ಬಿಹಾರ ಎಸ್ಐಆರ್ ಕಸರತ್ತು: ಚುನಾವಣೆಗೆ ಮುನ್ನವೇ ನಿತೀಶ್ ಪದಚ್ಯುತಿಗೆ ಕರಾಮತ್ತು?
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ‘ಸಮರ್ಥ ಆಡಳಿತಗಾರ’ ಎಂಬ ಮೆರುಗನ್ನು ಕಳೆದುಕೊಂಡಿದ್ದಾರೆ. ಚುನಾವಣಾ ಆಯೋಗದ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’(SIR)ಯ ಮೂಲಕ ಆ ರಾಜ್ಯದಲ್ಲೊಂದು ಹೊಸ ಮುಖವನ್ನು ಅನಾವರಣ ಮಾಡಲು ಇದೊಂದು ಸೂಕ್ತ ಸಮಯವಾಗಿದೆ.;
ಭಾರೀ ಸಂಖ್ಯೆಯ ಮತದಾರರ ಹೆಸರನ್ನು ಅಳಿಸಿಹಾಕುವ ಮೂಲಕ ರಚಿಸಲಾದ ಹೊಸ ಮತದಾರರ ಪಟ್ಟಿಯನ್ನು ತರಾತುರಿಯಲ್ಲಿ ಬಿಡುಗಡೆಮಾಡುವ ಚುನಾವಣಾ ಆಯೋಗದ ನಿರ್ಧಾರವು ದೇಶಾದ್ಯಂತ ವ್ಯಾಪಕ ಪ್ರತಿಭಟನೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಬಿಹಾರ ಮತ್ತು ಇತರ ರಾಜ್ಯಗಳಲ್ಲಿ ಇತ್ತೀಚಿನ ದಶಕಗಳಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕವಾಗಿ ರೂಪುಗೊಂಡ ಜಾತಿ ಗಣ್ಯರನ್ನು ಒಳಗೊಂಡ ಬಿಜೆಪಿಯ ಪ್ರಮುಖ ಮತದಾರರ ಕ್ಷೇತ್ರಗಳಿಗೆ ಲಾಭಮಾಡಿಕೊಡುವ ಉದ್ದೇಶ ಇದರ ಹಿಂದೆ ಇರುವಂತೆ ಕಾಣುತ್ತಿದೆ.
ಆದರೆ ಬಿಹಾರದಲ್ಲಿ ಇದಕ್ಕೆ ಇನ್ನೂ ಒಂದು ಆಯಾಮವಿದೆ. ಅದು ತಕ್ಕಮಟ್ಟಿಗೆ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಬಹುದು. ಪಂಜಾಬ್ ಮತ್ತು ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಉತ್ತರ ಭಾರತದಲ್ಲಿ ಬಿಜೆಪಿ ತನ್ನದೇ ಆದ ಮುಖ್ಯಮಂತ್ರಿಯನ್ನು ಹೊಂದಿಲ್ಲದೇ ಇರುವ ಏಕೈಕ ರಾಜ್ಯವೇನಾದರೂ ಇದ್ದರೆ ಅದು ಬಿಹಾರ ಮಾತ್ರ. ಅದು ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದರೂ ಕೂಡ ಇದು ಸಾಧ್ಯವಾಗಿಲ್ಲ.
1947ರ ವಿಭಜನೆಯ ಬಳಿಕ ಪಂಜಾಬ್ ರಾಜ್ಯದಲ್ಲಿ ಹಿಂದೂ ಪ್ರಾಬಲ್ಯದ ಬಿಜೆಪಿಗೆ ಬೆಂಬಲವನ್ನು ನೀಡಲು ಮುಸ್ಲಿಂ ಸಮುದಾಯದವರು ಯಾರೂ ಉಳಿದಿಲ್ಲ. ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಂ ಜನಸಂಖ್ಯೆಯೇ ಪ್ರಾಬಲ್ಯ ಹೊಂದಿರುವುದರಿಂದ ಕಣಿವೆಯನ್ನು ಕೋಮುವಾದಿ ತೆಕ್ಕೆಯೊಳಗೆ ತರಲು ಅಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಹಿಂದುಗಳಿದ್ದಾರೆ.
