ಜಮ್ಮು ಕಾಶ್ಮೀರದಲ್ಲಿ ಉಗ್ರವಾದಿ ಘಟನೆಗಳು ಮತ್ತೆ ಏಕೆ ಹೆಚ್ಚುತ್ತಿವೆ?

ರಕ್ಷಣಾ ದಳಗಳೊಡನೆ ಈ ವರ್ಷ ನಡೆದಿರುವ ಚಕಮಕಿಗಳಲ್ಲಿ ಉಗ್ರವಾದಿಗಳು ನಡೆಸುತ್ತಿರುವ ಹೋರಾಟದ ರೀತಿಯನ್ನು ಗಮನಿಸಿದರೆ ಅವರು ಹೆಚ್ಚಿನ ತರಬೇತಿಯನ್ನು ಪಡೆದಿರುವ ಸೈನಿಕರೇ ಆಗಿರುವರೇ ಹೊರತು ಸ್ಥಳೀಯ ಉಗ್ರವಾದಿ ಸಂಘಟನೆಗಳ ಸದಸ್ಯರಲ್ಲ ಎಂದು ನಂಬಬಹುದಾಗಿದೆ.;

Update: 2024-08-04 08:30 GMT

ಇದೇ ವರ್ಷದ ಜೂನ್ ತಿಂಗಳಿನಿಂದ ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಉಗ್ರವಾದಿ ಘಟನೆಗಳು ಏರುತ್ತಾ ಬಂದಿರುವ ಕಾರಣ ಆತಂಕಗೊಂಡ ಕೇಂದ್ರ ಸರ್ಕಾರ ಜುಲೈ 31 ರಂದು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿ ಈ ಬಗ್ಗೆ ಮುಂದೆ ತೆಗೆದುಕೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಭದ್ರತಾ ಕ್ರಮಗಳೇನು ಎಂದು ಇನ್ನೂ ತಿಳಿದಿಲ್ಲವಾದರೂ ಇಂತಹ ಘಟನೆಗಳು ಏಕಾಗುತ್ತಿವೆ ಎಂದು ಅರಿಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಜೂನ್ 9ರಂದು ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ಹಿಂದೂ ಯಾತ್ರಿಕರು ದೇಗುಲವೊಂದಕ್ಕೆ ಹೋಗುತ್ತಿದ್ದ ಬಸ್ಸೊಂದರ ಮೇಲೆ ಉಗ್ರವಾದಿಗಳು ಏಕಾಏಕಿ ದಾಳಿನಡೆಸಿ ಒಂಬತ್ತು ಯಾತ್ರಿಕರನ್ನು ಕೊಂದು 30 ಜನರನ್ನು ಗಾಯಗೊಳಿಸಿದ ಘಟನೆಯಿಂದ ಆರಂಭವಾದ ಇಂತಹ ಘಟನೆಗಳು ಸರಾಸರಿ ವಾರಕ್ಕೊಮ್ಮೆಯಂತೆ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಾ ಬಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರೇ ಹುತಾತ್ಮರಾಗಿರುವುದು ವಿಷಾದದ ಸಂಗತಿ.

ಜುಲೈ ತಿಂಗಳೊಂದರಲ್ಲಿಯೇ 24 ಭಾರತೀಯ ಸೈನಿಕರು ಉಗ್ರವಾದಿಗಳ ಜತೆ ನಡೆದ ಎನ್ಕೌಂಟರ್ಗಳಲ್ಲಿ ಅಸುನೀಗಿದ್ದು ಕಳೆದ 32 ತಿಂಗಳುಗಳಲ್ಲಿ 48 ಸೈನಿಕರು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಹುತಾತ್ಮರಾಗಿದ್ದಾರೆ. ಸೈನಿಕರು ಇಲ್ಲವೇ ಹಿಂದೂ ಜನರ ಮೇಲೆಯೇ ಉಗ್ರವಾದಿಗಳು ದಾಳಿ ಮಾಡುತ್ತಿರುವುದು ಆ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿ ಹಿಂದೂ-ಮುಸ್ಲಿಂ ಕೋಮುಗಳ ನಡುವೆ ಘರ್ಷಣೆ ಉಂಟಾಗಬೇಕು ಎನ್ನುವ ಉದ್ದೇಶಕ್ಕಾಗಿ ಎನ್ನುವುದು ಸ್ಪಷ್ಟವಾಗಿದೆ.

ಜೂನ್ ಆದಿಯಿಂದ ನಡೆದಿರುವ ಎಲ್ಲ ಉಗ್ರವಾದಿ ಘಟನೆಗಳೂ ಈ ಹಿಂದೆ ನಡೆದ ಘಟನೆಗಳಿಗಿಂತ ಭಿನ್ನವಾಗಿವೆ. ಇವುಗಳ ತೀವ್ರತೆ ಮತ್ತು ಆವರ್ತನಗಳು ಈ ಘಟನೆಗಳ ಹಿಂದಿರುವ ಸಮನ್ವಯತೆ ಮತ್ತು ಆಕ್ರಮಣಗಳ ಹಿಂದಿರುವ ಉದ್ದೇಶ ಮತ್ತು ಗುರಿಗಳ ಧೃಡತೆಯನ್ನು ಎತ್ತಿ ತೋರಿಸುತ್ತದೆ. “ಕಾಲಕ್ರಮೇಣ ನಾವು ಉಗ್ರವಾದಿಗಳ ದಾಳಿಗಳಲ್ಲಿ ಹೊಸ ತಂತ್ರಗಾರಿಕೆಯನ್ನು ಗಮನಿಸಿದ್ದೇವೆ. ಅವರು ತಮ್ಮ ಅಡಗುತಾಣಗಳಿಂದ ಹೊರಬಂದು ನಿಗದಿತ ಗುರಿಗಳ ಮೇಲೆ ದಾಳಿ ನಡೆಸಿ ಆನಂತರ ಮತ್ತೆ ತಮ್ಮ ಅಡಗುತಾಣಗಳಿಗೆ ಓಡಿಹೋಗುತ್ತಿದ್ದಾರೆ” ಎಂದು ಭಾರತೀಯ ಸೈನ್ಯದ ನಿವೃತ್ತ ಲೆ.ಜನರಲ್ ಹೂಡಾ ಹೇಳಿದ್ದಾರೆ.

ಜಮ್ಮು ಪ್ರದೇಶದಲ್ಲಿ ಉಗ್ರವಾದಿಗಳ ಘಟನೆಗಳು ಏಕೆ ಏರುತ್ತಿವೆ ಎಂದು ವಿವರಿಸುತ್ತಾ ಆ ಪ್ರದೇಶದ ಡಿ.ಜಿ.ಪಿ ಆರ್. ಆರ್. ಸ್ವೇನ್ ಪಾಕಿಸ್ತಾನದಿಂದ ಸುಮಾರು 70 ಉಗ್ರವಾದಿಗಳು ಜಮ್ಮು-ಕಾಶ್ಮೀರಕ್ಕೆ ನುಸುಳಿ ಬಂದು ಅಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಅಡಗಿದ್ದಾರೆ ಎಂದಿದ್ದಾರೆ. ಅಂತೆಯೇ ಜಮ್ಮು ಕಾಶ್ಮೀರದ ನಿವೃತ್ತ ಡಿ.ಜಿ.ಪಿ ಎಸ್. ಪಿ. ವೇದ್, ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರವಾದಿ ಚಟುವಟಿಕೆಗಳನ್ನು ನಡೆಸುತ್ತಿರುವವರು ಯಾವುದೇ ಸ್ಥಳೀಯ ಉಗ್ರವಾದಿ ಪಂಗಡಕ್ಕೆ ಸೇರಿರದೇ ಅವರೆಲ್ಲರೂ ಪಾಕಿಸ್ತಾನ ಸೈನ್ಯದ ಎಸ್.ಎಸ್.ಜಿ. ಕಮಾಂಡೋಗಳೇ ಆಗಿದ್ದಾರೆ ಎಂದಿದ್ದಾರೆ.

ರಕ್ಷಣಾ ದಳಗಳೊಡನೆ ಈ ವರ್ಷ ನಡೆದಿರುವ ಚಕಮಕಿಗಳಲ್ಲಿ ಉಗ್ರವಾದಿಗಳು ನಡೆಸುತ್ತಿರುವ ಹೋರಾಟದ ರೀತಿಯನ್ನು ಗಮನಿಸಿದರೆ ಅವರು ಹೆಚ್ಚಿನ ತರಬೇತಿಯನ್ನು ಪಡೆದಿರುವ ಸೈನಿಕರೇ ಆಗಿರುವರೇ ಹೊರತು ಸ್ಥಳೀಯ ಉಗ್ರವಾದಿ ಸಂಘಟನೆಗಳ ಸದಸ್ಯರಲ್ಲ ಎಂದು ನಂಬಬಹುದಾಗಿದೆ. ಇದೇ ಕಾರಣಕ್ಕಾಗಿಯೇ ಇಂತಹ ಚಕಮಕಿಗಳಲ್ಲಿ ಭಾರತೀಯ ರಕ್ಷಣಾ ದಳಗಳಿಗೆ ಆಗುತ್ತಿರುವ ಸಾವುನೋವುಗಳೂ ಹೆಚ್ಚಾಗುತ್ತಿವೆ. ಕುಪ್ಪಾರದಲ್ಲಿ ಇತ್ತೀಚೆಗೆ ರಕ್ಷಣಾ ಪಡೆಗಳ ಜತೆ ನಡೆದ ಚಕಮಕಿಯಲ್ಲಿ ಹತನಾದ ಒಬ್ಬ ಉಗ್ರವಾದಿಯ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳೂ ಈ ನಂಬಿಕೆಗೆ ಆಧಾರವಾಗಿದೆ.

ಇತ್ತೀಚೆಗೆ ನಡೆದಿರುವ ಉಗ್ರವಾದಿ ದಾಳಿಗಳಲ್ಲಿ ಪಾಕಿಸ್ತಾನಿ ಸೈನ್ಯದ ಬಾರ್ಡರ್ ಆಕ್ಷನ್ ಟೀಮ್ ಸದಸ್ಯರು ಪಾಲ್ಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಳದಲ್ಲಿ ಪಾಕಿಸ್ತಾನದ ಸೈನಿಕರಲ್ಲದೆ ವಿಶೇಷ ತರಬೇತಿಯನ್ನು ಪಡೆದಿರುವ ಉಗ್ರವಾದಿಗಳೂ ಇದ್ದಾರೆ. ಈ ದಳದ ಮುಖ್ಯ ಕಾರ್ಯವೇ ಪಾಕಿಸ್ತಾನದ ಗಡಿ ಭಾಗಗಳಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವುದಾಗಿದೆ. ನಿವೃತ್ತ ಡಿ.ಜಿ.ಪಿ ವೇದ್ ಹೇಳಿರುವ ಪ್ರಕಾರ ಕಾಶ್ಮೀರದೊಳಗೆ ನುಸುಳಿರುವ ಜನರು ಬಿ.ಎ.ಟಿ ಸದಸ್ಯರಲ್ಲ, ಅವರು ಎಸ್.ಎಸ್.ಜಿ. ಕಮಾಂಡೋಗಳೇ ಆಗಿದ್ದಾರೆ. ಅವರು ಹೇಳುವಂತೆ ಈ ದಳದ ಮುಖ್ಯಸ್ಥ ಜನರಲ್ ಆದಿಲ್ ರೆಹಮಾನಿ ೬೦೦ ಜನ ಎಸ್.ಎಸ್.ಜಿ. ಕಮಾಂಡೋಗಳನ್ನು ಜಮ್ಮು ಕಾಶ್ಮೀರ ಪ್ರಾಂತದಲ್ಲಿ ನುಸುಳಿಸಲು ತಯಾರು ಮಾಡಿ ತಾವೂ ಈ ಕಾರ್ಯಾಚರಣೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ನಲ್ಲಿ ಬಿಡಾರ ಹೂಡಿದ್ದಾರೆ.

ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರ ಅಮ್ಜಾನ್ ಅಯೂಬ್ ಮಿರ್ಜಾ, ಡಿ.ಜಿ.ಪಿ. ವೇದ್ರ ಹೇಳಿಕೆಯನ್ನು ಪುಷ್ಟೀಕರಿಸುತ್ತಾ ಹೆಚ್ಚುತ್ತಿರುವ ಆತಂಕವಾದಿ ದಾಳಿಗಳಿಗೆ ಎಸ್.ಎಸ್.ಜಿ.ಯ ಮೇಜರ್ ಜನರಲ್ ಆದಿಲ್ ರೆಹಮಾನಿ ಇವರೇ ಕಾರಣ ಎಂದಿದ್ದಾರೆ. ಅವರು ಹೇಳುವಂತೆ ಈಗಾಗಲೇ 600 ಪಾಕಿಸ್ತಾನಿ ಕಮಾಂಡೋಗಳು ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿ ಬಂದಿದ್ದಾರೆ. ಈ ಕಮಾಂಡೋಗಳ ನೇತೃತ್ವವನ್ನು ಸೈನ್ಯದ ಲೆಫ್ಟಿನೆಂಟ್ ಕರ್ನಲ್ ಶಾಹಿದ್ ಸಲೀಂ ಜುಂಜುವಾ ವಹಿಸಿಕೊಂಡಿದ್ದಾರೆ. ಜುಂಜುವಾ ಜಮ್ಮುವಿನ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡು ಉಗ್ರವಾದಿ ದಾಳಿಗಳ ಸಮನ್ವಯವನ್ನು ಮಾಡುತ್ತಿದ್ದಾರೆ.

ಈ ಎರಡೂ ಹೇಳಿಕೆಗಳಲ್ಲಿ ಉತ್ಪ್ರೇಕ್ಷೆ ಇದೆ ಎನ್ನುವ ಸ್ಥಳೀಯ ಪೊಲೀಸರು ಹೆಚ್ಚೆಂದರೆ 70 ಉಗ್ರವಾದಿಗಳು ಭಾರತದೊಳಗೆ ನುಸುಳಿದ್ದಾರೆ. ಅವರು ಜಮ್ಮುವಿನ ಪೂಂಚ್, ಖಟುವಾ, ಕಿಶ್ತವಾರ್, ಮತ್ತು ದೋಡಾ ಹಾಗೂ ಉತ್ತರ ಕಾಶ್ಮೀರದ ಕುಪ್ವಾರಾ, ಹಂಡ್ವಾರಾ ಹಾಗೂ ಬಂಡೀಪೊರಾ ಜಿಲ್ಲೆಗಳಿಗೆ ನುಸುಳಿದ್ದಾರೆ. ಅವರು ಅತ್ಯಾಧುನಿಕ ಸಂಪರ್ಕ ಸಾಧನಗಳನ್ನು ಬಳಸುತ್ತಿರುವುದರಿಂದ ಅವರ ಪತ್ತೆ ಕಷ್ಟವಾಗುತ್ತಿದೆ ಎಂದಿದ್ದಾರೆ. ಪೊಲೀಸರ ಹೇಳಿಕೆಯನ್ನು ಗಮನಿಸಿದರೆ ಪಾಕಿಸ್ತಾನದ ಎಸ್.ಎಸ್.ಜಿ. ಕಮಾಂಡೋಗಳೇ ಉಗ್ರವಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎನ್ನುವುದರಲ್ಲಿ ಸಂದೇಹವಿಲ್ಲ. ಈಗ ನುಸುಳಿರುವ ಉಗ್ರವಾದಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಎಂ-೪ ಹಾಗೂ ಚೀನಾದಿಂದ ತಯಾರಾದ ಎ೫೬ ಅಸಾಲ್ಟ್ ರೈಫಲ್ಗಳು ಅವರ ಬಳಿಯಿರುವುದು ಇದನ್ನು ಪುಷ್ಟೀಕರಿಸುತ್ತದೆ. ಆಫ್ಘಾನಿಸ್ತಾನದಿಂದ ಅಮೆರಿಕದ ಸೈನ್ಯವು ವಾಪಸ್ ಹೋಗುವಾಗ ಬಿಟ್ಟಿರುವ ಶಸ್ತ್ರಗಳನ್ನು ಎಸ್.ಎಸ್.ಜಿ. ಉಪಯೋಗ ಮಾಡುತ್ತಿದೆ ಎಂದು ಊಹಿಸಲಾಗಿದೆ.

ವಿಧ್ವಂಸಕ ಚಟುವಟಿಕೆಗಳ ವಿಶೇಷ ದಳ ಎಸ್.ಎಸ್.ಜಿ

ಎಸ್.ಎಸ್.ಜಿ. ದಳ ಏನು ಮಾಡುತ್ತದೆ ಎನ್ನುವುದು ಎಲ್ಲರೂ ಕೇಳುವ ಪ್ರಶ್ನೆ.

1952ರಲ್ಲಿ ಪಾಕಿಸ್ತಾನವು ಅಮೆರಿಕದ ಸೈನ್ಯ ಮತ್ತು ಗೂಢಚಾರ ದಳ ಸಿ.ಐ.ಎ ಇವೆರಡರ ನೆರವಿನಿಂದ ‘ಸ್ಪೆಷಲ್ ಸರ್ವೀಸಸ್ ಗ್ರೂಪ್’ ಎಂಬ ವಿಶೇಷ ಕಮಾಂಡೋ ತಂಡವನ್ನು ಹುಟ್ಟುಹಾಕಿತು. ಇದರ ಮುಖ್ಯ ಉದ್ದೇಶವೇ ಭಾರತದೊಡನೆ ಅಸಂಪ್ರದಾಯಿಕ ಯುದ್ಧವನ್ನು ಮಾಡುವುದಾಗಿತ್ತು. ತಾನು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡಲು ಆಯ್ಕೆ ಮಾಡಿದ ವ್ಯಕ್ತಿಗಳಿಗೆ ಈ ತಂಡವು ತರಬೇತಿ ಮತ್ತು ಎಲ್ಲ ರೀತಿಯ ನೆರವನ್ನು ನೀಡಬೇಕಾಗಿತ್ತು. ಎಸ್.ಎಸ್.ಜಿ ಕಮಾಂಡೋಗಳಿಗೆ ತರಬೇತಿ ಕೊಡಲು ಪಾಕಿಸ್ತಾನವು ಪೆಶಾವರ್ ಬಳಿಯಿದ್ದ ಚೇರತ್ ಎನ್ನುವ ಗಿರಿಧಾಮವನ್ನು ಆರಿಸಿಕೊಂಡಿತು. ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕವು ಸ್ಥಳೀಯರಿಗೆ ಇಂತಹುದೇ ತಂಡಗಳ ಮೂಲಕ ನೆರವನ್ನು ನೀಡಿದ್ದ ಕಾರಣ ಆ ದೇಶಕ್ಕೆ ಇಂತಹ ಕೃತ್ಯಗಳ ಬಗ್ಗೆ ವಿಶೇಷ ಅನುಭವವಿತ್ತು. ಹೀಗಾಗಿ ಅಮೆರಿಕನ್ ಪರಿಣಿತರೇ ಸ್ಪೆಷಲ್ ಸರ್ವಿಸಸ್ ಅಧಿಕಾರಿಗಳಿಗೆ ಮೂಲ ತರಬೇತಿಯನ್ನು ನೀಡಿದರು. ಅಮೆರಿಕದ ಸಿ.ಐ.ಎ, ವಿಶೇಷ ದಳ ಮತ್ತು ಸೈನ್ಯದ ಕಮಾಂಡೋಗಳು ಇಲ್ಲಿನ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಯನ್ನು ನೀಡತೊಡಗಿದರು. ಎಸ್.ಎಸ್.ಜಿ ದಳದ ಕಮಾಂಡೋಗಳಿಗೆ ರೆಕ್ಕೆಯಿರುವ ಕತ್ತಿಯ ಚಿಹ್ನೆಯನ್ನು ನೀಡಲಾಗಿದ್ದು ಈ ದಳದ ಧ್ಯೇಯವಾಕ್ಯವು ‘ಯಾರಿಗೆ ಭಯವಿಲ್ಲವೋ ಅವರು ಗೆಲ್ಲುತ್ತಾರೆ’ ಎನ್ನುವುದಾಗಿದೆ. ಈ ದಳದ ಸದಸ್ಯರು ಮರೂನ್ ಬಣ್ಣದ ಟೋಪಿಯನ್ನು ಧರಿಸುವುದರಿಂದ ಇವರನ್ನು ಮರೂನ್ ಬೆರೇಸ್ ಎಂದೂ ಕರೆಯುತ್ತಾರೆ.

ಸ್ಪೆಷಲ್ ಸರ್ವಿಸಸ್ ಗ್ರೂಪ್ ದಳದ ಮೊದಲ ನಾಯಕನನ್ನಾಗಿ ಲೆಪ್ಟಿನೆಂಟ್ ಕರ್ನಲ್ ಎ.ಓ. ಮಿಟಾ ಎನ್ನುವವರನ್ನು ನೇಮಕ ಮಾಡಲಾಯಿತು. ಲೆ.ಕ. ಮಿಟಾ ಅವರು ಈ ಹಿಂದೆ ಮುಂಬೈನ ನಿವಾಸಿಯಾಗಿದ್ದು, ದೇಶ ವಿಭಜನೆಗೊಂಡಾಗ ಪಾಕಿಸ್ತಾನಕ್ಕೆ ವಲಸೆ ಬಂದಿದ್ದರು. ಈ ತರಬೇತಿ ಶಾಲೆಯಲ್ಲಿ ಮೊದಲ ತರಬೇತಿಯನ್ನು ಪಡೆದ ಸದಸ್ಯರಲ್ಲಿ ಮುಂದೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜನರಲ್ ಪರ್ವೇಜ್ ಮುರ್ರಫ್ ಕೂಡಾ ಒಬ್ಬರಾಗಿದ್ದರು. ಇವರಲ್ಲದೇ ಹಲವಾರು ಹೆಸರಾಂತ ಪಾಕಿಸ್ತಾನಿ ಅಧಿಕಾರಿಗಳು ಈ ದಳದಲ್ಲಿ ತರಬೇತಿಯನ್ನು ಪಡೆದಿದ್ದಾರೆ.

ಎಸ್.ಎಸ್.ಜಿ ಪ್ರಶಿಕ್ಷಣಾರ್ಥಿಗಳಿಗೆ ಕಲಿಸುವ ಮುಖ್ಯ ಪಾಠವು ಹೀಗಿದೆ: “ನೀವು ಯಾವ ಜಾಗಕ್ಕೆ ಹೋಗುತ್ತೀರೋ ಅಲ್ಲಿಯ ಜನರೊಂದಿಗೆ ಬೆರೆಯಬೇಕು.ಸ್ಥಳೀಯರ ಆರ್ಥಿಕ ಸ್ಥಿತಿಗತಿಗಳೇನು, ಅವರ ಸಾಮಾಜಿಕ ಸ್ಥಿತಿಯೇನು, ಅವರ ರಾಜಕೀಯ ದೃಷ್ಟಿಗಳೇನು, ಅವರ ವಿದ್ಯಾಭ್ಯಾಸದ ಸ್ಥಿತಿಯೇನು ಎಂದು ತಿಳಿದುಕೊಂಡು ಸ್ಥಳೀಯ ಜನರು ಶಸ್ತ್ರಾಸ್ತ್ರ ಉಪಯೋಗಿಸಲು ಸಶಕ್ತರಾಗಿದ್ದರೆಯೇ ಎನ್ನುವುದನ್ನು ಅರಿಯಬೇಕು. ಆನಂತರ ಕೆಲವು ಸ್ಥಳೀಯರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ಕೊಡಬೇಕು. ಹಂತ ಹಂತವಾಗಿ ಕಾರ್ಯಾಚರಣೆಗೆ ಇಳಿಯಬೇಕು. ಚಿಕ್ಕ ಚಿಕ್ಕ ಗುಂಪುಗಳನ್ನು ಮಾಡಿಕೊಂಡು ನಿಮ್ಮ ಬಡಾವಣೆಗಳು, ಪಟ್ಟಣಗಳು, ಇವುಗಳ ಪ್ರತಿಯೊಂದು ಜಾಗವನ್ನೂ ಮನನ ಮಾಡಿಕೊಳ್ಳಬೇಕು.”

ಎಸ್.ಎಸ್.ಜಿ ದಳವು ಪ್ರಾರಂಭಗೊಂಡ ಕೂಡಲೇ ಪಾಕಿಸ್ತಾನದ ಗೂಢಚಾರ ದಳ ಐ.ಎಸ್.ಐ ಮತ್ತು ಅದರ ಸಂಬಂಧ ಗಹನವಾಯಿತು. ಆನಂತರ ಈ ದಳವು ಐ.ಎಸ್.ಐನ ನಿರ್ದೇಶನದ ಮೇರೆಗೆ ನಾಗಾ ಮತ್ತು ಮೀಜೋ ಬಂಡುಕೋರರು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಅಂದಿನ ಪೂರ್ವ ಪಾಕಿಸ್ತಾನದಲ್ಲಿ ತರಬೇತಿಯನ್ನು ನೀಡಿತು. ಬಾಂಗ್ಲಾದೇಶದ ಉಗಮವಾದ ನಂತರ ಎಸ್.ಎಸ್.ಜಿ ಕಾಶ್ಮೀರ, ಹಾಗೂ ಆಫ್ಘಾನಿಸ್ತಾನಗಳಲ್ಲಿ ತನ್ನ ಚಟುವಟಿಕೆಗಳನ್ನು ಮಾಡಲಾರಂಭಿಸಿತು.

