ಲಡಾಖ್: ಜನ ದಮನ ನೀತಿ ಬಿಡಿ, ಜನಸಹಿತ ಆಡಳಿತದ ಚಿಂತನೆ ನಡೆಸಿ
ರಾಷ್ಟ್ರೀಯ ಭದ್ರತೆಗೆ ಒಳಪಟ್ಟ ಪ್ರದೇಶಗಳನ್ನು ಕೇಂದ್ರದ ನೇರ ನಿಯಂತ್ರಣಕ್ಕೆ ಮೀಸಲಿಟ್ಟುಕೊಂಡು ಕೇಂದ್ರಾಡಳಿತ ಪ್ರದೇಶದ ಜನರಿಗೆ ಒಂದು ಪ್ರಾತಿನಿಧಿಕ ಸರ್ಕಾರವನ್ನು ನೀಡಿ.
ಭಾರತದ ವಿಶಾಲ ಗಡಿ ಪ್ರದೇಶಗಳಲ್ಲಿರುವ ಪ್ರಕ್ಷುಬ್ಧ ಭಾಗಗಳ ಪಾಲಿಗೆ ಲಡಾಖ್-ನ್ನು ತಳ್ಳಲು ಕೇಂದ್ರ ಸರ್ಕಾರವು ಸಿದ್ಧತೆ ಮಾಡಿಕೊಂಡಿದೆಯೇ? ಲಡಾಖ್-ನ್ನು ಈ ಪ್ರದೇಶದ ಸ್ಥಳೀಯರಲ್ಲಿ ಬಹುದೊಡ್ಡ ವರ್ಗವು ಭಾರತದ ರಾಜ್ಯವನ್ನು ರಕ್ಷಕ ಹಾಗೂ ಸಶಕ್ತ ಶಕ್ತಿಯಾಗಿ ನೋಡದೇ ದಮನಕಾರಿಯಾಗಿ ನೋಡುವ ಮತ್ತೊಂದು ಸ್ಥಳವಾಗಿ ಮಾರ್ಪಡಿಸಲು ಹೊರಟಿದೆಯೇ?
ಇದು ಕೇಂದ್ರ ಸರ್ಕಾರದ ಉದ್ದೇಶ ಅಲ್ಲವೆಂದಾದರೆ ಅದು ಪ್ರದೇಶದ ಸ್ವಾಯತ್ತತೆಗೆ ಆಗ್ರಹಿಸುತ್ತಿರುವ ಸೋನಮ್ ವಾಂಗ್ಚುಕ್ ಮತ್ತು ಇತರ ಹೋರಾಟಗಾರರ ಮೇಲೆ ತೋರಿಸುತ್ತಿರುವ ದರ್ಪ/ಉದ್ಧಟತನದ ವರ್ತನೆಯನ್ನು ಕೈಬಿಡಬೇಕು.
ವಾಂಗ್ಚುಕ್ ಅವರು ಅತ್ಯಂತ ಜನಪ್ರಿಯ ಹೀರೊ. ಶಿಕ್ಷಣದಲ್ಲಿ ಮತ್ತು ನೀರು ಸರಬರಾಜನ್ನು ನಿಯಂತ್ರಿಸುವಲ್ಲಿ, ಇಂಧನ ಯೋಜನೆಗಳನ್ನು ಸ್ಥಾಪನೆ ಮಾಡುವಲ್ಲಿ ಮತ್ತು ಪ್ರದೇಶದ ಪರಿಸರ ಹಾಗೂ ಸಾಂಸ್ಕೃತಿಕ ಸಮಗ್ರತೆಯನ್ನು ರಕ್ಷಿಸಲು ವಾಂಗ್ಚುಕ್ ಅವರು ಮಾಡಿರುವ ಕೆಲಸಗಳಿಗೆ ವ್ಯಾಪಕವಾದ ಬೆಂಬಲವಿದೆ.
