ಮೋದಿ ಮಿತ್ರ ಟ್ರಂಪ್ ಸುಂಕದಾಟ: ಭಾರತದ ವಿದೇಶಾಂಗ ನೀತಿಯಲ್ಲಿ ಬಿರುಕು

ಟ್ರಂಪ್ ಅಥವಾ ಪುಟಿನ್ ಅವರಲ್ಲಿ ಯಾರಾದರೂ ಒಬ್ಬರ ಜೊತೆ ಮೈತ್ರಿ ಮಾಡಿಕೊಂಡು ಇನ್ನೊಬ್ಬರನ್ನು ವಿರೋಧಿಸುವ ಶಕ್ತಿ ಭಾರತಕ್ಕೆ ಇಲ್ಲ, ಹಾಗೆಯೇ ಇಬ್ಬರನ್ನೂ ತೃಪ್ತಿಪಡಿಸುವ ಸಾಮರ್ಥ್ಯವೂ ಇಲ್ಲ.;

Update: 2025-08-08 00:30 GMT
ಅಮೆರಿಕದೊಂದಿಗೆ ಶತಾಯಗತಾಯ ಉತ್ತಮ ಸಂಬಂಧ ಕಾಯ್ದುಕೊಳ್ಳುವ ಭಾರತದ ನಿರೀಕ್ಷೆಯನ್ನು ಟ್ರಂಪ್ ಅವರ ಸುಂಕ ಪ್ರಹಾರವು ಹುಸಿಗೊಳಿಸಿದೆ.

ಶೀತಲ ಸಮರ ಕೊನೆಗೊಂಡ ಬಳಿಕ ಭಾರತದ ರಾಜತಾಂತ್ರಿಕತೆ ಬಹುಶಃ ಇದಕ್ಕಿಂತ ಕಠಿಣ ಸವಾಲು ಎದುರಿಸಿದ ದಿನ ಇಲ್ಲ ಅನಿಸುತ್ತದೆ. ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಅತ್ಯಂತ ಕಷ್ಟಕರ ಆಯ್ಕೆಗಳನ್ನು ಮಾಡಿಕೊಳ್ಳುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇರ ಪಂಥಾಹ್ವಾನ ನೀಡಿದ್ದಾರೆ.

ಭಾರತದ ಸರಕುಗಳ ಮೇಲೆ ಟ್ರಂಪ್ ವಿಧಿಸಿರುವ ಶೇಕಡಾ 50ರಷ್ಟು ಸುಂಕವು ನರೇಂದ್ರ ಮೋದಿ ಸರ್ಕಾರಕ್ಕೆ ನಿಜವಾದ ಶಾಕ್ ಟ್ರೀಟ್ಮೆಂಟ್. ಇದು ಮೋದಿ ಸರ್ಕಾರ ಎಂದಿಗೂ ಊಹಿಸದ ಅಥವಾ ಯಾವುದೇ ಸಿದ್ಧತೆ ಮಾಡಿಕೊಳ್ಳಲಾಗದೇ ಇರುವಂತಹ ಸನ್ನಿವೇಶವನ್ನು ತಂದೊಡ್ಡಿದೆ. ಪರಸ್ಪರ ಸುಂಕಗಳನ್ನು ಇಡೀ ವಿಶ್ವಕ್ಕೆ ವಿಧಿಸುವ ಸಂದರ್ಭ ಬಂದಾಗ ಭಾರತವು ಅದನ್ನು ಹೇಗಾದರೂ ಸಹಿಸಿಕೊಳ್ಳುತ್ತಿತ್ತು. ಆದರೆ, ಬ್ರೆಜಿಲ್ನಂತಹ ಕೆಲವು ಆಯ್ದ ದೇಶಗಳೊಂದಿಗೆ ಭಾರತವನ್ನು ಪ್ರತ್ಯೇಕವಾಗಿ ಗುರುತಿಸಿದ್ದು, ಭಾರತ ಎರಡೂ ಕಡೆಯವರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂಬ ಸಂಗತಿಯನ್ನು ಸ್ಪಷ್ಟಪಡಿಸಿದೆ – ಇತ್ತ ಟ್ರಂಪ್ ಜೊತೆ ಊಟ, ಪುಟಿನ್ ಜೊತೆ ಔತಣಕೂಟ ಎರಡೂ ಏಕಕಾಲದಲ್ಲಿ ಸಾಧ್ಯವಿಲ್ಲದಂತಹ ಸನ್ನಿವೇಶ ಸೃಷ್ಟಿಸಿದೆ.

