ಅಮೆರಿಕ ದಿಗ್ಬಂಧನ ಮತ್ತು ಕಾರ್ಯತಂತ್ರ: ಪ್ರಧಾನಿ ಮೋದಿಯ ರಾಜತಾಂತ್ರಿಕ ಉಭಯಸಂಕಟ

ಎರಡನೆ ಅಧಿಕಾರ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಭಿಪ್ರಾಯಗಳು ಮತ್ತು ಕ್ರಮಗಳು ಕ್ಷಣ ಚಿತ್ಥಂ ಕ್ಷಣ ಪಿತ್ಥಂ ಎನ್ನುವಂತಾಗಿದೆ. ಅವರ ನಡವಳಿಕೆಯನ್ನು ನಿರ್ದಿಷ್ಟವಾಗಿ ಅಂದಾಜು ಮಾಡುವುದೇ ದುಸ್ತರವಾಗಿದೆ. ಅವರು ತಳೆದ ನಿಲುವುಗಳು ಎಷ್ಟು ಕಾಲ ಉಳಿಯುತ್ತವೆ ಎನ್ನುವುದೇ ಅನುಮಾನವಾಗಿದೆ.;

Update: 2025-09-12 01:30 GMT
ಟ್ರಂಪ್ ಅವರು ಹೆಚ್ಚು ಸಂಯಮದ ಹೇಳಿಕೆ ನೀಡುವಂತೆ ಮಾಡುವುದು ಮತ್ತು ರಷ್ಯಾದ ತೈಲ ಆಮದಿಗೆ ಸಂಬಂಧಿಸಿದ ಸುಂಕಗಳನ್ನು ಹಿಂದೆ ಪಡೆಯುವಂತೆ ಒತ್ತಾಯಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿರುವ ಬಹುದೊಡ್ಡ ಸವಾಲಾಗಿದೆ.

ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಳೆದಿದ್ದ ಭಾರತ ಮತ್ತು ಅಮೆರಿಕ ಸಂಬಂಧಗಳ ಕುರಿತ ನಿಲುವು ಎಷ್ಟು ತೀವ್ರವಾಗಿ ಬದಲಾಯಿತೆಂದರೆ ಅದು ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದೇ ಅನುಮಾನದಿಂದ ಕೂಡಿತ್ತು. ಕಳೆದ ಕೆಲವು ತಿಂಗಳುಗಳಿಂದ ಅವರು ಮಾಡುತ್ತಿರುವ ಭಾರತ ವಿರುದ್ಧದ ಟೀಕೆಗಳನ್ನು ಮತ್ತೆ ಮುಂದುವರಿಸುವರೇ ಎಂಬುದು ಅಸ್ಪಷ್ಟವಾಗಿದೆ.

ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪದೇ ಪದೇ ತಮ್ಮ ಸ್ನೇಹಿತ ಎಂದು ಹೇಳುತ್ತಾರೆ. ಆದರೆ ಅವರ ಹೇಳಿಕೆಗಳು ವಿಚಿತ್ರವಾಗಿವೆ. ಜೂನ್ನಲ್ಲಿ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ನಂತರ ಟ್ರಂಪ್ ಟೀಕಾಪ್ರಹಾರ ತೀವ್ರಗೊಂಡವು. ಟ್ರಂಪ್ ಅವರ ದೃಷ್ಟಿಕೋನಗಳು ಮತ್ತು ಕಾರ್ಯಗಳು, ವಿಶೇಷವಾಗಿ ಅವರ ಎರಡನೇ ಅವಧಿಯಲ್ಲಿ, ಅನಿರೀಕ್ಷಿತವಾಗಿವೆ. ಅವರು ತಳೆದ ಯಾವುದೇ ನಿಲುವು ಎಷ್ಟು ಕಾಲ ಇರುತ್ತದೆ ಎಂದು ಊಹಿಸುವುದು ಕಷ್ಟ.

ಕಳೆದ ಆಗಸ್ಟ್ 31 ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಚೀನಾದ ಟಿಯಾಂಜಿನ್ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಹೊಂದಿದ್ದ ಸೌಹಾರ್ದ ಸಂಬಂಧಗಳಿಗೆ ಟ್ರಂಪ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ಸೆಪ್ಟೆಂಬರ್ 5ರಂದು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ 'ಟ್ರೂತ್ ಸೋಶಿಯಲ್'ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ ಹೇಳಿಕೆ ಹೀಗಿತ್ತು; "ನಾವು ಭಾರತ ಮತ್ತು ರಷ್ಯಾವನ್ನು ಕಡು ಕರಾಳ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ, ಅವರಿಗೆ ದೀರ್ಘ ಮತ್ತು ಉಜ್ವಲ ಭವಿಷ್ಯವಿರಲಿ" ಎಂದು ಬರೆದಿದ್ದರು.

ಎಲ್ಲಕ್ಕಿಂತ ವಿಶೇಷ ಸಂಗತಿ ಏನೆಂದರೆ, ಎಸ್.ಸಿ.ಓ ಶೃಂಗಸಭೆಯಲ್ಲಿ ಮೋದಿ, ಕ್ಸಿ ಮತ್ತು ಪುಟಿನ್ ಜೊತೆಗಿರುವ ಚಿತ್ರವನ್ನು ತಮ್ಮ ಪೋಸ್ಟ್ ಜೊತೆಗೆ ಹಂಚಿಕೊಂಡಿದ್ದರು. ಮೋದಿ, ಕ್ಸಿ ಮತ್ತು ಪುಟಿನ್ ಕ್ಷಣಕಾಲ ಕೈ ಕುಲುಕುತ್ತಿರುವ ವೀಡಿಯೋ ವೈರಲ್ ಆದ ಬಳಿಕ ಅವರು ಈ ಪೋಸ್ಟ್ ಮಾಡಿದ್ದರು. ಅವರು ತಮ್ಮ ಪೋಸ್ಟ್ನಲ್ಲಿ ಭಾರತ ಮತ್ತು ರಷ್ಯಾವನ್ನು ಒಟ್ಟಾಗಿ ಪ್ರಸ್ತಾಪಿಸಿದ್ದೂ ಮಹತ್ವದ್ದಾಗಿದೆ, ಇದು ಉಕ್ರೇನ್ ಯುದ್ಧವನ್ನು ಶೀಘ್ರ ಕೊನೆಗೊಳಿಸಲು ಪುಟಿನ್ ಅವರಿಗೆ ಕಿಂಚಿತ್ತೂ ಇಷ್ಟವಿಲ್ಲ ಎಂಬ ನಿಲುವು ಅವರಲ್ಲಿ ನಿರಾಶೆ ಹುಟ್ಟಿಸಿತ್ತು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ರಷ್ಯದ ಅಗ್ಗದ ತೈಲದಿಂದ ಭಾರತಕ್ಕೆ ಲಾಭ

ಈ ನಡುವೆ ಭಾರತದ ಬ್ರಿಕ್ಸ್ ಸದಸ್ಯತ್ವದ ಬಗ್ಗೆ ಪ್ರತಿಕೂಲ ಹೇಳಿಕೆಗಳನ್ನು ನೀಡಿದ ಟ್ರಂಪ್ ಅವರ ವಾಣಿಜ್ಯ ಕಾರ್ಯದರ್ಶಿ ಹೊವರ್ಡ್ ಲಟ್ನಿಕ್, ಭಾರತ ಯಾವುದಾದರೊಂದು ಬಣವನ್ನು ಆಯ್ದುಕೊಳ್ಳಬೇಕು ಎಂದು ತಾಕೀತು ಮಾಡುವ ಮೂಲಕ ಟ್ರಂಪ್ ಅವರ ಸಂದೇಶಕ್ಕೆ ಕಿಚ್ಚುಹಚ್ಚುವ ಕೆಲಸ ಮಾಡಿದ್ದರು. ಲಟ್ನಿಕ್ ಅವರ ಈ ಹೇಳಿಕೆಗೂ ಮುನ್ನ ಟ್ರಂಪ್ ಅವರ ವ್ಯಾಪಾರ ಮತ್ತು ಉತ್ಪಾದನಾ ಸಲಹೆಗಾರ ಪೀಟರ್ ನವರೋ, ಭಾರತೀಯ ತೈಲ ಸಂಸ್ಕರಣಾಗಾರಗಳು ಅಗ್ಗದ ರಷ್ಯನ್ ತೈಲದಿಂದ ಲಾಭ ಗಳಿಸುತ್ತಿವೆ ಎಂದು ಮತ್ತೊಮ್ಮೆ ಆರೋಪಿಸಿದ್ದರು.

ಟ್ರಂಪ್ ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದ ಭಾರತ ಲಟ್ನಿಕ್ ಮತ್ತು ನವಾರೋ ಅವರ ಹೇಳಿಕೆಗಳನ್ನು ತಿರಸ್ಕರಿಸಿತ್ತು.

ಈ ಅವಧಿಯಲ್ಲಿಯೇ, ಪ್ರಧಾನಿ ಮೋದಿ ಅವರು ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಿ ಪುಟಿನ್ ಮತ್ತು ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾದಾಗಲೂ, ಟ್ರಂಪ್ ಆಡಳಿತದೊಂದಿಗೆ ಸಂವಹನ ಮಾರ್ಗಗಳನ್ನು ಸ್ಥಾಪಿಸಲು ಭಾರತ ಪ್ರಯತ್ನಿಸುತ್ತಿದೆ ಎಂಬ ವದಂತಿಗಳಿಗೆ ರೆಕ್ಕೆಪುಕ್ಕ ಬಂದಿತ್ತು. ಟ್ರಂಪ್ ಜೊತೆಗಿನ ಟೆನ್ಷನ್ ಕಡಿಮೆ ಮಾಡುವ ಉದ್ದೇಶದಿಂದ ಈ ಪ್ರಯತ್ನಗಳು ನಡೆದವು ಎಂಬುದು ನಿಚ್ಚಳ. ಇದೇ ವೇಳೆ, ಅಮೆರಿಕ ಅಧ್ಯಕ್ಷರ ಕೇಡಿತನದ ವಿರುದ್ಧ ಗಟ್ಟಿಯಾಗಿ ನಿಲ್ಲಬಹುದು ಮತ್ತು ಪರ್ಯಾಯ ಮಾರ್ಗಗಳನ್ನು ಹುಡುಕಬಹುದು ಎಂಬುದನ್ನು ಮೋದಿ ತಮ್ಮ ಬೆಂಬಲಿಗರಿಗೆ ತೋರಿಸುವ ಪ್ರಯತ್ನವನ್ನೂ ಮಾಡಿದರು. ಈ ಕೇಡಿತನದಿಂದಾಗಿ ಟ್ರಂಪ್ ಈಗಾಗಲೇ ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕವನ್ನು ವಿಧಿಸಿದ್ದರು, ಇದರಲ್ಲಿ ಅರ್ಧದಷ್ಟು ರಷ್ಯಾದಿಂದ ಮಾಡಿಕೊಂಡ ತೈಲ ಆಮದುಗಳಿಗೆ ಸಂಬಂಧಿಸಿತ್ತು.

ಮೋದಿ ಗ್ರೇಟ್ ಪಿಎಂ ಎಂದರು!

ಭಾರತದ ವಿರುದ್ಧ ವಾಗ್ದಾಳಿ ನಡೆಸಿದ ಕೇವಲ 24 ಗಂಟೆಗಳ ನಂತರ, ಟ್ರಂಪ್ ಹಠಾತ್ತನೆ ತಮ್ಮ ಧೋರಣೆಯನ್ನು ಬದಲಿಸಿದ್ದರು. ಸೆಪ್ಟೆಂಬರ್ 4ರಂದು ಶ್ವೇತಭವನದಲ್ಲಿ ಭಾರತೀಯ ಸುದ್ದಿ ಸಂಸ್ಥೆಯ ವರದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಯಾವತ್ತೂ ಮೋದಿ ಜೊತೆ ಸ್ನೇಹದಿಂದಲೇ ಇರುತ್ತೇನೆ. ಅವರು ಮಹಾನ್ ಪ್ರಧಾನ ಮಂತ್ರಿ. ಭಾರತ ಮತ್ತು ಅಮೆರಿಕ ವಿಶೇಷವಾದ ಸಂಬಂಧವನ್ನು ಹೊಂದಿವೆ. ಚಿಂತೆ ಮಾಡಲು ಏನೇನೂ ಇಲ್ಲ. ನಾವು ಭಾರತವನ್ನು ಕಳೆದುಕೊಂಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. ನಾನು ಮೋದಿ ಅವರೊಂದಿಗೆ ತುಂಬಾ ತುಂಬಾ ಚೆನ್ನಾಗಿದ್ದೇನೆ. ನಿಮಗೆ ತಿಳಿದಿರುವಂತೆ, ಅವರು ಕೆಲ ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದರು ಮತ್ತು ನಾವು ರೋಸ್ ಗಾರ್ಡನ್ಗೆ ಹೋಗಿದ್ದೆವು" ಎಂದು ಹೇಳಿದರು.

ಟ್ರಂಪ್ ಅವರ ಹೇಳಿಕೆಗೆ ಮೋದಿ ತೀವ್ರ ಉತ್ಸಾಹದಿಂದಲೆ ಪ್ರತಿಕ್ರಿಯಿಸಿದರು. "ನಮ್ಮ ಸಂಬಂಧಗಳ ಬಗ್ಗೆ ಅಧ್ಯಕ್ಷ ಟ್ರಂಪ್ ಅವರ ಭಾವನೆ ಮತ್ತು ಸಕಾರಾತ್ಮಕ ಮೌಲ್ಯನಿರ್ಣಯದ ಬಗ್ಗೆ ಅಪಾರ ಮೆಚ್ಚುಗೆ ಇದೆ ಮತ್ತದನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ. ಭಾರತ ಮತ್ತು ಅಮೆರಿಕ ಯಾವತ್ತೂ ಅತ್ಯಂತ ಸಕಾರಾತ್ಮಕ ಮತ್ತು ಭವಿಷ್ಯಮುಖಿ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಹೊಂದಿವೆ" ಎಂಬ ಹೇಳಿಕೆಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಅದಾಗಿ ಸೆಪ್ಟೆಂಬರ್ 6ರಂದೇ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಒಂದು ಹೇಳಿಕೆಯನ್ನು ನೀಡಿ, "ಪ್ರಧಾನಿ ಮೋದಿ ಅವರು ನಮ್ಮ ಮತ್ತು ಅಮೆರಿಕದ ಜೊತೆಗಿನ ಪಾಲುದಾರಿಕೆಗೆ ಅಪಾರ ಮಹತ್ವ ನೀಡುತ್ತಾರೆ. ಅಧ್ಯಕ್ಷ ಟ್ರಂಪ್ ಅವರನ್ನು ಕುರಿತಂತೆ ಹೇಳುವುದಾದರೆ, ಮೋದಿ ಅವರು ಯಾವಾಗಲೂ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಕಾಯ್ದುಕೊಂಡಿದ್ದಾರೆ. ನಾವು ಅಮೆರಿಕದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇವೆ, ಮತ್ತು ಈ ಸಮಯದಲ್ಲಿ ನಾನು ಅದಕ್ಕಿಂತ ಹೆಚ್ಚು ಏನನ್ನೂ ಹೇಳಲು ಸಾಧ್ಯವಿಲ್ಲ," ಎಂದು ತಿಳಿಸಿದ್ದರು.

ಸಕಾರಾತ್ಮಕ ರಾಜತಾಂತ್ರಿಕ ಪ್ರಯತ್ನಗಳು

ಟ್ರಂಪ್ ಹೇಳಿಕೆಗಳು ಮತ್ತು ಅದಕ್ಕೆ ಮೋದಿ ಹಾಗೂ ಜೈಶಂಕರ್ ತಕ್ಷಣವೇ ನೀಡಿದ ಸಕಾರಾತ್ಮಕ ಪ್ರತಿಕ್ರಿಯೆಗಳು, ಅಧ್ಯಕ್ಷರ ಧೋರಣೆಯನ್ನು ಬದಲಿಸಲು ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ರಹಸ್ಯ ರಾಜತಾಂತ್ರಿಕ ಪ್ರಯತ್ನಗಳು ನಡೆದಿವೆ ಎಂಬುದಕ್ಕೆ ಸಾಕ್ಷಿ. ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಮೋದಿ ಅವರ ಉಪಸ್ಥಿತಿಯ ಬಗ್ಗೆ ಕಟುವಾದ ಟೀಕೆಗಳನ್ನು ಮಾಡಿದ ನಂತರ, ಟ್ರಂಪ್ ತಕ್ಷಣವೇ ತಮ್ಮ ನಿಲುವನ್ನು ಬದಲಾಯಿಸಿದ್ದು ಅವರ ಸರ್ವೇಸಾಧಾರಣ ಗುಣವಾಗಿದೆ, ಏಕೆಂದರೆ ಅವರು ಇಂತಹ ಹಠಾತ್ ಯೂ-ಟರ್ನ್ಗಳನ್ನು ತೆಗೆದುಕೊಳ್ಳುವಲ್ಲಿ ಎಂದಿಗೂ ಹಿಂಜರಿದವರಲ್ಲ. ಆದರೆ, ಈ ಹಠಾತ್ ನಿಲುವು ಬದಲಾವಣೆಗೆ ಕಾರಣವಾದ ಭಾರತೀಯ ಮತ್ತು ಅಮೆರಿಕನ್ ಮಧ್ಯವರ್ತಿಗಳು ಮತ್ತು ರಾಜತಾಂತ್ರಿಕರ ನಡುವಿನ ವಿನಿಮಯದಲ್ಲಿ ಏನಾಯಿತು ಎಂಬುದೇ ನಿಜವಾದ ಪ್ರಶ್ನೆಯಾಗಿದೆ.

ಟ್ರಂಪ್ ಅವರ ಆತಂಕಗಳು ಯಾವತ್ತೂ ಮೂರು ಪ್ರಮುಖ ವಿಷಯಗಳ ಸುತ್ತ ಸುತ್ತುತ್ತವೆ: ಭಾರತವು ರಷ್ಯಾದ ತೈಲವನ್ನು ನಿರಂತರ ಖರೀದಿ ಮಾಡುತ್ತಿರುವುದು, ವ್ಯಾಪಾರ ಒಪ್ಪಂದಕ್ಕಾಗಿ ಕೃಷಿ ಮತ್ತು ಡೇರಿ ವಲಯಗಳನ್ನು ತೆರೆಯಲು ಭಾರತದ ದೃಢ ನಿರಾಕರಣೆ ಮತ್ತು ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಸ್ಥಿತಿಯನ್ನು ಕಡಿಮೆ ಮಾಡುವಲ್ಲಿ ತಮ್ಮ ಪಾತ್ರದ ಬಗ್ಗೆ ಭಾರತದ ಅಸಮ್ಮತಿ. ತಮ್ಮ ಮಧ್ಯಸ್ಥಿಕೆಯಿಂದಾಗಿ ಸಂಘರ್ಷಗಳು ನಿಂತವು ಎಂದು ಟ್ರಂಪ್ ಹೇಳಿಕೊಂಡರೂ, ಭಾರತವು ಈ ಬೆಳವಣಿಗೆಯನ್ನು ಪಾಕಿಸ್ತಾನದ ದ್ವಿಪಕ್ಷೀಯ ವಿಧಾನವೆ ಕಾರಣವೆಂದು ಹೇಳಿದ್ದು, ಇದರಲ್ಲಿ ಅಮೆರಿಕ ಯಾವುದೇ ರೀತಿ ಒಳಗೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಈ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಭಾರತವು ಯಾವುದಾದರೂ ಒಂದು ವಿಷಯದಲ್ಲಿ ಮೃದುವಾಗಿ ವರ್ತಿಸಲು ಒಪ್ಪಿಕೊಂಡಿದೆಯೇ? ಕೃಷಿ ಮತ್ತು ಡೈರಿ ಮಾರುಕಟ್ಟೆಗಳನ್ನು ತೆರೆಯುವ ಅಥವಾ ಭಾರತ-ಪಾಕಿಸ್ತಾನ ವಿವಾದಗಳಲ್ಲಿ ಅಮೆರಿಕದ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳುವ ವಿಷಯದಲ್ಲಿ ಮೋದಿ ಅರ್ಥಪೂರ್ಣ ರಿಯಾಯಿತಿ ನೀಡುತ್ತಾರೆ ಎಂದು ಹೇಳುವುದು ಕಷ್ಟ, ಕನಿಷ್ಠ ಬಿಹಾರ ಚುನಾವಣೆ ನಡೆಯುವ ತನಕ ಅದು ಸಾಧ್ಯವಿಲ್ಲ.

ಮೋದಿ ಮುಂದಿರುವ ಸವಾಲುಗಳು

ಈ ವಿಚಾರದಲ್ಲಿ ವಾಸ್ತವಿಕವಾಗಿ ಮೋದಿ ಅವರು ಮಾಡಬಹುದಾದ ಪ್ರಯತ್ನವೆಂದರೆ ಅಮೆರಿಕವನ್ನು ಸಮಾಧಾನಪಡಿಸಲು ಭಾರತೀಯ ತೈಲಗಾರಗಳಿಂದ ರಷ್ಯಾದ ತೈಲ ಖರೀದಿಗಳನ್ನು ಹಂತಹಂತವಾಗಿ ಕಡಿಮೆ ಮಾಡುವುದು. ಆಷ್ಟಾಗಿಯೂ ಟ್ರಂಪ್ ಇದರಿಂದ ತೃಪ್ತರಾಗುತ್ತಾರೆ ಎಂಬುದು ಅನುಮಾನ. ಮೋದಿ ಪುಟಿನ್ ಅವರಿಗೆ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವಂತೆ ಕೆಲವು ಹೇಳಿಕೆಗಳನ್ನು ನೀಡಬಹುದು, ಆದರೆ ಅಂತಹ ಕ್ರಮದಿಂದ ರಷ್ಯಾ ಕೆರಳಿದರೆ ಅಚ್ಚರಿಯಿಲ್ಲ.