ಜಮ್ಮು ವಿಭಜನೆಯ ಸಂದರ್ಭದಲ್ಲಿ ಉಂಟಾದ ಸಮಸ್ಯೆಗಳ ಬಳಿಕ ಬಿಜೆಪಿ ಮೇಲುಗೈ ಸಾಧಿಸಿತಾದರೂ ಆದರೆ ತನ್ನದೇ ಆದ ಮುಖ್ಯಮಂತ್ರಿಯನ್ನು ಸ್ಥಾಪನೆ ಮಾಡಲು ಅದಕ್ಕೆ ಸಾಧ್ಯವಾಗಲಿಲ್ಲ.
ಸಿಗದ ಸಿಎಂ ಪಟ್ಟ
ಈ ಎಲ್ಲ ಹಿನ್ನೆಲೆಯಲ್ಲಿ ಬಿಹಾರಕ್ಕೆ ಹೆಚ್ಚಿನ ಮಹತ್ವ ಬಂದಿದೆ ಎನ್ನುವುದು ದಿಟ. ಯಾಕೆಂದರೆ ಇದೊಂದು ‘ಸಾಮಾನ್ಯ’ ಹಿಂದಿ ಭಾಷಾ ಪ್ರಾಬಲ್ಯವಿರುವ ರಾಜ್ಯ. ಉತ್ತರ ಪ್ರದೇಶದ ಬಳಿಕ ಅತಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯವಿದ್ದರೆ ಅದು ಬಿಹಾರ. ಇತ್ತೀಚಿನ ದಿನಗಳಲ್ಲಿ ಈ ರಾಜ್ಯದಲ್ಲಿ ಬಿಜೆಪಿ ಗಣನೀಯವಾದ ಪ್ರಭಾವವನ್ನು ಪಡೆದಿದೆ. ಹಾಗಿದ್ದೂ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಅದೃಷ್ಟ ಅದಕ್ಕಿನ್ನೂ ಬಂದಿಲ್ಲ.
ವ್ಯಾಪಕವಾಗಿ ಶಂಕಿಸಲಾಗಿರುವಂತೆ ತಿದ್ದುಪಡಿ ಮಾಡಲಾದ ಮತದಾರರ ಪಟ್ಟಿಯ ಆಧಾರದಲ್ಲಿ ವಿಧಾನ ಸಭಾ ಚುನಾವಣೆಯನ್ನು ನಡೆಸಲಾಗುತ್ತದೆ. ಒಂದು ವೇಳೆ ಇದು ಭಾರೀ ಅಕ್ರಮ ಮತ್ತು ರಾಜಕೀಯ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಬೇಕಾದರೂ ಅದನ್ನು ತುರ್ತು ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿಗೆ ತನ್ನದೇ ಒಬ್ಬ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲು ನೆರವಾಗಬಹುದು.
ಚುನಾವಣಾ ವಿಜಯದ ಬಳಿಕ ಇಂತಹುದೊಂದು ಅಂತಿಮ ಪರಿಣಾಮವು ಸಾಧ್ಯವಾದರೆ ಅದರಿಂದ ಸರ್ಕಾರ ಮತ್ತು ಆಡಳಿತ ಪಕ್ಷದ ಮೇಲೆ ಮೋದಿ ಅವರ ಹಿಡಿತವನ್ನು ಮತ್ತಷ್ಟು ಬಲಪಡಿಸಬಹುದು.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.)ದ ಮುಖ್ಯಸ್ಥರಾದ ಮೋಹನ್ ಭಾಗವತ್ ಮತ್ತು ನರೇಂದ್ರ ಮೋದಿ ಅವರ ನಡುವೆ ಬಹಿರಂಗವಾಗಿಯೇ ಕಾಣಿಸಿಕೊಂಡಿರುವ ಭಿನ್ನಾಭಿಪ್ರಾಯದ ಹಿನ್ನೆಲೆಯೂ ಈ ವಿಷಯಕ್ಕೆ ಹೆಚ್ಚಿನ ಮಹತ್ವವಿದೆ.