ಈ ಸುಂಕ ಏರಿಕೆಯು ಭಾರತದ ವಿದೇಶಾಂಗ ನೀತಿಯ ಸ್ಥಾಪನೆಯ ದೃಷ್ಟಿಕೋನದ ಮೇಲೆ ಸ್ಪಷ್ಟವಾದ ಬೆಳಕು ಚೆಲ್ಲಿದೆ. ಸೋವಿಯತ್ ಒಕ್ಕೂಟದ ಪತನವಾದ ಬಳಿಕ, ಭಾರತವು ಅತ್ತ ಮಾಸ್ಕೋದೊಂದಿಗೆ ತನ್ನ ಐತಿಹಾಸಿಕ ಸಂಬಂಧವನ್ನು ಚಾಲ್ತಿಯಲ್ಲಿ ಇರಿಸಿಕೊಳ್ಳುತ್ತಲೇ ಅಮೆರಿಕದೊಂದಿಗೆ ಬಾಂಧವ್ಯ ಬೆಳೆಸುವಲ್ಲಿ ಯಶಸ್ವಿಯಾಗಿತ್ತು.

ಆಟದ ದಿಕ್ಕು ಬದಲಿಸಿದ ಚೀನಾ

ಆದರೆ, ಕಳೆದೆರಡು ದಶಕಗಳ ಅವಧಿಯಲ್ಲಿ ಚೀನಾದ ಎಂಟ್ರಿ ಆಟದ ದಿಕ್ಕನ್ನೇ ಬದಲಿಸುವಂತೆ ಮಾಡಿದೆ. ಹಾಗಾಗಿ ಭೌಗೋಳಿಕ ರಾಜಕೀಯ ಸಮೀಕರಣಗಳಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ.

ಸೋವಿಯತ್ ಒಕ್ಕೂಟದ ವಿಭಜನೆಯ ನಂತರ ಸುಮಾರು ಒಂದು ದಶಕದವರೆಗೆ ರಷ್ಯಾ ರಾಜಕೀಯವಾಗಿ ಮಂಕಾಗಿತ್ತು. ಆದರೆ 2000ರಲ್ಲಿ ವ್ಲಾಡಿಮಿರ್ ಪುಟಿನ್ ಅಧಿಕಾರಕ್ಕೆ ಬಂದ ನಂತರ ಅಮೆರಿಕ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರನ್ನು ವಿರೋಧಿಸಲು ಶುರುವಿಟ್ಟುಕೊಂಡಿತು.

ಅಲ್ಲಿಂದ ಮುಂದೆ ಪುಟಿನ್ ಅಡಿಗಡಿಗೂ ಅಮೆರಿಕವನ್ನು ವಿರೋಧಿಸುತ್ತ ಬಂದರು. ಹಿಂದಿನ ಸೋವಿಯತ್ ಪ್ರದೇಶದಲ್ಲಿ ಅಮೆರಿಕ ಬೆಂಬಲಿತ ಭದ್ರತಾ ಮೂಲಸೌಕರ್ಯ ಪ್ರವೇಶಿಸುವುದನ್ನು ವಿರೋಧಿಸಿದರು. ಜಾರ್ಜಿಯಾ ಸರ್ಕಾರ ಪಾಶ್ಚಿಮಾತ್ಯರ ಪರ ನಿಂತಾಗ ಅದರ ವಿರುದ್ಧ ಪ್ರಹಾರ ಮಾಡಿದರು. ಸಿರಿಯಾದ ಬಷರ್ ಅಲ್-ಅಸ್ಸಾದ್ ಸರ್ಕಾರವನ್ನು ಕೆಡವಲು ಅಮೆರಿಕ ಮತ್ತು ನ್ಯಾಟೋ ನೇತೃತ್ವದ ಪಡೆಗಳು ಮುಂದಾದಾಗ ಅಂತಹ ಪ್ರಯತ್ನಗಳನ್ನು ವಿರೋಧಿಸಿದರು. ಮತ್ತು ಅಂತಿಮವಾಗಿ ಉಕ್ರೇನ್ ನ್ಯಾಟೋಗೆ ಸೇರಲು ಬಯಸಿದಾಗ ಅದರ ಮೇಲೆ ಆಕ್ರಮಣ ನಡೆಸಿದರು.

