ಆರ್‌ಎಸ್‌ಎಸ್ ಒಂದು ರಾಜಕೀಯ ಸಂಘಟನೆ, ಸಾಂಸ್ಕೃತಿಕ ಸಂಘಟನೆಯಲ್ಲ
1925 ರಲ್ಲಿ ಪ್ರಾರಂಭವಾದ ಆರ್‌ಎಸ್‌ಎಸ್, ಎಂದಿಗೂ ಸಾಂಸ್ಕೃತಿಕ ಸಂಸ್ಥೆಯಾಗಿರಲಿಲ್ಲ; ಬದಲಾಗಿ, ಜನಸಂಘ ಮತ್ತು ಬಿಜೆಪಿ ಮೂಲಕ ರಾಷ್ಟ್ರೀಯ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿದೆ.;
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್ ) ಒಂದು ರಾಜಕೀಯ ಸಂಘಟನೆಯೇ ಅಥವಾ ಅಲ್ಲವೇ ಎಂಬ ಚರ್ಚೆ ಅಥವಾ ಭಿನ್ನಾಭಿಪ್ರಾಯಗಳು, ಈ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವವರು ರಾಜಕೀಯ ಎಂದರೆ ಏನೆಂದು ಪರಿಗಣಿಸುತ್ತಾರೆ ಎಂಬುದನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ.
ಕಳೆದ ತಿಂಗಳು ಕೇಂದ್ರ ಸರ್ಕಾರವು ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿಈ ವಿಷಯ ವಿಶೇಷ ಮಹತ್ವ ಪಡೆದುಕೊಂಡಿದೆ; ಸರ್ಕಾರಿ ನೌಕರರು ಆರ್‌ಎಸ್‌ಎಸ್ ಶಾಖೆಗಳು ಮತ್ತು ಸಂಘಟನೆಯ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿದ್ದ ಸುಮಾರು ಆರು ದಶಕಗಳ ಹಿಂದಿನ ಆದೇಶವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಇಂದಿರಾ ಗಾಂಧಿ ಅವರು ಪ್ರಧಾನಿಯಾದ 10 ತಿಂಗಳ ನಂತರ 1966 ರ ನಿಷೇಧ ಆದೇಶವನ್ನು 1970 ಮತ್ತು 1980ರಲ್ಲಿ ನವೀಕರಿಸಲಾಯಿತು. ಆದರೆ, ಈ ನಿಷೇಧವು ಸಾರ್ವಜನಿಕ ಸೇವೆಯಲ್ಲಿರುವವರು ಆರ್‌ಎಸ್‌ಎಸ್ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳುವುದನ್ನು ತಡೆಯಲಿಲ್ಲ. 1980 ರ ದಶಕದ ನಂತರ ಮತ್ತು ವಿಶೇಷವಾಗಿ 2014 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಆರ್‌ಎಸ್‌ಎಸ್ ಬೆಳವಣಿಗೆ ಮುಂದುವರಿಯಿತು.
ರಾಜಕೀಯ ಎಂದರೇನು?: ʻರಾಜಕೀಯʼವನ್ನು ಸಾಮಾನ್ಯವಾಗಿ ಸರ್ಕಾರದ ನೀತಿಯನ್ನು ಮಾರ್ಗದರ್ಶನ ಮಾಡುವ ಅಥವಾ ಪ್ರಭಾವಿಸುವ ಕಲೆ ಅಥವಾ ವಿಜ್ಞಾನ ಎಂದು ಹೇಳಲಾಗುತ್ತದೆ; ಸರ್ಕಾರದ ರಾಜಕೀಯ ಕ್ರಿಯೆಗಳು, ಆಚರಣೆಗಳು ಅಥವಾ ನೀತಿಗಳ ಮೇಲೆ ಗೆಲುವು ಮತ್ತು ನಿಯಂತ್ರಣ ಸಾಧಿಸಲು ಅಥವಾ, ಸರ್ಕಾರದ ಚಟುವಟಿಕೆಗಳು, ಕಾನೂನು ರೂಪಿಸುವ ಸಂಸ್ಥೆಗಳ ಸದಸ್ಯರು ಅಥವಾ ದೇಶವನ್ನು ಆಳುವ ರೀತಿಯಲ್ಲಿ ಪ್ರಭಾವ ಬೀರಲು ಪ್ರಯತ್ನಿಸುವ ಜನರಿಗೆ ಸಂಬಂಧಿಸಿದ ಕಲೆ ಅಥವಾ ವಿಜ್ಞಾನವೇ ರಾಜಕೀಯ ಎಂದು ಹೇಳಬಹುದು.