ಈ ನಡುವೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆ ಮತ್ತು ಬಿಜೆಪಿಗೆ ಹೊಸ ಸಾರಥಿಯನ್ನು ಹುಡುಕುವ ಪ್ರಶ್ನೆಯಿಂದಲೂ ಸಾಕಷ್ಟು ತೊಡಕುಗಳು ಉಂಟಾಗಿವೆ.
ಜೆ.ಪಿ.ನಡ್ಡಾ ಅವರು ಬಿಜೆಪಿ ಅಧ್ಯಕ್ಷ ಪದವಿಯನ್ನು ಅಲಂಕರಿಸಿ ಆರು ವರುಷಗಳೇ ಗತಿಸಿವೆ. ಆ ಹುದ್ದೆಗೊಬ್ಬ ಉತ್ತರಾಧಿಕಾರಿಯನ್ನು ಪ್ರತಿಷ್ಠಾಪಿಸಲು ಮೋದಿ ಅವರ ಒಪ್ಪಿಗೆಯ ಜೊತೆಗೇ ತನ್ನ ಅನುಮೋದನೆಯು ಬೇಕು ಎಂದು ಆರ್.ಎಸ್.ಎಸ್. ಬಯಸುತ್ತದೆ.
ಇವೆಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಹೊಸ ಮತದಾರರ ಪಟ್ಟಿಯ ಆಧಾರದಲ್ಲಿಯೇ ಬಿಹಾರದಲ್ಲಿ ಚುನಾವಣೆಯನ್ನು ಗೆದ್ದರೆ ಮೋದಿ ಅವರಿಗೆ ಲಾಭವಾಗುವುದು ನಿಶ್ಚಿತ. ಆದರೆ ಇನ್ನೂ ಒಂದು ವದಂತಿ ದಟ್ಟವಾಗಿ ಹಬ್ಬಿದೆ. ಅದೇನೆಂದರೆ ಚುನಾವಣೆ ನಡೆಯುವುದಕ್ಕೂ ಮೊದಲೇ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಸ್ಥಾಪನೆಮಾಡಲು ಬಿಜೆಪಿ ಪ್ರಯತ್ನ ನಡೆಸಿದೆ. ಅನೇಕ ಸಂಗತಿಗಳು ಇದಕ್ಕೆ ಪೂರಕವಾಗಿವೆ.
ನಿತೀಶ್ ಸಾಮರ್ಥ್ಯ
ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಾನಸಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗುತ್ತಿದೆ. ವಿಧಾನ ಸಭೆ ಒಳಗೆ ಮತ್ತು ಹೊರಗೆ ಅವರ ಅನಿರೀಕ್ಷಿತ ಮತ್ತು ಅಸಂಬದ್ಧ ಹೇಳಿಕೆಗಳು ಸರ್ಕಾರ ಮತ್ತು ಮಿತ್ರಪಕ್ಷಗಳನ್ನು ಮುಜುಗರಕ್ಕೆ ಗುರಿಪಡಿಸಿರುವುದು ಸ್ಪಷ್ಟ. ಹೀಗಾಗಿ ಹೊಸ ನಾಯಕನನ್ನು ಆಯ್ಕೆಮಾಡಿಕೊಳ್ಳುವ ವಿಷಯವು ಕೇವಲ ಸೈದ್ಧಾಂತಿಕವಾಗಿ ಮಾತ್ರ ಉಳಿದಿಲ್ಲ.
