ನೇಪಾಳ ಚಳುವಳಿಗೂ ಹಸೀನಾ ಪದಚ್ಯುತಿಗೂ ವಿಚಿತ್ರ ಸಾಮ್ಯತೆ: ಆಂದೋಲನದ ಹಿಂದೆ ಯಾರಿದ್ದಾರೆ?
ಪ್ರತಿಭಟನೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಯೋಜಿಸಲಾಗಿತ್ತು. ಈ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿ ಇದ್ದವರು ವಿದ್ಯಾರ್ಥಿಗಳು. ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಜನರನ್ನು ಸಂಘಟಿಸಲಾಗಿತ್ತು. ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ಇಲ್ಲಿ ಮುಖ್ಯ ವಿಷಯವಾಗಿತ್ತು. ಸರ್ಕಾರದ ಪತನವೇ ತಮ್ಮ ಅಂತಿಮ ಗುರಿ ಎಂದು ಘೋಷಿಸಿಕೊಂಡಿದ್ದರು.;
ಮಂಗಳವಾರ (ಸೆಪ್ಟೆಂಬರ್ 9) ಮಧ್ಯಾಹ್ನ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ ಬಳಿಕ ನೇಪಾಳಿ ಸೇನೆಯ ಹೆಲಿಕಾಪ್ಟರ್ ಏರಿ ಹೊರಟಿದ್ದನ್ನು ನೋಡಿದಾಗ ತಕ್ಷಣ ನೆನಪಿಗೆ ಬಂದಿದ್ದು ಕಳೆದ ವರ್ಷ ಆಗಸ್ಟ್ 5ರಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರದಿಂದ ಕೆಳಗಿಳಿದ ನಂತರ ದೇಶವನ್ನು ತೊರೆದ ಘಟನೆ.
ಅಧಿಕಾರದಿಂದ ಕೆಳಗಿಳಿದ ನಂತರ ಇಬ್ಬರೂ ನಾಯಕರು ದೇಶ ತೊರೆದಿರುವ ರೀತಿ ಒಂದೇ ಆಗಿದ್ದರೂ, ಇಬ್ಬರ ನಿರ್ಗಮನದಲ್ಲಿ ಕೆಲವು ವ್ಯತ್ಯಾಸಗಳಿವೆ. ಹಸೀನಾ ಅಂದು ಭಾರತಕ್ಕೆ ಹೊರಟಿದ್ದಾರೆ ಎಂಬುದು ಬಹುಬೇಗ ಸ್ಪಷ್ಟವಾಯಿತು. ಆದರೆ, ಓಲಿಯವರ ಗಮ್ಯಸ್ಥಾನ ಇನ್ನೂ ತಿಳಿದಿಲ್ಲ. ಅವರು ಹತ್ತಿದ ಹೆಲಿಕಾಪ್ಟರ್ ಅವರನ್ನು ಚೀನಾ ಅಥವಾ ಭಾರತಕ್ಕೆ ಕರೆದೊಯ್ಯಬಹುದು. ಸದ್ಯಕ್ಕೆ ಅವರ ಗಮ್ಯಸ್ಥಾನ ಅಜ್ಞಾತವಾಗಿಯೇ ಉಳಿದಿದೆ. ಒಂದು ವೇಳೆ ನೇಪಾಳ ಸೇನೆ ದೇಶದೊಳಗಿನ ಸುರಕ್ಷಿತ ನೆಲೆಯಲ್ಲಿ ಆಶ್ರಯ ನೀಡಲು ನಿರ್ಧರಿಸಿದರೆ, ಅದು ಸಂಭಾವ್ಯ ಕೂಡ. ಆದರೆ, ಹಸೀನಾ ವಿಷಯದಲ್ಲಿ ಸೇನಾ ಮುಖ್ಯಸ್ಥ ಜನರಲ್ ವಕೀರ್-ಉ-ಜಮಾನ್ ಆ ರೀತಿ ಮಾಡಲು ಒಪ್ಪದೇ ಇದ್ದುದರಿಂದ ಅವರು ದೇಶ ತೊರೆಯುವುದು ಅನಿವಾರ್ಯವಾಯಿತು.