ತಬ್ಬಿಬ್ಬಾದ ಭಾರತ

ಪುಟಿನ್ ಅವರು ಹೀಗೆ ಪ್ರವರ್ಧಮಾನಕ್ಕೆ ಬರುತ್ತಿರುವುದು ಭಾರತವನ್ನು ತಬ್ಬಿಬ್ಬುಗೊಳಿಸಿತು. ಯಾಕೆಂದರೆ ರಷ್ಯಾದ ಜೊತೆಗೆ ಸಂಬಂಧವನ್ನು ಕಾಯ್ದುಕೊಳ್ಳುತ್ತಲೇ ಪಾಶ್ಚಿಮಾತ್ಯ ದೇಶಗಳೊಂದಿಗೆ ಸಂಪರ್ಕ ಬೆಳೆಸಿ ಅಮೆರಿಕಕ್ಕೆ ನಿಕಟವಾಗಿರುವುದು ಭಾರತಕ್ಕೆ ಸುಲಭದ ತುತ್ತಾಗಲಿಲ್ಲ.

ಕೆಲಕಾಲ ಭಾರತದ ನಡೆಯನ್ನು ಎಚ್ಚರಿಕೆಯಿಂದ ಗಮನಿಸಿದ ಪುಟಿನ್, ಅದನ್ನು ಆತಂಕಕ್ಕೆ ಗುರಿಪಡಿಸುವ ಮೊದಲ ಹೆಜ್ಜೆಯನ್ನಿಟ್ಟರು. ಅದೇ ರಷ್ಯಾ ಪಾಕಿಸ್ತಾನದ ಜೊತೆ ಭದ್ರತಾ ಸಹಭಾಗಿತ್ವಕ್ಕೆ ಸಹಿ ಹಾಕಿದ್ದು. ಆ ದೇಶಕ್ಕೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಒದಗಿಸುವ ಭರವಸೆಯೂ ಅದರಿಂದ ಹೊರಬಿದ್ದಿತು. ಈ ಎಲ್ಲಾ ಕ್ರಮಗಳು ಅಭೂತಪೂರ್ವವೆನ್ನಲು ಅಡ್ಡಿಯಿಲ್ಲ. ಯಾಕೆಂದರೆ ಭಾರತದ ಭದ್ರತಾ ಕಳವಳಗಳನ್ನು ಗೌರವಿಸುವ ಮೂಲಕ ಯಾವಾಗಲೂ ಪಾಕಿಸ್ತಾನವನ್ನು ದೂರವಿಟ್ಟಿತ್ತು.

ಪರಿಸ್ಥಿತಿ ಕೈಮೀರುತ್ತಿದೆ ಎಂಬ ಸಂದೇಶ ಭಾರತದ ನೀತಿ ನಿರೂಪಕರಿಗೂ ತಲುಪಿತು. ಅದರ ಫಲವಾಗಿ ಕಳೆದ ಕೆಲವು ವರ್ಷಗಳ ಅವಧಿಯಲ್ಲಿ, ಪುಟಿನ್ ಅವರನ್ನು ಸಮಾಧಾನಪಡಿಸಲು ಮತ್ತು ರಷ್ಯಾದೊಂದಿಗೆ ವಿಶೇಷ ಸಂಬಂಧವನ್ನು ಕಾಯ್ದುಕೊಳ್ಳಲು ನಿರಂತರವಾಗಿ ಪ್ರಜ್ಞಾಪೂರ್ವಕ ಪ್ರಯತ್ನ ಮಾಡಲಾಯಿತು. ಉಕ್ರೇನ್ ಆಕ್ರಮಣ ಸಂಭವಿಸಿದಾಗ, ಭಾರತವು ತನ್ನ ಮಾತನ್ನು ಉಳಿಸಿಕೊಳ್ಳುವ ಅನಿವಾರ್ಯ ಒತ್ತಡಕ್ಕೆ ಸಿಲುಕಿತು.