ವಾಸ್ತವವಾಗಿ ಹೇಳಬೇಕೆಂದರೆ ನಿತೀಶ್ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಅವರು ತಾವೊಬ್ಬ ಸಮರ್ಥ ಆಡಳಿತಗಾರ ಮತ್ತು ಚಾಣಾಕ್ಷ ರಾಜಕೀಯ ನಾಯಕ ಎಂಬ ಛಾಪನ್ನು ಕಳೆದುಕೊಂಡು ಸಾಕಷ್ಟು ಕಾಲವೇ ಸಂದುಹೋಗಿದೆ. ಇಂತಹ ಹೊತ್ತಿನಲ್ಲಿ ಚಿಕ್ಕ, ಪೂರ್ವಯೋಜಿತ, ಸಮಯೋಜಿತ, ನಿಖರವಾದ ಪ್ರಯತ್ನಗಳೆಲ್ಲವೂ ಬೇಕಾದೀತು. ಚುನಾವಣೆಗೆ ಮೊದಲೇ ಇಂತಹುದೊಂದು ಹೆಜ್ಜೆ ಇಡುವಲ್ಲಿ ಯಶಸ್ವಿಯಾದರೆ ಮೋದಿ ಅವರ ಪಕ್ಷಕ್ಕೆ ತನ್ನಿಷ್ಟದಂತೆ ಚುನಾವಣೆಯನ್ನು ನಿಭಾಯಿಸಲು ಅನುಕೂಲವಾಗುತ್ತದೆ. ಈಗಾಗಲೇ ಚುನಾವಣಾ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆ (SIR) ಮೂಲಕ ಹಾಕಿಕೊಟ್ಟಿರುವ ಅಡಿಪಾಯವು ಅದಕ್ಕೆ ಭದ್ರನೆಲೆ ಒದಗಿಸಿದಂತಾಗುತ್ತದೆ.
ಇದಕ್ಕೊಂದು ಬಲವಾದ ಸೂಚನೆ ಎಂಬಂತೆ ರಾಜ್ಯದಲ್ಲಿ ಸಾಮಾನ್ಯವಾಗಿ ಬಿಜೆಪಿಯತ್ತ ಒಲವನ್ನು ಹೊಂದಿರುವ ಮಾಧ್ಯಮಗಳು ಅಪರಾಧ ಪ್ರಕರಣಗಳನ್ನು ವ್ಯಾಪಕವಾಗಿ ಬಿಂಬಿಸುವ ಕಾರ್ಯದಲ್ಲಿ ತೊಡಗಿವೆ. ರಾಜ್ಯದಲ್ಲಿ ಈ ಹಿಂದೆ ನಡೆಯುತ್ತಿದ್ದ ಕೊಲೆ-ಸುಲಿಗೆ, ಅಪಹರಣ ಮತ್ತು ಮಹಿಳೆಯರ ಮೇಲಿನ ಹಲ್ಲೆಗಳಂತಹ ಪ್ರಕರಣಗಳ ವಿಚಾರದಲ್ಲಿ ಮೌನ ಪ್ರೇಕ್ಷಕರಂತೆ ವರ್ತಿಸುತ್ತಿದ್ದ ಈ ಮಾಧ್ಯಮಗಳು ಗಂಭೀರ ಅಪರಾಧದ ಗ್ರಾಫ್ ನ್ನು ಏರುಮಟ್ಟದಲ್ಲಿ ತೋರಿಸುತ್ತಿವೆ.
ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಇಂತಹ ರಾಜಕೀಯ ದಂಗೆ ಏನಾದರೂ ಸಂಭವಿಸಿದರೆ ಸಾರ್ವಜನಿಕ ಅಭಿಪ್ರಾಯದ ಆಧಾರದಲ್ಲಿ ರಾಜಕೀಯ ಲೆಕ್ಕಾಚಾರಗಳನ್ನು ಹಾಕಬೇಕಾಗುತ್ತದೆ. ಒಂದು ವೇಳೆ ಈಗಿನ ಮುಖ್ಯಮಂತ್ರಿಯನ್ನು ಪದಚ್ಯತಗೊಳಿಸಿದರೆ ರಾಷ್ಟ್ರಪತಿ ಆಡಳಿತವನ್ನು ಹೇರಬಹುದೇ? ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಆಗ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಬಹುದು.
