ಪೊಲೀಸರ ಅಸ್ವಾಭಾವಿಕ ಸಾವುಗಳು - ಹದಗೆಟ್ಟ ವ್ಯವಸ್ಥೆಯ ಪ್ರತೀಕವೇ?
ಇದೇ ಆಗಸ್ಟ್ 2ರಂದು ಯಾದಗಿರಿ ಜಿಲ್ಲೆಯ ಪಿ.ಎಸ್.ಐ ಪರಶುರಾಮ್(34) ಹೃದಯಾಘಾತದಿಂದ ಮೃತಪಟ್ಟ ಕೆಲವೇ ಸಮಯದ ನಂತರ ಅವರ ಪತ್ನಿ ಶ್ವೇತಾ ಅವರು, ಸ್ಥಳೀಯ ಶಾಸಕರು ಹಾಗೂ ಅವರ ಮಗ 30 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂಬ ಗಂಭೀರ ಆರೋಪವನ್ನು ಮಾಡಿದ್ದರು.;
ಇದೇ ಆಗಸ್ಟ್ 2ರಂದು ಯಾದಗಿರಿ ಜಿಲ್ಲೆಯ ಪಿ.ಎಸ್.ಐ ಪರಶುರಾಮ್(34) ಹೃದಯಾಘಾತದಿಂದ ಮೃತಹೊಂದಿದ ಕೆಲವೇ ಸಮಯದ ನಂತರ ಅವರ ಪತ್ನಿ ಶ್ವೇತಾ ತಮ್ಮ ಪತಿಯ ಹಠಾತ್ ಸಾವಿಗೆ ಅವರಿಗೆ ಆಗುತ್ತಿದ್ದ ತೀವ್ರ ಮಾನಸಿಕ ಒತ್ತಡವೇ ಕಾರಣ ಎಂದು ದೂರಿದರು. ಕೇವಲ ಏಳು ತಿಂಗಳ ಹಿಂದೆ ಯಾದಗಿರಿ ನಗರ ಪೊಲೀಸ್ ಠಾಣೆಯ ಅಧಿಕಾರವನ್ನು ವಹಿಸಿಕೊಂಡಿದ್ದ ಪರಶುರಾಮ್‌ರನ್ನು ಏಕಾಏಕಿ ಅಲ್ಲಿಯ ಸೈಬರ್ ಪೊಲೀಸ್ ಠಾಣೆಗೆ ಅವಧಿಪೂರ್ವವಾಗಿ ವರ್ಗಾ ಮಾಡಿ ಈ ವರ್ಗಾವಣೆಯನ್ನು ರದ್ದುಗೊಳಿಸಲು ಸ್ಥಳೀಯ ಶಾಸಕರು ಹಾಗೂ ಅವರ ಮಗ 30 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದೂ, ಇದರಿಂದಲೇ ತಮ್ಮ ಪತಿ ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದರೆಂದು ಶ್ವೇತಾ ಗಂಭೀರ ಆರೋಪವನ್ನು ಮಾಡಿದರು.
ಪರಶುರಾಮ್ ಸಾವಿನ ಬಗ್ಗೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದ ನಂತರವೂ ಇನ್ನೊಂದು ಹೇಳಿಕೆಯನ್ನು ನೀಡಿದ ಶ್ವೇತಾ, ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರವು ನಡೆಯುತ್ತಿದ್ದು ಹಣ ಕೊಡದೆ ಹೋದರೆ ಯಾವ ಅಧಿಕಾರಿಗೂ ಉತ್ತಮ ಸ್ಥಾನವು ದೊರೆಯುವುದಿಲ್ಲ ಎಂದು ಆರೋಪಿಸಿದರು.
ಪರಶುರಾಮ್‌ರ ಸಾವಾದ ಕೆಲವೇ ದಿನಗಳ ನಂತರ ಬೆಂಗಳೂರಿನ ಹೊರವಲಯದ ಬಿಡದಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡು ಬೆಂಗಳೂರಿನ ಸಿ.ಸಿ.ಬಿ ಇನ್ಸ್ಪೆಕ್ಟರ್ ತಿಮ್ಮೇಗೌಡ ಸಾವನ್ನಪ್ಪಿದ್ದಾರೆ. 44 ವರ್ಷದ ಈ ಅಧಿಕಾರಿಯನ್ನು ಕೇವಲ ಎರಡು ತಿಂಗಳ ಹಿಂದೆಯಷ್ಟೇ ಕುಂಬಳಗೊಡು ಪೊಲೀಸ್ ಠಾಣೆಯಿಂದ ಬೆಂಗಳೂರಿಗೆ ವರ್ಗ ಮಾಡಲಾಗಿತ್ತು. ತಿಮ್ಮೇಗೌಡ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡರೇಕೆ? ಅವರಿಗೆ ಯಾವ ಒತ್ತಡವಿತ್ತು ಎನ್ನುವುದು ಇನ್ನೂ ತಿಳಿಯದಾದರೂ ವರ್ಗಾವಣೆಗಳಲ್ಲಿ ನಡೆಯುತ್ತಿರುವ ಅಕ್ರಮಗಳು ಪೊಲೀಸ್ ಅಧಿಕಾರಿಗಳನ್ನು ತೀವ್ರ ಮಾನಸಿಕ ಒತ್ತಡಕ್ಕುಂಟುಮಾಡಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಶ್ವೇತಾರ ಹೇಳಿಕೆಯನ್ನು ಸಮರ್ಥಿಸಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಸಬ್ ಇನ್ಸ್ಪೆಕ್ಟರ್ ಮತ್ತು ಅವರ ಮೇಲಾಧಿಕಾರಿಗಳ ವರ್ಗಾವಣೆಗಾಗಿ ಲಕ್ಷಾನುಗಟ್ಟಲೇ ಹಣವನ್ನು ಸ್ಥಳೀಯ ರಾಜಕಾರಿಣಿಗಳು ಬೇಡುತ್ತಿದ್ದಾರೆ ಎಂದಿದ್ದಾರೆ. ಠಾಣಾಧಿಕಾರಿಯ ಸ್ಥಾನದಿಂದ ಹಿಡಿದು ಜಿಲ್ಲಾ ಎಸ್.ಪಿ ಹುದ್ದೆಯವರೆಗೆ ಯಾವ ಪ್ರಭಾವಿ ಸ್ಥಾನವು ಸಿಗಬೇಕಾದರೂ ಅಧಿಕಾರಿಗಳು ರಾಜಕಾರಿಣಿಗಳಿಗೆ ಅಪಾರ ಪ್ರಮಾಣದ ಲಂಚವನ್ನು ಕೊಡಬೇಕಾಗಿದೆ ಎನ್ನುವ ಮಾತುಗಳು ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿವೆ. ಕೇಳಿದಷ್ಟು ಹಣವನ್ನು ಸುರಿದರೂ ಒಂದು ವರ್ಷಕ್ಕಿಂತ ಹೆಚ್ಚಾಗಿ ತಾವು ಪಡೆದ ಸ್ಥಾನದಲ್ಲಿ ಇರುವ ಗ್ಯಾರಂಟಿಯೇ ಇಲ್ಲ ಎಂದೂ ದೂರುತ್ತಿರುವ ಅಧಿಕಾರಿಗಳು ಈ ಕಾರಣದಿಂದಲೇ ತಮ್ಮಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದೆ ಎಂದು ಖಾಸಗಿಯಾಗಿ ಹೇಳುತ್ತಿದ್ದಾರೆ. ತಮಗೆ ಬೇಕಾದ ಸ್ಥಾನವನ್ನು ಗಳಿಸಲು ಅಧಿಕಾರಿಗಳಲ್ಲಿ ಪೈಪೋಟಿ ನಡೆಯುತ್ತಿದ್ದು ದುಡ್ಡಿದ್ದವನೇ ದೊಡ್ಡಪ್ಪನಾಗುತ್ತಿದ್ದಾನೆ, ಹಾಗೂ ಇದೇ ಕಾರಣದಿಂದಲೇ ಸಾರ್ವಜನಿಕರ ಶೋಷಣೆಯೂ ಠಾಣೆಗಳಲ್ಲಿ ನಡೆಯುತ್ತಿದೆ ಎಂದು ಹಲವು ಹಿರಿಯ ಅಧಿಕಾರಿಗಳೇ ಒಪ್ಪುತ್ತಾರೆ.
ಪೊಲೀಸ್ ವರ್ಗಾವಣೆಗಳಲ್ಲಿ ತೀವ್ರ ರೀತಿಯ ರಾಜಕೀಯ ಹಸ್ತಕ್ಷೇಪವಾಗುತ್ತಿರುವುದನ್ನು ತಪ್ಪಿಸಿ ಇಲಾಖೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ತರಬೇಕು ಎನ್ನುವ ಬೇಡಿಕೆಯು ಸುಮಾರು 25 ವರ್ಷಗಳ ಹಿಂದೆಯೇ ಆರಂಭವಾಯಿತು. ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡಬೇಕಾದರೆ ರಾಜಕಾರಣಿಗಳ ಪ್ರಭಾವ ಪೊಲೀಸ್ ಇಲಾಖೆಯಲ್ಲಿ ಕಡಿಮೆಯಾಗಬೇಕು ಎನ್ನುವ ಉದ್ದೇಶದಿಂದ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಸಿಂಗ್ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿ ಇಲಾಖೆಯಲ್ಲಿ ವ್ಯಾಪಕ ಮಾರ್ಪಾಡುಗಳನ್ನು ತರಲು ಸೂಚನೆಗಳನ್ನು ನೀಡಬೇಕು ಎಂದು ಕೋರಿದ್ದರು. 6 ವರ್ಷಗಳ ಕಾಲ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ 2006ರಲ್ಲಿ ಈ ಬಗ್ಗೆ ತೀರ್ಪನ್ನು ನೀಡಿ ಪೊಲೀಸ್ ಇಲಾಖೆಯಲ್ಲಿ ಸುಧಾರಣೆಗಳನ್ನು ತರಲು ಆರು ಅಂಶಗಳ ಸೂತ್ರವೊಂದನ್ನು ರೂಪಿಸಿತು.
ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್
ಪೊಲೀಸ್ ಅಧಿಕಾರಿಗಳ ವರ್ಗಾವರ್ಗಿಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ತಡೆಯಲು ಇಲಾಖೆಯ ಹಿರಿಯ ಅಧಿಕಾರಿಗಳೇ ಇರುವ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ (Police Establishment Board) ಎನ್ನುವ ಸಮಿತಿಯನ್ನು ವಿವಿಧ ಸ್ತರಗಳಲ್ಲಿ ರಚಿಸಬೇಕು; ವರ್ಗಾವಣೆ ಮಾಡಿದ ಅಧಿಕಾರಿಯು ತನ್ನ ಸ್ಥಾನದಲ್ಲಿ ನಿರ್ದಿಷ್ಟ ಅವಧಿಯವರೆಗೆ ಕಾರ್ಯನಿರ್ವಹಿಸಬೇಕು; ಈ ಸಂಬಂಧ ಎಲ್ಲ ರಾಜ್ಯಗಳೂ ಸೂಕ್ತ ಕಾನೂನುಗಳನ್ನು ರಚಿಸಬೇಕು ಎನ್ನುವ ಆದೇಶವನ್ನು ಸರ್ವೋಚ್ಛ ನ್ಯಾಯಾಲಯವು ನೀಡಿತು. ಅದರಂತೆ ಕರ್ನಾಟಕವೂ ತನ್ನ ಪೊಲೀಸ್ ಕಾನೂನನ್ನು ಮಾರ್ಪಾಟು ಮಾಡಿ ವಲಯ, ಜಿಲ್ಲೆ, ಉಪವಿಭಾಗ, ಸರ್ಕಲ್, ಹಾಗೂ ಪೊಲೀಸ್ ಠಾಣಾಧಿಕಾರಿಗಳು ಕನಿಷ್ಟ ಒಂದು ವರ್ಷದ ಕಾಲ ತಮ್ಮ ಹುದ್ದೆಯಲ್ಲಿ ಇರಬೇಕು ಎಂದು ಆದೇಶಿಸಿತು. ಈ ಅವಧಿಯನ್ನು ಎರಡು ವರ್ಷಗಳೆಂದು ಇತ್ತೀಚೆಗಷ್ಟೇ ಮಾಡಲಾಗಿದೆ.
ಒಬ್ಬ ಅಧಿಕಾರಿ ಎರಡು ವರ್ಷಗಳು ಒಂದು ಸ್ಥಾನದಲ್ಲಿ ಇರಲು ಕಾನೂನಿನಲ್ಲಿಯೇ ಅವಕಾಶ ಮಾಡಿಕೊಟ್ಟಿರುವಾಗ ಪರಶುರಾಮ್‌ರನ್ನು ಕೇವಲ ಏಳು ತಿಂಗಳಲ್ಲಿಯೇ ಏಕೆ ವರ್ಗಾವಣೆ ಮಾಡಲಾಯಿತು ಎನ್ನುವುದು ತಿಳಿದಿಲ್ಲ. ಅವರಂತೆ ಹಲವು ಹತ್ತು ಅಧಿಕಾರಿಗಳು ಅವಧಿಪೂರ್ವ ವರ್ಗಾವಣೆಯನ್ನು ಹೊಂದಿರುವುದಾಗಿ ಅಧಿಕಾರಿಗಳು ಒಪ್ಪುತ್ತಾರೆ. ಇದು ಸತ್ಯವಾದರೆ ಕಾನೂನಿನ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ. ಹೀಗೆ ಉಲ್ಲಂಘನೆಯಾಗುತ್ತಿದ್ದರೆ ತೊಂದರೆಗೀಡಾದ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ ಎನ್ನುವ ಪ್ರಶ್ನೆ ಏಳುತ್ತದೆ. ಇದರ ಉತ್ತರವಾಗಿ ಸೇವಾನಿರತ ಅಧಿಕಾರಿಗಳು ಹೇಳುವುದೇನೆಂದರೆ ತಾವು ಒಂದು ವೇಳೆ ನ್ಯಾಯಾಲಯದ ಕದವನ್ನು ತಟ್ಟಿದೆವೆಂದರೆ ತಮಗೆ ಮುಂದೆ ತೊಂದರೆಯಾಗಬಹುದೆಂಬ ಭಯ ಅಧಿಕಾರಿಗಳಲ್ಲಿದೆ ಎಂದು.
ಪೊಲೀಸರ ವರ್ಗಾವಣೆಯನ್ನು ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ ಮಾಡುತ್ತಿಲ್ಲವೇ? ಹಿರಿಯ ಅಧಿಕಾರಿಗಳೇ ಇರುವ ಈ ಸಮಿತಿಗಳು ನ್ಯಾಯಯುತವಾಗಿ ವರ್ಗಾವಣೆಗಳನ್ನು ಮಾಡುತ್ತಿಲ್ಲವೇ ಎನ್ನುವುದು ಮುಂದೆ ಉದ್ಭವಿಸುವ ಪ್ರಶ್ನೆ. ಆದರೆ ಈ ಸಮಿತಿಗಳೂ ಸಹಾ ಅಧಿಕಾರಸ್ಥರು ಸೂಚಿಸಿದಂತೆಯೇ ಕಾರ್ಯನಿರ್ವಹಿಸುತ್ತಿದ್ದು ಪ್ರತಿಯೊಂದು ವರ್ಗಾವಣೆಯೂ ರಾಜಕೀಯ ವ್ಯಕ್ತಿಗಳು ಬಯಸಿದಂತೆಯೇ ಆಗುತ್ತಿದೆ ಎಂದು ಎಲ್ಲರೂ ಹೇಳುತ್ತಾರೆ. ಹೀಗಾಗಿ ರಾಜಕೀಯ ಬಲ ಇಲ್ಲದೇ ಹೋದರೆ ಯಾವ ಅಧಿಕಾರಿಗೂ ಸೂಕ್ತವಾದ ಪೋಸ್ಟಿಂಗ್ ಸಿಗುವುದಿಲ್ಲ.
ಹೂಡಿದ ಹಣ ಗಳಿಸಲು ಮಾನಸಿಕ ಒತ್ತಡ?
ಅಪಾರ ಪ್ರಮಾಣದ ಹಣ ಸುರಿದು ಒಂದು ಸ್ಥಾನಕ್ಕೆ ಬರುವ ಪೊಲೀಸ್ ಅಧಿಕಾರಿ ತಾನು ಹೂಡಿದ ಬಂಡವಾಳವನ್ನು ಬಡ್ಡಿ ಸಮೇತ ವಾಪಸ್ ಪಡೆಯುವುದಿಲ್ಲವೇ? ಹಾಗೆ ವಾಪಸ್ ಪಡೆಯಬೇಕಾದರೆ ಆತ ತನಗಿರುವ ಅನಿಶ್ಚಿತ ಅವಧಿಯಲ್ಲಿ ಸಾರ್ವಜನಿಕರ ಸುಲಿಗೆಗೆ ನಿಲ್ಲುವುದಿಲ್ಲವೇ? ತಾನು ಹೂಡಿದ ಹಣವನ್ನು ಗಳಿಸಲು ಅವನಿಗೆ ಮಾನಸಿಕ ಒತ್ತಡವುಂಟಾಗುವುದಿಲ್ಲವೇ? ಎಂದೂ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಹಣ ಕೊಟ್ಟು ಒಂದು ಸ್ಥಾನಕ್ಕೆ ಬರುವ ಪೊಲೀಸ್ ಅಧಿಕಾರಿಗಳು ತಮಗೆ ಯಾವ ರಾಜಕಾರಿಣಿ ಆ ಸ್ಥಳಕ್ಕೆ ಪೋಸ್ಟಿಂಗ್ ಮಾಡಿಸಿ ಕೊಟ್ಟರೋ ಅವರ ಮಾತುಗಳನ್ನು ಕೇಳುವುದು ಅನಿವಾರ್ಯವಾಗುತ್ತದೆ. ಒಂದು ವೇಳೆ ತಪ್ಪು ಮಾಡಿದರೆ ಯಾವ ರಾಜಕೀಯ ವ್ಯಕ್ತಿಯೂ ಅವರ ಸಹಾಯಕ್ಕೆ ಬರುವುದಿಲ್ಲ. ಮೇಲಾಧಿಕಾರಿಗಳು ಅವರನ್ನು ಅಮಾನತ್ತುಗೊಳಿಸಬಹುದು. ಇದೇ ಸಾಲದಂತೆ ಒಂದು ಸಣ್ಣ ತಪ್ಪುಮಾಡಿ “ಮೈನರ್ ಪನಿಷ್‌ಮೆಂಟ್” ಪಡೆದರೆ ಆತ ಅವಧಿಪೂರ್ವವಾಗಿ ವರ್ಗಾವಣೆಗೆ ಈಡಾಗಬಹುದಾಗಿದೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ತೀವ್ರ ರೀತಿಯ ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ನಾವು ಗಮನಿಸುತ್ತಿರುವ ಇನ್ನೊಂದು ಅಂಶವೆಂದರೆ ಇಲಾಖೆಯಲ್ಲಿ ಮಾಯವಾಗುತ್ತಿರುವ ಶಿಸ್ತು. ಕೆಲವೇ ದಿನಗಳ ಹಿಂದೆ ನಾನು ಎಸ್.ಪಿಯೊಬ್ಬರನ್ನು ಭೇಟಿಯಾಗಿದ್ದೆ. ಅವರು ಹೇಳುವಂತೆ ಠಾಣಾಧಿಕಾರಿಗಳು ಹಿರಿಯ ಅಧಿಕಾರಿಗಳ ಮಾತುಗಳಿಗಿಂತ ತಮಗೆ ಪೋಸ್ಟಿಂಗ್ ಕೊಡಿಸಿದ ರಾಜಕಾರಣಿಗಳ ಮಾತನ್ನೇ ಹೆಚ್ಚು ಕೇಳುತ್ತಾರೆ. ಮುಂದುವರಿದ ಆ ಎಸ್.ಪಿ ಕಿರಿಯ ಅಧಿಕಾರಿಗಳಾದ ಹೆಡ್ ಕಾನ್ಸ್ಟೇಬಲ್, ಎ.ಎಸ್.ಐ ಮತ್ತಿತರರು ಪೊಲೀಸ್ ಠಾಣೆಯ ಜವಾಬ್ದಾರಿಯನ್ನೇ ವಹಿಸಿಕೊಳ್ಳುವುದಿಲ್ಲ ಎಂದರು. ಸಾಧಾರಣವಾಗಿ ಠಾಣಾಧಿಕಾರಿಯೊಬ್ಬರು ತಮ್ಮ ಠಾಣೆಯಲ್ಲಿ ಇರದೇ ಹೋದರೆ ಠಾಣೆಗೆ ಬಂದ ದೂರುಗಳನ್ನು ಅವರ ಕೈಕೆಳಗಿನ ಅಧಿಕಾರಿಗಳು ಸ್ವೀಕರಿಸುತ್ತಾ ಇಲ್ಲ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಪ್ರತಿಯೊಂದು ದೂರನ್ನು ದಾಖಲಿಸಬೇಕಾದರೂ ಠಾಣಾಧಿಕಾರಿಯ ಅಪ್ಪಣೆಯಿಲ್ಲದೆ ದೂರನ್ನು ದಾಖಲಿಸುವಂತಿಲ್ಲ ಎಂದು ದೂರುದಾರರನ್ನು ಮರಳಿ ಕಳಿಸಲಾಗುತ್ತಿದೆ ಎಂದೂ ಸಾರ್ವಜನಿಕರು ಹೇಳುತ್ತಿದ್ದಾರೆ. ಜುಲೈ ತಿಂಗಳಿಂದ ಇ ಮೇಲ್ ಮತ್ತು ವಾಟ್ಸಪ್ ಮುಖಾಂತರವೂ ದೂರುಗಳನ್ನು ದಾಖಲಿಸಬಹುದೆನ್ನುವ ಕಾನೂನು ಬಂದಿರುವುದರಿಂದ ಇಂತಹ ಪ್ರಸಂಗಗಳು ಕಡಿಮೆಯಾಗಬಹುದೇನೋ. ಆದರೆ ಇಷ್ಟಂತೂ ಸತ್ಯ ಠಾಣಾಧಿಕಾರಿಗಳಿಗೆ ಜವಾಬ್ದಾರಿಗಳು ಏರಿವೆ, ಹಾಗೂ ಇದರಿಂದ ಅವರಿಗೆ ಒತ್ತಡವುಂಟಾಗುತ್ತಿದೆ. ಅವರು ದಿನದ 24 ಗಂಟೆಗಳೂ ದುಡಿಯಬೇಕಾದ ಅವಶ್ಯಕತೆ ಇದೆ. ಇದು ಸಾಲದೆಂಬಂತೆ ಏರುತ್ತಿರುವ ಸವಾಲುಗಳನ್ನು ಎದುರಿಸಲು ಸಿಬ್ಬಂದಿ ಸಂಖ್ಯೆಯೂ ಜಾಸ್ತಿಯಾಗಿಲ್ಲ.
ವಾರದ ರಜೆಯೇ ಇಲ್ಲ!
ಕಿರಿಯ ಅಧಿಕಾರಿಗಳಿಗೆ ವಾರದ ರಜೆಯಾದರೂ ಇದೆ. ಆದರೆ ಸಬ್ ಇನ್ಸ್ಪೆಕ್ಟರ್ ಮತ್ತು ಮೇಲ್ಮಟ್ಟದ ಅಧಿಕಾರಿಗಳು ವಾರದ ರಜೆಯನ್ನು ತೆಗೆದುಕೊಳ್ಳುವುದೂ ಸಾಧ್ಯವಾಗುತ್ತಿಲ್ಲ. ಇಡೀ ದಿನ ಅವರು ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ನಿವಾರಿಸಲು ಕೆಲವರು ಹಲವಾರು ಚಟಗಳಿಗೆ ಒಳಗಾಗುತ್ತಿದ್ದು ತಮ್ಮ ಆರೋಗ್ಯದ ಬಗ್ಗೆ ಯಾವ ರೀತಿಯ ಗಮನವನ್ನೂ ಹರಿಸುತ್ತಿಲ್ಲ. ಸದ್ಯ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳಿಗೆ ಮಾನಸಿಕ ಕೌನ್ಸಿಲಿಂಗ್ ಮಾಡುವ ವ್ಯವಸ್ಥೆಯಿದ್ದರೂ ಅದರ ಪ್ರಯೋಜನವನ್ನು ತೆಗೆದುಕೊಳ್ಳುವ ನಿದರ್ಶನಗಳು ಕಡಿಮೆ. ಮಾನಸಿಕ ಸ್ವಾಸ್ಥö್ಯವನ್ನು ಕಾಪಾಡಲು ಯೋಗ ಮತ್ತು ಮೆಡಿಟೇಷನ್ ಮಾಡಬೇಕು ಎಂದು ಹೇಳಲಾಗುತ್ತಿದ್ದರೂ ಅದನ್ನು ಮಾಡಲು ಅಧಿಕಾರಿಗಳಿಗೆ “ಟೈಂ” ಇಲ್ಲ.
ಈ ಎಲ್ಲ ಕಾರಣಗಳಿಂದಾಗಿ ಖಿನ್ನತೆ, ಆತಂಕ ಮುಂತಾದ ಮಾನಸಿಕ ಅಸ್ವಸ್ಥತೆಗಳು ಪೊಲೀಸರನ್ನು ಕಾಡುತ್ತಿವೆ. ಇದರಿಂದಲೇ ಆತ್ಮಹತ್ಯೆಯ ಪ್ರಕರಣಗಳೂ ಏರುತ್ತಿವೆ. ಇವನ್ನು ನಿವಾರಿಸಬೇಕಾದರೆ ವರ್ಗಾವಣೆಗಳಲ್ಲಿ ರಾಜಕೀಯ ಹಸ್ತಕ್ಷೇಪವು ಕೂಡಲೇ ನಿಲ್ಲಬೇಕು, ಅಧಿಕಾರಿಗಳಿಗೆ ಪ್ರತಿ ತಿಂಗಳೂ ನುರಿತ ಮನೋವೈದ್ಯರಿಂದ ಕೌನ್ಸೆಲಿಂಗ್ ನಡೆಯಬೇಕು ಮತ್ತು ಒಬ್ಬ ಅಧಿಕಾರಿಯ ಸೇವಾವಧಿಯಲ್ಲಿ ಶೇ 60 ಅವಧಿ ಮಾತ್ರ ಅವನನ್ನು ಒತ್ತಡದ ಕೆಲಸಗಳಿರುವ ಜಾಗಗಳಿಗೆ ಪೋಸ್ಟಿಂಗ್ ಮಾಡಬೇಕು. ಇಷ್ಟೇ ಅಲ್ಲದೆ ಜಿಲ್ಲಾಮಟ್ಟದ ಅಧಿಕಾರಿಗಳು ತಿಂಗಳಿಗೊ0ದು ದಿನವಾದರೂ ಅಧಿಕಾರಿಗಳ ಅಹವಾಲುಗಳನ್ನು ಕೇಳಿ ಅವನ್ನು ನಿವಾರಿಸುವ ಪ್ರಯತ್ನಗಳನ್ನು ಮಾಡಬೇಕು.
(ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು 'ದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)