ರಂಗಕರ್ಮಿಗಳ ದಾರಿ ದೀಪ ರಂಗಶಂಕರಕ್ಕೆ 20ರ ಸಂಭ್ರಮ; ಉತ್ತರಾಧಿಕಾರಿಯ ಹುಡುಕಾಟದಲ್ಲಿ‌ ಅರುಂಧತಿ

ರಂಗಶಂಕರದ 20ನೇ ವಾರ್ಷಿಕೋತ್ಸವದ ಅಂಗವಾಗಿ ಅರುಂಧತಿ ನಾಗ್‌ ಅವರು ʼದ ಫೆಡರಲ್‌ ಕರ್ನಾಟಕʼದ ಜೊತೆ ಹಂಚಿಕೊಂಡ ತಮ್ಮ ಅನುಭವಗಳು, ರಂಗಭೂಮಿಯ ವಿಕಸನ, ಬಾನೆತ್ತರಕ್ಕೆ ಬೆಳೆಯುತ್ತಿರುವ ಪರಂಪರೆ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

Update: 2024-10-07 01:10 GMT

ಕನ್ನಡದ ಮೇರು ನಟರಲ್ಲಿ ಒಬ್ಬರಾದ ದಿವಂಗತ ಶಂಕರ್‌ ನಾಗ್‌ ಅವರ ಕನಸಿನ ರಂಗಶಂಕರ ಈಗ 20ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಶಂಕರ್‌ ನಾಗ್‌ ಅವರ ಅಕಾಲಿಕ ಸಾವಿನ ತರುವಾಯ ಅವರ ಕನಸಿನ ರಂಗಶಂಕರಕ್ಕೆ ಮೂರ್ತರೂಪ ಕೊಟ್ಟವರು ನಟಿ, ರಂಗಭೂಮಿ ಕಲಾವಿದೆ ಹಾಗೂ ಅವರ ಪತ್ನಿ ಅರುಂಧತಿ ನಾಗ್‌. ರಂಗಭೂಮಿಯೆಡೆಗಿನ ಅವರ ಅದಮ್ಯ ಸ್ಫೂರ್ತಿಯೇ 20ನೇ ವರ್ಷದ ರಂಗಶಂಕರದ ಪ್ರಗತಿ.

ಇದೇ ತಿಂಗಳು (ಅಕ್ಟೋಬರ್‌) ರಂಗಶಂಕರ 20ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. 2004ರಲ್ಲಿ ಸ್ಥಾಪನೆಯಾದ ಈ ರಂಗ ಸಜ್ಜಿಕೆ ಕೇವಲ ಎರಡೇ ದಶಕದಲ್ಲಿ ಅಸಾಧಾರಣ ಪ್ರತಿಭೆ, ರಂಗ ಕರ್ಮಿಗಳಿಗೆ ದಾರಿದೀಪವಾಗಿದೆ.

ಬಹುಭಾಷಾ ರಂಗಭೂಮಿ ಮತ್ತು ಕಲೆಗಳ ಬಗ್ಗೆ ಅರುಂಧತಿ ನಾಗ್‌ ಅವರಲ್ಲಿನ ಬೇರೂರಿರುವ ಬದ್ಧತೆ, ಅವರ ಪ್ರತಿ ಯೋಜನೆ, ಯೋಚನೆಗಳಲ್ಲಿ ಪ್ರತಿಬಿಂಬಿಸುತ್ತಿದೆ. ರಂಗಶಂಕರದ 20ನೇ ವಾರ್ಷಿಕೋತ್ಸವ ಅಂಗವಾಗಿ 20 ನಾಟಕಗಳ ಪ್ರದರ್ಶನ ಇದೇ ಅ.10 ರಿಂದ ನ.10 ರವರೆಗೆ ನಡೆಯಲಿದೆ.

ಈ ವಿಶೇಷ ಸಂದರ್ಭದಲ್ಲಿ ಅರುಂಧತಿ ನಾಗ್‌ ಅವರು ʼದ ಫೆಡರಲ್‌ ಕರ್ನಾಟಕʼದ ಜೊತೆ ಹಂಚಿಕೊಂಡ ಅನುಭವಗಳು, ರಂಗಭೂಮಿಯ ವಿಕಸನ, ಬಾನೆತ್ತರಕ್ಕೆ ಬೆಳೆಯುತ್ತಿರುವ ಪರಂಪರೆ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅವರೊಂದಿಗಿನ ಸಂಭಾಷಣೆಯ ಆಯ್ದ ಭಾಗ ಇಲ್ಲಿದೆ.

ಶಂಕರ್ ನಾಗ್ ಅವರ ದೂರದೃಷ್ಟಿಯ ಸಾಕಾರಕ್ಕಾಗಿ ರಂಗಶಂಕರ ಸ್ಥಾಪಿಸಿದ್ದೀರಿ. ಅವರೊಂಗಿನ ವೈಯಕ್ತಿಕ ಸಂಪರ್ಕ ರಂಗಭೂಮಿ ಆಲೋಚನೆಗಳನ್ನು ಹೇಗೆ ಪ್ರಭಾವಿಸಿತು?