ಎಸ್ಐಆರ್ ಪ್ರಕ್ರಿಯೆಯನ್ನು ತಡೆಹಿಡಿಯದೇ ಹೋದರೆ ಚುನಾವಣೆಯನ್ನೇ ಬಹಿಷ್ಕರಿಸುವ ಬಗ್ಗೆ ಬಿಹಾರದಲ್ಲಿನ ಪ್ರಮುಖ ವಿರೋಧ ಪಕ್ಷಗಳಾದ ರಾಷ್ಟ್ರೀಯ ಜನತಾ ದಳ (ಆರ್.ಜೆ.ಡಿ) ಮತ್ತು ಕಾಂಗ್ರೆಸ್ ಯೋಚಿಸುತ್ತಿವೆ. ಇದು ಬಿಹಾರದಲ್ಲಿ ಆಡಳಿತಾರೂಢ ಮಿತ್ರಪಕ್ಷಗಳನ್ನು ಮುಜುಗರಕ್ಕೆ ಒಳಪಡಿಸುತ್ತದೆಯೇ? ವಿರೋಧ ಪಕ್ಷಗಳು ಭಾಗವಹಿಸದೇ ಹೋದರೂ ಏಕಪಕ್ಷೀಯ ಚುನಾವಣೆಯನ್ನು ನಡೆಸಲು ಆಡಳಿತಗಾರರು ಮುಂದಾಗುವರೇ? ಇದು ಶತಾಯಗತಾಯ ಅಧಿಕಾರ ಚುಕ್ಕಾಣಿ ಹಿಡಿಯುವ ತಂತ್ರವೇ?
ಇತರ ರಾಜ್ಯಗಳ ಮೇಲೂ ತೂಗುಗತ್ತಿ?
ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯು ಒಂದು ಪ್ರಯೋಗದಂತೆ ಕಾಣುತ್ತಿದೆ. ಆದರೆ ಚುನಾವಣಾ ಆಯೋಗವು ಕೇವಲ ಅನುಷ್ಠಾನ ಸಂಸ್ಥೆಯಾಗಿ ಇದನ್ನು ಕಾರ್ಯರೂಪಕ್ಕೆ ತರುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ಜಾರಿಗೆ ತರುವ ಉದ್ದೇಶವಿರುವ ಬಗ್ಗೆ ಅನುಮಾನ ಮೂಡುತ್ತಿದೆ.
ಬಿಜೆಪಿಯ ವಿರೋಧಿಗಳು ಚುನಾವಣೆಯಲ್ಲಿ ಗೆಲ್ಲುವುದು ಕಷ್ಟಸಾಧ್ಯವಾಗಿ ಮಾಡುವುದು ಇದರ ಹಿಂದಿನ ಹುನ್ನಾರವಾಗಿರುವಂತೆ ಕಾಣುತ್ತಿದೆ. ಸಾಮಾನ್ಯವಾಗಿ ವಿರೋಧಿ ಪಾಳಯದವರು ಮೇಲುಗೈ ಸಾಧಿಸುತ್ತಿರುವ ದಕ್ಷಿಣದ ರಾಜ್ಯಗಳೂ ಕೂಡ ಇದರಲ್ಲಿ ಒಳಗೊಂಡಿದೆ.
ಈಗ ಕೇಂದ್ರದಲ್ಲಿ ಆಡಳಿತ ನಡೆಸುವವರಿಗೆ ಸರಿಹೊಂದುವ ರೀತಿಯಲ್ಲಿ ನಿಯಮಗಳನ್ನು ತಿರುಚಬಹುದು ಮತ್ತು ಅಸ್ತಿತ್ವದಲ್ಲಿ ಇರುವ ಕಾನೂನುಗಳನ್ನು ಬದಲಿಸಬಹುದು.
ಉದಾಹರಣೆಗೆ, ಕಳೆದ ವರ್ಷ ಹರಿಯಾಣದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ವಿಷಯದಲ್ಲಿ ದೂರು ಬಂದಾಗ ಅದರ ವಿಡಿಯೋ ತುಣುಕುಗಳನ್ನು ಒದಗಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತು. ಆಗ ದಾಖಲೆಗಳು ನ್ಯಾಯಾಲಯದ ಪರಿಶೀಲನೆಗೆ ಲಭ್ಯವಾಗದ ರೀತಿಯಲ್ಲಿ ಕಾನೂನನ್ನು ರಾತ್ರೋರಾತ್ರಿ ಬದಲಿಸಲಾಯಿತು.
ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ಸರ್ಕಾರದ ಮಧ್ಯಸ್ಥಿಕೆಯಲ್ಲಿಯೇ ಈ ಬದಲಾವಣೆಯನ್ನು ಮಾಡಲಾಯಿತು.
ಚುನಾವಣಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಅಥವಾ ನೇರ ಮತದಾನದ ವಂಚನೆಯ ಸಂದೇಹ ವ್ಯಕ್ತವಾದಾಗ ಭಾರತದ ಪ್ರಜೆಗಳ ವಿರುದ್ಧ ಬಳಸಲಾಗುವ ಸರ್ಕಾರದ ಅಧಿಕಾರವನ್ನು ಪ್ರಶ್ನಿಸಲು ವಿರೋಧ ಪಕ್ಷಗಳಿಗೆ ಈಗ ಯಾವುದೇ ಕಾನೂನು ಮಾರ್ಗವಿಲ್ಲ.
ಸಂಶಯಾಸ್ಪದ ಎಸ್ಐಆರ್
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗ ಹೊಂದಿರುವ ಸ್ವಾಯತ್ತ ಸಾಂವಿಧಾನಿಕ ಅಧಿಕಾರವು ಇತ್ತೀಚಿನ ದಿನಗಳಲ್ಲಿ ದುರ್ಬಲಗೊಂಡಿದೆ ಮತ್ತು ರಾಜಿಗೆ ಒಳಗಾಗಿದೆ. 2022ರ ಡಿಸೆಂಬರ್ ತಿಂಗಳಿನಿಂದೀಚೆಗೆ ಚುನಾವಣಾ ಆಯೋಗವು ಕೇವಲ ಭಾರತ ಸರ್ಕಾರದ ಇನ್ನೊಂದು ಸಚಿವಾಲಯ ಅಥವಾ ಇಲಾಖೆಯಂತಾಗಿ ಹೋಗಿದೆ.
ಈ ಹಿನ್ನೆಲೆಯಲ್ಲಿಯೇ, ಬಿಹಾರದಲ್ಲಿ ಎಸ್ಐಆರ್ ಜಾರಿಗೆ ತರುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷದ ಪರವಾಗಿ ವಿನ್ಯಾಸಗೊಳಿಸಲಾಗಿದೆ. ಬಿಹಾರದಲ್ಲಿ ಅದರ ಮಿತ್ರಪಕ್ಷವಾದ ನಿತೀಶ್ ಕುಮಾರ್ ನೇತೃತ್ವದ ಜನತಾದಳ(ಯು)ಕ್ಕೆ ಇದು ಪೂರಕವಾಗಿಲ್ಲ. ಆದ್ದರಿಂದ ಬಂಕಾ ಜೆಡಿಯು ಸಂಸದ ಗಿರಿಧಾರಿ ಯಾದವ್ ಅವರು ಇದರ ವಿರುದ್ಧ ದನಿ ಎತ್ತಿರುವುದು ಅಚ್ಚರಿಯನ್ನೇನೂ ತಂದಿಲ್ಲ.
ದೆಹಲಿಯ ಖ್ಯಾತ ಪತ್ರಕರ್ತ ಅಜಿತ್ ಅಂಜುಂ ಅವರು ಇತ್ತೀಚೆಗೆ ತಮ್ಮ ತವರು ರಾಜ್ಯ ಬಿಹಾರಕ್ಕೆ ಕಾರ್ಯನಿಮಿತ್ತ ಭೇಟಿ ನೀಡಿದಾಗ ತಮ್ಮ ಯೂಟ್ಯೂಬ್ ಕಾರ್ಯಕ್ರಮಗಳಲ್ಲಿ ಚುನಾವಣಾ ಎಸ್ಐಆರ್ ಬಗ್ಗೆ ವಿಶ್ಲೇಷಣೆ ನಡೆಸಿದ್ದರು. ಮುಂಬರುವ ಚುನಾವಣೆಗಾಗಿ ನಡೆಸಿರುವ ಈ ಪರಿಷ್ಕರಣೆಯು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಲು ನಡೆಸಿರುವ ಭಾರೀ ಹುನ್ನಾರ ಎಂದು ಅವರು ಹೇಳಿದ್ದರು. ಅಂಜುಂ ಅವರ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ.
