬಿಜೆಪಿ ತಂದ ಅವಿಶ್ವಾಸ ನಿರ್ಣಯವನ್ನು ಎದುರಿಸಬೇಕಾಯಿತು.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಆರ್ಥಿಕ ಸವಾಲುಗಳಿಗೆ ಜಾಗತಿಕ ನೀತಿ- ಪ್ರತಿಕ್ರಿಯೆಯನ್ನುರೂಪಿಲಸು ಬುಷ್, ಜಿ20 ಶೃಂಗಸಭೆಗಳನ್ನು ಆರಂಭಿಸಿದರು. ಅದರಲ್ಲಿ ಭಾರತ ಸ್ವಾಭಾವಿಕವಾಗಿ ಪಾಲ್ಗೊಂಡಿದೆ ಮತ್ತು ಅದರ ಅಧ್ಯಕ್ಷತೆ ಪ್ರತಿ ವರ್ಷ ಬದಲಾಗುತ್ತದೆ. ಅಧ್ಯಕ್ಷತೆ ವಹಿಸುವ ದೇಶವು ಶೃಂಗಸಭೆಯನ್ನು ಆಯೋಜಿಸುತ್ತದೆ.

ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಮಾರುಕಟ್ಟೆಗಳಾದ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾಗಳು ಸೇರಿ ಬ್ರಿಕ್ಸ್‌ ಗುಂಪು ಆರಂಭವಾಯಿತು. 2009 ರಲ್ಲಿ ಮೊದಲ ಶೃಂಗಸಭೆ ನಡೆಯಿತು. ಆನಂತರ ದಕ್ಷಿಣ ಆಫ್ರಿಕಾ ಸೇರಿಕೊಂಡಿತು. ಮೋದಿ ಅಭಿಮಾನಿಗಳು ನಂಬುವಂತೆ, ಬ್ರಿಕ್ಸ್‌ ಆರಂಭಿಸಿದ್ದು ಮೋದಿ ಅವರಲ್ಲ.

ವಿಜ್ಞಾನ ಕ್ಷೇತ್ರ  ಮತ್ತು ತೆರಿಗೆ: ಭಾರತೀಯ ವಿಜ್ಞಾನದ ಬೆಳವಣಿಗೆಗೆ ಬಿಜೆಪಿ ಕಾರಣವೇ? ಹೋಮಿ ಭಾಭಾ ಅವರ ಶಿಫಾರಸಿನ ಮೇರೆಗೆ ನೆಹರೂ ಅವರು 1962 ರಲ್ಲಿ ಸ್ಥಾಪಿಸಿದ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಆಯೋಗದ ಮೂಲವನ್ನು ಮುಚ್ಚಿ ಹಾಕಲು ಇಸ್ರೋ( ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ವೆಬ್‌ಸೈಟ್ ಅನ್ನು ಮರುವಿನ್ಯಾಸಗೊಳಿಸಿದ್ದು ಬಿಜೆಪಿ ಕೊಡುಗೆ. ಈ ಮೂಲಕ ಬಿಜೆಪಿ ಟ್ರೋಲ್‌ಗಳು ನೆಹರೂ ಅವರಿಗೂ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ತಪ್ಪು ಮಾಹಿತಿ ಹರಡಿದವು.

ತೆರಿಗೆ ವಿಷಯದಲ್ಲಿ ಬಿಜೆಪಿ ಹೆಚ್ಚು ಉದಾರವಾಗಿದೆಯೇ? 1997 ರಲ್ಲಿ ಪಿ. ಚಿದಂಬರಂ ಅವರು ರೂಪಿಸಿದ ವೈಯಕ್ತಿಕ ಆದಾಯ ತೆರಿಗೆ ದರಗಳು 15 ವರ್ಷಗಳ ನಂತರವೂ ಉಳಿದುಕೊಂಡಿವೆ. ಕಾರ್ಪೊರೇಟ್ ತೆರಿಗೆಯ ಪರಿಣಾಮಕಾರಿ ದರ ನಾಮಮಾತ್ರದ ದರಕ್ಕಿಂತ ಕಡಿಮೆಯಿದೆ. ಆದರೆ, ಮೋದಿ ಆಡಳಿತದಲ್ಲಿ ಶೇ.21 ರಿಂದ ಶೇ.27 ಕ್ಕೆ ಏರಿತು. 