ಸರ್ಕಾರಕ್ಕಿದೆ ಹತ್ತಿಕ್ಕುವ ಶಕ್ತಿ
ಒಬ್ಬ ವ್ಯಕ್ತಿಯನ್ನು ಮತ್ತು ಆತನ ಸಣ್ಣ ಸರ್ಕಾರೇತರ ಸಂಘಟನೆಯನ್ನು ಮತ್ತು ಅದು ನಡೆಸುತ್ತಿರುವ ನಾಗರಿಕ ಸಮಾಜದ ಚಳವಳಿಯನ್ನು ಹತ್ತಿಕ್ಕುವ ಶಕ್ತಿಯನ್ನು ಭಾರತ ಸರ್ಕಾರ ಹೊಂದಿದೆ. ಆದರೆ ಅದು ಹಾಗೆ ಮಾಡಬೇಕೇ ಎಂಬುದು ಪ್ರಶ್ನೆ.
ಲಡಾಖ್-ಗೆ ರಾಜ್ಯದ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಸೋನಮ್ ವಾಂಗ್ಚುಕ್ ಅವರು ಚಳವಳಿಯನ್ನು ಮುನ್ನಡೆಸುತ್ತಿದ್ದಾರೆ. ಇತರ ಮುಂಚೂಣಿ ಪ್ರದೇಶಗಳಿಗೆ ರಾಜ್ಯದ ಸ್ಥಾನಮಾನವನ್ನು ನೀಡಲಾಗಿದೆ. ಅಲ್ಲಿ ಚುನಾಯಿತ ಪ್ರತಿನಿಧಿಗಳಿದ್ದಾರೆ. ಅಂತಹ ರಾಜ್ಯಗಳಿಗೆ ರಾಷ್ಟ್ರೀಯ ರಕ್ಷಣೆ ಅಡ್ಡಿಯಾಗಿಲ್ಲ. ಭಾರತದ ಸಾರ್ವಭೌಮತ್ವವನ್ನು ಕಾಪಾಡಲು ಇಂತಹ ಸ್ಥಳಗಳು ನೇರವಾಗಿ ಕೇಂದ್ರ ಸರ್ಕಾರದ ಆಡಳಿತ ವ್ಯಾಪ್ತಿಯಲ್ಲಿ ಇರಲೇಬೇಕೆಂದೇನೂ ಇಲ್ಲ.
ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಸೂಕ್ಷ್ಮವೆಂದು ಭಾವಿಸಿದ ಆಡಳಿತಾತ್ಮಕ ಮತ್ತು ರಾಜಕೀಯ ಅಧಿಕಾರದ ಪ್ರದೇಶಗಳನ್ನು ವಿಭಜಿಸಿ ತೆಗೆದು ಅವುಗಳನ್ನು ಕೇಂದ್ರದ ವ್ಯಾಪ್ತಿಯಲ್ಲಿಯೇ ಇರಿಸಿಕೊಳ್ಳಲು ಮತ್ತು ಜನರ ದಿನನಿತ್ಯದ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಇತರ ಅಧಿಕಾರಗಳನ್ನು ಸ್ಥಳೀಯ ಸರ್ಕಾರಗಳಿಗೆ ವಹಿಸಿಕೊಡಲು ಮಾರ್ಗಗಳಿವೆ.
2019ರಲ್ಲಿ ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರದಿಂದ ಲಡಾಖ್-ನ್ನು ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದಾಗ ಲಡಾಖ್-ನ ಜನ ನಿಜವಾಗಿ ಅದನ್ನು ಸ್ವಾಗತಿಸಿದರು. ಶ್ರೀನಗರದ ನಿರ್ಲಕ್ಷ್ಯದಿಂದ ಬಿಡುಗಡೆಗೊಂಡು ದೆಹಲಿಯ ನೇರ ಮೇಲ್ವಿಚಾರಣೆಗೆ ಒಳಪಡುವುದರಿಂದ ತಮ್ಮ ಪರಿಸ್ಥಿತಿ ಸುಧಾರಿಸಬಹುದು ಎಂಬುದು ಅವರ ಆಶಯವಾಗಿತ್ತು. ಆದರೆ ಅವರ ಆಶಯಗಳು ಹತಾಶೆಯಾಗಿ ಬದಲಾಗಿವೆ. ಅದಕ್ಕಾಗಿಯೇ ಅವರು ರಾಜ್ಯದ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ತಮ್ಮ ಹಕ್ಕುಗಳ ರಕ್ಷಣೆಗಾಗಿ ಒತ್ತಾಯಿಸುತ್ತಿದ್ದಾರೆ.