ಓಲಿ ಅವರಿಗೆ ಯಾರು ಆಶ್ರಯ ನೀಡುತ್ತಾರೆ ಎಂಬುದನ್ನು ತಿಳಿಯಲು ನಾವು ಕಾಯಬೇಕಾಗಿದ್ದರೂ, ಅವರ ಪದಚ್ಯುತಿ ಮತ್ತು ಹಸೀನಾ ಪದಚ್ಯುತಿಯ ನಡುವಿನ ಆಶ್ಚರ್ಯಕರ ಸಾಮ್ಯತೆಗಳನ್ನು ಕಡೆಗಣಿಸಲಾಗದು. ಹಸೀನಾ ಅವರಂತೆ ಓಲಿ ಅಧಿಕಾರಕ್ಕೆ ಬಂದಿರುವುದು ಮತ್ತು ತೊರೆದಿರುವುದು ಹಲವು ಬಾರಿ ನಡೆದಿದೆ. ಇದು ನೇಪಾಳದ ಅನಿಶ್ಚಿತ ರಾಜಕೀಯದ ಫಲಿತಾಂಶವಾಗಿದೆ. ಇದು ‘ಮ್ಯುಸಿಕಲ್ ಚೇರ್’ ಆಟದಂತಿದ್ದು, ಅವರು ಕೆಲವೊಮ್ಮೆ ಅದರ ಸಂತ್ರಸ್ತರಾಗಿದ್ದಾರೆ ಮತ್ತು ಅದರ ಲಾಭವನ್ನೂ ಪಡೆದಿದ್ದಾರೆ.
ರಾಜಕೀಯ ಪಕ್ಷಗಳಿಲ್ಲದ ಆಂದೋಲನ
ಕಳೆದ ವರ್ಷದ ಜುಲೈ-ಆಗಸ್ಟ್ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ಮತ್ತು ಈಗ ನೇಪಾಳದಲ್ಲಿ, ಶೇಖ್ ಹಸೀನಾ ಮತ್ತು ಓಲಿ ಅವರನ್ನು ಕೆಳಗಿಳಿಸಿದ ಚಳುವಳಿಗಳಲ್ಲಿ ಅವರ ರಾಜಕೀಯ ವಿರೋಧಿಗಳು ನೇರವಾಗಿ ಮುಂಚೂಣಿಯಲ್ಲಿರಲಿಲ್ಲ. ಬಾಂಗ್ಲಾದೇಶದ ಸಂದರ್ಭದಲ್ಲಿ, ಬಿಎನ್ಪಿ ಮತ್ತು ಜಮಾತ್-ಎ-ಇಸ್ಲಾಮಿ ಪಕ್ಷಗಳು ವಿದ್ಯಾರ್ಥಿಗಳ ಆಂದೋಲನಕ್ಕೆ ಬೆಂಬಲ ನೀಡಿದರೂ, ಆ ಚಳುವಳಿಯ ನಾಯಕತ್ವವನ್ನು ಯಾವುದೇ ರಾಜಕೀಯ ಪಕ್ಷದೊಂದಿಗೆ ನೇರ ಸಂಪರ್ಕವಿಲ್ಲದ ಯುವ ನಾಯಕರ 'ವಿದ್ಯಾರ್ಥಿಗಳ ತಾರತಮ್ಯ ವಿರೋಧಿ ವೇದಿಕೆ’ ವಹಿಸಿಕೊಂಡಿತ್ತು.
