ರದ್ದಾದ ಜಾವೇದ್ ಅಖ್ತರ್ ಕಾರ್ಯಕ್ರಮ: ಸಾಂಸ್ಕೃತಿಕ ಅಧಃಪತನದ ಹಾದಿಯಲ್ಲಿ ಪ.ಬಂಗಾಲ
ಇಸ್ಲಾಮಿಕ್ ಮೂಲಭೂತವಾದಕ್ಕೆ ಮಂಡಿಯೂರುವ ಮೂಲಕ ಪ. ಬಂಗಾಲ ಹಿಂದೂ ರಾಷ್ಟ್ರೀಯತೆಯನ್ನು ಇನ್ನಷ್ಟು ಬಲಪಡಿಸುತ್ತಿದೆ. ಕೋಮು ನಿರೂಪಣೆಗೆ ಉತ್ತೇಜನ ನೀಡಲು ಬಿಜೆಪಿಗೆ ಹೊಸ ಕಥೆಯನ್ನು ನೀಡುತ್ತಿದೆ.;
ಒಂದು ಕಾಲದಲ್ಲಿ ಬೌದ್ಧಿಕ ಉತ್ಸಾಹ ಮತ್ತು ಸಂಸ್ಕೃತಿಯ ಸಮನ್ವಯದ ತಾಣವಾಗಿದ್ದ ಪಶ್ಚಿಮ ಬಂಗಾಲವು ಈಗ ಕ್ರಮೇಣ ಉದಾರವಾದಿ ಶಕ್ತಿಗಳಿಗೆ ಶರಣಾಗುತ್ತಿದೆ. ಜಾವೇದ್ ಅಖ್ತರ್ ಅವರ ಇತ್ತೀಚಿನ ಕಾರ್ಯಕ್ರಮ ರದ್ಧತಿ ಕೇವಲ ಒಂದು ಪ್ರಮಾದ ಎಂದು ತಳ್ಳಿಹಾಕುವಂತಿಲ್ಲ. ಇದು ಅಧಿಕಾರಕ್ಕಾಗಿ ವಾಕ್ ಸ್ವಾತಂತ್ರ್ಯವನ್ನು ಬಲಿಗೊಡುವ ರಾಜಕೀಯ ಒಪ್ಪಂದಕ್ಕೆ ತೆತ್ತ ಬೆಲೆಯಾಗಿದೆ. ಇದರ ಪರಿಣಾಮಗಳು ಬಂಗಾಲದ ಆತ್ಮವನ್ನು ವಿನಾಶದಂಚಿಗೆ ಕರೆದೊಯ್ಯಲಿದೆ.
‘ಸಿಟಿ ಆಪ್ ಜಾಯ್’ ಎಂಬ ಖ್ಯಾತಿಯನ್ನು ಪಡೆದ ನಗರದ ಮೇಲೆ ಮೌನವೊಂದು ಆವರಿಸಿದೆ. ಇದು ಶಾಂತಿಯನ್ನು ಸಂಕೇತಿಸುವ ಮೌನವಲ್ಲ. ಬದಲಾಗಿ ನಮ್ಮ ಮೇಲೆ ಹೇರಲಾದ ಅನುರೂಪದ ಮೌನ. ಇದು ಮೈಕ್ರೋಫೋನ್ ಕತ್ತು ಹಿಸುಕಿದ, ಆಹ್ವಾನವನ್ನು ರದ್ದುಪಡಿಸಿದ, ಕವಿಯ ಧ್ವನಿಯು ಆಲಿಸಲು ಅಪಾಯಕಾರಿ ಎಂದು ಪರಿಗಣಿಸುವ ಪ್ರವೃತ್ತಿ.