ಅದೆಲ್ಲ ಏನೇ ಇದ್ದರೂ, ಮೋದಿ ಅವರ ಮುಂದಿರುವ ಬಹುದೊಡ್ಡ ಸವಾಲು ಎಂದರೆ, ಟ್ರಂಪ್ ಅವರಿಂದ ಹೆಚ್ಚು ಸಂಯಮದ ಹೇಳಿಕೆ ಪಡೆಯುವುದು ಮತ್ತು ರಷ್ಯಾದ ತೈಲ ಆಮದಿಗೆ ಸಂಬಂಧಿಸಿದ ಸುಂಕಗಳನ್ನು ಹಿಂದೆ ಪಡೆಯುವಂತೆ ಒತ್ತಡ ಹೇರುವುದು. ಬಿಹಾರ ಚುನಾವಣೆಗೂ ಮುನ್ನ ಇದನ್ನು ಸಾಧಿಸಿದರೆ ಅದು ಮೋದಿ ಅವರಿಗೆ ಒಂದು ಮಹತ್ವದ ರಾಜಕೀಯ ಬಲವನ್ನು ತಂದುಕೊಡಲಿದೆ.

ಸೆಪ್ಟೆಂಬರ್ 23ರಂದು ಪ್ರಾರಂಭವಾಗಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಭಾರತೀಯ ನಿಯೋಗದ ನೇತೃತ್ವವನ್ನು ಜೈಶಂಕರ್ ವಹಿಸಲಿದ್ದಾರೆ ಎಂದು ಊಹಿಸಲಾಗಿದೆ. ಅಷ್ಟರೊಳಗೆ ಭಾರತ ಮತ್ತು ಅಮೆರಿಕ ನಡುವೆ ಒಮ್ಮತ ಮೂಡಿ, ಟ್ರಂಪ್ ಮತ್ತು ಮೋದಿ ನಡುವೆ ಸೌಹಾರ್ದಯುತ ಸಭೆ ನಡೆಯಲು ಅಮೆರಿಕ ಭರವಸೆ ನೀಡಿದರೆ, ಪ್ರಧಾನಿ ಮೋದಿ ಅವರು ಬಹುತೇಕ ನ್ಯೂಯಾರ್ಕ್ಗೆ ಪ್ರಯಾಣ ಬೆಳಸಲಿದ್ದಾರೆ. ಆದರೂ, ಅಮೆರಿಕ ಅಧ್ಯಕ್ಷರು ಮೋದಿ ಅವರನ್ನು ಪದೇ ಪದೇ ಸ್ನೇಹಿತರೆಂದು ಉಲ್ಲೇಖಿಸಿದರೂ, ಟ್ರಂಪ್ ಜೊತೆ ನಡೆಸುವ ಯಾವುದೇ ಭೇಟಿ ಮೋದಿ ಅವರಿಗೆ ಒಂದಲ್ಲ ಒಂದು ರೀತಿಯ ಅಪಾಯವನ್ನೆ ತಂದೊಡ್ಡುವ ಸಾಧ್ಯತೆ ಅಧಿಕ.

ಯಾವುದೇ ನಾಯಕನಿಗೆ ಟ್ರಂಪ್ ಅವರನ್ನು ನಿಭಾಯಿಸಲು ಇರುವ ಅತ್ಯಂತ ವಿವೇಕಯುತ ಮಾರ್ಗವೆಂದರೆ ಈ ನಾಣ್ಣುಡಿಯನ್ನು ಅನುಸರಿಸುವುದು:

"ನಾ ಇನ್ ಕಿ ದೋಸ್ತಿ ಅಚ್ಚಿ ನಾ ದುಷ್ಮನಿ. ಯಾನಿ ಕಿನಾರಾ ಕಶಿ ಹೀ ಮೆ ಬುದ್ಧಿಮಾನಿ ಹೈ (ಕೆಲವರೊಂದಿಗೆ ನೀವು ಸ್ನೇಹವನ್ನೂ ಇಟ್ಟುಕೊಳ್ಳಲು ಸಾಧ್ಯವಿಲ್ಲ, ವೈರವನ್ನೂ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅವರಿಂದ ದೂರವಿರುವುದೇ ಹೆಚ್ಚು ವಿವೇಕಯುತ."

(ಹಕ್ಕುತ್ಯಾಗ: ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು ಮತ್ತು ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ.)

 

Tags:    

Similar News