ಪಿತ್ರಾರ್ಜಿತ ತೆರಿಗೆ/ಎಸ್ಟೇಟ್ ಸುಂಕದ ಬಗ್ಗೆ ಏನು? ಮೃತರ ಆಸ್ತಿ ಮೇಲೆ ಎಸ್ಟೇಟ್ ತೆರಿಗೆ ವಿಧಿಸಲಾಗುತ್ತದೆ ಮತ್ತು ತೆರಿಗೆ ಪಾವತಿಸಿದ ನಂತರ ಉಳಿದಿರುವುದನ್ನು ಉತ್ತರಾಧಿಕಾರಿ ಪಡೆಯುತ್ತಾನೆ. ಪ್ರತಿಯಾಗಿ ಉತ್ತರಾಧಿಕಾರ ತೆರಿಗೆಯನ್ನು ಉತ್ತರಾಧಿಕಾರಿ ಪಾವತಿಸುತ್ತಾನೆ. ತೆರಿಗೆ ಯಲ್ಲಿ ಯಾವುದೇ ತಪ್ಪು ಅಥವಾ ಸಮಾಜವಾದ ಇಲ್ಲ. ಬಿಜೆಪಿಯ ಮಾಜಿ ಸಚಿವ ಜಯಂತ್ ಸಿನ್ಹಾ ಮತ್ತು ಬಿಜೆಪಿ ಮೈತ್ರಿಕೂಟದ ಮೋಹನ್‌ದಾಸ್ ಪೈ ಅವರು ದೇಶದಲ್ಲಿಈ ತೆರಿಗೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪಶ್ಚಿಮ ಏನು ಮಾಡುತ್ತದೆ?:  ಪಾಶ್ಚಿಮಾತ್ಯ ಬಂಡವಾಳಶಾಹಿ ದೇಶಗಳು ತೆರಿಗೆಯನ್ನು ವಿಧಿಸುತ್ತವೆ. ಆದರೆ, ಇದು ಪ್ರಾಯೋಗಿಕವಾಗಿ ಕೆಲಸ ಮಾಡುವುದಿಲ್ಲ. ಶ್ರೀಮಂತರು ತೆರಿಗೆ ಹೊರೆ ತಪ್ಪಿಸಲು ಮಾರ್ಗೋಪಾಯ ಕಂಡುಕೊಳ್ಳು ತಮ್ಮ ಸಂಪತ್ತನ್ನು ಬಳಸುತ್ತಾರೆ. ಅಮೆರಿಕದಲ್ಲಿ

ಹೆಚ್ಚು ತೆರಿಗೆಗಳ ಹೊರತಾಗಿಯೂ, ಸಂಗ್ರಹ ಜಿಡಿಪಿಯ ಶೇ.0.6 ಇರುತ್ತದೆ. ತೆರಿಗೆ ಸಂಗ್ರಹಿಸುವ ವೆಚ್ಚವನ್ನು ಆದಾಯದೊಂದಿಗೆ ಹೋಲಿಸಿದಾಗ, ತೆರಿಗೆಯ ಮುಂದುವರಿಕೆ ಸಮರ್ಥನೀಯವಲ್ಲ ಎಂದು ರಾಜೀವ್ ಗಾಂಧಿ ಸರ್ಕಾರ 1985 ರಲ್ಲಿ ಈ ತೆರಿಗೆಯನ್ನು ರದ್ದುಗೊಳಿಸಿತು. ಪ್ರಧಾನಿ ಆರೋಪಿಸಿದಂತೆ, ತಮ್ಮ ಆಸ್ತಿ ಮೇಲೆ ತೆರಿಗೆ ಪಾವತಿಸುವುದನ್ನು ತಪ್ಪಿಸಲು ತೆಗೆದುಕೊಂಡ ಕ್ರಮ ಇದಲ್ಲ. ಇಂದಿರಾ ಗಾಂಧಿ 1984 ರಲ್ಲಿ ಹತ್ಯೆಯಾದರು. 

ಸರಳ ಸತ್ಯವೆಂದರೆ, ಭಾರತದಲ್ಲಿ ತುಂಬಾ ಕಡಿಮೆ ತೆರಿಗೆ ಸಂಗ್ರಹವಾಗುತ್ತದೆ: ಜಿಡಿಪಿಯ ಶೇ.17; ಶ್ರೀಮಂತ ಒಇಸಿಡಿ ದೇಶಗಳ ಸರಾಸರಿ ಅರ್ಧದಷ್ಟು. ದೇಶಗಳು ಅಭಿವೃದ್ಧಿ ಹೊಂದಿದಂತೆ, ಆರ್ಥಿಕತೆ ಸಂಕೀರ್ಣವಾಗುತ್ತದೆ ಮತ್ತು ಸರ್ಕಾರ ಸಾಮೂಹಿಕವಾಗಿ ಮಾಡುವ ಖರ್ಚಿನ ಮೊತ್ತ ಹೆಚ್ಚುತ್ತದೆ. ಒಇಸಿಡಿಯಲ್ಲಿ ಇದು ಜಿಡಿಪಿಯ ಶೇ. 46ಕ್ಕಿಂತ ಹೆಚ್ಚು. ಫ್ರಾನ್ಸ್, ಇಟಲಿ ಮತ್ತು ಗ್ರೀಸ್‌ನಲ್ಲಿ ಸರ್ಕಾರದ ವೆಚ್ಚವು ಜಿಡಿಪಿಯ ಶೇ.57 ಕ್ಕಿಂತ ಹೆಚ್ಚುಹಾಗೂ ಯುರೋಪಿಯನ್‌ ಒಕ್ಕೂಟದ ಸದಸ್ಯರಿಗೆ ಇದು ಜಿಡಿಪಿಯ ಶೇ.50ಕ್ಕಿಂತ ಹೆಚ್ಚು ಇದೆ.