ರಂಗಶಂಕರಕ್ಕೆ ಅಡಿಪಾಯ ಹಾಕಬೇಕೆಂಬ ಆಲೋಚನೆ ಇಬ್ಬರಲ್ಲೂ ಆಳವಾಗಿತ್ತು. ನಾವು ರಂಗಭೂಮಿ ವೃತ್ತಿಜೀವನವನ್ನು ಬಾಂಬೆಯಲ್ಲಿ (ಮುಂಬೈ) ಒಟ್ಟಿಗೆ ಪ್ರಾರಂಭಿಸಿದೆವು. ಗುಣಮಟ್ಟದ ರಂಗಚಟುವಟಿಕೆಗಳ ಪ್ರದರ್ಶನಕ್ಕಾಗಿ ಒಂದು ಸ್ಥಳವನ್ನು ಹುಡುಕುವ ಕನಸಿನ ಮೂಲಕವೇ ನಾವಿಬ್ಬರು ಒಂದಾದೆವು. 1979 ರಲ್ಲಿ ನಾವಿಬ್ಬರು ವಾಪಸ್‌ ಬೆಂಗಳೂರಿಗೆ ಬಂದಾಗ ನಗರದಲ್ಲಿ ರಂಗ ಚಟುವಟಿಕೆಗಳಿಗೆ ರವೀಂದ್ರ ಕಲಾಕ್ಷೇತ್ರ ಮಾತ್ರ ಲಭ್ಯವಿತ್ತು. ಆಗ ಮುಂಬೈನಲ್ಲಿರುವ ಪೃಥ್ವಿ ಥಿಯೇಟರ್‌ನಿಂದ ಪ್ರೇರಿತರಾಗಿ ನಮ್ಮದೇ ಆದ ಜಾಗದಲ್ಲಿ ರಂಗ ಶಂಕರ ನಿರ್ಮಿಸಲು ನಾವು ನಿರ್ಧರಿಸಿದೆವು. ಶಂಕರ್ ಅವರ ಹಠಾತ್ ನಿಧನದ ನಂತರ, ಅದರೆಡೆಗೆ ಗಮನ ಹರಿಸಲು ಸ್ವಲ್ಪ ಸಮಯ ತೆಗೆದುಕೊಂಡಿತು. ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನ ಪಡೆದು ಮತ್ತೆ ರಂಗಶಂಕರ ಸ್ಥಾಪನೆಯ ಕನಸಿನ ಪಯಣ ಆರಂಭಿಸಿದೆ. ಸುಮಾರು ಒಂದು ದಶಕದ ಕಾಲ ನಿಧಿಸಂಗ್ರಹಣೆ ಮತ್ತು ವಾಸ್ತುಶಿಲ್ಪಿಗಳ ಸಹಯೋಗ ಪಡೆದು ಕೊನೆಗೂ ರಂಗಶಂಕರ ಸಾಕಾರ ರೂಪ ಪಡೆಯಿತು. ಈಗ, 20 ವರ್ಷಗಳ ಸಾರ್ಥಕತೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ.



ಈ 20 ವರ್ಷಗಳಲ್ಲಿ ಒಮ್ಮೆ ಹಿಂತಿರುಗಿ ನೋಡಿದಾಗ ವೈಯಕ್ತಿಕವಾಗಿ ಯಾವ ಕ್ಷಣ ನಿಮ್ಮನ್ನು ಅನುಸರಿಸುತ್ತಿದೆ?

ಬೆಂಗಳೂರಿನ ಜನರ ಔದಾರ್ಯ. ಬೆಂಗಳೂರಿಗೆ ವಿದ್ಯಾವಂತ, ಮಧ್ಯಮ ವರ್ಗದವರೇ ಬೆನ್ನೆಲುಬು. ರಂಗ ಶಂಕರವು ಮಧ್ಯಮ ವರ್ಗದವರ ಕನಸನ್ನು ಸಾಕಾರಗೊಳಿಸುತ್ತಿದೆ. ಕೈಗೆಟುಕುವ ಟಿಕೆಟ್ ದರಗಳನ್ನು ನಿರ್ವಹಿಸುತ್ತಿದ್ದೇವೆ, ಎಲ್ಲರಿಗೂ ಪ್ರವೇಶ ಖಾತರಿಪಡಿಸುತ್ತಿದ್ದೇವೆ. ರೂ 2500 ರ ದೈನಂದಿನ ಬಾಡಿಗೆಗೆ ನೀಡುವ ಮೂಲಕ ರಂಗ ಶಂಕರ ಜಾಗತಿಕವಾಗಿ ಅತ್ಯಂತ ಕೈಗೆಟುಕುವ ಥಿಯೇಟರ್‌ಗಳಲ್ಲಿ ಒಂದಾಗಿದೆ. ಹಣಕಾಸಿನ ಸಮಸ್ಯೆ ಹೊರತಾಗಿಯೂ ಎರಡು ದಶಕಗಳಿಂದ ದರಗಳಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದೇವೆ.

