ಯುಪಿಎಸ್‌ಸಿ ಲ್ಯಾಟರಲ್ ಎಂಟ್ರಿ| ಯಾಕೆ ವಿವಾದ? ಬೇಕಿದೆಯೇ ಅಧಿಕಾರಶಾಹಿಗೆ ಕಾಯಕಲ್ಪ?
2005ರಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ಆಡಳಿತ ಸುಧಾರಣಾ ಆಯೋಗವು ಒಂದು ಪ್ರಮುಖ ಶಿಫಾರಸ್ಸನ್ನು ಮಾಡಿತು. ಅದೇನೆಂದರೆ ಕೆಲವು ಸರ್ಕಾರಿ ಹುದ್ದೆಗಳಿಗೆ ಬೇಕಾದ ವಿಶೇಷ ಜ್ಞಾನವನ್ನು ಈಗಿರುವ ಸರ್ಕಾರಿ ಅಧಿಕಾರಿಗಳು ಹೊಂದಿರದೇ ಇರುವುದರಿಂದ ಇಂತಹ ಹುದ್ದೆಗಳಿಗೆ ಖಾಸಗಿ ವಲಯ, ವಿಶ್ವವಿದ್ಯಾಲಯಗಳು, ಕೇಂದ್ರ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ನೇಮಕಾತಿ ಮಾಡಿಕೊಂಡರೆ ಸರ್ಕಾರದ ಕೆಲಸ ಕಾರ್ಯಗಳು ಉತ್ತಮವಾಗುತ್ತವೆ ಎನ್ನುವುದು;
ಆಗಸ್ಟ್ 18ರಂದು ಕೇಂದ್ರ ಲೋಕಸೇವಾ ಆಯೋಗ (UPSC)ವು ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ, ನಿರ್ದೇಶಕರು ಹಾಗೂ ಉಪಕಾರ್ಯದರ್ಶಿಗಳ 45 ಹುದ್ದೆಗಳಿಗೆ ಸಮಾನಾಂತರ ನೇಮಕಾತಿ ಮಾಡುವುದಾಗಿ ಘೋಷಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತು. ಈ ಜಾಹೀರಾತು ಪ್ರಕಟಗೊಂಡ ಕೂಡಲೇ ವಿವಿಧ ವಿರೋಧ ಪಕ್ಷಗಳು ಈ ಹುದ್ದೆಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪ. ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇಲ್ಲದಿರುವ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದವು. ಸಮಾಜದ ದುರ್ಬಲ ವರ್ಗಗಳಿಗೆ ಮೀಸಲಾತಿಯೇ ಇರದಂತಹ ಈ ನೇಮಕಾತಿಯು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ವಿರೋಧ ಪಕ್ಷಗಳು ಪ್ರತಿಭಟಿಸಿದಾಗ ಲೋಕಸೇವಾ ಆಯೋಗವು ಸರ್ಕಾರದ ಸೂಚನೆಯಂತೆ ತನ್ನ ಜಾಹಿರಾತನ್ನು ರದ್ದು ಪಡಿಸಿತು,
ಸಮಾನಾಂತರ ನೇಮಕಾತಿ ಎಂದರೇನು?
ಕೇಂದ್ರ ಸರ್ಕಾರದಲ್ಲಿನ ಎಲ್ಲ ಹಿರಿಯ ಹುದ್ದೆಗಳೂ ಅಖಿಲ ಭಾರತೀಯ ಸೇವೆಗಳಾದ ಐ.ಎ.ಎಸ್, ಐ.ಪಿ.ಎಸ್, ಭಾರತೀಯ ಅರಣ್ಯ ಸೇವೆ ಅಲ್ಲದೆ ಇತರ ಕೇಂದ್ರ ಸೇವೆಗಳಾದ ಐ.ಎಫ್.ಎಸ್, ಐ.ಆರ್.ಎಸ್, ಕೇಂದ್ರೀಯ ಸಚಿವಾಲಯ ಸೇವೆ ಮುಂತಾದ ಸೇವೆಗಳ ಅಧಿಕಾರಿಗಳಿಂದಲೇ ತುಂಬಲ್ಪಡುತ್ತವೆ. ಕಾಲಕ್ರಮೇಣ ಈ ಅಧಿಕಾರಿಗಳಲ್ಲಿ ಹಲವರು ತಮ್ಮ ಕೆಲಸಕಾರ್ಯಗಳಲ್ಲಿ ಯಾವುದೇ ಆಸಕ್ತಿಯನ್ನು ತೋರಿಸದೇ ಇದ್ದ ಕಾರಣ ಸರ್ಕಾರದ ಕಾರ್ಯವಿಧಾನದಲ್ಲಿ ನಿಷ್ಕ್ರಿಯತೆ, ಜಡತೆ, ಹೊಸ ತಂತ್ರಜ್ಞಾನಗಳಿಗೆ ಒಗ್ಗದಿರುವಿಕೆ ಮುಂತಾದವು ಕಂಡುಬರಲಾರಂಭಿಸಿದವು. ಹೀಗಾಗಿ ಸರ್ಕಾರಿ ಆಡಳಿತದಲ್ಲಿ ಸುಧಾರಣೆಗಳನ್ನು ತರಬೇಕು ಎನ್ನುವ ಕೂಗು ಹೆಚ್ಚಾಗತೊಡಗಿತು. ಕೆಲವು ತಾಂತ್ರಿಕ ಹಾಗೂ ವಿಶೇಷ ಹುದ್ದೆಗಳನ್ನು ನಿಭಾಯಿಸಲು ಕೇವಲ ಐ.ಎ.ಎಸ್ ಮುಂತಾದ ಸರ್ಕಾರಿ ಅಧಿಕಾರಿಗಳಿಗೆ ಸಾಧ್ಯವಿಲ್ಲ. ಬದಲಾಗುತ್ತಿರುವ ತಂತ್ರಜ್ಞಾನ ಹಾಗೂ ಬದಲಾಗುತ್ತಿರುವ ಆಡಳಿತ ಶೈಲಿಯನ್ನು ಸುಸೂತ್ರವಾಗಿ ನಿರ್ವಹಿಸಲು ಹೊರಗಿನಿಂದಲೂ ತಜ್ಞರನ್ನು ಸರ್ಕಾರಿ ಹುದ್ದೆಗಳಿಗೆ ನೇಮಿಸಿದರೆ ಸರ್ಕಾರದ ಕೆಲಸ ಕಾರ್ಯಗಳು ಉತ್ತಮವಾಗುತ್ತವೆ, ಮತ್ತು ಅವಕ್ಕೆ ಹೆಚ್ಚಿನ ಮೆರುಗು ಬರುತ್ತದೆ ಎನ್ನುವ ಯೋಚನೆ ಕೇಂದ್ರ ಸರ್ಕಾರಕ್ಕೆ ಬಂದಿತು.
ಈ ನಿಟ್ಟಿನಲ್ಲಿ ಕೆಲವು ನಿಗದಿತ ಸರ್ಕಾರಿ ಕ್ಷೇತ್ರಗಳಿಗೆ ಖಾಸಗಿ ವಲಯದಿಂದ ಪರಿಣಿತರನ್ನು ನೇಮಿಸಿಕೊಳ್ಳಲು ಸರ್ಕಾರವು ಉದ್ದೇಶಿಸಿತು. ನೆಹರೂ ಪ್ರಧಾನ ಮಂತ್ರಿಯಾಗಿದ್ದಾಗಲೇ 1961ರಲ್ಲಿ ಅಂತಾರಾಷ್ಟ್ರೀಯ ವಿತ್ತೀಯ ನಿಧಿಯಲ್ಲಿ (ಐ.ಎಂ.ಎಫ್) ಕೆಲಸ ಮಾಡುತ್ತಿದ್ದ ಐ.ಜಿ.ಪಟೇಲ್ ಅವರನ್ನು ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಯಿತು. ಮುಂದೆ ಇವರೇ ಕೇಂದ್ರ ರಿಸರ್ವ್ ಬ್ಯಾಂಕ್ನ ಗವರ್ನರ್ ಸಹಾ ಆದರು. 1971ರಲ್ಲಿ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪ್ರೊಫೆಸರ್ ಆಗಿದ್ದ ಮನಮೋಹನ್ ಸಿಂಗ್ ಅವರನ್ನು ವಾಣಿಜ್ಯ ಮಂತ್ರಾಲಯದಲ್ಲಿ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಯಿತು. 2002ರಲ್ಲಿ ವಾಜಪೇಯಿ ಸರ್ಕಾರವು ಖಾಸಗಿ ಉದ್ದಿಮೆಯಲ್ಲಿದ್ದ ಆರ್. ವಿ. ಶಾಹಿ ಅವರನ್ನು ವಿದ್ಯುತ್ ವಲಯದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತ್ತು. 2009 ರಲ್ಲಿ ನಂದನ್ ನಿಲೇಕಣಿ ಇವರನ್ನು ಆಧಾರ್ ಕಾರ್ಡ್ ವ್ಯವಸ್ಥೆಯನ್ನು ದೇಶದಲ್ಲಿ ರೂಪಿಸಲು ನೇಮಕ ಮಾಡಿಕೊಳ್ಳಲಾಯಿತು.
ವೀರಪ್ಪ ಮೊಯ್ಲಿ ಆಯೋಗ ಶಿಫಾರಸು
2005ರಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ಆಡಳಿತ ಸುಧಾರಣಾ ಆಯೋಗವು ಒಂದು ಪ್ರಮುಖ ಶಿಫಾರಸ್ಸನ್ನು ಮಾಡಿತು. ಅದೇನೆಂದರೆ ಕೆಲವು ಸರ್ಕಾರಿ ಹುದ್ದೆಗಳಿಗೆ ಬೇಕಾದ ವಿಶೇಷ ಜ್ಞಾನವನ್ನು ಈಗಿರುವ ಸರ್ಕಾರಿ ಅಧಿಕಾರಿಗಳು ಹೊಂದಿರದೇ ಇರುವುದರಿಂದ ಇಂತಹ ಹುದ್ದೆಗಳಿಗೆ ಖಾಸಗಿ ವಲಯ, ವಿಶ್ವವಿದ್ಯಾಲಯಗಳು, ಕೇಂದ್ರ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ನೇಮಕಾತಿ ಮಾಡಿಕೊಂಡರೆ ಸರ್ಕಾರದ ಕೆಲಸ ಕಾರ್ಯಗಳು ಉತ್ತಮವಾಗುತ್ತವೆ ಎನ್ನುವುದು.
ಈ ಸಲಹೆಯ ಅನ್ವಯ 2017ರಲ್ಲಿ ತನ್ನ ಕೆಲವು ತಾಂತ್ರಿಕ ಹುದ್ದೆಗಳಿಗೆ ಖಾಸಗಿ ವಲಯದಿಂದಲೂ ಪರಿಣಿತರನ್ನು ನೇಮಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ತೀರ್ಮಾನ ಮಾಡಿತು. ಆದರೆ ಈ ತೀರ್ಮಾನಕ್ಕೆ ಹೆಚ್ಚಿನ ವಿರೋಧವೂ ವ್ಯಕ್ತವಾಯಿತು. ಖಾಸಗಿ ವಲಯದ ಅಧಿಕಾರಿಗಳನ್ನು ಸರ್ಕಾರಕ್ಕೆ ನೇಮಿಸಿದರೆ ಸರ್ಕಾರದ ರಹಸ್ಯ ನೀತಿಗಳನ್ನು ತಾವು ಕಾರ್ಯನಿರ್ವಹಿಸುತ್ತಿದ್ದ ಕಂಪನಿಗಳಿಗೆ ತಿಳಿಸಿ ಅವುಗಳಿಗೆ ಲಾಭವನ್ನು ಮಾಡಿಕೊಡುತ್ತಾರೆ; ಅವರನ್ನು ಸೂಕ್ತ ಶಿಸ್ತಿನ ನಿಯಮಗಳಿಗೆ ಒಳಪಡಿಸುವುದು ಕಠಿಣ: ಅವರು ಸರ್ಕಾರಿ ವ್ಯವಸ್ಥೆಗೆ ಹೊಂದಿಕೊಳ್ಳುವುದು ಕಷ್ಟ; ಇಂತಹ ನೇಮಕಾತಿಗಳಿಂದ ಹಿರಿಯ ಸರ್ಕಾರಿ ಅಧಿಕಾರಿಗಳ ನೈತಿಕ ಸ್ಥೆöÊರ್ಯವು ಕುಂದುತ್ತದೆ; ಪಾರದರ್ಶಕವಾಗಿ ನೇಮಕಾತಿ ಮಾಡದೇ ಹೋದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಮುಂತಾದ ಆಕ್ಷೇಪಗಳು ವ್ಯಕ್ತವಾದವು.
ಇವೆಲ್ಲವನ್ನೂ ಪರಿಗಣಿಸಿದ ಸರ್ಕಾರವು ಸರ್ಕಾರಿ ಸೇವೆಗೆ ಖಾಸಗಿಯವರನ್ನು ಕೇಂದ್ರ ಲೋಕಸೇವಾ ಆಯೋಗದ ಮೂಲಕವೇ ಪಾರದರ್ಶಕ ರೀತಿಯಲ್ಲಿ ನೇಮಿಸಬೇಕು: ಈ ಹುದ್ದೆಗಳಿಗೆ ಬರುವವರ ಸೇವೆ ಕೇವಲ ಮೂರು ವರ್ಷದ್ದಾಗಿರುತ್ತದೆ; ಒಂದು ವೇಳೆ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಅವರ ಸೇವೆಯನ್ನು ಇನ್ನೂ ಎರಡು ವರ್ಷಗಳ ಕಾಲ ಮುಂದುವರೆಸಬಹುದು; ಆದರೆ ಐದು ವರ್ಷಗಳ ಸೇವೆಯೇ ಗರಿಷ್ಟ ಎಂಬ ನಿಯಮಗಳನ್ನು ರೂಪಿಸಿತು.
2018 ರಲ್ಲಿ ಜಾರಿ
ಈ ನಿಟ್ಟಿನಲ್ಲಿ 2018 ರಲ್ಲಿ ನರೇಂದ್ರ ಮೋದಿ ಸರ್ಕಾರವು ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಜಾರಿಗೆ ತಂದಿತು. ಆಗ ಯು.ಪಿ.ಎಸ್.ಸಿ ಇಂತಹ 50 ಹುದ್ದೆಗಳಿಗೆ ಅರ್ಜಿಗಳನ್ನು ಕರೆದಾಗ 6000 ಅರ್ಜಿಗಳು ಬಂದವು. ಮುಂದೆ ನಡೆದ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡವರನ್ನು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಗೆ ನೇಮಕ ಮಾಡಲಾಯಿತು. ಮುಂದಿನ ವರ್ಷಗಳಲ್ಲಿ ಇನ್ನೂ ಕೆಲವು ಜನರನ್ನು ಇದೇ ರೀತಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರಕ್ಕೆ 63 ಜನರನ್ನು ಸಮಾನಾಂತರವಾಗಿ ನೇಮಕ ಮಾಡಿಕೊಳ್ಳಲಾಗಿದ್ದು ಅವರಲ್ಲಿ ಸದ್ಯಕ್ಕೆ 57 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ನೇಮಕಗೊಂಡವರ ಕಾರ್ಯವಿಧಾನದ ಬಗ್ಗೆ ಇಲ್ಲಿಯವರೆಗೆ ಯಾವುದೇ ಟೀಕೆ ಬರದಿರುವುದು ಈ ಆಯ್ಕೆ ಪ್ರಕ್ರಿಯೆ ಸೂಕ್ತವಾಗಿದೆ ಎನ್ನುವುದರ ನಿದರ್ಶನವಾಗಿದೆ. ಈ ಮೊದಲಿಗೆ ಜಂಟಿ ಕಾರ್ಯದರ್ಶಿ ಹುದ್ದೆ ಮಾತ್ರ ಈ ಸ್ಕೀಂಗೆ ಸೇರಿದ್ದರೂ ಈಗ ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಹುದ್ದೆಗಳನ್ನು ಸೇರಿಸಲಾಗಿದೆ.
ಈ ತಿಂಗಳಾರಂಭದಲ್ಲಿ ಯು.ಪಿ.ಎಸ್.ಸಿ ಕೇಂದ್ರ ಸರ್ಕಾರದ 23 ಇಲಾಖೆಗಳಿಗಾಗಿ 45 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿತ್ತು. ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಹುದ್ದೆಗಳಿಗೆ ಕನಿಷ್ಟ ವಯೋಮಿತಿ, ಸಂಬಂಧಪಟ್ಟ ಸೇವಾನುಭವ, ಪಡೆಯುತ್ತಿದ್ದ ಕನಿಷ್ಟ ವೇತನ ಮುಂತಾದವು ಬೇರೆ ಬೇರೆಯಾಗಿದ್ದರೆ ಪ್ರತಿಯೊಂದು ಹುದ್ದೆಗೂ (ಉದಾ ಎಲೆಕ್ಟಾçನಿಕ್ಸ್ ಮಂತ್ರಾಲಯದ ಜಂಟಿ ಕಾರ್ಯದರ್ಶಿ) ನಿಗದಿಪಡಿಸಿರುವ ವಿದ್ಯಾರ್ಹತೆಯೇ ಬೇರೆ ಬೇರೆ ಆಗಿವೆ.
ಸರ್ಕಾರದ ಹಿರಿಯ ಹುದ್ದೆಗಳ ಸಮಾನಾಂತರ ನೇಮಕಾತಿಗೆ ಸರ್ಕಾರಿ ಅಧಿಕಾರಿಗಳ ವಲಯದಲ್ಲಿಯೇ ತೀವ್ರವಾದ ವಿರೋಧವಿದೆ. ತಮ್ಮ ವೃಂದಕ್ಕೆ ಸೇರಿದ್ದ ಹುದ್ದೆಯೊಂದು ಇನ್ನೊಂದು ವೃಂದಕ್ಕೆ ಸೇರಿರುವ ಅಧಿಕಾರಿಗೆ ಹೋಗಲು ಐ.ಎ.ಎಸ್ ಅಧಿಕಾರಿಗಳು ಬಿಡುವುದಿಲ್ಲ. ಉದಾಹರಣೆಗೆ ಕೇಂದ್ರ ಗೃಹ ಕಾರ್ಯದರ್ಶಿಯ ಹುದ್ದೆ ಐ.ಪಿ.ಎಸ್ ಅಧಿಕಾರಿಗೆ ಸಲ್ಲಬೇಕು, ರಕ್ಷಣಾ ಕಾರ್ಯದರ್ಶಿಯ ಹುದ್ದೆಯನ್ನು ಸೈನ್ಯಾಧಿಕಾರಿಯೊಬ್ಬರು ನಿರ್ವಹಿಸಬೇಕು, ಹಣಕಾಸು ಇಲಾಖೆಯ ಹುದ್ದೆಗಳು ಐ.ಆರ್.ಎಸ್, ಇಲ್ಲವೇ ಐ.ಎ.ಎಸ್ ಅಧಿಕಾರಿಗಳಿಗೆ ಹೋಗಬೇಕು ಎನ್ನುವ ಕೂಗು ದಶಕಗಳಿಂದ ಕೇಳಿಬರುತ್ತಿದ್ದರೂ ಒಂದೆರಡು ನಿದರ್ಶನಗಳನ್ನು ಹೊರತುಪಡಿಸಿದರೆ ಇವೆಲ್ಲವೂ ಐ.ಎ.ಎಸ್ ಅಧಿಕಾರಿಗಳ ಕೈಯಲ್ಲಿವೇ ಇವೆ. ಇದೇ ಕಾರಣಕ್ಕಾಗಿ ಖಾಸಗಿ ವಲಯದಿಂದ ಬಂದಿರುವ ವ್ಯಕ್ತಿಯೊಬ್ಬನ ಅಧೀನದಲ್ಲಿ ತಾವು ಕೆಲಸಮಾಡಲು ಬಹಳಷ್ಟು ಹಿರಿಯ ಅಧಿಕಾರಿಗಳು ಒಪ್ಪುವುದಿಲ್ಲ. ಹೀಗಾಗಿ ಸಮಾನಾಂತರ ನೀತಿಯ ಮೂಲಕ ನೇಮಕಾತಿ ಹೊಂದಿದ ವ್ಯಕ್ತಿಗಳು ತಮ್ಮ ಕಾರ್ಯಸ್ಥಳದಲ್ಲಿ ಅಸಹಕಾರವನ್ನು ಎದುರಿಸುತ್ತಿರುವುದು ಗುಟ್ಟೇನಲ್ಲ.
ಸರ್ಕಾರದ ಐದು ವರ್ಷಗಳ ಸೇವಾವಧಿ ಮುಗಿಸಿದ ಖಾಸಗಿ ಕ್ಷೇತ್ರದ ಅಧಿಕಾರಿಗಳು ತಮ್ಮ ಸ್ವಕ್ಷೇತ್ರಗಳಿಗೆ ಮರಳಿದಾಗ ಅವರಿಗೆ ಸೂಕ್ತ ಸ್ಥಾನಗಳು ದೊರೆಯುವುದಿಲ್ಲ ಎಂದೂ ಸರ್ಕಾರಿ ಅಧಿಕಾರಿಗಳು ವಾದಿಸುತ್ತಾರೆ. ಈ ವಾದದಲ್ಲಿ ತಿರುಳಿಲ್ಲ ಎನ್ನಲು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರ ಸಂಖ್ಯೆಯೇ ಸಾಕ್ಷಿ.
ಇಲ್ಲಿಯವರೆಗೆ ಸುಸೂತ್ರವಾಗಿದ್ದ ಈ ನೇಮಕಾತಿ ಯೋಜನೆಗೆ ಇದ್ದಕ್ಕಿದ್ದಂತೆ ತಾತ್ಕಾಲಿಕ ಬ್ರೇಕ್ ಬಿದ್ದಿರುವ ಕಾರಣವೇ ಈ ನೇಮಕಾತಿಯಲ್ಲಿ ಮೀಸಲಾತಿಯನ್ನು ಪರಿಗಣಿಸದೆಯೇ ಇರುವುದು. ಈ ಹಿಂದೆಯೂ ಈ ಯೋಜನೆಯಲ್ಲಿ ಮೀಸಲಾತಿ ಇರಲಿಲ್ಲ. ಏಕೆಂದರೆ ಇವು ನಿಯೋಜನೆ (ಡೆಪ್ಯುಟೇಷನ್) ಹುದ್ದೆಗಳಲ್ಲದೆ ತಾತ್ಕಾಲಿಕ ಹುದ್ದೆಗಳೂ ಆಗಿವೆ. ಸಾಮಾನ್ಯವಾಗಿ ಯಾವುದೇ ಹುದ್ದೆಗಳಿಗೆ ಡೆಪ್ಯೂಟೇಷನ್ ಮೇಲೆ, ನಿಗದಿತ ಅವಧಿಗೆ ನೇಮಕ ಮಾಡಿಕೊಳ್ಳುವಾಗ ಮೀಸಲಾತಿಯ ಅವಶ್ಯಕತೆಯಿಲ್ಲ ಎನ್ನುವ ವಾದವನ್ನು ಎಲ್ಲರೂ ಒಪ್ಪುತ್ತಿಲ್ಲ. ಹೀಗಾಗಿ ಈ ಯೋಜನೆಯು ಸದ್ಯಕ್ಕೆ ನೇಪಥ್ಯಕ್ಕೆ ಸರಿದಿರುವುದು ಸ್ಪಷ್ಟ.
ಸಮಾನಾಂತರ ನೇಮಕಾತಿ ಒಂದು ಅತ್ಯುತ್ತಮ ಯೋಜನೆ. ವಿಶ್ವದ ವಿವಿಧ ಮುಂದುವರೆದ ದೇಶಗಳಲ್ಲಿ ಇಂತಹ ಯೋಜನೆಗಳು ಜಾರಿಯಲ್ಲಿವೆ. ಈಗಾಗಲೇ ನಾವು ನೋಡಿರುವಂತೆ ಖಾಸಗಿ ವಲಯದಿಂದ ಸರ್ಕಾರಕ್ಕೆ ಬಂದ ಹಲವು ತಜ್ಞರ ಪ್ರಯತ್ನಗಳಿಂದ ದೇಶಕ್ಕೆ ಹೆಚ್ಚಿನ ಲಾಭವಾಗಿದೆ. ಈ ತಜ್ಞರು ಆಡಳಿತವನ್ನು ಉತ್ತಮಗೊಳಿಸಲು ಸೂಕ್ತ ಸಲಹೆಗಳನ್ನು ನೀಡಿದ್ದಾರೆ. ಇಂತಹ ಯೋಜನೆಗಳು ದೇಶದ ಹಿತಕ್ಕೆ ಪೂರಕವಾಗಿರುವ ಕಾರಣ ಈ ಉತ್ತಮ ಯೋಜನೆಯನ್ನು ಕೈಬಿಡಬಾರದು. ಆದರೆ ಈ ಹುದ್ದೆಗಳಿಗೆ ಮೀಸಲಾತಿಯನ್ನು ಹೇಗೆ ಕೊಡಬೇಕು ಎನ್ನುವ ಬಗ್ಗೆ ಸರಿಯಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲಿ ರಚಿಸಿ ಖಾಸಗಿ ವಲಯದ ಉತ್ತಮ ವ್ಯಕ್ತಿಗಳನ್ನು ನಿಗದಿತ ಹುದ್ದೆಗಳಿಗೆ ಆರಿಸಿ ಜಡ್ಡುಹಿಡಿದಿರುವ ಅಧಿಕಾರಶಾಹಿಗೆ ಕಾಯಕಲ್ಪವನ್ನು ಸರ್ಕಾರವು ಶೀಘ್ರದಲ್ಲಿ ಕೊಡಬೇಕಾಗಿದೆ.
(ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು 'ದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)