ರಾಜಕೀಯ ಕುರಿತು ತಾಂತ್ರಿಕವಲ್ಲದ ನಿಘಂಟುಗಳಲ್ಲಿ ಹಲವು ವ್ಯಾಖ್ಯಾನಗಳು ಅಥವಾ ವಿವರಣೆಗಳು ಕಂಡುಬರುತ್ತವೆ. ರಾಜಕೀಯ ಎನ್ನುವುದು ಬಹಳ ವಿಶಾಲವಾದ ಪದ; ಆದ್ದರಿಂದ, ಅದು ಏಕಕಾಲದಲ್ಲಿ ಒಂದು ಅಥವಾ ಹಲವು ಅರ್ಥಗಳನ್ನು ಕೊಡಬಹುದು.
ಆರ್‌ಎಸ್‌ಎಸ್ ರಾಜಕೀಯ ಸಂಘಟನೆಯೇ?: ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳು ಹಾಗೂ ಅದರ ಮುಖಂಡರು, ವಿಶೇಷವಾಗಿ ರಾಷ್ಟ್ರೀಯ ಮತ್ತು ಹಲವು ರಾಜ್ಯ ಸರ್ಕಾರಗಳಲ್ಲಿ ಇರುವವರು, 1925ರಲ್ಲಿ ಸ್ಥಾಪನೆಯಾದ ಸಂಘಟನೆಯನ್ನು ರಾಜಕೀಯೇತರ ಎಂದು ಪ್ರತಿಪಾದಿಸಲು ಇಷ್ಟಪಡುತ್ತಾರೆ. ಏಕೆಂದರೆ, ಅದು ಚುನಾವಣೆಯಲ್ಲಿ ನೇರವಾಗಿ ಸ್ಪರ್ಧಿಸುವುದಿಲ್ಲ.
ಆದರೆ, ಆರ್‌ಎಸ್‌ಎಸ್ ಚುನಾವಣೆಗಳಲ್ಲಿ ನೇರವಾಗಿ ಸ್ಪರ್ಧಿಸದಿದ್ದರೂ, ಸ್ಪರ್ಧಿಸುವ ಭಾರತೀಯ ಜನತಾ ಪಕ್ಷ (ಬಿಜೆಪಿ)ದೊಂದಿಗೆ ಸಂಬಂಧ ಹೊಂದಿದೆ; ಮತ್ತು, ಇದರಿಂದ ಆರ್‌ಎಸ್‌ಎಸ್‌ಗೆ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ ಎಂದು ಹೇಳಲು ಆಗುವುದಿಲ್ಲವೇ?
ಬಿಜೆಪಿ ಕೊಂಡಿಗಳು: ಆರ್‌ಎಸ್‌ಎಸ್ ಮತ್ತು ಬಿಜೆಪಿಯ ನಡುವಿನ ಪರಸ್ಪರ ಅವಲಂಬನೆಯು ಹಲವಾರು ವಿಧಗಳಲ್ಲಿ ಸ್ಥಾಪಿತವಾಗಿದೆ; ಇದರಲ್ಲಿ ಅತ್ಯಂತ ಮುಖ್ಯವಾದುದೆಂದರೆ, ಆರ್‌ಎಸ್‌ಎಸ್ ನಿಯಮಿತವಾಗಿ ಬಿಜೆಪಿಗೆ ಹಲವು ನಾಯಕರನ್ನು ತನ್ನದೇ ಸಂಘಟನೆಯಿಂದ ಅಥವಾ ಸಂಘ ಪರಿವಾರ ಎಂದು ಕರೆಯಲ್ಪಡುವ ಸಂಸ್ಥೆಗಳಿಂದ ನಿಯೋಜಿಸುತ್ತದೆ.