ಅಂದಿನಿಂದಲೂ ಒಂದೇ ದರ ನಿಗದಿ ಮಾಡಿರುವುದರಿಂದ ರಂಗಶಂಕರ ನಿರ್ವಹಣೆಗೆ ಹಣ ಎಲ್ಲಿಂದ ಬರುತ್ತದೆ?

ಆರ್ಥಿಕ ಮುಗ್ಗಟ್ಟಿದ್ದರೂ ನಿಧಿಸಂಗ್ರಹ ನಿರಂತರ ಪ್ರಯತ್ನವಾಗಿದೆ. ನಗರದಲ್ಲಿ ಕಲೆ ಮತ್ತು ಸಂಸ್ಕೃತಿ ಬೆಂಬಲಿಸುವ ಜವಾಬ್ದಾರಿ ಹೊತ್ತಿರುವ ಇನ್ಫೋಸಿಸ್‌ ನಾರಾಯಣ ಮೂರ್ತಿ, ನಂದನ್‌ ನಿಲೇಕಣಿ ಮತ್ತು ಕಿರಣ್ ಮಜುಂದಾರ್ ಶಾ ಅವರಂತಹ ವ್ಯಕ್ತಿಗಳು ರಂಗಶಂಕರಕ್ಕೆ ಆಸರೆಯಾಗಿ ಇದ್ದಾರೆ. ಅಂತವರು ಇರುವುದೇ ನಮ್ಮ ಭಾಗ್ಯ. ಅವರ ಉದಾರ ಕೊಡುಗೆಗಳಿಂದಾಗಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದೇವೆ.

ಶಂಕರ್ ನಾಗ್ ಅವರ ಪರಂಪರೆಯನ್ನು ನಿಮ್ಮ ಸ್ವಂತ ಸೃಜನಶೀಲ ದೃಷ್ಟಿಯೊಂದಿಗೆ ಹೇಗೆ ಸಮತೋಲನಗೊಳಿಸುತ್ತೀರಿ? ಅವನ ಹೆಸರನ್ನು ಮುನ್ನೆಲೆಗೆ ಒಯ್ಯುವುದು ಒತ್ತಡದಂತೆ ಅನಿಸುತ್ತದೆಯೇ?

ನಾವಂತೂ ಹೆಗಲ ಮೇಲೆ ಶಂಕರ್ ಹೆಸರಿನ ಭಾರವನ್ನು ಅನುಭವಿಸುವುದಿಲ್ಲ. ಅದಕ್ಕಾಗಿಯೇ 'ಶಂಕರ್ ನಾಗ್ ರಂಗ ಮಂದಿರ' ಎಂದು ಕರೆಯದಿರಲು ನಿರ್ಧರಿಸಿದ್ದು. ಅವರ ಹೆಸರಿನ ಹಕ್ಕು ಪಡೆಯಲು ಮಾತ್ರ ಜಾಗ ಬಯಸಿದ್ದೇವೆ. 20 ವರ್ಷಗಳ ನಂತರ ಅದೂ ಆಗಲಿದೆ ಎಂಬ ನಂಬಿಕೆ ಇದೆ. ಆರಂಭದಲ್ಲೇ ನಾವು ರಂಗಶಂಕರ ಎಂಬ ತಟಸ್ಥ ಹೆಸರನ್ನು ಆರಿಸಿಕೊಂಡಿದ್ದೆವು. ಇಲ್ಲಿ 'ರಂಗ' ಎಂದರೆ ರಂಗಭೂಮಿ ಮತ್ತು 'ಶಂಕರ' ಎಂದರೆ ಪ್ರದರ್ಶನ ಕಲೆಗಳ ದೇವರನ್ನು ಪ್ರತಿನಿಧಿಸುತ್ತದೆ. ಇದು ಶಂಕರ್ ನಾಗ್ ಅವರಿಗೆ ಸಲ್ಲಿಸುವ ಗೌರವ. ಅವರ ಆತ್ಮ ಇಲ್ಲಿ ಜೀವಂತವಾಗಿದೆ. ಹಾಗಾಗಿ ಈ ಸ್ಥಳವು ಅಪರಿಮಿತ ಶಕ್ತಿಯನ್ನು ಹೊಂದಿದೆ. ರಂಗಶಂಕರಕ್ಕೆ ಈಗಲೂ ಯಾವುದೇ ಗೇಟ್‌ ಅಥವಾ ಬಾಗಿಲುಗಳಿಲ್ಲ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ. 


ರಂಗಶಂಕರ ಪ್ರಾರಂಭವಾದಾಗಿನಿಂದ ಬೆಂಗಳೂರಿನ ರಂಗಭೂಮಿ ಹೇಗೆ ವಿಕಸನಗೊಂಡಿತು?