ಸಾಂಸ್ಕೃತಿಕ ಪ್ರಮಾದಕ್ಕಿಂತ ಅಧಿಕ
ಜಾವೇದ್ ಅಖ್ತರ್ ಅವರ ಕಾರ್ಯಕ್ರಮವನ್ನು ‘ಮುಂದೂಡಲಾಗಿದೆ’ ಎನ್ನುವ ಪಶ್ಚಿಮ ಬಂಗಾಲದ ಹೇಡಿತನದ ಹೇಳಿಕೆಯು ಒಂದು ಸಾಂಸ್ಕೃತಿಕ ಪ್ರಮಾದಕ್ಕಿಂತ ಅಧಿಕವಾಗಿದೆ. ಇದು ರಾಜ್ಯದ ರಾಜಕೀಯ ಗಣ್ಯರು ಮಾಡಿಕೊಂಡ ‘ಫೌಸ್ಟಿಯನ್ ಒಪ್ಪಂದ’ಕ್ಕೆ ಬೆಲೆ ತೆತ್ತ ಇತ್ತೀಚಿನ ಉದಾಹರಣೆ. ಅವರು ಚುನಾವಣಾ ಅಧಿಕಾರಕ್ಕಾಗಿ ಮೂಲಭೂತವಾದವೆಂಬ ಭೂತಕ್ಕೆ ಜಾತ್ಯತೀತ ಆತ್ಮವನ್ನು ವಿನಿಮಯ ಮಾಡಿಕೊಂಡಿದ್ದಕ್ಕೆ ಜೀವಂತ ಸಾಕ್ಷಿ.
ಈ ವಹಿವಾಟಿಗೆ ಸುದೀರ್ಘ ಇತಿಹಾಸವೇ ಇದೆ. ಇದರ ಖಾತೆ ಆರಂಭವಾಗಿದ್ದು 2007ರಲ್ಲಿ ಆಗಿನ ಎಡರಂಗ ಸರ್ಕಾರ ಬೀದಿಗಿಳಿದ ಪ್ರತಿಭಟನಕಾರರನ್ನು ಸಮಾಧಾನಪಡಿಸಲು ಲೇಖಕಿ ತಸ್ಲೀಮಾ ನಸ್ರೀನ್ ಅವರ ಸ್ವಾತಂತ್ರ್ಯವನ್ನು ಬಲಿಕೊಡುವುದರ ಮೂಲಕ ಈ ನಾಚಿಕೆಗೇಡಿನ ಅಧ್ಯಾಯಕ್ಕೆ ಮುನ್ನುಡಿ ಬರೆಯಲಾಯಿತು.
ಈಗ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಸರ್ಕಾರ ಹೆಸರಿಗೆ ಜಾತ್ಯತೀತ ನಿಲುವನ್ನು ಪ್ರತಿಪಾದಿಸುತ್ತಿದೆ. ಆದರೆ ಅಸಲಿಗೆ ಅದೇ ರೀತಿಯ ಶರಣಾಗತಿ ನೀತಿಯನ್ನು ಮುಂದುವರಿಸಿದೆ. ಇಲ್ಲಿ ಕೇವಲ ಆಟಗಾರರು ಮಾತ್ರ ಬದಲಾಗಿದ್ದಾರೆ. ಇದರಿಂದ ಪ್ರತಿಯೊಬ್ಬ ಕಲಾವಿದ, ಲೇಖಕ, ಚಿಂತಕರಿಗೆ ನೀಡುವ ಸಂದೇಶ ಸ್ಪಷ್ಟವಾಗಿದೆ; ನಿಮ್ಮ ಚಿಂತನೆಗಳಿಂದ ಸಂಪ್ರದಾಯಕ್ಕೆ ತೊಂದರೆಯಾದರೆ ನೀವು ಇಲ್ಲಿ ಯಾರಿಗೂ ಬೇಕಾಗಿಲ್ಲ. ಸರ್ಕಾರ ನಿಮ್ಮ ರಕ್ಷಣೆಗೆ ಬರುವುದಿಲ್ಲ, ಬದಲಾಗಿ ಬಾಯಿ ಮುಚ್ಚಿಸುತ್ತದೆ.