ಬೆದರಿಕೆಯ ಸಂದೇಶ
ಪಕ್ಷಪಾತ ಮತ್ತು ಮೋಸದ ಮೂಲಕ ಜನರನ್ನು ವಂಚಿಸಲು ಪ್ರಯತ್ನಿಸಲಾಗುತ್ತಿದೆ ಎಂಬುದನ್ನು ಪತ್ರಕರ್ತರು ಬಿಂಬಿಸದಂತೆ ತಡೆಯುವುದು ಮತ್ತು ಆ ಮೂಲಕ ಇತರ ಪತ್ರಕರ್ತರಿಗೆ ಬೆದರಿಕೆಯ ಸಂದೇಶವನ್ನು ರವಾನಿಸುವುದು ಇದರ ಹಿಂದಿನ ಉದ್ದೇಶವಾಗಿದೆ ಎಂಬುದು ಸ್ಪಷ್ಟ.
ಈ ವರ್ಷದ ಜನವರಿಯಲ್ಲಿ ಚುನಾವಣಾ ಆಯೋಗವು ಪೂರ್ಣಗೊಳಿಸಿದ ವಿಶೇಷ ಸಾರಾಂಶ ಪರಿಷ್ಕರಣೆಯು ಈ ಅಸಂಬಂಧ ಎಸ್ಐಆರ್ ಸಾಹಸದಿಂದಾಗಿ ಅರ್ಥಹೀನವೆನಿಸಿಕೊಂಡಿದೆ. ಅಂಜುಂ ಅವರು ಪ್ರಸ್ತುತಪಡಿಸಿದ ವಿಡಿಯೋ ತುಣುಕುಗಳು ಇದನ್ನು ಭರಪೂರವಾಗಿ ತೋರಿಸಿವೆ ಎಂಬುದು ಉಲ್ಲೇಖಾರ್ಹ.
ಚುನಾವಣಾ ಆಯೋಗವು ತನ್ನ ಇತ್ತೀಚಿನ ಹೇಳಿಕೆಯಲ್ಲಿ, 2025ರ ಜನವರಿಯಿಂದ ಈಚೆಗೆ ಬಿಹಾರದಲ್ಲಿ ಸುಮಾರು 22 ಲಕ್ಷ ಮಂದಿ ಮತದಾರರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಇದನ್ನೇ ಆಧಾರವಾಗಿಟ್ಟು ಲೆಕ್ಕಹಾಕಿದರೆ ಕಳೆದ ಏಳು ತಿಂಗಳ ಅವಧಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 150 ಮತದಾರರು ಸಾವನ್ನಪ್ಪಿದ್ದಾರೆ ಎಂದಾಗುತ್ತದೆ. ಇದು ನಿಜಕ್ಕೂ ನಂಬಲಾಗದ ಸಂಗತಿಯಾಗಿದೆ.
ಚುನಾವಣಾ ಆಯೋಗ ಉಲ್ಲೇಖಿಸಿದ ಹನ್ನೊಂದು ದಾಖಲೆಗಳ ಪೈಕಿ ಒಂದನ್ನು ಹೊಂದಿಲ್ಲದ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಹೇಳಲಾಗುತ್ತದೆ. ಆ ದಾಖಲೆ ಎಂದರೆ ಜನನ ಪ್ರಮಾಣಪತ್ರ ಎನ್ನುವುದು ಗಮನಾರ್ಹ.