ನೇಪಾಳದಲ್ಲಿ, ಪೊಲೀಸ್ ಗೋಲಿಬಾರ್ಗಳಿಂದ ಅನೇಕ ಸಾವು-ನೋವು ಸಂಭವಿಸಿದ ನಂತರ ಕೆಲವು ವಿರೋಧ ಪಕ್ಷಗಳು ಈ ಆಂದೋಲನಕ್ಕೆ ಬೆಂಬಲ ನೀಡಲು ಪ್ರಾರಂಭಿಸಿದವು. ಆದರೆ, ಈ ತಿಂಗಳ ಆರಂಭದಲ್ಲಿ ಸರ್ಕಾರ ವಿಧಿಸಿದ್ದ ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧದ ಚಳುವಳಿಯನ್ನು ಯಾವುದೇ ರಾಜಕೀಯ ಪಕ್ಷ ಮುನ್ನಡೆಸುತ್ತಿರಲಿಲ್ಲ, ಬದಲಾಗಿ, ಅಷ್ಟಾಗಿ ಪರಿಚಿತವಲ್ಲದ "ಹಮಿ ನೇಪಾಳ" (Hami Nepal) ಎಂಬ ಸ್ವಯಂ ಸೇವಾ ಸಂಸ್ಥೆ ಮುನ್ನಡೆಸಿತ್ತು. 2015ರಲ್ಲಿ ವೃತ್ತಿಪರ ಕಾರ್ಯಕ್ರಮ ನಿರ್ವಾಹಕ ಸುದನ್ ಗುರುಂಗ್ ಅವರು ಸ್ಥಾಪಿಸಿದ ಈ ಸಂಸ್ಥೆ ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯಗಳ ಮೇಲೆ ಗಮನಹರಿಸಿತ್ತು. ಬಹುಶಃ ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ ಗುರುಂಗ್ ತಮ್ಮ ಮಗುವನ್ನು ಕಳೆದುಕೊಂಡಿದ್ದೇ ಇದಕ್ಕೆ ಕಾರಣವಿರಬಹುದು.
ಅನೇಕ ನೇಪಾಳಿಗಳಂತೆ, ಗುರುಂಗ್ ಕೂಡ ತಮ್ಮ ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ತೀವ್ರ ಆಸಕ್ತಿ ಹೊಂದಿದ್ದಾರೆ. ನೇಪಾಳದ ದುರ್ಬಲ ಆರ್ಥಿಕತೆ ಮತ್ತು ನಿರಂತರ ನಿರುದ್ಯೋಗಕ್ಕೆ ಭ್ರಷ್ಟಾಚಾರವೇ ಕಾರಣ ಎಂಬುದು ಅವರ ನಂಬಿಕೆ. ಪ್ರತಿ ವರ್ಷ ಅನೇಕ ಮಂದಿ ವಿದೇಶಗಳಿಗೆ ವಲಸೆ ಹೋಗಲು ಇದೇ ಮುಖ್ಯ ಕಾರಣ. ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯಗಳಿಂದ ಶುರುಮಾಡಿದ 'ಹಮಿ ನೇಪಾಳ', ವರ್ಷಗಳು ಕಳೆದಂತೆ ಯುವ ಜಾಗೃತಿ ಕಾರ್ಯಕ್ರಮಗಳತ್ತ ಗಮನ ಹರಿಸಿತು.
ಹರಿದು ಬಂದ ಯುವಕರ ದಂಡು
ಗುರುಂಗ್ ಅವರ ಕಾರ್ಯಕ್ರಮಗಳಿಗೆ ಪಾಶ್ಚಾತ್ಯ ಬಹುರಾಷ್ಟ್ರೀಯ ಕಂಪನಿಗಳಿಂದ ಭಾರಿ ದೇಣಿಗೆಗಳು ಹರಿದುಬರುತ್ತಿದ್ದವು ಎಂದು ನೇಪಾಳದಲ್ಲಿ ಅನೇಕರು ಹೇಳುತ್ತಾರೆ. ನೇಪಾಳದ ರಾಜಕೀಯ ಪಕ್ಷಗಳಿಂದ ಭ್ರಮನಿರಸನಗೊಂಡಿದ್ದ ಯುವ ಕಾರ್ಯಕರ್ತರು ಗುರುಂಗ್ ಅವರು ಏರ್ಪಡಿಸಿದ್ದ ಜಾಗೃತಿ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಗುರುಂಗ್ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಸಂಘಟನೆಯ ಮೂಲಕ ಬದಲಾವಣೆ ತರಲು ಬದ್ಧರಾಗಿದ್ದಾರೆಂದು ಜನ ಬಲವಾಗಿ ನಂಬಿದ್ದರು.