ಇದಕ್ಕೆ ಅವರು ನೀಡುವ ಸಮರ್ಥನೆಗಳು ಒಂದೇ: ‘ಕೋಮು ಸೌಹಾರ್ದತೆ’ಯನ್ನು ಕಾಪಾಡುವುದು. ಇದಕ್ಕಿಂತ ಹಸಿಹಸಿ ಸುಳ್ಳು ಇನ್ನೊಂದಿಲ್ಲ. ನಿಜವಾದ ಸೌಹಾರ್ದತೆ ಎಂದರೆ ಸೆನ್ಸಾರ್-ಶಿಪ್ ಮೂಲಕ ಸಾಧಿಸಿದ ಸಂಘರ್ಷದ ಅನುಪಸ್ಥಿತಿಯಲ್ಲ. ಅದು ಚಲನಶೀಲವಾದದು, ಕೆಲವೊಮ್ಮೆ ಗದ್ದಲಪೂರ್ಣವೂ ಹೌದು. ಇದು ಸರ್ಕಾರದ ಮೂಲಕ ದಕ್ಕಿಸಿಕೊಂಡ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕು.
ಸೌಹಾರ್ದತೆಯ ಲಕ್ಷಣವಲ್ಲ ಇದು
ಜಮಿಯತ್ ಉಲೇಮಾ-ಇ-ಹಿಂದ್ ನಂತಹ ಸಂಘಟನೆಗಳು ಬೇಡಿಕೆ ಮಾಡುವುದು ಮತ್ತು ಅದಕ್ಕೆ ರಾಜ್ಯ ಸರ್ಕಾರ ಮಣಿಯುವುದು ಸೌಹಾರ್ದತೆ ಅಲ್ಲ ಬದಲಾಗಿ, ಅಧಿಪತ್ಯದ ಸಂಕೇತ.
ಇಲ್ಲಿ ಅವರ ಬೆದರಿಕೆ ತೀರಾ ಸರಳವಾಗಿದೆ: ಕಾರ್ಯಕ್ರಮದ ಮಿತಿಗಳನ್ನು ನಿರ್ದೇಶಿಸಲು ನಮಗೆ ಅವಕಾಶ ಮಾಡಿಕೊಡಿ, ಇಲ್ಲದಿದ್ದರೆ ನಾವು ಅಶಾಂತಿಯನ್ನು ಸೃಷ್ಟಿಸುತ್ತೇವೆ. ಸರ್ಕಾರವು ಇದಕ್ಕೆ ಮಣಿಯುವುದರಿಂದ ಶಾಂತಿ ಉಳಿಯುವುದಿಲ್ಲ. ಬದಲಾಗಿ, ಅದು ಕೇವಲ ಶಾಂತಿಯನ್ನು ಬಾಡಿಗೆಗೆ ಪಡೆದುಕೊಳ್ಳುತ್ತದೆ ಮತ್ತು ಅದು ಬಲಿಕೊಡುತ್ತಿರುವುದು ರಾಜ್ಯದ ಬೌದ್ಧಿಕ ಜೀವನ ಎಂಬುದನ್ನು ಮರೆಯಬಾರದು.
ಆಲಿಸಲು ಅತಿ ಅಪಾಯಕಾರಿ ಎಂದು ಪರಿಗಣಿಸಲಾದ ಧ್ವನಿಯು ನಿಖರವಾಗಿ ಬಂಗಾಳವು ಕೇಳಬೇಕಾಗಿದ್ದ ಧ್ವನಿಯೇ ಆಗಿತ್ತು ಎಂಬುದೇ ಅತಿ ದೊಡ್ಡ ದುರಂತ.