ಆದಿವಾಸಿ ಪ್ರದೇಶಗಳ ಆಡಳಿತ ನಡೆಸಲು ಸ್ವಾಯತ್ತ ಜಿಲ್ಲಾ ಮಂಡಳಿಗಳಿಗೆ ಶೆಡ್ಯೂಲ್ 6 ಅಧಿಕಾರ ನೀಡುತ್ತದೆ. ಇದರಿಂದ ಆದಿವಾಸಿಗಳು ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎನ್ನುವ ವಿಷಯದಲ್ಲಿ ತಮ್ಮದೇ ಆದ ಅಭಿಪ್ರಾಯವನ್ನು ಹೊಂದಲು ಸಾಧ್ಯವಾಗುತ್ತದೆ. ಸಂವಿಧಾನದ ಶೆಡ್ಯೂಲ್-6 ನಿರ್ದಿಷ್ಟವಾಗಿ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ್ದಾಗಿದೆ. ಆದರೆ ಇದೇ ನೀತಿಯನ್ನು ಲಡಾಕ್, ಲೆಹ್ ಮತ್ತು ಕಾರ್ಗಿಲ್ ಭಾಗಗಳಲ್ಲಿ ಇರುವ ಜನರಿಗೂ ಯಾಕೆ ವಿಸ್ತರಿಸಬಾರದು ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ.
ಸಂಕೀರ್ಣ ಅಧೀನತೆಯ ಸಿದ್ದಾಂತ
ರಾಜಕೀಯ ಮತ್ತು ಆಡಳಿತಾತ್ಮಕ ಅಧಿಕಾರದ ಶ್ರೇಣೀಕೃತ ರಚನೆಯಲ್ಲಿ ಆಡಳಿತವು ಪರಿಣಾಮಕಾರಿಯಾಗಿ ಮತ್ತು ಜನರಿಗೆ ಉತ್ತರದಾಯಿಯಾಗಿರಲು ಅಧೀನತೆ ಸಿದ್ಧಾಂತವು ಕಾರ್ಯನಿರ್ವಹಿಸಬೇಕು. ಈ ಸಿದ್ಧಾಂತವು ತಾತ್ವಿಕವಾಗಿ ಸರಳವಾಗಿದೆ, ಆದರೆ ಕಾರ್ಯನಿರ್ವಹಣೆಯ ನಿಯಮಗಳಾಗಿ ರೂಪಿಸುವಲ್ಲಿ ಹೆಚ್ಚು ಸಂಕೀರ್ಣವಾಗಿದೆ.
ಪ್ರತಿಯೊಂದು ಹಂತದ ಸರ್ಕಾರವು ನಿರ್ಣಯಗಳು ಹಾಗೂ ಕಾರ್ಯಗಳನ್ನು ಸಾಧ್ಯವಾದಷ್ಟು ಜನರಿಗೆ ನಿಕಟವಾಗಿರುವ ರೀತಿಯಲ್ಲಿ ಹಂಚುವ ಮೂಲಕ ನಿರ್ವಹಣೆಗೆ ಸೂಕ್ತವಾದ ಚಟುವಟಿಕೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳುತ್ತದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಸರ್ಕಾರಗಳು ಒಕ್ಕೂಟದಿಂದಲೇ ಆವರಿಸಿಕೊಂಡಿರಬಾರದು ಎನ್ನುವ ಕಾರಣಕ್ಕೆ ಐರೋಪ್ಯ ಒಕ್ಕೂಟವು ಅಧೀನತೆಯನ್ನು ಅವಲಂಬಿಸಿಕೊಂಡಿದೆ.