ಈಗ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರವಾದಿ ದಾಳಿಗಳ ಸೂತ್ರಧಾರ ಐ.ಎಸ್.ಐ ದಳವೇ ಆಗಿರುವ ಕಾರಣ, ಆ ದಳವು ಎಸ್.ಎಸ್.ಜಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎನ್ನುವುದರಲ್ಲಿ ಅನುಮಾನವೇ ಬೇಡ. ವಿಧ್ವಂಸಕ ಚಟುವಟಿಕೆಗಳನ್ನು ಮಾಡುವುದರಲ್ಲಿ ನುರಿತ ಪಾಕಿಸ್ತಾನಿ ಕಮಾಂಡೋಗಳು ಜಮ್ಮು ಕಾಶ್ಮೀರದ ಒಳಗಡೆ ನುಗ್ಗಿರುವುದರಿಂದ ಭಾರತದ ರಕ್ಷಣಾ ಪಡೆಗಳಿಗೆ ಅವರನ್ನು ಎದುರಿಸುವುದು ಒಂದು ಸವಾಲಾಗಿದೆ.

ಎಲ್ಲರೂ ಕೇಳುವ ಪ್ರಶ್ನೆಯೆಂದರೆ ಇತ್ತೀಚಿನ ದಿನಗಳಲ್ಲಷ್ಟೇ ಏಕೆ ಉಗ್ರವಾದಿ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎನ್ನುವುದು. ಇದಕ್ಕೆ ಇರುವ ಉತ್ತರ ಒಂದೇ. ಹೇಗಾದರೂ ಮಾಡಿ ಜಮ್ಮು ಕಾಶ್ಮೀರದಲ್ಲಿ ಮುಂದೆ ನಡೆಯುವ ಚುನಾವಣೆಗಳನ್ನು ಮುಂದೂಡಬೇಕು ಎನ್ನುವುದೇ ಐಎಸ್ಐನ ಉದ್ದೇಶವಾಗಿದ್ದು ಅದನ್ನು ಸಾಕಾರಗೊಳಿಸಲು ವಿಧ್ವಂಸಕ ಚಟುವಟಿಕೆಗಳನ್ನು ಐ.ಎಸ್.ಐ ಮಾಡಿಸುತ್ತಿದೆ.

ನಮ್ಮ ರಕ್ಷಣಾ ಪಡೆಗಳು ತಮ್ಮ ಜೀವದ ಹಂಗು ತೊರೆದು ಪಾಕಿಸ್ತಾನಕ್ಕೆ ಪ್ರತ್ಯುತ್ತರವನ್ನು ಕೊಡುತ್ತಿವೆ. ಕೇಂದ್ರ ಗೃಹ ಸಚಿವರ ಸಭೆಯಲ್ಲಿ ಇಂತಹ ಘಟನೆಗಳನ್ನು ತಡೆಯಲು ತೆಗೆದುಕೊಂಡಿರುವ ನಿರ್ಣಯಗಳು ಮುಂದಿನ ದಿನಗಳಲ್ಲಿ ಫಲಶ್ರುತಿಯನ್ನು ಕೊಡುವವೆಂದು ನಿರೀಕ್ಷಿಸಬಹುದಾಗಿದೆ.

[ವಿಶೇಷ ಸೂಚನೆ: ತಮ್ಮ ಇತ್ತೀಚಿನ ಪುಸ್ತಕ “ಪಾಕಿಸ್ತಾನದ ಐ.ಎಸ್.ಐ” (ಸಪ್ನ ಬುಕ್ ಹೌಸ್) ಇದರಲ್ಲಿ ಲೇಖಕರು ಕಾಶ್ಮೀರದ ಉಗ್ರವಾದಿ ಸಮಸ್ಯೆಯ ಬಗ್ಗೆ ವಿಷದವಾಗಿ ಬರೆದಿದ್ದಾರೆ-ಸಂ]

(ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು.ಅವು 'ದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)

Tags:    

Similar News