ರದ್ದಾದ ಅಧಿಕೃತ ವೇದಿಕೆಯಿಂದ ಬಹಳ ದೂರದ ಖಾಸಗಿ ಸಭೆಯೊಂದರಲ್ಲಿ ಮಾತನಾಡಿದ ಜಾವೇದ್ ಅಖ್ತರ್ ಅವರು, ಸಾರ್ವಜನಿಕ ಜೀವನದಿಂದ ವ್ಯವಸ್ಥಿತವಾಗಿ ಮಾಯವಾಗುತ್ತಿರುವ ಕೆಚ್ಚೆದೆಯ ನಿಲುವನ್ನು ಪ್ರದರ್ಶಿಸಿದರು. ಸರ್ಕಾರವು ನಿರಾಕರಿಸಿದ ಕೆಲಸವನ್ನು ಅವರು ಮಾಡಿದರು. ಆ ಮೂಲಕ ಅವರು ಪ್ರಾಮಾಣಿಕ ಮತ್ತು ಆಂತರಂಗದ ವಿಮರ್ಶೆ ನಡೆಸುವ ಕಾರ್ಯವನ್ನು ಮಾಡಿದರು.
ರಾಜಾರಾಮ್ ಮೋಹನ್ ರಾಯ್ ಅವರಂತಹ ಸಮಾಜ ಸುಧಾರಕರು ತಮ್ಮದೇ ಸಮಾಜದಲ್ಲಿ ಯಾಕೆ ಹೊರಹೊಮ್ಮಲು ಸಾಧ್ಯವಾಗಲಿಲ್ಲ ಎಂದು ಮುಸ್ಲಿಂ ರಾಜಕೀಯ ನಾಯಕತ್ವವನ್ನು ಅವರು ಪ್ರಶ್ನಿಸಿದ್ದಾರೆ.
ತಮ್ಮ ಸಾಂವಿಧಾನಿಕ ವಾದದ ಮೂಲಕ, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಜಾವೇದ್ ನಡೆಸಿದರು. ಭಾರತದ ಜಾತ್ಯತೀತ ಚೌಕಟ್ಟನ್ನು ಜಾತ್ಯತೀತ ಹಿಂದೂಗಳು ಕಟ್ಟಿದ್ದರೂ ಕೂಡ ಅದೇನು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡಿಮೆ ಮಾಡುವುದಿಲ್ಲ ಅಥವಾ ಬಹುಸಂಖ್ಯಾತರ ತಪ್ಪುಗಳನ್ನು ಕ್ಷಮಿಸುವುದಿಲ್ಲ ಎಂಬುದನ್ನು ಐತಿಹಾಸಿಕ ಸಂದರ್ಭಕ್ಕೆ ಅನುಗುಣವಾಗಿ ಒಪ್ಪಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಇದು ಮೂಲಭೂತವಾದಕ್ಕೆ ಸಂಪೂರ್ಣ ಪ್ರತಿವಿಷವಾಗಿರುವ ಸೂಕ್ಷ್ಮ ಮತ್ತು ಆತ್ಮಾವಲೋಕನದ ಹೇಳಿಕೆ. ಆದರೂ, ಸರ್ಕಾರವು, ತನ್ನ ಅಪರಿಮಿತ ಹೇಡಿತನದ ಫಲವಾಗಿ, ವಿವೇಚನೆಯ ಧ್ವನಿಯ ಬದಲಾಗಿ ಮತಾಂಧ ಶಕ್ತಿಗಳ ಪರ ನಿಂತಿದೆ. ಹಾಗೆ ಮಾಡುವ ಮೂಲಕ ಅದು ಒಂದು ಸಮುದಾಯವನ್ನು ರಕ್ಷಿಸುವುದಕ್ಕೆ ಬದಲಾಗಿ ಅದಕ್ಕೆ ದ್ರೋಹ ಎಸಗುವ ಕೆಲಸ ಮಾಡಿದೆ ಮತ್ತು ಯುವ ಹಾಗೂ ಪ್ರಗತಿಪರ ಮುಸ್ಲಿಮರ ಆಧುನಿಕ ಆಶಯಗಳು ಮೌಲ್ವಿಗಳ ಕೋಪಕ್ಕಿಂತ ಮೌಲ್ಯಯುತವಾದುದಲ್ಲ ಎಂದು ಹೇಳಿದೆ.