ಉದಾಹರಣೆಗೆ ರಾಷ್ಟ್ರೀಯ ರಕ್ಷಣೆ ಮತ್ತು ಹಣಕಾಸು ನೀತಿಗಳನ್ನು ಸ್ಪಷ್ಟವಾಗಿ ಕೇಂದ್ರೀಯ ಪ್ರಾಧಿಕಾರಗಳ ನೇರ ಮೇಲ್ವಿಚಾರಣೆಯಲ್ಲಿ ಮಾತ್ರ ನಿರ್ವಹಿಸಬಹುದು ಮತ್ತು ಸರ್ಕಾರದ ಇತರ ಹಂತಗಳು ಸಹಾಯಕ ಪಾತ್ರವನ್ನು ವಹಿಸಿಕೊಳ್ಳುತ್ತವೆ. ಹಳ್ಳಿಗಳ ರಸ್ತೆ ಮತ್ತು ನದಿ, ತೊರೆಗಳ ನಿರ್ವಹಣೆ ಸ್ಥಳೀಯ ಸರ್ಕಾರದ ಜವಾಬ್ದಾರಿಯೇ ಹೊರತು ದೆಹಲಿಯಲ್ಲಿರುವ ಸರ್ಕಾರದ್ದಲ್ಲ.
ಅನೇಕ ಸಂದರ್ಭಗಳಲ್ಲಿ ಜನರಿಗೆ ನಿಕಟವಾಗಿರುವ ಸರ್ಕಾರದ ಮಟ್ಟದಲ್ಲಿ ಬಹಳಷ್ಟು ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಅವುಗಳಿಗೆ ಸರ್ಕಾರದ ಉನ್ನತ ಮಟ್ಟದಿಂದ ಬೆಂಬಲ ಮತ್ತು ಸಮನ್ವಯದ ಅಗತ್ಯವಿರುತ್ತದೆ. ಈ ವಿಭಾಗದಲ್ಲಿ ಶಿಕ್ಷಣವೂ ಸೇರುತ್ತದೆ.
ಕೇಂದ್ರ ಮತ್ತು ರಾಜ್ಯಗಳ ನಡುವಿನ ಜವಾಬ್ದಾರಿಗಳನ್ನು ಸಂವಿಧಾನವು ವಿಭಜಿಸಿರುವುದರಲ್ಲಿ ‘ಅಧೀನತೆ ಸಿದ್ಧಾಂತ’ವನ್ನು ಪರೋಕ್ಷವಾಗಿ ವ್ಯಕ್ತವಾಗುತ್ತದೆ. ಆದರೆ ಇಂತಹ ಸಿದ್ದಾಂತವನ್ನು ವಿಕೇಂದ್ರೀಕರಣ ಸರಣಿಯಲ್ಲಿ ಇನ್ನಷ್ಟು ಕೆಳ ಕ್ರಮಾಂಕದಲ್ಲಿ ಅಂದರೆ ಜಿಲ್ಲಾ ಮಟ್ಟದ ಸರ್ಕಾರಗಳು, ಮಹಾನಗರ ಪಾಲಿಕೆಗಳು ಮತ್ತು ಗ್ರಾಮ ಪಂಚಾಯ್ತಿಗಳ ಮಟ್ಟಗಳಲ್ಲಿ ಕಾರ್ಯಾಚರಣೆಗೆ ತರಬೇಕು.
ಸಂಪನ್ಮೂಲಗಳ ವಿಭಜನೆ
ಇಂತಹ ಪ್ರಯತ್ನಗಳನ್ನು ಕೇರಳದಂತಹ ಕೆಲವು ರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ. ನಿರ್ದಿಷ್ಟ ಕಾರ್ಯಗಳನ್ನು ಪೂರ್ಣಗೊಳಿಸಲು ಸಂಪೂರ್ಣ ಹಣಕಾಸು ಸಂಪನ್ಮೂಲವನ್ನು ನೀಡಲಾಗುತ್ತದೆ. ಆದರೆ ಬಹುತೇಕ ರಾಜ್ಯಗಳಲ್ಲಿ ಇದು ಸಾಧ್ಯವಾಗಿಲ್ಲ.