ಬೆಂಗಳೂರಿನಲ್ಲಿ ರಂಗಭೂಮಿ ಪ್ರಗತಿ ಸಾಧಿಸಿದ್ದರೂ, ಹಣಕಾಸಿನ ಸವಾಲುಗಳು ಉಳಿದಿವೆ. ಅನೇಕ ಪ್ರದರ್ಶಕರು ತಿಂಗಳಿಗೆ ಐದು ಪ್ರದರ್ಶನ ಏರ್ಪಡಿಸಿದರೂ ಗಳಿಕೆಗಾಗಿ ಹೆಣಗಾಡುತ್ತಾರೆ. ಆದರೂ, ಅವರಲ್ಲಿನ ಉತ್ಸಾಹ ಕಡಿಮೆಯಾಗಿಲ್ಲ. ಖ್ಯಾತನಾಮರು ಅಥವಾ ರಾಜಕೀಯ ನಾಯಕರಿಗಿಂತ ಹೆಚ್ಚಾಗಿ ಬ್ರೆಕ್ಟ್, ಟ್ಯಾಗೋರ್ ಮತ್ತು ಕಾಳಿದಾಸರ ಕೃತಿಗಳನ್ನು ಪ್ರದರ್ಶಿಸುತ್ತಾರೆ. ನಟರೂ ಕೂಡ ಉತ್ತಮ ಸಂಭಾವನೆ ಪಡೆಯುತ್ತಾರೆ. ಅದೇ ರೀತಿ ದೊಡ್ಡ ಬಜೆಟ್‌ನ ಪ್ರೊಡೆಕ್ಷನ್‌ ಗಳು ಕೂಡ ನಡೆಯುತ್ತವೆ. ರಂಗ ಶಂಕರದ ಪ್ರದರ್ಶನಗಳಿಗೆ ಹೆಚ್ಚಾಗಿ ಆಟೋ ಚಾಲಕರು, ಬ್ಯಾಂಕ್ ಉದ್ಯೋಗಿಗಳು ಮತ್ತು ಕಾನ್ಸ್‌ಟೇಬಲ್‌ಗಳ ಮಕ್ಕಳು ಬರುತ್ತಾರೆ.

ಕನ್ನಡ ರಂಗಭೂಮಿಯ ಶ್ರೀಮಂತಿಕೆ, ಹೆಸರಾಂತ ಬರಹಗಾರರು ಮತ್ತು ನಿರ್ದೇಶಕರು, ಸಾಮಾಜಿಕ ಮಾಧ್ಯಮಗಳು ಮತ್ತು OTT ವೇದಿಕೆಗಳು ಶಿಕ್ಷಣ ಮತ್ತು ನಟನೆಯ ಗತಿಯನ್ನೇ ಬದಲಿಸಿರುವ ಕಾಣ ಇಂದು ರಂಗಭೂಮಿಯ ಪ್ರಗತಿ ದೊಡ್ಡ ಸವಾಲಾಗಿದೆ.

ಇತ್ತೀಚಿಗೆ ಅದರಲ್ಲೂ ಕೋವಿಡ್ ನಂತರ ಕಲೆಯು ಖ್ಯಾತಿ ಮತ್ತು ಹಣದ ಕಡೆಗೆ ವಾಲುತ್ತಿದೆ ಎಂದು ನೀವು ಭಾವಿಸುತ್ತೀರಾ?

ಹೌದು, ಇಲ್ಲ ಎರಡೂ ಇದೆ. ಇಂತಹ ಪ್ರವೃತ್ತಿ ಯಾವಾಗಲೂ ಸ್ವಲ್ಪ ಮಟ್ಟಿಗೆ ಅಸ್ತಿತ್ವದಲ್ಲಿರುತ್ತದೆ. ಕೋವಿಡ್ ಸ್ಲೆಡ್ಜ್ ಹ್ಯಾಮರ್ ಆಗಿ ಕಾರ್ಯನಿರ್ವಹಿಸಿತು. ಎಲ್ಲರಲ್ಲೂ ಭವಿಷ್ಯದ ಕುರಿತು ಅಭದ್ರತೆಯ ಭಾವ ವರ್ಧಿಸಿತು. ಹಾಗಾಗಿ ಜನರು ಈಗ ಬದುಕು ಕಟ್ಟಿಕೊಳ್ಳುವುದು ಹಾಗೂ ಆರ್ಥಿಕ ಸ್ಥಿರತೆಯತ್ತ ಹೆಚ್ಚು ಗಮನಹರಿಸಿದ್ದಾರೆ.