ಈ ಅಂಶವನ್ನು ಮರೆಯಬಾರದು- ಮೋದಿ ಅವರ ಸಾರ್ವಜನಿಕ ಜೀವನವು 1970 ರ ದಶಕದ ಆರಂಭದಲ್ಲಿ ಆರ್‌ಎಸ್‌ಎಸ್‌ನೊಂದಿಗೆ ಆರಂಭವಾಯಿತು ಮತ್ತು 1987ರಲ್ಲಿ ಅವರನ್ನು ಮೊದಲು ಗುಜರಾತ್ ಹಾಗೂ ಆನಂತರ ಪಕ್ಷದ ರಾಷ್ಟ್ರೀಯ ಕಾರ್ಯಕ್ಕಾಗಿ ಬಿಜೆಪಿಗೆ ʻವರ್ಗಾವಣೆʼ ಮಾಡಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಳಗೆ ಅಥವಾ ಪಕ್ಷದ ಸಂಘಟನೆಗಳಲ್ಲಿ ನಾಗಪುರದ ಪ್ರಧಾನ ಕಚೇರಿಯ ನಾಯಕರಿಂದ ದೀಕ್ಷೆ ಪಡೆದ ಹಲವಾರು ಇತರ ಬಿಜೆಪಿ ನಾಯಕರು ಇದ್ದಾರೆ.
ಭಾಗವತ್ ಅವರ ಭಾಷಣ: ಆದರೆ, ನಾವು ಒಂದು ಕ್ಷಣ ಅಂತಹ ʻಸಂಪರ್ಕʼಗಳನ್ನು ಬದಿಗಿಟ್ಟು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಇತ್ತೀಚಿನ ಎರಡು ಹೇಳಿಕೆಗಳನ್ನು ಅವಲೋಕಿಸೋಣ. ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ನಂತರ, ಅವರು ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದರು:
* ನಿಜವಾದ ಜನಸೇವಕ ಅಹಂಕಾರವನ್ನು ಹೊಂದಿರುವುದಿಲ್ಲ ಹಾಗೂ ಘನತೆಯಿಂದ ವರ್ತಿಸುತ್ತಾನೆ
* ಈ ಬಾರಿಯ ಲೋಕಸಭೆ ಚುನಾವಣೆ ಅನಗತ್ಯವಾಗಿ ಕಹಿಯಾಗಿತ್ತು; ʻಸಭ್ಯತೆಯಿಂದ ವರ್ತಿಸಲಿಲ್ಲʼ.
* ಇನ್ನೊಂದು ಪಕ್ಷದವರು ಪ್ರಸ್ತುತಪಡಿಸುವ ವಿಭಿನ್ನ ದೃಷ್ಟಿಕೋನವನ್ನು ಪರಿಗಣಿಸಬೇಕು ಮತ್ತು ಅದರ ಬಗ್ಗೆ ಸಂವಾದ ನಡೆಸಬೇಕು.
* ಆದರೆ, ಎರಡೂ ಕಡೆಯವರು ಈ ಚುನಾವಣೆಯಲ್ಲಿ ಸಾಮಾಜಿಕ ವಿಭಜನೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಪರಸ್ಪರ ಜಾತಿ ನಿಂದನೆ ಮಾಡಿದರು.
* ಯಾವುದೇ ಕಾರಣವಿಲ್ಲದೆ, ಸಂಘವನ್ನು ಇದರಲ್ಲಿ ಎಳೆದು ತರಲಾಯಿತು.ತಂತ್ರಜ್ಞಾನವನ್ನು ಬಳಸಿಕೊಂಡು ಅಸತ್ಯಗಳನ್ನು ಹರಡಲಾಯಿತು.
* ವಿವಿಧ ಗುಂಪುಗಳ ನಡುವೆ ಎಂದಿಗೂ ಸಂಪೂರ್ಣ ಸಹಮತವಿಲ್ಲದಿದ್ದರೂ, ಸಮಾಜ ಒಟ್ಟಾಗಿ ಕೆಲಸ ಮಾಡಲು ಆದೇಶಿಸಿದಾಗ, ಒಮ್ಮತವನ್ನು ರೂಪಿಸಬೇಕು.
* ಚುನಾವಣೆಯನ್ನು ಯುದ್ಧವೆಂದು ಪರಿಗಣಿಸದೆ, ಕೇವಲ ಸ್ಪರ್ಧೆ ಎಂದು ಪರಿಗಣಿಸಬೇಕು; ಎದುರಾಳಿಗಳನ್ನು ಶತ್ರು ಎಂದು ಪರಿಗಣಿಸದೆ, ಪ್ರತಿಪಕ್ಷ ಅಥವಾ ಪ್ರತಿಸ್ಪರ್ಧಿ ಎಂದು ಪರಿಗಣಿಸಬೇಕು.