ಉಗ್ರವಾದಕ್ಕೆ ಪ್ರೇರಕಶಕ್ತಿ
ಇಂತಹ ಕ್ರಮದ ಮೂಲಕ, ಏಕರೂಪ ನಾಗರಿಕ ಸಂಹಿತೆಯಡಿಯಲ್ಲಿ ಲಿಂಗ ಸಮಾನತೆಗಾಗಿ ಹೋರಾಟವನ್ನು ಏಕಾಂಗಿಯಾಗಿ ನಡೆಸಬೇಕು ಎಂದು ಅವರಿಗೆ ಹೇಳಿದಂತಾಗಿದೆ. ಅಂದರೆ ತೀವ್ರಗಾಮಿ ನಿಲುವಿನ ಸಮುದಾಯದ ನಾಯಕರು ಮತ್ತು ರಾಜ್ಯ ಸರ್ಕಾರದ ವಿರುದ್ಧವೂ ಅವರು ಹೋರಾಡಬೇಕು. ಆದರೆ ಒತ್ತಡವೇನಾದರೂ ಬಂದರೆ ನಾವು ನಿಮ್ಮನ್ನು ಕೈಬಿಡುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದಂತಾಗಿದೆ.
ಈ ರೀತಿಯ ದ್ವಿಮುಖ ದ್ರೋಹವು ಉಗ್ರವಾದಕ್ಕೆ ಪ್ರೇರಕಶಕ್ತಿ. ಹೀಗೆ ಇಸ್ಲಾಮಿಕ್ ಮೂಲಭೂತವಾದಕ್ಕೆ ಶರಣಾಗುವ ಮೂಲಕ, ಸರ್ಕಾರವು ಹಿಂದೂ ರಾಷ್ಟ್ರೀಯವಾದದ ಕೈಗಳನ್ನು ಬಲಪಡಿಸುತ್ತದೆ. 'ನೋಡಿ, ಇವರು ಎಂದಿಗೂ ಸುಧಾರಣೆಗೊಳ್ಳಲು ಸಾಧ್ಯವಿಲ್ಲ. ಅವರೆಲ್ಲರೂ ಒಂದೇ,’ ಎಂದು ಬಿಜೆಪಿಗೆ ಕಥೆ ಕಟ್ಟಲು ಅವಕಾಶ ಮಾಡಿಕೊಟ್ಟಂತಾಗಿದೆ.
ಸರ್ಕಾರದ ಈ ಶರಣಾಗತಿಯು, ಅದು ವಿರೋಧಿಸುವ ಶಕ್ತಿಗಳಿಗೆ ಒಂದು ವರದಾನವಾಗುತ್ತದೆ. ಇದು ಪ್ರತಿಸ್ಪರ್ಧಿ ಮೂಲಭೂತವಾದಿಗಳು ಪರಸ್ಪರ ಬಲಗೊಳ್ಳುವಂತಹ ವಿಷವರ್ತುಲವನ್ನು ಸೃಷ್ಟಿಸುತ್ತದೆ. ಇವೆಲ್ಲದರ ನಡುವೆ ಉದಾರವಾದಿ ನಿಲುವುಗಳು ನಲುಗಿ ಹೋಗುತ್ತವೆ.