' ಭುಖೇ ಭಜನ್ ನ ಹೋಯೇ ಗೋಪಾಲ ' ಎಂಬ ಹಿಂದಿ ಗಾದೆಯಿದೆ. ಅಂದರೆ ಖಾಲಿ ಹೊಟ್ಟೆಯಲ್ಲಿ ಉತ್ಸಾಹ ಇರಲು ಸಾಧ್ಯವಿಲ್ಲ. ಜನರು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವ ಮೊದಲು ಅವರಿಗೆ ಭದ್ರತೆ ಬೇಕು. ರಂಗ ಶಂಕರದಲ್ಲಿ ನಾವೇ ದೈನಂದಿನ ಅಭ್ಯಾಸಗಳಿಗೆ ಹಣ ಪಾವತಿಸುತ್ತೇವೆ. ತಿಂಡಿ ನೀಡುತ್ತೇವೆ. ನಟರಿಗೆ ಪ್ರತಿ ಪ್ರದರ್ಶನಕ್ಕೆ ರೂ 2,000 ಸಂಭಾವನೆ ನೀಡುತ್ತೇವೆ. ಇದು ನಮ್ಮ ಮಿತಿ. . ನಾಸಿರುದ್ದೀನ್ ಷಾ ಅವರಂತಹ ಮಾತ್ರ ಒಟ್ಟಿಗೆ ರಂಗಭೂಮಿ, ಸಿನಿಮಾ ಮತ್ತು OTT ಯಲ್ಲಿ ತೊಡಗಿಸಿಕೊಂಡೂ, ಗುಣಮಟ್ಟದ ರಂಗಭೂಮಿಯ ವಾತಾವರಣ ಯನ್ನು ನಿರ್ಮಿಸುತ್ತಾರೆ. ಆದರೆ, ಅಂತವರು ಅಪರೂಪ.

ನೀವು ಕೈಗೆಟುಕುವ ಟಿಕೆಟ್ ದರಗಳಿಗೆ ಒತ್ತು ನೀಡಿದ್ದೀರಿ. ರಂಗಭೂಮಿ ಕಲೆಯತ್ತ ಪ್ರವೇಶಿಸುವುದು ಏಕೆ ತುಂಬಾ ಮುಖ್ಯ ಎನಿಸಿತು?

ಉನ್ನತ ಕಲೆ ಶ್ರೀಮಂತರಿಗೆ ಮಾತ್ರ ಪ್ರತ್ಯೇಕವಾಗಿರಬಾರದು ಎಂದು ನಾವು ಭಾವಿಸಿದ್ದೆವು. ರಂಗಭೂಮಿ ಕಲೆ ಜನ ಸಾಮಾನ್ಯರಿಗೆ ಸೇರಿದ್ದು; ಇದು ನಿಜವಾದ ಮಾನವ ಅನುಭವಗಳ ಕುರಿತಾಗಿದೆ. ಕೇವಲ ಹಣಕ್ಕಾಗಿ ಅಲ್ಲ. ಜನಪದ ಮತ್ತು ಶಾಸ್ತ್ರೀಯ ರಂಗಭೂಮಿ ಜನಸಾಮಾನ್ಯರನ್ನು ತಲುಪುವ ವೇದಿಕೆಯಾಗಿದೆ. ಹಾಗಾಗಿ ಎಲ್ಲರೂ ಅದಕ್ಕೆ ಅರ್ಹರು.

ರಂಗಶಂಕರದಲ್ಲಿ ತನ್ನ ಗುರುತನ್ನು ರೂಪಿಸಿದ ಕೆಲವು ಸ್ಮರಣೀಯ ನಾಟಕಗಳು ಅಥವಾ ಪ್ರದರ್ಶನಗಳು ಯಾವುವು? ವೈಯಕ್ತಿಕವಾಗಿ ಮೆಚ್ಚುಗೆಯಾದ ಪ್ರದರ್ಶನಗಳು ಯಾವುವು?

ಆಯ್ಕೆ ಮಾಡುವುದು ತುಂಬಾ ಕಷ್ಟ. ನಾವು ಸುಮಾರು 8,000 ಪ್ರದರ್ಶನಗಳನ್ನು ನೀಡಿದ್ದೇವೆ. ಮೊದಲ ಬಾರಿಯ ಪ್ರದರ್ಶಕರಿಂದ ಹಿಡಿದು ನಾಸಿರುದ್ದೀನ್ ಶಾ ಅವರಂತಹ ಅನುಭವಿಗಳವರೆಗೆ ರಂಗ ಕಲೆ ಪ್ರದರ್ಶಿಸಿದ್ದೇವೆ. ಅದರಲ್ಲಿ ಇಷ್ಟವಾದ ಪ್ರದರ್ಶನ ಯಾವುದೆಂದರೆ ಆಯ್ಕೆ ಮಾಡುವುದು ಕಠಿಣ. 


ಆಧುನಿಕ ಯುಗದಲ್ಲಿ ರಂಗಭೂಮಿಯು ಯುವ ಪ್ರೇಕ್ಷಕರ ಮನಸ್ಸನ್ನು ಹೇಗೆ ಸೆರೆಹಿಡಿದು ಮುಂದುವರಿಸಬಹುದು?