ಸಾಂಸ್ಕೃತಿಕ ಎನ್ನುವುದು ಏನೂ ಇಲ್ಲ: ಭಾಗವತ್ ಅವರ ಭಾಷಣದ ಪ್ರಮುಖ ಅಂಶಗಳು ರಾಜಕೀಯವಾಗಿದ್ದವು. ಅವರು ಸಂಸತ್ತಿನ ಚುನಾವಣೆಗಳ ಬಗ್ಗೆ ವ್ಯಾಖ್ಯಾನ ಮಾಡಿದರು ಮತ್ತು ಜನಾದೇಶದ ವಿಶ್ಲೇಷಣೆ ಮಾಡಿದರು; ಬಿಜೆಪಿ ಸೇರಿದಂತೆ ಎರಡೂ ಪಕ್ಷಗಳು ಯಾವ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಅಂಶಗಳಲ್ಲಿ ಸಾಂಸ್ಕೃತಿಕ ಎನ್ನುವಂಥದ್ದು ಏನೂ ಇಲ್ಲ; ಇದನ್ನು ಆರ್‌ಎಸ್‌ಎಸ್ ನ ಪ್ರಾಥಮಿಕ ಲಕ್ಷಣವೆಂದು ಹೇಳಲಾಗುತ್ತದೆ. ಅಷ್ಟಲ್ಲದೆ, ಈ ಬಾರಿ ಕೆಲವರು ʻಸೂಪರ್‌ಮ್ಯಾನ್ʼ ಆಗಲು ಬಯಸುತ್ತಿದ್ದಾರೆ ಎಂದರು; ಆನಂತರ, ʻದೇವರುʼ, ʼಭಗವಾನ್ ʼ ಆಗಲು ಬಯಸುತ್ತಾರೆ ಮತ್ತು ʻವಿಶ್ವರೂಪʼ ಸ್ಥಾನಮಾನದ ಆಕಾಂಕ್ಷೆ ಹೊಂದಿದ್ದಾರೆ ಎಂದು ಭಾಗವತ್ ಮತ್ತೊಂದು ಹೇಳಿಕೆ ನೀಡಿದರು.
ಈ ಹೇಳಿಕೆಗಳು ಸಂಸ್ಕೃತಿಯ ಯಾವುದೇ ಕುರುಹುಗಳನ್ನು ಹೊಂದಿಲ್ಲ; ಬದಲಿಗೆ ಮಾನವನ ಸಣ್ಣತನ ಮತ್ತು ಬೆಳೆಯುತ್ತಿರುವ ಮಹತ್ವಾಕಾಂಕ್ಷೆಯ ಉನ್ಮಾದದ ಬಗ್ಗೆ ಮಾತನಾಡಿವೆ; ಈ ಲಕ್ಷಣಗಳು ಕಳೆದ ಒಂದು ದಶಕದಲ್ಲಿ ರಾಜಕೀಯದಲ್ಲಿ ತೀವ್ರವಾಗಿ ವ್ಯಕ್ತವಾಗಿದೆ.
ಹಿಂದುತ್ವ ರಾಜಕಾರಣ: ಆರ್‌ಎಸ್‌ಎಸ್ ಆರಂಭದಿಂದಲೂ ರಾಜಕೀಯದಲ್ಲಿ ಮುಳುಗಿದೆ. ಇದರ ಸಂಸ್ಥಾಪಕರಾದ ಕೇಶವ್ ಬಲಿರಾಮ್ ಹೆಡಗೆವಾರ್ ಅವರು ವಿನಯ್ ದಾಮೋದರ್ ಸಾವರ್ಕರ್ ಅವರ ʻಎಸೆನ್ಷಿಯಲ್ಸ್ ಆಫ್ ಹಿಂದುತ್ವʼ ಪುಸ್ತಕದಿಂದ ಪ್ರೇರೇಪಿಸಲ್ಪಟ್ಟರು. ಪುಸ್ತಕದ ಪ್ರಕಟಣೆ ಸಮಯವು ಆಗ ಕೇರಳದಲ್ಲಿ ಮೋಪ್ಲಾಗಳ ಗಲಭೆಯಿಂದ ಮುಸ್ಲಿಮರ ಮೇಲಿನ ಕೋಪ ಹೆಚ್ಚಳ ಸಂದರ್ಭಕ್ಕೆ ತಾಳೆಯಾಗುತ್ತದೆ.