ಆಡಳಿತವನ್ನು ದಕ್ಷತೆಯಿಂದ ನಿರ್ವಹಿಸುವ ವಿಚಾರದಲ್ಲಿ ರಾಷ್ಟ್ರೀಯ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯವನ್ನು ವ್ಯಾಪಕವಾಗಿ ಶ್ಲಾಘಿಸಲಾಗುತ್ತಿದೆ. ಆದರೂ ಕೆಳಕ್ರಮಾಂಕದಲ್ಲಿ ಇದನ್ನು ಸಾಕಷ್ಟು ಪ್ರಮಾಣದಲ್ಲಿ ಗುರುತಿಸಲಾಗಿಲ್ಲ. ತಂತ್ರಜ್ಞಾನವನ್ನು ದೇಶಾದ್ಯಂತವಿರುವ ವಿಭಿನ್ನ ಮಾಹಿತಿ ತುಣುಕುಗಳನ್ನು ಸಂಗ್ರಹಿಸಲು ಮತ್ತು ಸಂಕಲಿಸಲು ಬಳಸಿಕೊಳ್ಳಬಹುದು. ಈ ಕಾರ್ಯವನ್ನು ಜಿಲ್ಲೆ, ರಾಜ್ಯ ಮತ್ತು ಕೇಂದ್ರ ಮಟ್ಟಗಳಲ್ಲಿ ಮಾಡಬಹುದು.
ತೀರಾ ಆಯಕಟ್ಟಿನ ಪ್ರದೇಶಗಳಲ್ಲಿ ನಡೆಯುವ ಪ್ರತ್ಯೇಕ ಚಟುವಟಿಕೆಗಳನ್ನು ನವದೆಹಲಿಯಿಂದಲೇ ಡಿಜಿಟಲ್ ಮೂಲಕ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವು ಅವುಗಳನ್ನು ಕೇಂದ್ರದಿಂದಲೇ ನಿರ್ವಹಿಸುವ ಪ್ರಲೋಭನೆಯನ್ನು ಹೆಚ್ಚಿಸುತ್ತದೆ. ಜಿಲ್ಲಾ ಮಟ್ಟದ ಆಡಳಿತದ ನೋಡಲ್ ಅಧಿಕಾರಿಗಳು ಕೇಂದ್ರ ಸರ್ಕಾರದಿಂದ ನೇಮಕಗೊಂಡ ಐಎಎಸ್ ಅಧಿಕಾರಿಗಳು ಎಂಬುದು ಇದಕ್ಕೆ ಇನ್ನಷ್ಟು ಕುಮ್ಮುಕ್ಕು ನೀಡುತ್ತದೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕು.
ತಂತ್ರಜ್ಞಾನವು ಅಧೀನತೆ ಸಿದ್ಧಾಂತವನ್ನು ದಾರಿ ತಪ್ಪಿಸುವ ಸಾಧನವಾಗಿ ಬಳಕೆಯಾಗಬಾರದು. ಬದಲಾಗಿ ವಿಕೇಂದ್ರೀಕೃತ ಆಡಳಿತವನ್ನು ಬೆಂಬಲಿಸಲು ಮತ್ತು ಅದನ್ನು ಇನ್ನಷ್ಟು ದಕ್ಷಗೊಳಿಸುವ ನಿಟ್ಟಿನಲ್ಲಿ ಬಳಕೆಯಾಗಬೇಕು.
ರಾಜಕೀಯ ವಿಕೇಂದ್ರೀಕರಣದ ಸಂಸ್ಕೃತಿ
ಪ್ರಸ್ತುತ ರಾಜಕೀಯ ಆಚರಣೆ ಮತ್ತು ಸಂಸ್ಕೃತಿಯು ಕೇಂದ್ರೀಕೃತ ವ್ಯವಸ್ಥೆಗೆ ಸಹಕಾರಿಯಾಗಿದೆ. ಅಧೀನತೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷವನ್ನೇ ರಾಜ್ಯ ಸರ್ಕಾರವನ್ನಾಗಿ ಆಯ್ಕೆ ಮಾಡುವ ಪ್ರವೃತ್ತಿಯನ್ನು ‘ಡಬಲ್ ಎಂಜಿನ್ ಸರ್ಕಾರ’ ಎಂದು ಕರೆಯಲಾಗುತ್ತದೆ. ಇಂತಹ ರಾಜಕೀಯ ಘೋಷಣೆಯು ಅಧೀನತೆ ಸಿದ್ಧಾಂತಕ್ಕೆ ಮತ್ತು ಕೇಂದ್ರದಿಂದ ರಾಜ್ಯಗಳಿಗೆ ಸಮಾನವಾದ ಆದ್ಯತೆ ನೀಡಬೇಕು ಎಂಬುದನ್ನೇ ಗೇಲಿಮಾಡಿದಂತಾಗುತ್ತದೆ.
ಈ ಘೋಷಣೆಯು ಸಾಂಸ್ಥಿಕ ಸಮಗ್ರತೆಯನ್ನು ಹಾಳುಗೆಡಹುತ್ತದೆ ಮತ್ತು ಸರ್ಕಾರದ ಹಿರಿಯ ಮತ್ತು ಕಿರಿಯ ಮಟ್ಟಗಳ ನಡುವಿನ ಸಂಬಂಧಗಳಲ್ಲಿ ಬಹಿರಂಗವಾಗಿ ವಿಶೇಷಾಧಿಕಾರವನ್ನು ಪ್ರದರ್ಶಿಸುತ್ತದೆ.
ಇದು ಸಾಂವಿಧಾನಿಕ ಆಡಳಿತ ಯೋಜನೆಯಲ್ಲಿ ಇಟ್ಟಿರುವ ಜನಪ್ರಿಯ ನಂಬಿಕೆಯನ್ನು ಅಳಿಸಿಹಾಕುತ್ತದೆ. ಗಮನವನ್ನು ಸೆಳೆಯುವುದಕ್ಕಾಗಿ ಮತ್ತು ಸಂಪನ್ಮೂಲಗಳಿಗಾಗಿ ನಿರಂತರ ಹೋರಾಟ ಮಾಡುವ ರಾಜಕೀಯದ ದಾರಿಗೆ ಅನುವುಮಾಡಿಕೊಡುತ್ತದೆ. ಇದರಲ್ಲಿ ಯಾರು ಹೆಚ್ಚು ಒತ್ತಡ ಹೇರುತ್ತಾರೋ ಅವರಿಗೆ ಜಯ ದಕ್ಕುತ್ತದೆ. ನ್ಯಾಯಯುತ, ಸಾಂಸ್ಥಿಕ ಆಡಳಿತವನ್ನು ತಿರಸ್ಕರಿಸಿ ಉನ್ನತ ಮಟ್ಟದ ರಾಜಕೀಯ ಮಾತುಕತೆಗಳು ಸಂಘರ್ಷ ಮತ್ತು ವಿಭಜನೆಯ ಹಾದಿ ಹಿಡಿದಾಗ, ಹೋರಾಟದ ದಾರಿಯಲ್ಲಿ ಸಾಗಿದ ಲಡಾಖ್ ಜನರನ್ನು ಯಾಕಾದರೂ ದೂಷಿಸಬೇಕು?
ಅಧೀನತೆಯ ಮರುಚಿಂತನೆ
ರಾಷ್ಟ್ರದ ಅತ್ಯಂತ ಕಿರಿಯ ಕೇಂದ್ರಾಡಳಿತ ಪ್ರದೇಶದಲ್ಲಿ ಒಂದು ಉತ್ತರದಾಯಿತ್ವ ಹೊಂದಿದ ಸರ್ಕಾರವನ್ನು ರಚನೆ ಮಾಡಬೇಕು ಎಂಬ ಬೇಡಿಕೆಯನ್ನು ರಾಷ್ಟ್ರೀಯ ಭದ್ರತೆಯ ಸೂಕ್ಷ್ಮ ಸ್ಥಿತಿ ಇರುವ ಪ್ರದೇಶದ ಆಡಳಿತದಲ್ಲಿ ಅಧೀನತೆ ಸಿದ್ಧಾಂತವನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಮರುಚಿಂತನೆ ನಡೆಸಲು ಉತ್ತಮ ಅವಕಾಶ ಎಂದು ಭಾವಿಸಬೇಕು. ಇದರಿಂದ ಸ್ಥಳೀಯರು ಉತ್ತರದಾಯಿತ್ವ ಸರ್ಕಾರ ಹೊಂದಲು ಅವಕಾಶವಾಗುತ್ತದೆ. ಜೊತೆಗೆ ಕೇಂದ್ರ ಸರ್ಕಾರವು ತನ್ನ ರಾಷ್ಟ್ರೀಯ ಭದ್ರತೆಯನ್ನು ಮುನ್ನಡೆಸುವ ಸ್ವಾತಂತ್ರ್ಯವನ್ನೂ ಉಳಿಸಿಕೊಳ್ಳುತ್ತದೆ.
ಇದು ಕೇಂದ್ರ, ರಾಜ್ಯ ಸರ್ಕಾರಗಳೆಂಬ ಆಡಳಿತ ವಿಚಾರಗಳ ವಿಭಜನೆಯನ್ನು ಮೀರಿ ಸ್ಥಳೀಯ ಸರ್ಕಾರದ ರಚನಾತ್ಮಕ ಪಾತ್ರಗಳ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತದೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರದ ವಿಭಜನೆಯೊಂದಿಗೆ ಚುನಾಯಿತ ಜನಪ್ರತಿನಿಧಿಗಳನ್ನು ಒಳಗೊಂಡ ಶಾಸನಬದ್ದ ವ್ಯವಸ್ಥೆಯು ಏಕಕಾಲದಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳಬಹುದು. ಅಂತಹ ರಚನಾತ್ಮಕ ಚಿಂತನೆಯನ್ನು ಸರ್ಕಾರವು ಕಾರ್ಯರೂಪಕ್ಕೆ ತರಬೇಕು. ಅದನ್ನು ಬಿಟ್ಟು, ಲಡಾಖ್ ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯನ್ನು ಭಯಾನಕ ಕಾನೂನಿನ ಅಡಿಯಲ್ಲಿ ಬಂಧಿಸಿ ಭಿನ್ನಮತವನ್ನು ಹತ್ತಿಕ್ಕಲು ಪ್ರಯತ್ನಿಸುವುದು ಸರಿಯಾದ ಕ್ರಮವಲ್ಲ.
ಮೊದಲನೆಯ ಹಾದಿಯು ಭರಪೂರ ಪ್ರಜಾಪ್ರಭುತ್ವಕ್ಕೆ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ದಾರಿಮಾಡಿಕೊಡುತ್ತದೆ. ಇನ್ನೊಂದು ಗಡಿ ಪ್ರದೇಶಗಳಲ್ಲಿ ಭಿನ್ನಾಭಿಪ್ರಾಯ ಮತ್ತು ನಿರಾಶೆಗೆ ಕಾರಣವಾಗುತ್ತದೆ. ಇದು ಸಾಮಾನ್ಯ ಸ್ಥಿತಿಯನ್ನು ಕಾಯ್ದುಕೊಳ್ಳಲು ಬಲ ಪ್ರಯೋಗದ ದಾರಿ ಹುಡುಕುತ್ತದೆ.