ಮೋದಿ ಸ್ವಾತಂತ್ರ್ಯೋತ್ಸವ ಭಾಷಣ: ಆರ್.ಎಸ್.ಎಸ್. ಶತಮಾನೋತ್ಸವಕ್ಕೂ ಮುನ್ನ ಓಲೈಕೆಯ ಪ್ರಯತ್ನ

Update: 2025-08-18 00:30 GMT
ಕೆಂಪು ಕೋಟೆಯ ಮೇಲಿನಿಂದ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸೈದ್ಧಾಂತಿಕವಾಗಿ ಪಕ್ಷಪಾತಿಯಾಗಿರುವ ಒಂದು ಸಂಘಟನೆಯ ಸ್ಥಾನಮಾನವನ್ನು ರಾಷ್ಟ್ರೀಯ, ಸೌಮ್ಯ ಮತ್ತು ಎಲ್ಲರನ್ನೂ ಒಳಗೊಂಡಿರುವ, "ರಾಷ್ಟ್ರ ಸೇವೆಗಾಗಿ ಶತಮಾನದ ಸುದೀರ್ಘ ಪಯಣ" ವನ್ನು ಪೂರೈಸಲು ಸಿದ್ಧವಾಗಿರುವ ಸಂಘಟನೆಯಾಗಿ ಉನ್ನತ ಮಟ್ಟಕ್ಕೆ ಏರಿಸಿದರು.

ಭಾರತದ ಸ್ವಾತಂತ್ರ್ಯದ 78ನೇ ವರ್ಷಾಚರಣೆಯ ಸಂದರ್ಭದಲ್ಲಿ ಐತಿಹಾಸಿಕ ಕೆಂಪು ಕೋಟೆಯ ಪ್ರಾಂಗಣದಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 1970ರ ದಶಕದ ಆರಂಭದಲ್ಲಿ ರಾಜಕೀಯವಾಗಿ ಅವರಿಗೆ ಮಾರ್ಗದರ್ಶನ ಮಾಡಿದ ವಿಶೇಷ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ವನ್ನು ಶ್ಲಾಘನೀಯ ಉಲ್ಲೇಖ ಮಾಡಿದ್ದಾರೆ.

ಕಳೆದ ಹನ್ನೊಂದು ವರ್ಷಗಳಿಂದ ತಮ್ಮ ವ್ಯಕ್ತಿತ್ವಕ್ಕೆ ಮುತ್ಸದ್ಧಿತನದ ಛಾಪನ್ನು ನೀಡಲು ಶತಪ್ರಯತ್ನ ನಡೆಸುತ್ತಿರುವ ಹೊರತಾಗಿಯೂ, ಅವರ ವೈಯಕ್ತಿಕ ಉದ್ದೇಶವೇ ರಾಷ್ಟ್ರೀಯ ಉದ್ದೇಶಕ್ಕಿಂತ ಹೆಚ್ಚು ಮುಖ್ಯ ಎಂದು ಬಿಂಬಿಸುವ ಮೂಲಕ ಅವರೊಒಬ್ಬ ‘ವಿಭಜನಾತ್ಮಕ ರಾಜಕಾರಣಿ’ಯಾಗಿ ಹೃದಯದಲ್ಲಿ ಎಷ್ಟು ಚಿಕ್ಕವರು ಎಂಬುದನ್ನು ಸಾಬೀತುಪಡಿಸಿದೆ.

ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರದ ಪ್ರಧಾನಿಯು, ಆರ್‌ಎಸ್‌ಎಸ್‌ನ “ರಾಷ್ಟ್ರಕ್ಕೆ ಸಲ್ಲಿಸಿದ 100 ವರ್ಷಗಳ ಸೇವೆ"ಗಾಗಿ ಅದರ ಮೇಲೆ ಪ್ರಶಂಸೆಗಳ ಮಳೆಯನ್ನೇ ಸುರಿಸುವುದು, ಅವರ ಕಚೇರಿಯ ನಿಷ್ಪಕ್ಷಪಾತ ಸ್ವರೂಪಕ್ಕೆ ಎಸಗಿದ ದ್ರೋಹಕ್ಕಿಂತ ಕಡಿಮೆಯೇನೂ ಅಲ್ಲ.

ಆರ್‌ಎಸ್‌ಎಸ್‌ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸಲಿಲ್ಲ ಮತ್ತು ಬ್ರಿಟಿಷ್ ಸಾಮ್ರಾಜ್ಯವನ್ನೇ ನಡುಗಿಸಿದ ಮತ್ತು ಭಾರತಕ್ಕೆ ಸ್ವಾತಂತ್ರ್ಯವನ್ನು ಭದ್ರಪಡಿಸುವ ಮಾರ್ಗವನ್ನು ಸುಗಮಗೊಳಿಸಿದ ಮೂರು ಚಳುವಳಿಗಳಲ್ಲಿ ಸಂಪೂರ್ಣ ಗೈರುಹಾಜರಾಗಿತ್ತು ಎಂಬುದು ಒಂದು ಸುಸ್ಥಿರ ಸತ್ಯ. ಆ ಮೂರು ಬಹುಮುಖ್ಯ ಚಳುವಳಿಗಳೆಂದರೆ: 1920-21ರಲ್ಲಿ ನಡೆದ ಅಸಹಕಾರ ಚಳುವಳಿ, 1930-31ರಲ್ಲಿ ನಡೆದ ದಂಡಿ ಯಾತ್ರೆ ಹಾಗೂ ಆನಂತರದ ನಾಗರಿಕ ಅಸಹಕಾರ ಚಳುವಳಿ, ಮತ್ತು ಅಂತಿಮವಾಗಿ, ಆಗಸ್ಟ್ 1942ರಲ್ಲಿ ಪ್ರಾರಂಭಿಸಲಾದ ಕ್ವಿಟ್ ಇಂಡಿಯಾ ಚಳುವಳಿ.

 ಮೋದಿಯವರ ಆರ್‌ಎಸ್‌ಎಸ್‌ನ ಸ್ತುತಿಯ ಅತ್ಯಂತ ಶೋಚನೀಯ ಅಂಶವೆಂದರೆ, ಇದನ್ನು "ಕೆಂಪು ಕೋಟೆಯ ಪ್ರಾಂಗಣ" ದಿಂದ ಅತ್ಯಂತ ಪ್ರಜ್ಞಾಪೂರ್ವಕವಾಗಿ ಅವರು ಮಾಡಿರುವುದು. ಅಲ್ಲಿಯೇ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಆಗಸ್ಟ್ 15, 1947ರಂದು ಮೊದಲ ಬಾರಿಗೆ ರಾಷ್ಟ್ರೀಯ ಧ್ವಜವನ್ನು ಅರಳಿಸಿದ್ದರು. ಮತ್ತು ಭರೋಬ್ಬರಿ ಹತ್ತು ಲಕ್ಷ ಮಂದಿ ಭಾರತೀಯರು ಧ್ವಜಾರೋಹಣವನ್ನು ವೀಕ್ಷಿಸಲು ಸೇರಿದ್ದರು, ಇದು "ವ್ಯಕ್ತಿಗಳ ಅಥವಾ ಕಾಂಗ್ರೆಸ್ನ ವಿಜಯದ ಸಂಕೇತವಲ್ಲ, ಆದರೆ ಇಡೀ ದೇಶದ ವಿಜಯದ ಸಂಕೇತ" ಎಂದು ಅವರು ಅಂದು ಘೋಷಿಸಿದ್ದರು.

ಆರ್ಎಸ್ಎಸ್ ನಾಯಕತ್ವವನ್ನು ಓಲೈಸುವ ರಭಸದಲ್ಲಿ, ಮೋದಿ ಅವರು ಸೈದ್ಧಾಂತಿಕವಾಗಿ ಪಕ್ಷಪಾತದ ಧೋರಣೆಯನ್ನು ಹೊಂದಿರುವ ಸಂಘಟನೆಯ ಸ್ಥಾನಮಾನವನ್ನು ರಾಷ್ಟ್ರೀಯ, ಸೌಮ್ಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಸಂಘಟನೆಯ ಮಟ್ಟಕ್ಕೆ ಏರಿಸಿದರು. ಆ ಸಂಘಟನೆ ಈಗ "ರಾಷ್ಟ್ರೀಯ ಸೇವೆಯ ಶತಮಾನದಷ್ಟು ಸುದೀರ್ಘ ಪ್ರಯಾಣ" ವನ್ನು ಪೂರ್ಣಗೊಳಿಸುವ ಹೊಸ್ತಿಲಲ್ಲಿ ನಿಂತಿದೆ.

ಪಶ್ಚಾತ್ತಾಪದಿಂದ ವಾಕ್ಚಾತುರ್ಯಕ್ಕೆ

ಮೋದಿಯವರ ರಾಜಕೀಯ ಉದ್ದೇಶಕ್ಕೆ ವ್ಯತಿರಿಕ್ತವಾಗಿ, ಜವಾಹರಲಾಲ್ ನೆಹರು ಒಂದು ವರ್ಷದ ನಂತರ, ಆಗಸ್ಟ್ 15, 1948 ರಂದು ಅದೇ ಪ್ರಾಂಗಣಕ್ಕೆ ಮರಳಿದರು, ಜಗತ್ ಪ್ರಸಿದ್ಧವಾದ ಗಾಜಿನ ಅರ್ಧ-ತುಂಬಿದ ಭಾಗವನ್ನು ಯಾವತ್ತೂ ದಿಟ್ಟಿಸದೆ ಎಚ್ಚರಿಕೆಯ ಸಂದೇಶವನ್ನು ಅವರು ಅಂದು ಹೊತ್ತು ತಂದಿದ್ದರು.

ಆ ಸಂದರ್ಭದಲ್ಲಿ ಮಾತನಾಡಿದ್ದ ನೆಹರೂ, ಕಳೆದ ವರ್ಷ ಹಲವಾರು ಸಾಧನೆಗಳನ್ನು ದಾಖಲಿಸಿದೆ ಎಂಬದು ನಿಜವಾದರೂ ಅದು "ಅತೃಪ್ತಿ ಮತ್ತು ತೇಜೋವಧೆಗಳಿಂದ ತುಂಬಿತ್ತು ಮತ್ತು ಭಾರತದ ಆತ್ಮಕ್ಕೇ ದ್ರೋಹ ಎಸಗಿದಂತಾಗಿದೆ" ಎಂದು ವಿಶ್ಲೇಷಿಸಿದ್ದರು.

ಕಳೆದ ಕೆಲವು ತಿಂಗಳುಗಳು ಅತೀವವಾದ ದುಃಖದಿಂದ ಆವರಿಸಲ್ಪಟ್ಟಿದ್ದವು, ಏಕೆಂದರೆ ಆ ಅವಧಿಯು "ರಾಷ್ಟ್ರಪಿತನ ಹತ್ಯೆಯಲ್ಲಿ ದುಷ್ಟತನದ ವಿಜಯವನ್ನು ಕಂಡಿತ್ತು, ಮತ್ತು ನಮ್ಮಲ್ಲಿ ಯಾರಿಗಾದರೂ ಇದಕ್ಕಿಂತ ಹೆಚ್ಚಿನ ಅವಮಾನ ಮತ್ತು ದುಃಖ ಇರಲು ಸಾಧ್ಯವೇ?" ಎಂದು ನೆಹರು ವಿವರಿಸಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ, ಭಾರತವು ಈ ದುರಂತ ಆದರೆ ವಿಮೋಚನಾಮಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಆರ್ಎಸ್ಎಸ್ ನಿಷೇಧಿಸಲ್ಪಟ್ಟಿತ್ತು ಮತ್ತು ಅದರ ಹಲವಾರು ಪ್ರಮುಖ ನಾಯಕರು ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಇನ್ನೂ ಬಂಧನದಲ್ಲಿದ್ದರು. ಇದೂ ಕೂಡ ತನ್ನದೇ ಆದ ಯಾವುದೇ ಸಂವಿಧಾನವನ್ನು ಹೊಂದಿರದ ಒಂದು ಸಂಘಟನೆಯಾಗಿತ್ತು ಎಂಬುದನ್ನು ಗಮನಿಸಬೇಕು.

ನೆಹರು ಅವರ ಪಶ್ಚಾತ್ತಾಪದ ಮಾತುಗಳಿಗೆ ವ್ಯತಿರಿಕ್ತವಾಗಿ, ಮೋದಿ ಅವರು ಆರ್‌ಎಸ್‌ಎಸ್‌ನ ಮತ್ತು ಕೇಸರಿ ಸಹೋದರತ್ವದಲ್ಲಿರುವ ಇತರರು ಹಂಚಿಕೊಳ್ಳುವ ಏಕಮುಖ ದೃಷ್ಟಿಕೋನವನ್ನು ಉತ್ಸಾಹದಿಂದ ಪ್ರಚಾರ ಮಾಡುವುದರಲ್ಲಿ ಯಾವುದೇ ಬಿಢೆ ತೋರಲಿಲ್ಲ.

ವಿರೂಪಗೊಂಡ ವೈವಿಧ್ಯತೆ

ಮೋದಿ ಅವರು ತಮ್ಮ ಭಾಷಣದ ಅರ್ಧಭಾಗವನ್ನು ಮುಗಿಸಿ ಮುಂದಕ್ಕೆ ಹೋಗುತ್ತಿದ್ದಾಗ, "ನಮ್ಮ ಸಂಸ್ಕೃತಿಯ ಶಕ್ತಿ ನಮ್ಮ ವೈವಿಧ್ಯತೆಯಲ್ಲಿ ಅಡಗಿದೆ" ಎಂದು ಹೇಳಿದ್ದು ಸರಿಯಾಗಿಯೇ ಇತ್ತು, ಇದು "ನಮ್ಮ ಶ್ರೇಷ್ಠ ಆನುವಂಶೀಯತೆ ಮತ್ತು ನಮ್ಮ ಪ್ರತಿಷ್ಠೆ" ಯಲ್ಲಿ ಪ್ರತಿಫಲಿಸುತ್ತದೆ ಎಂದು ಅವರು ಸೇರಿಸಿದರು.

ಆದರೆ ಅವರು ಭಾರತದ ವೈವಿಧ್ಯತೆಗೆ ಉದಾಹರಣೆ ನೀಡಲು ಮುಂದಾದಾಗ, “ಪ್ರಯಾಗರಾಜ್ನಲ್ಲಿ ನಡೆದ ಮಹಾ ಕುಂಭ ಮೇಳದಲ್ಲಿ ಭಾರತದ ವೈವಿಧ್ಯತೆ ಹೇಗೆ ಜೀವಂತವಾಗಿದೆ, ಕೋಟಿಗಟ್ಟಲೆ ಜನರು, ಏಕ ಭಾವನೆ, ಒಂದೇ ಎಂಬ ಸ್ಪೂರ್ತಿ, ಒಂದೇ ಪ್ರಯತ್ನದಲ್ಲಿ ಹೇಗೆ ಒಂದುಗೂಡಿದ್ದಾರೆ ಎಂಬುದನ್ನು ಜನರು ನೋಡಿದ್ದಾರೆ. ಇದು ಇಡೀ ಜಗತ್ತಿಗೆ ನಿಜವಾಗಿಯೂ ಅದ್ಭುತವಾಗಿ ಕಂಡಿದೆ. ಮಹಾ ಕುಂಭದ ಯಶಸ್ಸು ಭಾರತದ ಏಕತೆ ಮತ್ತು ಶಕ್ತಿಗೆ ಒಂದು ಪ್ರಬಲ ಸಾಕ್ಷಿಯಾಗಿದೆ" ಎಂದು ಹೇಳಿದರು.

ಈ ವರ್ಷದ ಆರಂಭದಲ್ಲಿ ನಡೆದ ಕುಂಭ ಮೇಳವನ್ನು ಭಾರತದ ಜೀವಂತಿಕೆಗೆ ಒಂದು ದೃಷ್ಟಾಂತ ಎಂದು ಉಲ್ಲೇಖಿಸುವುದು ಸೂಕ್ತವಾದುದಲ್ಲ. ಯಾಕೆಂದರೆ ಈ ಹಬ್ಬವು ಸಂಪೂರ್ಣ ಹಿಂದೂ ಮತ್ತು ಸಂಪೂರ್ಣ ಧಾರ್ಮಿಕವಾಗಿದೆ, ಭಾರತದಂತಹ ಬಹು-ಧರ್ಮ, ಬಹು-ನಂಬಿಕೆಗಳ ದೇಶದಲ್ಲಿ, ಅದರ ಜನಸಂಖ್ಯೆಯ ಶೇ. 80ರಷ್ಟು ಹಿಂದೂಗಳಾಗಿದ್ದರೂ, ಅಂತಹ ಹೋಲಿಕೆ ಕೇವಲ ಅಸಹನೀಯ ಮಾತ್ರವಲ್ಲ, ಜನರ ಯಾವುದೇ ನಂಬಿಕೆ ಮತ್ತು ವಿಶ್ವಾಸವನ್ನು ಎಂದಿಗೂ ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬದ್ಧವಾಗಿರುವ ಪ್ರಧಾನಿಯವರಿಗೆ ಅದು ಸೂಕ್ತವಂತೂ ಅಲ್ಲವೇ ಅಲ್ಲ.

ರಕ್ಷಣಾ ಯೋಜನೆಗಳು, ಉಪಕರಣಗಳು, ರಕ್ಷಾಕವಚಗಳು ಅಥವಾ ಕಾರ್ಯಾಚರಣೆಗಳಿಗೆ ಹೆಸರಿಸುವಾಗ ಹಿಂದೂ ಸಂಪ್ರದಾಯಗಳು ಮತ್ತು ಪುರಾಣಗಳಿಗೆ ಆದ್ಯತೆ ನೀಡುವುದು, ಭವಿಷ್ಯಕ್ಕಾಗಿ ಭಾರತದ ಭದ್ರತಾ ರಕ್ಷಾಕವಚವನ್ನು ಇನ್ನೂ-ಸೃಷ್ಟಿಸಬೇಕಾದ ಸುದರ್ಶನ ಚಕ್ರ ಅಭಿಯಾನದಿಂದ ರೂಪಿಸಬೇಕು ಎಂಬ ಮೋದಿಯವರ ಘೋಷಣೆಗೆ ಕಾರಣವಾಗಿದೆ.

ಭಗವಾನ್ ಶ್ರೀಕೃಷ್ಣನ ಪೌರಾಣಿಕ ಶಸ್ತ್ರಾಸ್ತ್ರ ರಕ್ಷಾಕವಚದ ಹೆಸರಿನಲ್ಲಿ ಶಕ್ತಿಯುತ ರಕ್ಷಣಾತ್ಮಕ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಭಿಯಾನಕ್ಕೆ ನಾಮಕರಣ ಮಾಡುವ ಮೂಲಕ, ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸೌಲಭ್ಯಗಳ ಮೇಲಿನ ಇತ್ತೀಚಿನ ದಾಳಿಗೆ ಆಪರೇಷನ್ ಸಿಂಧೂರ್ ಎಂದು ನಾಮಕರಣ ಮಾಡಿದ ನಂತರ, ಭಾರತದ ರಕ್ಷಣಾ ಸೇವೆಗಳ ಬಹು-ಧಾರ್ಮಿಕ ಸ್ವರೂಪವನ್ನು ದುರ್ಬಲಗೊಳಿಸುವತ್ತ ಮೋದಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.

ಜನಸಂಖ್ಯಾ ಅಭಿಯಾನದ ಕಾಳಜಿಗಳು: ಇದಲ್ಲದೆ, ಪ್ರಧಾನಿಯವರು ಭಾರತವು "ಭಾಷಾ ವೈವಿಧ್ಯತೆಯಿಂದ ಸಮೃದ್ಧವಾಗಿ ರೂಪುಗೊಂಡಿದೆ" ಎಂದು ಘೋಷಿಸಿದ್ದು ಕೂಡ ಸೂಕ್ತವಾಗಿದೆ. ಆದರೆ ದುರದೃಷ್ಟವಶಾತ್ ಸಮಾಜದಲ್ಲಿ ಮುಖ್ಯ ಸಂಕೇತವಾಗಿರುವ ಧರ್ಮಗಳ ಬಹುತ್ವವನ್ನು ಉಲ್ಲೇಖಿಸದೆ ಕೇವಲ ಭಾಷೆಗಳ ಬಹುತ್ವವನ್ನು ಮಾತ್ರ ಯಾಕೆ ಉಲ್ಲೇಖಿಸಿದರು? ಇದು ಅವರ ಸರ್ಕಾರವು ಕೆಲವು ಭಾಷೆಗಳಿಗೆ ಮಾತ್ರ ಸಮಾನತೆಯನ್ನು ಖಾತರಿಪಡಿಸುವ ಕ್ರಮಗಳನ್ನು ಕೈಕೊಂಡಿದೆಯೇ ಮತ್ತು ಮೋದಿಯವರ ಪಕ್ಷ ಮತ್ತು ಇಡೀ ಸಂಘ ಪರಿವಾರವು ಭಾರತೀಯವಲ್ಲದ (Non-Indic) ಭಾಷೆಗಳ ಬಗ್ಗೆ ತಿರಸ್ಕಾರದ ಭಾವನೆಯನ್ನು ಹೊಂದಿದೆಯೇ? ಎಂಬ ಪ್ರಶ್ನೆಗಳನ್ನು ಎತ್ತುತ್ತದೆ.

ಆದಾಗ್ಯೂ, ಜನರು ಸರ್ಕಾರದ ನಿರ್ಧಾರವನ್ನು ಮರೆತಿರಬಹುದು ಎಂಬ ಕಾರಣಕ್ಕೆ ಮೋದಿ ತಕ್ಷಣವೇ ಅದನ್ನು ನೆನಪಿಸಲು ಮರೆಯಲಿಲ್ಲ. "ಮರಾಠಿ, ಅಸ್ಸಾಮಿ, ಬಾಂಗ್ಲಾ, ಪಾಲಿ, ಮತ್ತು ಪ್ರಾಕೃತ ಭಾಷೆಗಳಿಗೆ ನಮ್ಮ ಸರರ್ಕಾರ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಿದೆ" ಎಂದು ಅವರು ಹೇಳಿದರು.

ಸಂಘ ಪರಿವಾರದ ಯೋಜನೆ

ಉನ್ನತ-ಶಕ್ತಿಯ ಜನಸಂಖ್ಯಾ ಅಭಿಯಾನವನ್ನು ಆರಂಭಿಸುವ" ನಿರ್ಧಾರವನ್ನು ಕೂಡ ನರೇಂದ್ರ ಮೋದಿ ಅವರು ಘೋಷಿಸಿದರು. ಅದರ ವಿವರಗಳು ಮುಂದಿನ ದಿನಗಳಲ್ಲಿ ಅಥವಾ ವಾರಗಳಲ್ಲಿ ತಿಳಿಯಬಹುದು, ಆದರೆ ಇದು ಕಳೆದ ಹಲವಾರು ದಶಕಗಳಿಂದ, ವಿಶೇಷವಾಗಿ 1970ರ ದಶಕದ ಉತ್ತರಾರ್ಧದಿಂದ, ಹಿರಿಯ ಆರ್ಎಸ್ಎಸ್ ನಾಯಕರು "ಗುಸ್-ಪಥಿಯಾಸ್ (ಅತಿಕ್ರಮಣಕಾರರು)" ವಿರುದ್ಧದ ಅಭಿಯಾನವನ್ನು ಮೊದಲು ಪ್ರಸ್ತಾಪಿಸಿದಾಗ ಘೋಷಿಸಿದ್ದರು. ಹಾಗಾಗಿ ಇದು ನಿರ್ಲಜ್ಜವಾಗಿ ಸಂಘ ಪರಿವಾರದ ಯೋಜನೆಯೇ ಆಗಿದೆ.

"ದೇಶದ ಜನಸಂಖ್ಯೆಯನ್ನು ಉದ್ದೇಶಪೂರ್ವಕ ಪಿತೂರಿಯ ಭಾಗವಾಗಿ ಬದಲಾಯಿಸಲಾಗುತ್ತಿದೆ" ಎಂದು ಹೇಳುವ ಮೂಲಕ ಮೋದಿ ಅವರು "ದೇಶಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದರು". ಜೊತೆಗೆ ಇದೊಂದು "ಅತ್ಯಂತ ಕಳಕಳಿಯ ಮತ್ತು ಸವಾಲಿನ ವಿಷಯ” ಎಂದೂ ಅವರು ಹೇಳಿದರು. ಬಿಜೆಪಿ ಒಂದು ಮಹತ್ವದ ರಾಜಕೀಯ ಶಕ್ತಿಯಾಗಲು ಪ್ರಾರಂಭಿಸಿದ ಕಾಲದಿಂದ, ಇದು ಸ್ವಯಂ-ಘೋಷಿತ ಅತಿಕ್ರಮಣಕಾರರ (ಮುಸ್ಲಿಮರನ್ನು ಓದಿ) ವಿರುದ್ಧದ ಅಭಿಯಾನ ನಡೆಸಿದೆ. ಅತಿಕ್ರಮಣಕಾರರು "ನಿರಪರಾಧಿ ಬುಡಕಟ್ಟು ಜನಾಂಗದವರನ್ನು ದಾರಿತಪ್ಪಿಸುತ್ತಿದ್ದಾರೆ ಮತ್ತು ಅವರ ಭೂಮಿಯನ್ನು ಕಬಳಿಸುತ್ತಿದ್ದಾರೆ" ಎಂಬುದು ಆರೋಪ.

ಪರಂಪರೆಯ ಕಿಂಡಿಯಲ್ಲಿ ರಾಜಕಾರಣ: ಇತ್ತೀಚಿನ ಕೆಲವು ವಾರಗಳಲ್ಲಿ, ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳಿಂದ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಜಿಲ್ಲಾ ಆಡಳಿತಗಳ ಬೆಂಬಲದೊಂದಿಗೆ, ಬಾಂಗ್ಲಾ ಭಾಷೆ ಮಾತನಾಡುವ ಮತ್ತು ಮುಸ್ಲಿಮ್ ಸಮುದಾಯದ ಜನರ ವಿರುದ್ಧ ಒಂದು ಸಂಯೋಜಿತವಾದ ಅಭಿಯಾನ ನಡೆಸಿರುವುದನ್ನು ಗಮನಿಸಿದ್ದೇವೆ. ಈ ಅಭಿಯಾನದ ಅತ್ಯಂತ ಚಿಂತೆಗೀಡು ಮಾಡುವ ಅಂಶವೆಂದರೆ, ಯಾವುದೇ ಬಂಗಾಳಿ ವ್ಯಕ್ತಿ ತನ್ನ ವಾಸಸ್ಥಾನವನ್ನು ಲೆಕ್ಕಿಸದೆ, ಆತ ಅಥವಾ ಆಕೆ ಮುಸ್ಲಿಂ ಹೆಸರನ್ನು ಹೊಂದಿದ್ದರೆ, ಇನ್ನು ಮುಂದೆ ಭಾರತದಲ್ಲಿ ಎಲ್ಲಿಯೂ ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬ ಬಂಗಾಲಿ ಮುಸ್ಲಿಂ ವ್ಯಕ್ತಿಗೆ ಈಗ ಬಾಂಗ್ಲಾದೇಶಿ ಮತ್ತು ಅತಿಕ್ರಮಣಕಾರರು ಅಥವಾ ಅಕ್ರಮ ವಲಸಿಗ ಎಂಬ ಹಣೆಪಟ್ಟಿ ಕಟ್ಟಲಾಗಿದೆ.

ಇದೇ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂತಹ ಜನರನ್ನು "ಗೆದ್ದಲುಗಳು" ಎಂದು ಅವಹೇಳನಕಾರಿಯಾದ ರೀತಿಯಲ್ಲಿ ಹಣೆಪಟ್ಟಿ ಕಟ್ಟಿದ್ದನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ.

ಅಂತಹ ಸ್ವಯಂ-ಘೋಷಿತ ಜನಸಂಖ್ಯಾ ಅಭಿಯಾನದ ವಿವರಗಳನ್ನು ಘೋಷಿಸಿದಾಗ ಅದನ್ನು ಪ್ರತ್ಯೇಕವಾಗಿ ಪರಿಶೀಲನೆ ನಡೆಸಲಾಗುವುದು. ಸದ್ಯಕ್ಕೆ, ಇದು ಬಿಜೆಪಿಯ ‘ಗುಪ್ತ ಸಂಕೇತದ ರಾಜಕೀಯ’(dog-whistle politics)ದ ಮತ್ತೊಂದು ನಿದರ್ಶನವಲ್ಲದೆ ಬೇರೇನೂ ಅಲ್ಲ. ಭಾರತದ ಪರಂಪರೆಯಲ್ಲಿ ಬೇರುಬಿಟ್ಟಿರುವ ದೇಶದಿಂದ ಪ್ರಧಾನಿ ಇಂತಹ ತಂತ್ರಕ್ಕೆ ಆಶ್ರಯಿಸಿದ್ದು ರಾಷ್ಟ್ರದ ಪಾಲಿನ ದೊಡ್ಡ ದುರಂತವಾಗಿದೆ.

ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಮತ್ತೊಂದು ವಿಷಯವೆಂದರೆ ಭಾರತದ ಬಹು-ಆಯಾಮದ ಗತಕಾಲದ ಪರಂಪರೆ. "ನಮ್ಮ ಅಸ್ತಿತ್ವದ ಬಹುದೊಡ್ಡ ಆಭರಣ, ಬಹುದೊಡ್ಡ ರತ್ನ, ಕಿರೀಟ ರತ್ನ ಎಂದರೆ ನಮ್ಮ ಪರಂಪರೆ, ನಾವು ನಮ್ಮ ಪರಂಪರೆಯ ಬಗ್ಗೆ ಯಾವತ್ತೂ ಹೆಮ್ಮೆ ಪಡುತ್ತೇವೆ" ಎಂದು ಅವರು ಹೇಳಿದರು.