ನಾಗ್ಪುರದಲ್ಲಿ ನಡೆದ ಹಿಂದೂ-ಮುಸ್ಲಿಂ ಗಲಭೆಗಳು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಹೆಡಗೆವಾರ್ ಅವರ ಬಹಿರಂಗ ಪ್ರಯತ್ನಗಳು ಆರ್‌ಎಸ್‌ಎಸ್ ಸ್ಥಾಪನೆಗೆ ಹಿನ್ನೆಲೆಯನ್ನು ಒದಗಿಸಿದವು.
ಸಾವರ್ಕರ್ ಅವರ ಪುಸ್ತಕ ಮತ್ತು ಹಿಂದುತ್ವದ ಕಲ್ಪನೆಗಳನ್ನು ಹೆಡಗೆವಾರ್ ಅವರು ಕ್ರೋಡೀಕರಿಸಿದ ರೀತಿ ಮತ್ತು ಭಾರತೀಯ ರಾಷ್ಟ್ರ ಮತ್ತು ಅದರ ಪ್ರಜೆಗಳ ರಾಷ್ಟ್ರೀಯತೆಯನ್ನು ಅವರ ಧಾರ್ಮಿಕ ಗುರುತಿನ ಪರಿಭಾಷೆಯಲ್ಲಿ ವ್ಯಾಖ್ಯಾನಿಸಿದರು. ಆದರೆ, ಅದಕ್ಕೆ ಸಂಸ್ಕೃತಿಯ ಕವಚವನ್ನು ನೀಡಲಾಯಿತು.
ಆರಂಭಿಕ ವರ್ಷಗಳು: ಆರ್‌ಎಸ್‌ಎಸ್‌ನ ಆರಂಭದಿಂದ ಇಲ್ಲಿಯವರೆಗೆ, ʻಸಂಸ್ಕೃತಿʼ ಎಂಬ ಪದವು ʻಧಾರ್ಮಿಕʼ ಪದವನ್ನು ಹಿಂದಿಕ್ಕುತ್ತದೆ. ಆದರೆ, ಎರಡನೆಯದನ್ನು ಹಿಂದೂ ರಾಷ್ಟ್ರೀಯತೆಯ ಪಠ್ಯಗಳಲ್ಲಿ ವಿರಳವಾಗಿ ಬಳಸಲಾಗುತ್ತದೆ.
ಆರೆಸ್ಸೆಸ್‌ನ ಆರಂಭಿಕ ವರ್ಷಗಳಲ್ಲಿ, ಅದರ ರಾಜಕೀಯ ಸ್ವರೂಪದ ಬಗ್ಗೆ ಯಾವುದೇ ಅಸ್ಪಷ್ಟತೆ ಇಲ್ಲದಿದ್ದರೂ, ಅದರ ಹಲವು ನಾಯಕರು ಮತ್ತು ಕಾರ್ಯಕರ್ತರು ಏಕಕಾಲದಲ್ಲಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು.
ಆರ್‌ಎಸ್‌ಎಸ್ ಒಂದು ಸಂಘಟನೆಯಾಗಿ ಅಸಹಕಾರ ಚಳವಳಿ ಮತ್ತು ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿಲ್ಲ.ಆದರೆ, ಹೆಡಗೆವಾರ್ ಅವರು 1931ರಲ್ಲಿ ಮುಖ್ಯ ಆಂದೋಲನದ ಒಂದು ಭಾಗವಾದ ಜಂಗಲ್ ಸತ್ಯಾಗ್ರಹದಲ್ಲಿ ವೈಯಕ್ತಿಕ ವಾಗಿ ಭಾಗವಹಿಸಿದ್ದರು. ಆರ್‌ಎಸ್‌ಎಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ʻವೈಯಕ್ತಿಕʼ ಸಾಮರ್ಥ್ಯದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರು ಅನುಮತಿ ನೀಡಿದ್ದರು.