ನಾವು ಹಳೆಯ ತಲೆಮಾರಿನವರು, ಇಂದಿನ 10 ರಿಂದ 15 ವರ್ಷ ವಯಸ್ಸಿನವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಅವರು ನಮ್ಮ ಪ್ರಪಂಚಕ್ಕಿಂತ ಭಿನ್ನವಾದ ಜಗತ್ತಿನಲ್ಲಿ ಬೆಳೆಯುತ್ತಿದ್ದಾರೆ. ಸಂವಹನದಿಂದ ಆಹಾರದವರೆಗೆ ಎಲ್ಲವೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳು ಅವರ ಜೀವನದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಈ ಸಂದರ್ಭದಲ್ಲಿಸಹಾನುಭೂತಿ, ಸತ್ಯ ಹಾಗೂ ಜವಾಬ್ದಾರಿಯಿಂದ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ನೈಜ ಸಮಸ್ಯೆಗಳನ್ನು ಪರಿಹರಿಸಲು ರಂಗಭೂಮಿ ಒಂದು ಪ್ರಬಲ ಸಾಧನ. ಆದರೆ ಅವರ ಬಾಲ್ಯವನ್ನು ರಾಜಿ ಮಾಡಿಕೊಳ್ಳದಂತೆ ಅವರನ್ನು ನಾವು ಜಾಗೃತಿಯಿಂದ ಪೋಷಿಸಬೇಕು.

ಮುಂಬೈ ಅಥವಾ ದೆಹಲಿಯಂತಹ ನಗರಗಳಿಗೆ ಹೋಲಿಸಿದರೆ ಬೆಂಗಳೂರು ರಂಗಭೂಮಿಗೆ ಯಾವ ವಿಶಿಷ್ಟ ಸವಾಲು ಮತ್ತು ಅವಕಾಶವಿದೆ ?

ಕರ್ನಾಟಕವು ಶ್ರೀಮಂತ ರಂಗಭೂಮಿ ಇತಿಹಾಸ ಹೊಂದಿದೆ. ಒಂದು ಶತಮಾನದ ಹಿಂದೆ ಗುಬ್ಬಿ ವೀರಣ್ಣನಂಥ ವ್ಯಕ್ತಿಗಳು ಮಹಾರಾಷ್ಟ್ರದಲ್ಲಿ ಬಾಲಗಂಧರ್ವರಂತೆ ಅಪ್ರತಿಮರಾಗಿದ್ದರು. 70 ರ ದಶಕದ ಹೊತ್ತಿಗೆ, ನಾನು ಬೆಂಗಳೂರಿಗೆ ಬಂದಾಗ, ಬಿ.ವಿ. ಕಾರಂತ್, ಚಂದ್ರಶೇಖರ್ ಕಂಬಾರ, ಪ್ರಸನ್ನ, ಗಿರೀಶ್ ಕಾರ್ನಾಡ್ ಮತ್ತು ಲೋಕೇಶ್ ಅವರಂತಹ ದಂತಕಥೆಗಳೊಂದಿಗೆ ಸಕ್ರಿಯ ಕನ್ನಡ ರಂಗಭೂಮಿ ಪ್ರವರ್ಧಮಾನಕ್ಕೆ ಬಂದಿತು. ಹವ್ಯಾಸಿ ಕನ್ನಡ ರಂಗಭೂಮಿ ಚಳವಳಿಯು ಪ್ರವರ್ಧಮಾನಕ್ಕೆ ಬಂದಿತು. ಸಾರ್ವಜನಿಕ ವಲಯದ ಕಂಪನಿಗಳಾದ HAL, BHEL ಮತ್ತು BEML ಗಳಲ್ಲಿನ ಸಾಂಸ್ಕೃತಿಕ ಕ್ಲಬ್‌ಗಳು ತಲೆ ಎತ್ತಿದವು. ಇಂದಿನ ಕಾರ್ಪೊರೇಟ್ ಉದ್ದಿಮೆಗಳಿಗಿಂತ ಭಿನ್ನವಾಗಿ, ಈ ಕ್ಲಬ್‌ಗಳು ಕಲೆಯನ್ನು ಪೋಷಣೆ ಮತ್ತು ಇತರ ನಗರಗಳಲ್ಲಿ ಕೊರತೆಯಿರುವ ಅವಕಾಶಗಳನ್ನು ಸೃಷ್ಟಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

ರಂಗಶಂಕರಕ್ಕೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅದರ ಭವಿಷ್ಯಕ್ಕಾಗಿ ನೀವು ಏನನ್ನು ಯೋಜಿಸುತ್ತಿದ್ದೀರಿ? ಮುಂಬರುವ ವರ್ಷಗಳಲ್ಲಿ ಹೊಸ ನಿರ್ದೇಶನಗಳು ಅಥವಾ ಕನಸುಗಳಿವೆಯೇ?