ಗತಕಾಲವು ರಾಜಕೀಯವಾದಾಗ

ಭಾರತದ ಪರಂಪರೆಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ, ಮೋದಿ ಅವರು ಮಧ್ಯಕಾಲೀನ ಅವಧಿಯನ್ನು ಸಹಸ್ರಮಾನ-ಪ್ಲಸ್ "ಗುಲಾಮಗಿರಿಯ ಅವಧಿ" ಎಂದು ವಾಡಿಕೆಯಾಗಿ ಘೋಷಿಸುತ್ತಿದ್ದುದನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ. ಇತರ ಸ್ಥಳಗಳ ಜೊತೆಗೆ, ಅವರು 2023ರಲ್ಲಿ ತಮ್ಮ ಅಮೆರಿಕ ಭೇಟಿಯ ಸಂದರ್ಭದಲ್ಲಿ ಅಮೆರಿಕ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡುವಾಗಲೂ ಅಂತಹ ಹೇಳಿಕೆ ನೀಡಿದ್ದಾರೆ.

ಆದರೆ, ಒಬ್ಬರು ತಮ್ಮ ಆಯ್ಕೆಯ ಮೂಲಕ ದೇಶದ ಅತ್ಯಂತ ಗತಿಶೀಲವಾದ ಇತಿಹಾಸವನ್ನು ಕಡೆಗಣಿಸಲು ಸಾಧ್ಯವೇ? ಇಷ್ಟು ಮಾತ್ರವಲ್ಲದೆ "ಶತಮಾನಗಳಿಂದ ಭಾರತವನ್ನು ಆಳಿದ ವಿದೇಶಿಯರು" ಎಂಬ ಈ ಹೇಳಿಕೆಯು ಯಾವತ್ತೂ ಇತಿಹಾಸದೊಂದಿಗೆ ತಳಕುಹಾಕಿಕೊಂಡಿರುತ್ತದೆ. ಇದು ಒಂದು ಪುರಾಣಕ್ಕಿಂತ ಕಡಿಮೆಯೇ?

ನಾನಾ ಕಾಲಘಟ್ಟಗಳಲ್ಲಿ ವಿಶ್ವದ ನಾನಾ ಭಾಗಗಳಿಂದ ಜನರು ಬಂದಿರುವ ಸುದೀರ್ಘ ಇತಿಹಾಸವನ್ನು ಭಾರತ ಹೊಂದಿದೆ. ಅವರಲ್ಲಿ ಬಹುತೇಕ ಮಂದಿ ಇಲ್ಲಿನ ನೆಲ ಮತ್ತು ಅದರ ಜನರೊಂದಿಗೆ ತಮ್ಮನ್ಬನು ಸಮೀಕರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ನಮ್ಮ ಪರಂಪರೆಯು ಇತಿಹಾಸದ ಆಯ್ದ ಅವಧಿಗಳಿಂದ ಮಾತ್ರ ಘಟನೆಗಳು, ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳನ್ನು ತನ್ನೊಂದಿಗೆ ತಳಕುಹಾಕಿಕೊಂಡಿದೆ ಎಂದು ಎಂದಷ್ಟೇ ಹೇಳುವುದು ಸರಿಯೇ?

ಪುಂಖಾನುಪುಂಖ ಹೇಳಿಕೆಗಳು ಮತ್ತು ಘೋಷಣೆಗಳ ಮೂಲಕ ಮೋದಿ ಅವರು ತಮ್ಮನ್ನು ತಾವು ಒಬ್ಬ ಸಮರ್ಪಿತ ಸ್ವಯಂಸೇವಕ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಇದು ಆರ್ಎಸ್ಎಸ್ ನಾಯಕತ್ವದ ಹೃದಯವನ್ನು ಕರಗಿಸುತ್ತದೆಯೇ ಅಥವಾ ಅವರು ಬಿಜೆಪಿಯ ಹಳೆಯ ಸಹಯೋಗದ ಕಾರ್ಯಶೈಲಿಗೆ ಮರಳಲು ಬೇಡಿಕೆ ಇಡುವುದನ್ನು ಮುಂದುವರಿಸುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ.

(Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ.ಮೂಲ ಲೇಖನ ದ ಫೆಡರಲ್‌ ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.)

Tags:    

Similar News