ರಾಜಕೀಯದಲ್ಲಿ ನೇರ ಪಾಲ್ಗೊಳ್ಳುವಿಕೆ: ರಾಜಕೀಯದಲ್ಲಿ ಆರ್‌ಎಸ್‌ಎಸ್‌ನ ನೇರ ಪಾಲ್ಗೊಳ್ಳುವಿಕೆ 1951 ರಲ್ಲಿ ಸಂಭವಿಸಿತು. ಮಹಾತ್ಮ ಗಾಂಧಿಯವರ ಹತ್ಯೆ ನಂತರದಲ್ಲಿ ಸಂಘಟನೆಗೆ ನಿಷೇಧ ವಿಧಿಸಲಾಯಿತು.
ಅಂದಿನ ಸರಸಂಘ ಚಾಲಕ ಎಂ.ಎಸ್. ಗೋಳ್ವಾಲ್ಕರ್ ಅವರ ಆರಂಭಿಕ ಸಂದೇಹಗಳ ಹೊರತಾಗಿಯೂ, ಆರೆಸ್ಸೆಸ್ ರಾಜಕೀಯ ಮುಖ್ಯ ಚೌಕಟ್ಟಿನಲ್ಲಿ ಸಂಘಟನೆಗಳ ಸಂಪರ್ಕ ಹೊಂದಿರಬೇಕು ಎಂಬ ಭಾವನೆಗೆ ಬೆಂಬಲ ನೀಡಿತು.
ಕಾಕತಾಳೀಯವಾಗಿ, ಆಗ ಶ್ಯಾಮಪ್ರಸಾದ್ ಮುಖರ್ಜಿ ಅವರು ಹೊಸ ರಾಜಕೀಯ ಪಕ್ಷವನ್ನು ಹುಡುಕುತ್ತಿದ್ದರು. ಅದೇ ಸಮಯದಲ್ಲಿ ಆರ್‌ಎಸ್‌ಎಸ್ ತನ್ನ ರಾಜಕೀಯ ಉಪಕ್ರಮದ ಮುಖ್ಯಸ್ಥನ ಸ್ಥಾನಕ್ಕೆ ʻಪರಿಚಿತ ಮುಖʼ ವನ್ನು ಹುಡುಕುತ್ತಿತ್ತು.
ಭಾರತೀಯ ಜನಸಂಘವು ಮುಖರ್ಜಿ ಮತ್ತು ಆರ್‌ಎಸ್‌ಎಸ್‌ನ ನೈಜ ರಾಜಕೀಯ ಹಾಗೂ ಪರಸ್ಪರ ಅಗತ್ಯಗಳ ಸಂಯೋಜನೆಯಿಂದ ಬೆಳೆದಿದೆ. ಆನಂತರ, 1970 ರ ದಶಕದ ಮಧ್ಯಭಾಗದಲ್ಲಿ, ನವ ನಿರ್ಮಾಣ ಚಳವಳಿ ಮತ್ತು ಸಂಪೂರ್ಣ ಕ್ರಾಂತಿ ಚಳವಳಿಗಳಲ್ಲಿ ಆರ್‌ಎಸ್‌ಎಸ್ ಸಂಪೂರ್ಣವಾಗಿ ತೊಡಗಿಸಿಕೊಂಡಿತು. ಇದು ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿಯನ್ನು ಹೇರಲು ಕಾರಣವಾಯಿತು.
ತುರ್ತು ಪರಿಸ್ಥಿತಿ ವರ್ಷಗಳು: ತುರ್ತು ಪರಿಸ್ಥಿತಿ ಅವಧಿಯಲ್ಲಿ ನಿರಂಕುಶ ಪ್ರಭುತ್ವದ ವಿರುದ್ಧದ ಹೋರಾಟದಲ್ಲಿ ಆರ್‌ಎಸ್‌ಎಸ್ ಮುಂಚೂಣಿಯಲ್ಲಿತ್ತು. ಜನತಾ ಪಕ್ಷದ ಪತನದ ನಂತರ, ಆರ್‌ಎಸ್‌ಎಸ್ 1977ರಲ್ಲಿ ಸ್ಥಾಪಿಸಿದ ಪಕ್ಷದಿಂದ ಜನಸಂಘದ ನಿರ್ಗಮನವನ್ನು ಅನುಮೋದಿಸಿತು.