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಅಥವಾ ಪಶ್ಚಿಮ ಬೆಂಗಳೂರಿಗರಿಗೆ ಪ್ರಯಾಣವು ಒಂದು ಸವಾಲಾಗಿದೆ. ಇಂಥ ಸ್ಥಳಗಳಲ್ಲಿ ರಂಗಶಂಕರದಂತಹ ರಂಗಮಂದಿರ ನೋಡಲು ನಾನು ಇಷ್ಟಪಡುತ್ತೇನೆ. ನಗರವು ಗಮನಾರ್ಹವಾಗಿ ಬೆಳೆಯುತ್ತಿದೆ. ವೈಟ್‌ಫೀಲ್ಡ್‌ನಲ್ಲಿ ವಾಸಿಸುವವರು ರಂಗಶಂಕರಕ್ಕೆ ಪ್ರಯಾಣ ಮಾಡುವುದು ಕಠಿಣವಾಗಿದೆ. ನಾವು ವೈಟ್‌ಫೀಲ್ಡ್‌ನಲ್ಲಿ ಜಾಗೃತಿ ಹೊಂದಿದ್ದರೂ, ನಗರದಾದ್ಯಂತ ಹೆಚ್ಚು ಸಣ್ಣ, ಕೈಗೆಟುಕುವ ಥಿಯೇಟರ್‌ಗಳು ಹೊರಹೊಮ್ಮಬೇಕಾಗಿದೆ. ಈ ರೀತಿಯಾಗಿ ನಾಟಕಗಳು ಪ್ರಯಾಣಿಸಬಹುದೇ ವಿನಃ, ಜನರಲ್ಲ. ಆದಾಗ್ಯೂ, ಹೊಸ ಜಾಗಗಳು ರಂಗ ಶಂಕರಕ್ಕೆ ಸಮಾನವಾದ ಉದ್ದೇಶದೊಂದಿಗೆ ಸ್ಥಾಪನೆಯಾಗಬೇಕು. ಅವು ಕೇವಲ ಬಹುಪಯೋಗಿ ಸಭಾಂಗಣಗಳಾಗಿದ್ದರೆ, ನಾವು ಎತ್ತಿಹಿಡಿಯುವ ನಿರ್ದಿಷ್ಟ ಸಾಂಸ್ಕೃತಿಕ ಉದ್ದೇಶವನ್ನು ಪೂರೈಸುವುದಿಲ್ಲ. ಇಲ್ಲದಿದ್ದರೆ ಅವು ಶಂಕರ್‌ ನಾಗ್‌ ಅವರ ಆತ್ಮವಿಲ್ಲದ ಮತ್ತೊಂದು ಜಾಗವಾಗಿ ಪರಿಣಮಿಸುವ ಅಪಾಯವಿದೆ.

ಶಂಕರ್ ಅವರು ಕಥಾ ನಿರೂಪಣೆಗೆ ತಮ್ಮ ತಳಸ್ಪರ್ಶಿಯ ವಿಧಾನವನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಅವರು ಭಾರತೀಯ ರಂಗಭೂಮಿ ಮತ್ತು ಸಿನಿಮಾದ ವಿಕಾಸವನ್ನು ಹೇಗೆ ನೋಡುತ್ತಾರೆ ಎಂದು ನೀವು ಭಾವಿಸುತ್ತೀರಿ?

ಓಹ್, ಶಂಕರ್ ನಾಗ್‌ ತಂತ್ರಜ್ಞಾನವನ್ನು ಪ್ರೀತಿಸುತ್ತಿದ್ದರು. ಅವರು ಯಾವಾಗಲೂ ಗ್ಯಾಜೆಟ್‌ಗಳು ಮತ್ತು ಗಿಜ್ಮೋಸ್‌ಗಳಿಂದ ಆಕರ್ಷಿತರಾಗಿದ್ದರು. ಡಿಜಿಟಲ್ ಯುಗಕ್ಕೆ ಜಿಗಿತ ಮಾಡಿದವರಲ್ಲಿ ಬಹುಶಃ ಶಂಕರ್‌ ಮೊದಲಿಗರಾಗಿರಬಹುದೆಂದು ನಾನು ಭಾವಿಸುತ್ತೇನೆ. ಅವರು ಯಾವಾಗಲೂ ಹೊಸತನದಲ್ಲಿ ಸಾಮರ್ಥ್ಯ ಹುಡುಕುತ್ತಿದ್ದ ವ್ಯಕ್ತಿ.

ಶಂಕರ್ ಅವರು ಇಂದು ನಾಟಕವನ್ನು ನಿರ್ದೇಶಿಸಿದರೆ, ಅವರು ಯಾವ ಪ್ರಕಾರವನ್ನು ಆರಿಸಿಕೊಳ್ಳುತ್ತಾರೆ ಎಂದು ನೀವು ಭಾವಿಸುತ್ತೀರಿ, ನಾಟಕ, ಹಾಸ್ಯ, ಅಥವಾ ಸಂಪೂರ್ಣ ಪ್ರಯೋಗಾತ್ಮಕವಾ?