ತೆರಿಗೆ ಬೇಕು: ದೇಶ ಪ್ರಗತಿ ಹೊಂದಿದಂತೆ, ಜಿಡಿಪಿ ಹೆಚ್ಚಾಗುತ್ತದೆ ಮತ್ತು ತೆರಿಗೆ ಸಂಗ್ರಹ ಕೂಡ ಹೆಚ್ಚಬೇಕಾಗುತ್ತದೆ. ಎರಡೂ ಪಕ್ಷಗಳು ಇದನ್ನು ಒಪ್ಪಿಕೊಳ್ಳಬೇಕು. ಆದರೆ, ತೆರಿಗೆ ದರ ಕಡಿಮೆ ಮಾಡುವುದರಿಂದ ತೆರಿಗೆ ಸಂಗ್ರಹ ಹೆಚ್ಚುತ್ತದೆ. ಜೊತೆಗೆ ಆಡಳಿತ ಮತ್ತು ಅನುಸರಣೆ ಸುಧಾರಿಸುತ್ತದೆ.  ಹಾಲಿ ಸರ್ಕಾರ ಜಿಎಸ್‌ಟಿಯಿಂದ ಸ್ವಯಂಚಾಲಿತವಾಗಿ ಸೃಷ್ಟಿಯಾದ ಆಡಿಟ್ ಟ್ರೇಲ್‌ಗಳನ್ನು ಅನುಸರಿಸದೆ ಇರುವ ತಪ್ಪಿತಸ್ಥರಿಂದ ತೆರಿಗೆ ಸಂಗ್ರಹಿಸದೆ ತಪ್ಪು ಮಾಡಿದೆ. ಒಳಸುರಿ ತೆರಿಗೆ ಕ್ರೆಡಿಟ್‌ನ ವಿನ್ಯಾಸವು ವಂಚನೆಗೆ ಅವಕಾಶ ಮಾಡಿಕೊಡುತ್ತದೆ. 

ಸಬ್ಸಿಡಿಗಳ ಆಮಿಷ: ಕಾಂಗ್ರೆಸ್ಸಿನ ಹಣ ವರ್ಗಾವಣೆ ಮತ್ತು ಸಬ್ಸಿಡಿಗಳ ಬಗ್ಗೆ ಬಿಜೆಪಿ ಆಕ್ರಮಣಕಾರಿಯಾಗಿದೆ. ಇಂತಹ ಸಬ್ಸಿಡಿಗಳಿಂದಾಗಿ ಅನೇಕ ಜನರು ಬಿಜೆಪಿಗೆ ಮತ ಹಾಕುತ್ತಾರೆ. ಈ ವಿಷಯದಲ್ಲಿ ಎರಡೂ ಪಕ್ಷಗಳಲ್ಲಿ ಯಾವುದೇ ಭಿನ್ನತೆ ಇಲ್ಲ.

ಮೋದಿ ಸರ್ಕಾರವು ಕಾರ್ಯನೀತಿ ಬಗ್ಗೆ ಅಪನಂಬಿಕೆ ಹೊಂದಿದ್ದು, ಹಲವು ಕಾರ್ಯಕ್ರಮಗಳ ಮೇಲೆ ನಂಬಿಕೆ ಇರಿಸಿದೆ. ಕಾರ್ಯನೀತಿಯ ಕಡೆಗಣಿಸುವಿಕೆಯು ಅಸ್ತವ್ಯಸ್ತ ಆಯ್ಕೆಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ, ನೋಟು ಅಮಾನ್ಯೀಕರಣ ಮತ್ತು ಆಯ್ದ ವಲಯಗಳಲ್ಲಿ ಉತ್ಪಾದನೆಯನ್ನುಹೆಚ್ಚಿಸಲು ಸಬ್ಸಿಡಿಗಳ ಜೊತೆಗೆ ಸ್ಪರ್ಧಾತ್ಮಕತೆಯನ್ನು ನಾಶಪಡಿಸುವ ರಕ್ಷಣೆಯಂಥ ಆಯ್ಕೆಗಳು.

ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಆಯ್ಕೆ ಇರುವುದು ಆರ್ಥಿಕ ನೀತಿಯ ಕ್ಷೇತ್ರದಲ್ಲಿ ಅಲ್ಲ.ಬದಲಾಗಿ, ರಾಜಕೀಯದಲ್ಲಿ.

Tags:    

Similar News