ಇದು ಬಾಂಗ್ಲಾದೇಶದ 'ವಿದ್ಯಾರ್ಥಿಗಳ ತಾರತಮ್ಯ ವಿರೋಧಿ ವೇದಿಕೆ’ ನಡೆಸಿದ ಹೋರಾಟದ ತದ್ರೂಪದಂತಿದೆ. ಅಲ್ಲಿಯೂ ಸಹ, ಯುವಜನತೆಯ ಅವಕಾಶಗಳನ್ನು ಕಸಿದುಕೊಂಡು, ಅರ್ಹತೆಯ ವಿರುದ್ಧವಿದ್ದ ಮೀಸಲಾತಿ ವ್ಯವಸ್ಥೆಗೆ ಕೊನೆಹಾಡಲು ಇದೇ ರೀತಿಯ ಹೋರಾಟವನ್ನು ನಡೆಸಲಾಯಿತು.
ಇದೀಗ ತಿಳಿದು ಬಂದಿರುವಂತೆ, ಈ ವೇದಿಕೆಯ ಸಂಯೋಜಕರಿಗೆ ಪಶ್ಚಿಮ ದೇಶಗಳ ರಾಯಭಾರ ಕಚೇರಿಗಳು ನಡೆಸಿದ ಜಾಗೃತಿ ಶಿಬಿರಗಳಲ್ಲಿ ತರಬೇತಿ ನೀಡಲಾಗಿತ್ತು. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾದ ಮುಹಮ್ಮದ್ ಯೂನುಸ್, ಜುಲೈ-ಆಗಸ್ಟ್ 2024ರ ಆಂದೋಲನವನ್ನು ಅತ್ಯಂತ "ಸೂಕ್ಷ್ಮ ರೀತಿಯಲ್ಲಿ ರೂಪಿಸಲಾಗಿದೆ" ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಅಮೆರಿಕದಲ್ಲಿ ಕ್ಲಿಂಟನ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ನೊಬೆಲ್ ಪ್ರಶಸ್ತಿ ವಿಜೇತ ಯೂನುಸ್, ಬಾಂಗ್ಲಾದೇಶದ ಸುದೀರ್ಘ ಕಾಲದ ಪ್ರಧಾನಿಯನ್ನು ಅಧಿಕಾರದಿಂದ ಕೆಳಗಿಳಿಸಿದ ಜುಲೈ-ಆಗಸ್ಟ್ ಆಂದೋಲನದ "ಮಾಸ್ಟರ್ಮೈಂಡ್" ಯುವ ನಾಯಕ ಮಹ್ಫುಜ್ ಅಲಂ ಎಂದು ಹೇಳಿದ್ದಾರೆ.
ಆಂದೋಲನದ ಮಾಸ್ಟರ್‌ಮೈಂಡ್ ಗುರುಂಗ್
ಈ ವಾರ ನೇಪಾಳದಲ್ಲಿ ನಡೆದ ಆಂದೋಲನವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಓಲಿ ಸರ್ಕಾರವನ್ನು ಪದಚ್ಯುತ ಚಳುವಳಿಯ ಹಿಂದಿನ ಮಾಸ್ಟರ್ಮೈಂಡ್ 'ಹಮಿ ನೇಪಾಳ'ದ ಮುಖ್ಯಸ್ಥ ಸುದನ್ ಗುರುಂಗ್ ಎಂದು ಕರೆಯುವ ಆಸೆಯನ್ನು ತಡೆಯುವುದು ಕಷ್ಟ. ಓಲಿ ಸರ್ಕಾರದ ಸಾಮಾಜಿಕ ಮಾಧ್ಯಮಗಳ ನಿಷೇಧದ ವಿರುದ್ಧ ಸೋಮವಾರ ಪ್ರತಿಭಟನೆಗೆ ಸಿದ್ಧರಾದಾಗ, ಗುರುಂಗ್ ಅವರ ಸಹಾಯಕರು ಬಾಂಗ್ಲಾದೇಶದ 'ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನ'ದ ಸಂಯೋಜಕರಂತೆ, ಶಾಲಾ ವಿದ್ಯಾರ್ಥಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲು ಸಂದೇಶ ರವಾನಿಸಿದರು. ಈ ಸಂದೇಶಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರ ಮತ್ತು ಶಾಲಾ ಚೀಲಗಳೊಂದಿಗೆ ಬರುವಂತೆ ಸೂಚಿಸಲಾಗಿತ್ತು. ಇದು ಮೇಲ್ನೋಟಕ್ಕೆ ನಿರುಪದ್ರವಿ ಎನಿಸಿದರೂ, ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿತ್ತು.
ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳನ್ನು ಕಂಡರೆ ಪೊಲೀಸರು ಪ್ರತಿಭಟನೆ ನಿಯಂತ್ರಣ ತಪ್ಪಿದರೂ ಸಹ ಗುಂಡು ಹಾರಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುತ್ತಾರೆ. ಆದರೆ ಒಂದು ವೇಳೆ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡು ಕೆಲವು ಮಕ್ಕಳು ಮೃತಪಟ್ಟರೆ, ಅದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತದೆ ಮತ್ತು ಚಳುವಳಿಯನ್ನು ತಡೆಯಲಾಗದ ಹಂತಕ್ಕೆ ಕೊಂಡೊಯ್ಯುತ್ತದೆ.
ಬಾಂಗ್ಲಾದೇಶ ಮತ್ತು ನೇಪಾಳ ಎರಡರಲ್ಲೂ, ಆಡಳಿತವನ್ನು ರಕ್ಷಿಸಲು ಪೊಲೀಸರು ಕಠಿಣ ಕ್ರಮ ಕೈಗೊಂಡರು. ಯುವಜನರ ಸಾವು ಎರಡೂ ದೇಶಗಳಲ್ಲಿ ಪ್ರತಿಭಟನೆಯನ್ನು ಮರಳಿ ಬರಲಾಗದಷ್ಟು ತೀವ್ರಗೊಳಿಸಿತು. ಆಶ್ಚರ್ಯವೆಂದರೆ, ಸರ್ಕಾರವು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಿದರೂ, ಆಂದೋಲನವು ಮುಂದುವರೆಯಿತು ಮತ್ತು ಇನ್ನಷ್ಟು ಹೆಚ್ಚಾಗುತ್ತಲೇ ಹೋಯಿತು.
ಕೈಮೀರಿದ ಪರಿಸ್ಥಿತಿ
ಬಾಂಗ್ಲಾದೇಶದಲ್ಲಿ, ಶೇಖ್ ಹಸೀನಾ ಅವರು ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಪಡಿಸಲು ಒಪ್ಪಿಕೊಂಡರು. ನೇಪಾಳದಲ್ಲಿ, ಒಂದು ದಿನದ ಪ್ರತಿಭಟನೆಯ ನಂತರ ಕೆ.ಪಿ. ಶರ್ಮಾ ಓಲಿ ಅವರು ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ರದ್ದುಪಡಿಸಲು ನಿರ್ಧರಿಸಿದರು. ಆದರೆ ಈ ನಡೆಗಳು ಯಾವುದೇ ಫಲ ಕೊಡಲಿಲ್ಲ.
ಎರಡೂ ದೇಶಗಳಲ್ಲಿ, ಪ್ರತಿಭಟನಾಕಾರರು ಪೊಲೀಸ್ ಗೋಲಿಬಾರ್ಗಳಲ್ಲಿ ಸಂಭವಿಸಿದ ಸಾವುಗಳಿಗೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಮತ್ತೆ ಬೀದಿಗಿಳಿದರು ಮತ್ತು ಮಂತ್ರಿಗಳ ರಾಜೀನಾಮೆಗೆ ಪಟ್ಟು ಹಿಡಿದರು. ಬಾಂಗ್ಲಾದೇಶದಲ್ಲಿ, ಹಸೀನಾ ದೇಶಬಿಟ್ಟು ಪಲಾಯನ ಮಾಡುವವರೆಗೂ ಅವರ ಬೆಂಬಲಿಗರು ಪ್ರತಿರೋಧ ಒಡ್ಡಿದರು. ನೇಪಾಳದಲ್ಲಿ, ಆಂದೋಲನವನ್ನು ನಿಯಂತ್ರಿಸಲು ಹತಾಶ ಪ್ರಯತ್ನವಾಗಿ, ಓಲಿ ಅವರ ಗೃಹ ಸಚಿವ ರಮೇಶ್ ಲೇಖಕ್ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದರು. ಆದರೆ ಆ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು.
ಬಾಂಗ್ಲಾದೇಶ ಮತ್ತು ನೇಪಾಳ ಎರಡೂ ದೇಶಗಳಲ್ಲಿ ಪ್ರತಿಭಟನೆಗಳನ್ನು ಮುನ್ನಡೆಸಿದ್ದು ಸರ್ವೇ ಸಾಧಾರಣ ಸಂಸ್ಥೆಗಳು. ಈ ಸಂಸ್ಥೆಗಳ ಚಟುವಟಿಕೆಗಳು ಸಾಮಾನ್ಯವಾಗಿ ಗುಪ್ತಚರ ಇಲಾಖೆಗಳ ಗಮನಕ್ಕೆ ಬರುವುದಿಲ್ಲ, ಏಕೆಂದರೆ ಭದ್ರತಾ ಅಧಿಕಾರಿಗಳು ಅವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಎರಡೂ ದೇಶಗಳಲ್ಲಿ, ಪ್ರತಿಭಟನಾ ವೇದಿಕೆಗಳು ಜನರನ್ನು ಸಂಘಟಿಸಲು ಸಾಮಾಜಿಕ ಮಾಧ್ಯಮ ಮತ್ತು ಇತರ ಹೊಸ ತಲೆಮಾರಿನ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿವೆ. ಭ್ರಷ್ಟಾಚಾರ ಮತ್ತು ದಮನದಿಂದ ಸಾರ್ವಜನಿಕರಲ್ಲಿ ಉಂಟಾಗಿದ್ದ ತೀವ್ರ ಆಕ್ರೋಶವನ್ನು ಇದು ಕಡೆಗಣಿಸುವುದಿಲ್ಲ, ಮತ್ತು 'ಹಮಿ ನೇಪಾಳ' ಅಥವಾ ಬಾಂಗ್ಲಾದೇಶದ ವಿದ್ಯಾರ್ಥಿಗಳ ವೇದಿಕೆಯಂತಹ ಸಂಸ್ಥೆಗಳು ಈ ಪರಿಸ್ಥಿತಿಯ ಲಾಭ ಪಡೆದಿವೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.
ಆದರೆ, ಈ ಸಂಸ್ಥೆಗಳು ತಮ್ಮದೇ ಆದ ಸಂಘಟನೆ ಮತ್ತು ನಾಯಕತ್ವವನ್ನು ಒದಗಿಸಲು ಸಾಧ್ಯವಿಲ್ಲ ಎಂದು ನಿರೀಕ್ಷಿಸುವುದು ತಪ್ಪು. ಇಲ್ಲಿ, ಆಡಳಿತ ಬದಲಾವಣೆಯಲ್ಲಿ ಆಸಕ್ತಿ ಹೊಂದಿರುವ ಪ್ರಮುಖ ಶಕ್ತಿಗಳಿಗಾಗಿ ಕೆಲಸ ಮಾಡುವ ಬಾಹ್ಯ ಏಜೆನ್ಸಿಗಳ ಪಾತ್ರವನ್ನೂ ಕಡೆಗಣಿಸುವಂತಿಲ್ಲ. ಬಾಂಗ್ಲಾದೇಶದ ಆಡಳಿತ ಬದಲಾವಣೆಯಲ್ಲಿ ಅಮೆರಿಕದ ಡೀಪ್ ಸ್ಟೇಟ್ನ ಪಾತ್ರ ಈಗಾಗಲೇ ಬಹಿರಂಗವಾಗಿದೆ. ಇದಕ್ಕೆ ಯೂನುಸ್ ಅವರು 'ಸೂಕ್ಷ್ಮ ವಿನ್ಯಾಸ'ದ ಬಗ್ಗೆ ನೀಡಿದ ಹೇಳಿಕೆಯು ಸಾಕ್ಷಿಯಾಗಿದೆ. ನೇಪಾಳದಲ್ಲಿ ಇದೇ ರೀತಿಯ ಸಂಗತಿ ನಡೆದಿದೆಯೇ ಎಂಬುದನ್ನು ತಿಳಿಯಲು ನಾವು ಸ್ವಲ್ಪ ಕಾಲ ಕಾಯಬೇಕಾಗಬಹುದು.