ಬಂಗಾಳ ಒಂದು ಅಂಚಿನಲ್ಲಿದೆ. ಇದು ಕೋಪಗೊಂಡವರ ವೀಟೋ ಅಧಿಕಾರದಿಂದಲೇ ಆಡಳಿತ ನಡೆಸುವುದನ್ನು ಮುಂದುವರಿಸಬಹುದು. ಅಲ್ಲಿ ಪ್ರತಿ ಕಾರ್ಯಕ್ರಮವನ್ನು ಗುಂಪುಗಳು ಪರಿಶೀಲಿಸುತ್ತವೆ ಮತ್ತು ಪ್ರತಿಯೊಂದು ಕಲ್ಪನೆಯು ಧಾರ್ಮಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಿದೆ. ಅಥವಾ, ಅದು ತನ್ನ ಇತಿಹಾಸವನ್ನು ನೆನಪಿಸಿಕೊಳ್ಳಬಹುದು - ವಿವೇಚನೆಯಿಂದ ಮತಾಂಧತೆಯ ವಿರುದ್ಧ ಮತ್ತು ಪ್ರಗತಿಯಿಂದ ಸಂಪ್ರದಾಯದ ವಿರುದ್ಧ ಹೋರಾಡಿದ ಶ್ರೇಷ್ಠ ಬುದ್ಧಿಜೀವಿಗಳು ಮತ್ತು ಸಮಾಜ ಸುಧಾರಕರ ಇತಿಹಾಸವನ್ನು ಅದು ನೆನಪಿಸಿಕೊಳ್ಳಬಹುದು.
ಬಂಗಾಲ ಈಗ ಪ್ರಪಾತದ ಅಂಚಿನಲ್ಲಿ ನಿಂತಿದೆ. ಪ್ರತಿಯೊಂದು ಕಾರ್ಯಕ್ರಮವನ್ನೂ, ಚಿಂತನೆಯನ್ನೂ ಧಾರ್ಮಿಕ ಅಗ್ನಿಪರೀಕ್ಷೆಯ ಮೂಲಕ ಅನುಮೋದಿಸುವ ಮಂದಿಯ ಅಣತಿಯ ಮೂಲಕವೇ ಸರ್ಕಾರ ಚಲಾಯಿಸುವುದನ್ನು ಅದು ಮುಂದುವರಿಸಬಹುದು.
ಬದಲಾಗಲಿ ರಾಜಕೀಯ ಲೆಕ್ಕಾಚಾರ
ಜಾವೇದ್ ಅಖ್ತರ್ ಅವರ ಕಾರ್ಯಕ್ರಮ ರದ್ದಾದ ನಂತರ ಆವರಿಸಿರುವ ಮೌನವೇ ಕಿವಿಗಡಚಿಕ್ಕುವಂತಿದೆ. ಇದು, ಒಂದು ರಾಜ್ಯ ತಾನು ನಿಜಕ್ಕೂ ಯಾರು ಎಂಬುದನ್ನು ಮರೆಯುತ್ತಿರುವ ಶಬ್ದ. ಈ ಮೌನವನ್ನು ಮುರಿಯಲು, ರಾಜಕೀಯ ಲೆಕ್ಕಾಚಾರ ಬದಲಾಗಬೇಕು.
ಬಂಗಾಳದ ನಾಯಕರ ಮುಂದೆ ಈಗಿರುವ ಪ್ರಶ್ನೆ “ನಾವು ಪ್ರತಿಯೊಂದು ಗುಂಪನ್ನು ಹೇಗೆ ಸಮಾಧಾನಪಡಿಸಬೇಕು?" ಎಂಬುದಲ್ಲ, ಬದಲಾಗಿ “ನಾಯಕತ್ವ ವಹಿಸುವ ಧೈರ್ಯ ನಮಗಿದೆಯೇ?" ಎಂಬ ಪ್ರಶ್ನೆ. ಅಲ್ಲಿಯವರೆಗೆ ಈ ಮಡುಗಟ್ಟಿರುವ ಮೌನವು ಇನ್ನಷ್ಟು ಗಾಢವಾಗುತ್ತದೆ ಮತ್ತು ಕ್ಷಣಿಕ ಹಾಗೂ ಕಪಟ ಶಾಂತಿಗಾಗಿ ಬಂಗಾಳದ ಆತ್ಮವು ಬೆಲೆ ತೆರುತ್ತಲೇ ಇರುತ್ತದೆ.