ನೀವು ಅದರ ಬಗ್ಗೆ ಯೋಚಿಸುವಾಗ ಪ್ರಾಯೋಗಿಕವಾಗಿರಬೇಕು. ವಯಸ್ಸಿನ ಜೊತೆಗೆ ಒಂದು ನಿರ್ದಿಷ್ಟ ಬುದ್ಧಿವಂತಿಕೆ ಮತ್ತು ದೃಷ್ಟಿಕೋನವು ಬರುತ್ತದೆ. ಆದರೆ ಶಂಕರ್‌ ಅವರು ತಂತ್ರಜ್ಞಾನ ಒಳಗೊಂಡಿದ್ದ ಯಾವುದನ್ನಾದರೂ ಇಷ್ಟಪಡುತ್ತಿದ್ದರು, ಆದ್ದರಿಂದ ಅವರು ಆ ಮಾರ್ಗವನ್ನು ವ್ಯಾಪಕವಾಗಿ ಅನ್ವೇಷಿಸುತ್ತಿದ್ದರು ಎಂದು ನಾನು ಭಾವಿಸುತ್ತೇನೆ. ತಂತ್ರಜ್ಞಾನ ಬಳಸಿಕೊಂಡು ಅಂತರ ನಿವಾರಿಸಲು ಅವರು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಿದ್ದರು. ಅವರು ಯುವ ಪೀಳಿಗೆಗೆ ವೇದಿಕೆ ಒದಗಿಸುತ್ತಿದ್ದರು. ಅವರ ಪ್ರತಿಭೆ ಮತ್ತು ಆಲೋಚನೆಗಳನ್ನು ತೋರಿಸಲು ಪ್ರೋತ್ಸಾಹಿಸುತ್ತಾರೆ ಎಂದು ನಾನು ನಂಬುತ್ತೇನೆ.

ಪ್ರದರ್ಶನವನ್ನು ವೀಕ್ಷಿಸುವ ಮೊದಲು ಅಂಜುಸ್ ಕೆಫೆಯಲ್ಲಿ ನೀವು ಹೋಗಬೇಕಾದ ತಿಂಡಿ ಯಾವುದು?

ದಹಿ ಬಟಾಟ ಪುರಿ. ಅಂಜುಸ್ ಕೆಫೆಯಲ್ಲಿ ಇದು ನನ್ನ ಸಂಪೂರ್ಣ ನೆಚ್ಚಿನದು.

ನೀವು ರಂಗಭೂಮಿಯಲ್ಲಿ ಕೆಲಸ ಮಾಡದಿರುವಾಗ ವಿಶ್ರಾಂತಿ ಪಡೆಯಲು ಬೆಂಗಳೂರಿನಲ್ಲಿ ನಿಮ್ಮ ನೆಚ್ಚಿನ ಸ್ಥಳ ಯಾವುದು?

ಮನೆ. ವಿಶ್ರಾಂತಿ ಪಡೆಯಲು ಇದಕ್ಕಿಂತ ಉತ್ತಮವಾದ ಸ್ಥಳವಿಲ್ಲ.

ಇಂದು ನೀವು ಶಂಕರ್ ನಾಗ್ ಅವರ ಯಾವುದೇ ಐಕಾನಿಕ್ ಚಿತ್ರಗಳನ್ನು ರೀಮೇಕ್ ಮಾಡಲು ಸಾಧ್ಯವಾದರೆ, ಅದು ಯಾವುದು ಮತ್ತು ನೀವು ಮುಖ್ಯ ಪಾತ್ರಗಳಲ್ಲಿ ಯಾರನ್ನು ಆಯ್ಕೆ ಮಾಡುತ್ತೀರಿ?

ನನಗೆ ಈಗಿನ ಚಿತ್ರರಂಗದ ಹೀರೋಗಳು, ಸ್ಟಾರ್‌ಗಳ ಪರಿಚಯ ಅಷ್ಟಾಗಿ ಇಲ್ಲ. ಶಂಕರ್ ಇನ್ನಿಲ್ಲವಾದ ನಂತರ ನಾನು ಸಿನಿಮಾ ನೋಡುವುದೇ ಕಡಿಮೆ.

ನೀವು ಪ್ರಸ್ತುತ ಏನು ಕೆಲಸ ಮಾಡುತ್ತಿದ್ದೀರಿ?

ಇದೀಗ, ನಾನು ರಂಗಶಂಕರದ ಉತ್ತರಾಧಿಕಾರಿ ಯೋಜನೆ ಮೇಲೆ ಗಮನಹರಿಸಿದ್ದೇನೆ. ಈ ಸ್ಥಳವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಯಾರನ್ನಾದರೂ ಹುಡುಕುತ್ತಿದ್ದೇನೆ. ಅಗತ್ಯವಿದ್ದಾಗ ಸಲಹೆ ನೀಡಲು ನಾನು ಅಲ್ಲಿಯೇ ಇರುತ್ತೇನೆ. ಇದು ಹುಡುಕಾಟದ ಸಮಯ.

Tags:    

Similar News