ಮತ್ತೊಮ್ಮೆ, ಬಿಜೆಪಿಯು ಆರ್‌ಎಸ್‌ಎಸ್‌ನೊಂದಿಗೆ ನೇರ ಸಂಪರ್ಕವಿಲ್ಲದ ರಾಜಕೀಯ ಪಕ್ಷ ಎಂಬ ಸಾರ್ವಜನಿಕ ನಿಲುವಿನ ನಂತರ, 1985 ರಲ್ಲಿ ಔಪಚಾರಿಕ ಸಂಬಂಧಗಳನ್ನು ಸ್ಥಾಪಿಸಲಾಯಿತು; ಎಲ್.ಕೆ. ಆಡ್ವಾಣಿ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಆರ್‌ಎಸ್‌ಎಸ್ ಅಸ್ತಿತ್ವಕ್ಕೆ ಬಂದ ಸುಮಾರು ನೂರು ವರ್ಷಗಳಲ್ಲಿ ಅದು ಯಾವ ಕಾಲದಲ್ಲೂ ಸಾಂಸ್ಕೃತಿಕ ಸಂಘಟನೆಯಾಗಿರಲಿಲ್ಲ. ಬದಲಾಗಿ, ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಸ್ವಾತಂತ್ರ್ಯಾನಂತರ ಆರಂಭದಲ್ಲಿ ಜನಸಂಘಕ್ಕೆ ಮತ್ತು 1980 ರ ನಂತರದ ಬಿಜೆಪಿಗೆ ಆ ಕೆಲಸ ಬಿಟ್ಟುಕೊಟ್ಟಿತು.
ನಿಯಮಗಳ ಉಲ್ಲಂಘನೆ: ಗಮನಾರ್ಹ ಅಂಶವೆಂದರೆ, ಇತ್ತೀಚಿನ ಸರ್ಕಾರಿ ಆದೇಶವು ಕೇಂದ್ರ ನಾಗರಿಕ ಸೇವೆಗಳ (ನಡತೆ) ನಿಯಮಗಳು1964, ʻಒಕ್ಕೂಟದ ನಾಗರಿಕ ಸೇವೆ ಅಥವಾ ಹುದ್ದೆಗೆ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಗೆ (ರಕ್ಷಣಾ ಸೇವೆಯಲ್ಲಿ ನಾಗರಿಕ ಸೇರಿದಂತೆ) ಅನ್ವಯಿ ಸುತ್ತದೆ,ʼ ಎಂಬುದನ್ನು ಉಲ್ಲಂಘಿಸುತ್ತದೆ.
ಕಾಯಿದೆಯ ನಿಯಮ ಐದು ಸ್ಪಷ್ಟವಾಗಿ ಹೇಳುವುದೇನೆಂದರೆ, ʻಯಾವುದೇ ಸರ್ಕಾರಿ ನೌಕರ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯದಲ್ಲಿ ಭಾಗವಹಿಸುವ ಯಾವುದೇ ಸಂಘಟನೆಯ ಸದಸ್ಯನಾಗಿರಬಾರದು ಅಥವಾ ಅದರೊಂದಿಗೆ ಸಂಬಂಧ ಹೊಂದಿರಬಾರದು ಅಥವಾ ಅವನು ಬೇರಾವುದೇ ರೀತಿಯಲ್ಲಿ ಯಾವುದೇ ರಾಜಕೀಯ ಚಳವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸಬಾರದು, ಚಂದಾದಾರರಾಗಬಾರದು ಅಥವಾ ಸಹಾಯ ಮಾಡಬಾರದುʼ.
ಆರ್‌ಎಸ್‌ಎಸ್ ಮೇಲಿನ ಪ್ರತಿಯೊಂದು ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದೆ. ಸಾರ್ವಜನಿಕ ಸೇವಕರು ಸಂಘಟನೆಯ ಯಾವುದೇ ಚಟುವಟಿಕೆಯಲ್ಲಿ ಔಪಚಾರಿಕವಾಗಿ ಭಾಗವಹಿಸುವಂತಿಲ್ಲ. ಈ ಆದೇಶವು ಸೇವಾ ನಿಯಮಗಳನ್ನು ಉಲ್ಲಂಘಿಸುವುದರಿಂದ, ನ್ಯಾಯಾಲಯದಲ್ಲಿ ಆದೇಶವನ್ನು ವಜಾಗೊಳಿಸಬಹುದೇ ಎಂದು ನಿರ್ಣಯಿಸಲು ಪರೀಕ್ಷೆ ಅಗತ್ಯವಿದೆ.