ಬಂಗಾಳದ ರಾಜಕೀಯದಲ್ಲಿ ಒಂದು ಅಪಾಯಕಾರಿ ಪ್ರವೃತ್ತಿ ಸದ್ದಿಲ್ಲದೆ ಕುಳಿತಿದೆ ಎಂಬುದನ್ನು ಈ ವಿವಾದವು ಎತ್ತಿ ತೋರಿಸುತ್ತಿದೆ. ಇದು ಸಾಂಸ್ಕೃತಿಕ ಮತ್ತು ಬೌದ್ಧಿಕ ಗಡಿಗಳನ್ನು ನಿರ್ದೇಶಿಸಬಲ್ಲ ಶಕ್ತಿಯಾಗಿ ಇಸ್ಲಾಮಿಕ್ ಮೂಲಭೂತವಾದ ತಲೆಎತ್ತಿ ನಿಂತಿದೆ ಎಂಬುದರ ಸಂಕೇತ. ರಾಜಕೀಯ ಪಕ್ಷಗಳು, ಮೊದಲು ಮಾರ್ಕ್ಸ್ವಾದಿಗಳು ಮತ್ತು ಈಗ ತೃಣಮೂಲ ಕಾಂಗ್ರೆಸ್, ಈ ಗುಂಪುಗಳ ವೀಟೋ ಅಧಿಕಾರವನ್ನು ಒಪ್ಪಿಕೊಳ್ಳುವ ಮೂಲಕ ಅವುಗಳನ್ನು ಮತ್ತೆ ಮತ್ತೆ ಕಾನೂನುಬದ್ಧಗೊಳಿಸುತ್ತಿವೆ ಮತ್ತು ಸಮುದಾಯದ ಭಾವನೆಗಳ ಕಾವಲುಗಾರರಾಗಿ ಕಾರ್ಯನಿರ್ವಹಿಸಲು ಅವುಗಳಿಗೆ ಅಧಿಕಾರ ನೀಡಿವೆ ಎಂಬುದು ಸ್ಪಷ್ಟವಾಗುತ್ತಿದೆ.
ಇದಕ್ಕೆ ಅಂತಿಮವಾಗಿ ಬಲಿಪಶುವಾಗುವುದು ನಿಜವಾದ ಜಾತ್ಯತೀತತೆ. ಒಂದು ರೀತಿಯ ಉಗ್ರವಾದವನ್ನು ಎದುರಿಸುವ ಸೋಗಿನಲ್ಲಿ ಇನ್ನೊಂದು ರೀತಿಯ ಉಗ್ರವಾದಕ್ಕೆ ಶರಣಾಗುವ ಪ್ರವೃತ್ತಿ ಇದು. ಆ ಮೂಲಕ, ಸರ್ಕಾರವು ಉದಾರವಾದಿ ನಿಲುವನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರತಿಸ್ಪರ್ಧಿ ಮೂಲಭೂತವಾದಗಳು ಪ್ರವರ್ಧಮಾನಕ್ಕೆ ಬರುವ ವಿಷವರ್ತುಲಕ್ಕೆ ಜೀವ ತುಂಬುತ್ತದೆ.
ರದ್ದಾದ ಜಾವೇದ್ ಅಖ್ತರ್ ಅವರ ಕಾರ್ಯಕ್ರಮವು ಈ ವೈಫಲ್ಯದ ಸಂಕೇತವಾಗಿದೆ – ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಧೈರ್ಯವಿಲ್ಲದ ಬಂಗಾಳದ ನಾಯಕರು ಇಂತಹ ಧ್ವನಿಗಳಿಗೆ ಮೌನ ಸ್ಮಾರಕವಾಗಿದ್ದಾರೆ.