ಒಂದು ಬಡ ರಾಜ್ಯದಲ್ಲಿ…
ಎಲ್ಲಾ ಆಯಾಮಗಳಲ್ಲಿಯೂ ಭಾರತದ ಅತ್ಯಂತ ಬಡ ರಾಜ್ಯವಾಗಿರುವ, ಶೈಕ್ಷಣಿಕ ಮತ್ತು ಆರೋಗ್ಯ ಮೂಲ ಸೌಕರ್ಯದಲ್ಲಿಯೂ ಕೆಟ್ಟ ಸ್ಥಿತಿಯಲ್ಲಿರುವ ಬಿಹಾರದಲ್ಲಿ ಕೆಲವು ತಿಂಗಳ ಹಿಂದೆ ಮಕ್ಕಳು ಕೂಡ ಜನನ ಪ್ರಮಾಣ ಪತ್ರವನ್ನು ಹೊಂದಿಲ್ಲ. ಅವರ ಬಳಿ ಚುನಾವಣಾ ಆಯೋಗವೇ ನೀಡಿದ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಇದೆ. ಆದರೆ ಎಸ್ಐಆರ್ ಅಡಿಯಲ್ಲಿ ಈ ದಾಖಲೆಗಳನ್ನು ಮಾನ್ಯವೆಂದು ಪರಿಗಣಿಸಲಾಗಿಲ್ಲ.
ಇವೆಲ್ಲವನ್ನೂ ಸಿಂಧುವೆಂದು ಪರಿಗಣಿಸಿಬಿಟ್ಟರೆ ಈ ವರ್ಷದ ಕೊನೆಯ ಭಾಗದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 70 ಲಕ್ಷಕ್ಕೂ ಅಧಿಕ ಮತದಾರರು ಅಥವಾ ಈಗಿರುವ ಮತದಾರರ ಪಟ್ಟಿಯ ಶೇ.9ರಷ್ಟು ಮಂದಿ ಮತದಾನದ ಹಕ್ಕನ್ನು ಕಳದುಕೊಳ್ಳಲಿದ್ದಾರೆ. ಒಂದು ವೇಳೆ ಎಸ್ಐಆರ್ ಸಿಂಧುವಾಯಿತು ಎಂದಾದರೆ ಕಳೆದ ಜನವರಿಯಲ್ಲಿ ಕೈಗೊಳ್ಳಲಾದ ಚುನಾವಣಾ ಆಯೋಗದ ವಿಶೇಷ ಸಾರಾಂಶ ಪರಿಷ್ಕರಣೆ ಅರ್ಥ ಕಳೆದುಕೊಳ್ಳುತ್ತದೆ.
ಈ ಇಷ್ಟೂ ಎಸ್ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು ಜುಲೈ 25ರಂದು. ಅಂದರೆ ಕೇವಲ ಒಂದು ತಿಂಗಳ ಅವಧಿಯಲ್ಲಿ. ಈ ಅಂಶವೇ ಇದನ್ನೊಂದು ತರಾತುರಿಯಲ್ಲಿ ಕೈಗೊಂಡ ಪ್ರಕ್ರಿಯೆ ಎಂಬುದನ್ನು ಸಾಬೀತುಪಡಿಸುತ್ತದೆ. ಸಾಮಾನ್ಯವಾಗಿ ಇಂತಹ ಬೃಹತ್ ಪ್ರಮಾಣದ ಸಮಗ್ರ ಪರಿಷ್ಕರಣೆಯನ್ನು ಕೈಗೊಳ್ಳಲು ವರ್ಷಗಳೇ ಬೇಕಾಗುತ್ತದೆ.
ನರೇಂದ್ರ ಮೋದಿ ಅವರ ಮಿತ್ರರೂ, ತೆಲುಗು ದೇಶಂ ಪಕ್ಷದ ಮುಖ್ಯಸ್ಥರೂ ಆದ ಚಂದ್ರಬಾಬು ನಾಯ್ಡು ಅವರು ಈ ಎಸ್ಐಆರ್ ಪ್ರಕ್ರಿಯೆಯನ್ನು ಟೀಕಿಸಿದ್ದಾರೆ. ಇದು ಅನುಮಾನಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ.