ಹೇಮಾ ಸಮಿತಿ ವರದಿ: ಚಲನಚಿತ್ರ ಮಾತ್ರವಲ್ಲ; ಕೇರಳ ಸಮಾಜ, ರಾಜಕೀಯದ ಮೇಲೆಯೂ ದೋಷಾರೋಪ

ಕೇರಳದ ಕಮ್ಯುನಿಸ್ಟರು ಮತ್ತು ಅವರ ಸಂಸ್ಕೃತಿ ವಿದ್ಯಾವಂತ ಮಹಿಳೆಯರನ್ನು ಬೆಂಬಲಿಸಿತು; ಅವರ ವಿರುದ್ಧದ ತಾರತಮ್ಯವನ್ನು ಕೊನೆಗೊಳಿಸಿದರು. ಆದರೆ, ಸಂವಿಧಾನ ಪ್ರತಿಪಾದಿಸುವ ಲಿಂಗ ಸಮಾನತೆಗೆ ಬಹಳ ಕಡಿಮೆ ಇದೆ

By :  TK Arun
Update: 2024-09-05 11:57 GMT

ಕೇರಳ ಜಾನಪದದ ಪ್ರಮುಖ ಪಾತ್ರಗಳಲ್ಲಿ ಒಂದಾದ ಯಕ್ಷಿ, ತನಗೆಂದೇ ಸಮರ್ಪಿತಗೊಂಡ ದೇವಾಲಯಗಳನ್ನು ಹೊಂದಿರುವ ಚಿಕ್ಕ ದೇವತೆ. 

ಅವಳು ತನ್ನನ್ನು ಎರಡು ರೂಪಗಳಲ್ಲಿ ಪ್ರಸ್ತುತಪಡಿಸುತ್ತಾಳೆ: ಒಂದು, ಮುಸ್ಸಂಜೆಯ ಸಮಯದಲ್ಲಿ ದಾರಿಬದಿ ಕಾದು ಕುಳಿತಿರುವ ಮೈನೆರೆದ ಹೆಣ್ಣು ಮತ್ತು ಇನ್ನೊಂದು, ದಾರಿ ತಪ್ಪಿದ ವ್ಯಕ್ತಿಯನ್ನು ಅಪ್ಪಿಕೊಂಡು ತಾಳೆ ಮರದ ಮೇಲೆ ಕೊಂಡೊಯ್ದು ಮೂಳೆ ಮತ್ತು ಕೂದಲು ಹೊರತುಪಡಿಸಿ ಬೇರೆಲ್ಲವನ್ನೂ ಭಕ್ಷಿಸುವ ರಾಕ್ಷಸಿ. ಮರುದಿನ ಬೆಳಗ್ಗೆ ದಾರಿಹೋಕರಿಗೆ ಕೂದಲು ಮತ್ತು ಮೂಳೆಗಳು ಮಾತ್ರ ಕಾಣಬರುತ್ತವೆ. 

ಮಲೆಯಾಳಿ ಭಾಷಿಕರಿಗೆ ಕನ್ನಡಿ: ಕೇರಳದ ಸ್ವಯಂಚಿತ್ರಣವು ಯಕ್ಷಿಯ ಆಕರ್ಷಕ ಅವತಾರವನ್ನು ಹೋಲುತ್ತದೆ; ರಾಜ್ಯದ ಮೇಲೆ ಹೊರಗಿ ನವರು ಹೊರಿಸಿರುವ ಗೌರವ: ಪ್ರಬುದ್ಧ, ವಿದ್ಯಾವಂತ, ರಾಜಕೀಯ ಅಧಿಕಾರ ಪಡೆದ, ವಿಕಾಸಗೊಂಡ, ಕಡಿಮೆ ಆದಾಯದಲ್ಲಿ ಉನ್ನತ ಸಾಮಾಜಿಕ ಅಭಿವೃದ್ಧಿಯ ಸಾಧನೆಯನ್ನು ಮಾಡಿರುವ ರಾಜ್ಯ. 

ರಾಜ್ಯದ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ರಾಜ್ಯ ಸರ್ಕಾರ ನೇಮಿಸಿದ ಹೇಮಾ ಸಮಿತಿ ಮಲ ಯಾಳಿ ಭಾಷಿಕರಿಗೆ ಕನ್ನಡಿ ಹಿಡಿದಿದೆ; ಅದರಲ್ಲಿ ಅವರನ್ನು ದಿಟ್ಟಿಸಿ ನೋಡುತ್ತಿರುವ ಚಿತ್ರವು ಭೋಜನ ಆರಂಭಿಸಲು ಹೊರಟ ಯಕ್ಷಿಯನ್ನು ತೋರಿಸುತ್ತಿದೆ. 

ತಪ್ಪು ತಿಳಿದುಕೊಳ್ಳಬೇಡಿ. ಪುರುಷ ಸಹೋದ್ಯೋಗಿಗಳಿಗಿಂತ ಕಡಿಮೆ ವೇತನ ಪಡೆಯುವ, ಶೌಚಾಲಯಗಳಿಗೆ ಪ್ರವೇಶವಿಲ್ಲದೆ ದೀರ್ಘ ಕಾಲಾವಧಿ ಕೆಲಸ ಮಾಡುವ, ಉದ್ಯೋಗ ಒಪ್ಪಂದವಿಲ್ಲದ ಮತ್ತು ಕಲಾತ್ಮಕ ಸ್ವಾತಂತ್ರ್ಯದ ಹೆಸರಿನಲ್ಲಿ ಮದ್ಯ ಪೀಡಿತ ಪುರುಷಪ್ರಧಾನ ಸಂಸ್ಕೃತಿ, ಲೈಂಗಿಕತೆ ಹಾಗೂ ಸ್ವೇಚ್ಛಾಚಾರದ ವ್ಯವಸ್ಥೆಯ ಸ್ತ್ರೀದ್ವೇಷ ಮತ್ತು ತಾರತಮ್ಯವನ್ನು ಸಮಿತಿ ಕಂಡುಹಿಡಿದಿದೆ. 

ಮತ್ತು, ಇದು ಚಲನಚಿತ್ರೋದ್ಯಮ ಮಾತ್ರವಲ್ಲ; ಕೇರಳ ಸಮಾಜ ಮತ್ತು ರಾಜಕೀಯದ ಮೇಲೆ ದೋಷಾರೋಪ ಮಾಡುತ್ತದೆ. 

ಜಾತಿ ಒಗ್ಗಟ್ಟು: ಕೇರಳದ ಸಾಮಾಜಿಕ ಸುಧಾರಣೆ ಚಳವಳಿಗಳು ಜಾತಿ ಶ್ರೇಣೀಕೃತ ಜಾತಿಗಳನ್ನು ಪ್ರಶ್ನಿಸಿದವು; ಆದರೆ, ಅದು ತ್ವರಿತವಾಗಿ ಜಾತಿ ಐಕಮತ್ಯ ಚಳವಳಿಯಾಗಿ ಹಿನ್ನಡೆ ಸಾಧಿಸಿತು; ಸಾಂಪ್ರದಾಯಿಕ ಅಧಿಕಾರ ರಚನೆಗಳನ್ನು ದುರ್ಬಲಗೊಳಿಸುವ ಎಲ್ಲ ಮೂಲಭೂತ ಪರಿಕಲ್ಪನೆಗಳನ್ನು ತ್ಯಜಿಸಿತು. 

ತಾರ್ಕಿಕವಾಗಿ ನೋಡಿದರೆ, ಜಾತಿ ನಿರ್ಮೂಲನೆ ಮಾಡುವ ಆಂದೋಲನಗಳು ಪಿತೃಪ್ರಭುತ್ವದ ನಿಯಂತ್ರಣದಿಂದ ಮಹಿಳೆಯರನ್ನು ವಿಮೋಚನೆಗೊಳಿಸಬೇಕಾಗುತ್ತದೆ. ತಮ್ಮ ಸ್ವಂತ ಜೀವನ ಆಯ್ಕೆಗಳನ್ನು ಮಾಡುವ ವಿಮೋಚನೆಗೊಂಡ ಮಹಿಳೆಯರು, ಜಾತಿ ಶುದ್ಧತೆಯ ಅಂತರ ಪೀಳಿಗೆಯ ವಾಹಕಗಳಾಗಿ ಕಾರ್ಯನಿರ್ವಹಿಸುವುದಿಲ್ಲ. 

ಕೇರಳದ ಕಮ್ಯುನಿಸ್ಟ್ ಆಂದೋಲನವು ಸಾಮಾಜಿಕ ಸುಧಾರಣೆ ಚಳವಳಿಯಿಂದ ಬಿಡುಗಡೆಯಾದ ಸಾಮಾಜಿಕ ಬದಲಾವಣೆಯ ಕ್ರಿಯಾತ್ಮಕತೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ, ಕೇರಳವನ್ನು ರಾಜಕೀಯವಾಗಿ ಸಬಲಗೊಳಿಸಿತು. 

ಅದರ ಸಾಮಾಜಿಕ ಸುಧಾರಣೆ ಕಾರ್ಯಸೂಚಿ ಎಷ್ಟು ಪ್ರಬಲವಾಗಿತ್ತೆಂದರೆ, ಕೇರಳದ ಬಹುತೇಕ ರಾಜಕೀಯ ಪಕ್ಷಗಳು, ಕಮ್ಯುನಿಸ್ಟರನ್ನು ವಿರೋಧಿಸುವವರು ಸೇರಿದಂತೆ, ಆ ಕಾರ್ಯಸೂಚಿಯ ಚೈತನ್ಯವನ್ನು ಹೀರಿಕೊಂಡರು.

ಆಮೂಲಾಗ್ರ ಪುನಾರಚನೆ: ಕಮ್ಯುನಿಸ್ಟರು ಕೇರಳವನ್ನು ತಾರ್ಕಿಕೀಕರಣಗೊಳಿಸಿದರು. ಗಣ್ಯರ ಸಣ್ಣ ಗುಂಪಿಗೆ ಆಸ್ತಿ, ಭೂಮಿಯ ಮಾಲೀಕತ್ವವನ್ನು ನೀಡಿ, ಆ ಗಣ್ಯರ ಬಹುಪಾಲು ಸೇವಕರು ಮತ್ತು ಕರ್ಮ ಸಿದ್ಧಾಂತದನ್ವಯ ವ್ಯಕ್ತಿಯ ಹಿಂದಿನ ಜನ್ಮದ ನಡವಳಿಕೆಯ ಮೂಲಕ ಅವನ ಪ್ರಸ್ತುತ ಸಾಮಾಜಿಕ ಸ್ಥಾನಮಾನ ನಿರ್ಧಾರವಾಗುತ್ತದೆ ಎಂಬ ಸಿದ್ಧಾಂತದ ಮೂಲಕ ಅಸಮಾನತೆ ಸಂರಕ್ಷಿಸಲ್ಪಟ್ಟಿತು.

ನೆಲದ ಮೇಲಿನ ಹೋರಾಟಗಳಿಂದ ಭೂಸುಧಾರಣೆಗಳು ಜಾರಿಗೊಂಡು, ಕಮ್ಯುನಿಸ್ಟರಿಂದ ಶಾಸನಗಳು ರಚನೆಯಾದವು. ತರುವಾಯ ಎಲ್ಲಾ ರಾಜಕೀಯ ಪಕ್ಷಗಳು ಅದನ್ನು ಜಾರಿಗೊಳಿಸಿದವು. ವಿವಿಧ ಜಾತಿ ಗುಂಪುಗಳು ಅನುಭವಿಸುತ್ತಿರುವ ಸಾಮಾಜಿಕ ಅಧಿಕಾರದ ಅಸಮಾನತೆಯನ್ನು ದುರ್ಬಲಗೊಳಿಸಲು ಆಧಾರವನ್ನು ನೀಡಿತು.

ಆದರೆ, ಕಮ್ಯುನಿಸ್ಟರು ಆಸ್ತಿ ಮಾಲೀಕತ್ವದ ವಿಶಾಲವಾದ ಜಾತಿ ಸಂಬಂಧಿತ ಅಸಮಾನತೆಯನ್ನು ಮೀರಿ ಬೇರೆ ಯಾವುದೇ ಸಕ್ರಿಯ ಜಾತಿವಿರೋಧಿ ಕಾರ್ಯಸೂಚಿಯನ್ನು ಅನುಸರಿಸಲಿಲ್ಲ.

ಲೋಪ ದೋಷ: ಕಮ್ಯುನಿಸ್ಟ್ ಕಾರ್ಯಸೂಚಿಯಲ್ಲಿನ ಅತಿರೇಕದ ದೋಷವೆಂದರೆ ಲಿಂಗ. ನಿಜ, ಕಮ್ಯುನಿಸ್ಟರು ಮತ್ತು ಅವರ ಸಂಸ್ಕೃತಿ ವಿದ್ಯಾವಂತ ಮಹಿಳೆಯರನ್ನು ಬೆಂಬಲಿಸಿತು ಮತ್ತು ಮಹಿಳೆಯರ ವಿರುದ್ಧದ ತಾರತಮ್ಯವನ್ನು ಕೊನೆಗೊಳಿಸಿದರು. ಆದರೆ, ಅವರ ವಿಮೋಚನೆಯ ದೃಷ್ಟಿಕೋನವು ಲಿಂಗ ಸಮಾನತೆಗೆ ಬಹಳ ಕಡಿಮೆ ಇತ್ತು.

ಕಮ್ಯುನಿಸ್ಟ್ ಕುಟುಂಬಗಳಲ್ಲಿನ ಮಹಿಳೆಯರು, ಪುರುಷರು ರಾಜಕೀಯ ಕೆಲಸ ಮಾಡುವಂತೆ, ಹೆಚ್ಚುಕೆಲಸ ಮಾಡುತ್ತಿದ್ದರು; ಆದರೆ, ಅವರ ಸಂಪಾದನೆ ಬಹಳ ಕಡಿಮೆ ಇತ್ತು. ಆದರೆ, ಮನೆಯಲ್ಲಿ ಮತ್ತು ಸಮಾಜದಲ್ಲಿನ ಅಧಿಕಾರ ಶ್ರೇಣಿಯಲ್ಲಿ ಪಿತೃಪ್ರಧಾನ ಮೌಲ್ಯಗಳು ಹಾಗೆಯೇ ಉಳಿದುಕೊಂಡವು.

ಲಿಂಗ ಸಮಾನತೆಯ ಸಾಂವಿಧಾನಿಕ ಗುರಿಯನ್ನು ಸಾಕಾರಗೊಳಿಸಲು, ಸಾಂಸ್ಕೃತಿಕ ಕೂಲಂಕಷ ಪರೀಕ್ಷೆಯು ಕೇರಳದಲ್ಲಿ ದೇಶದ ಇತರ ಭಾಗಗಳಿಗಿಂತ ಹೋಲಿಸಿದರೆ, ಹೆಚ್ಚು ಮುಂದೆ ಸಾಗಿತು. ಆದರೆ, ತಲೆಮಾರುಗಳಿಂದ ಉಳಿದುಕೊಂಡ ಸಾಮಾಜಿಕ ಪೂರ್ವಗ್ರಹಗಳನ್ನು ಜಯಿಸುವಷ್ಟು ಮುಂದೆ ಸಾಗಲಿಲ್ಲ.

ಯಕ್ಷಿಯ ಕಥನವು ಮೂಲತಃ ಸ್ತ್ರೀದ್ವೇಷದ ಕತೆಯಾಗಿದೆ.ಅದು ಸ್ತ್ರೀಯರ ಲೈಂಗಿಕತೆಯನ್ನು ಪುರುಷ ದೌರ್ಬಲ್ಯದೊಂದಿಗೆ ಸಂಯೋಜಿಸುತ್ತದೆ; ಪುರುಷ ಅಪರಾಧವನ್ನು ಬಲಿಪಶುವಾದಂತೆ ಬದಲಿಸುತ್ತದೆ ಎಂದು ಗಮನಿಸಬೇಕು.

ಕೆಲಸದಲ್ಲಿ ಗುಂಪುಗಳು: ಆದರೆ, ಹೇಮಾ ಸಮಿತಿಯ ಚಲನಚಿತ್ರೋದ್ಯಮದ ಮೇಲಿನ ದೋಷಾರೋಪದಲ್ಲಿ ರಾಜಕೀಯ ಹೇಗೆ ಒಳಗೊಂಡಿದೆ? ಕೇರಳದಲ್ಲಿ ಚಲನಚಿತ್ರೋದ್ಯಮದ ಗುಂಪುಕಟ್ಟಿಕೊಳ್ಳುವಿಕೆಯಲ್ಲಿ ರಾಜಕೀಯ ಶಕ್ತಿಯೂ ಸೇರಿಕೊಂಡಿದೆ.

ಲೈಂಗಿಕ ಪ್ರಲೋಭನೆಗಳನ್ನು ಪ್ರತಿರೋಧಿಸಿದವರು ಮತ್ತು ಯಾವುದೇ ಗುಂಪುಗಳಿಗೆ ಸೇರದೆ ಹೊರಗೆ ಉಳಿದವರಿಗೆ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ನಿರಾಕರಿಸಲಾಗುತ್ತದೆ ಎಂದು ಸಮಿತಿ ಕಂಡುಹಿಡಿದಿದೆ.

ಇದು ಕೇವಲ ಅನ್ಯಾಯ ಮತ್ತು ಅನೈತಿಕ ಮಾತ್ರವಲ್ಲ; ತನಿಖೆ ಅಗತ್ಯವಿರುವ ಅಪರಾಧವೂ ಹೌದು.

ಉದ್ಯಮದೊಳಗಿನ ಸಣ್ಣ ಗುಂಪು ನಡೆಸುವ ಕಾನೂನುಬಾಹಿರ ಚಟುವಟಿಕೆಯಲ್ಲಿ ರಾಜಕೀಯ ಸೇರಿಕೊಂಡಿರುವಿಕೆಯು ಚಲನಚಿತ್ರ ನಿರ್ಮಾಣ ಮತ್ತು ವಿತರಣೆ ಅಥವಾ ರಾಜಕೀಯಕ್ಕೆ ಔಪಚಾರಿಕ ಹಣಕಾಸಿನ ಕೊರತೆಯೊಂದಿಗೆ ಸಂಬಂಧ ಹೊಂದಿದೆ. ಚಲನಚಿತ್ರಗಳು ಮತ್ತು ರಾಜಕೀಯ ಎರಡೂ ಒಂದೇ ರೀತಿಯ ಅನೌಪಚಾರಿಕ ಮೂಲಗಳಿಂದ ಹಣ ಪಡೆಯುತ್ತಿವೆ.

ಈ ಸಂಬಂಧವು ಚಲನಚಿತ್ರೋದ್ಯಮದಲ್ಲಿನ ಗುಂಪುಗಾರಿಕೆ ಮತ್ತು ಸ್ತ್ರೀದ್ವೇಷದ ವಿರುದ್ಧ ರಾಜಕೀಯ ಕ್ರಮಕ್ಕೆ ತಡೆಯೊಡ್ಡುತ್ತದೆ.

ಭೋಗದ ವಸ್ತು: ಸಮಾಜವು ಮಹಿಳೆಯರನ್ನು ಭೋಗದ  ವಸ್ತುವಿನಂತೆ ಗ್ರಹಿಸುವುದನ್ನು ಪ್ರೋತ್ಸಾಹಿಸುವ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಳ್ಳುತ್ತದೆ. ಪುರುಷರಿಗೆ ಸಮಾನವಾದ ಬಹುಆಯಾಮದ ವ್ಯಕ್ತಿಗಳಾಗಿರದೆ, ಸೈದ್ಧಾಂತಿಕವಾಗಿ ಸ್ತ್ರೀಯರನ್ನು ಶಕ್ತಿಹೀನಳಾಗಿ ನೋಡುವಂತೆ ಮತ್ತು ಪುರುಷ ಸಹವಾಸವಿಲ್ಲದ ಮತ್ತು ಲೈಂಗಿಕ ಕ್ರಿಯೆಗೆ ಪ್ರತಿರೋಧವನ್ನು ವಕ್ರತೆ ಎಂದು ಆರೋಪಿಸುತ್ತದೆ. 

ಕೇರಳದ ರಾಜಕೀಯವು ಸಾಮಾಜಿಕ ಪರಿವರ್ತನೆಯ ಕೆಲಸವನ್ನು ನಿಲ್ಲಿಸಿದೆ; ಇದರಿಂದ ಹೇಮಾ ಸಮಿತಿ ವಿವರಿಸುವ ಮತ್ತು ಖಂಡಿಸುವ ಚಲನಚಿತ್ರೋದ್ಯಮದ ಪರಿಸ್ಥಿತಿಯನ್ನು ಪ್ರೋತ್ಸಾಹಿಸುತ್ತಿದೆ. 

ಕಡಿಮೆ ಸಂಖ್ಯೆ ಜನರು ಉದ್ಯಮದ ಮೇಲೆ ನಿಯಂತ್ರಣ ಹೊಂದುವ ಮೂಲಕ ಕಲಾವಿದರ ಭವಿಷ್ಯವನ್ನು ನಿರ್ಧರಿಸುವ ಅಧಿಕಾರವನ್ನು ನೀಡುವ ಮತ್ತು ಅಂಥ ಹಣಕಾಸು ವ್ಯವಸ್ಥೆಯನ್ನು ಕೆಡವಲು ನಿರಾಕರಿಸುವ ಮೂಲಕ ಕೇರಳದ ರಾಜಕೀಯವು ಚಲನಚಿತ್ರದಲ್ಲಿ ಮಹಿಳೆಯರು ಎದುರಿಸುತ್ತಿರುವ ಪ್ರತಿಕೂಲ ಕೆಲಸದ ವಾತಾವರಣದಲ್ಲಿ ನೇರವಾಗಿ ಭಾಗಿಯಾಗಿದೆ. 

ಎದುರು ನೋಡುವಿಕೆ: ಕೇರಳದ ಜನತೆ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಮತ್ತು ಅದರ ಕೆಚ್ಚೆದೆಯ ಹೋರಾಟಗಾರರಿಗೆ ಕೃತಜ್ಞರಾಗಿರಬೇಕಿದೆ. ಮಲೆಯಾಳಿ ಭಾಷಿಕರು ಕನ್ನಡಿಯಲ್ಲಿ ಕಾಣುವ ಚಿತ್ರಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಆಶಿಸಬಹುದು. ಕನ್ನಡಿಯನ್ನು ಅಥವಾ ಅದನ್ನು ಎತ್ತಿ ಹಿಡಿದವರನ್ನು ದೂಷಿಸುವ ಬದಲು ಆ ಚಿತ್ರದಲ್ಲಿ ಪ್ರಕಟವಾದ ಪರಭಕ್ಷಕ ಕೊಳಕುಗಳನ್ನು ತೊಡೆದುಹಾಕುತ್ತಾರೆ ಎಂದು ಆಶಿಸೋಣ.

( ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರವು ಮತ್ತು ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ.)

Tags:    

Similar News