ಅಮೆರಿಕ ಮುಂದಾಳತ್ವದ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿದಾಗ, ಪುಟಿನ್ ನೆರವಿನ ಹಸ್ತವನ್ನು ಚಾಚಿದ್ದು ಭಾರತದ ಕಡೆಗೆ. ಯುದ್ಧಕ್ಕೆ ಮೊದಲು ರಷ್ಯಾದಿಂದ ಮಾಡಿಕೊಳ್ಳುತ್ತಿದ್ದ ಕೇವಲ ಶೇ.2ರಷ್ಟು ಆಮದನ್ನು ಈಗ ಸುಮಾರು ಶೇ.35ಕ್ಕೆ ಹೆಚ್ಚಿಸಿ ತನ್ನ ಒಲವನ್ನು ವ್ಯಕ್ತಪಡಿಸಿತು. ಯುರೋಪಿನ ಕೆಲ ಮಿತ್ರರಾಷ್ಟ್ರಗಳು ಇದನ್ನು ವಿರೋಧಿಸಿದರೂ, ಅಮೆರಿಕವು ಅದನ್ನು ನೋಡಿಯೂ ನೋಡದಂತೆ ವರ್ತಿಸಿತು.

ಈಗ, ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಟ್ರಂಪ್ ಪ್ರಯತ್ನಗಳಿಗೆ ಚಿಕ್ಕಾಸಿನ ಬೆಂಬಲ ಸಿಕ್ಕಿಲ್ಲ. ಹಾಗಾಗಿ ರಷ್ಯಾದೊಂದಿಗೆ ಹೊಂದಿರುವ ವ್ಯವಹಾರಗಳಿಗೆ ಪೂರ್ಣ ವಿರಾಮ ಹಾಕುವಂತೆ ಭಾರತದ ಮೇಲೆ ಅಮೆರಿಕ ಒತ್ತಡ ಹೇರಲು ನಿರ್ಧರಿಸಿದೆ.

ಭಾರತದ ಸ್ಥಾನದ ಜಿಜ್ಞಾಸೆ

ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾರತದ ಸ್ಥಾನ ಈಗ ಎಲ್ಲಿದೆ? ಕಳೆದ ಮೂರು ದಶಕಗಳ ಅವಧಿಯಲ್ಲಿ ಭಾರತದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಅಮೆರಿಕದೊಂದಿಗೆ ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಭದ್ರತೆಯೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಗಾಧ ಪ್ರಮಾಣದಲ್ಲಿ ಸಂಬಂಧವನ್ನು ವಿಸ್ತರಿಸಿದೆ. ಇನ್ನೊಂದು ಕಡೆ ಪ್ರಮುಖ ಜಾಗತಿಕ ಶಕ್ತಿಯಾಗಿ ಚೀನಾದ ಉದಯ ಮತ್ತು ಅಮೆರಿಕದೊಂದಿಗೆ ಅದರ ಪೈಪೋಟಿಯ ಕಾರಣದಿಂದಾಗಿ ಭಾರತಕ್ಕೆ ಅಮೆರಿಕ ಹತ್ತಿರವಾಗಲು ಸಹಾಯ ಮಾಡಿತು.

ಏಷ್ಯಾದಲ್ಲಿ ಚೀನಾ ಪರ್ಯಾಯ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವುದಕ್ಕೆ ಭಾರತವು ಒಂದು ತಡೆಗೋಡೆ ಎಂದು ಅಮೆರಿಕದ ಅಧಿಕಾರಿಗಳು ಗ್ರಹಿಸಿದರು. ಈ ದೃಷ್ಟಿಕೋನದಿಂದ, ಭಾರತವನ್ನು ಅದರ ಕಾರ್ಯತಂತ್ರದ ಪಾಲುದಾರನಾಗಿ ಮತ್ತು ಕ್ವಾಡ್ ಸದಸ್ಯನಾಗಿ ಗುರುತಿಸುವುದರೊಂದಿಗೆ ಅಮೆರಿಕವು ಭಾರತದೊಂದಿಗಿನ ಸಂಬಂಧವನ್ನು ಇನ್ನಷ್ಟು ವಿಸ್ತರಿಸಿತು. ದಕ್ಷಿಣ ಚೀನಾ ಸಮುದ್ರಗಳು ಮತ್ತು ಪೆಸಿಫಿಕ್ ಮಹಾಸಾಗರದಲ್ಲಿ ಗಸ್ತು ತಿರುಗುವ ಮೂಲಕ ಚೀನಾವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುವ ಮೂಲಕ ಅಮೆರಿಕಕ್ಕೆ ಇನ್ನಷ್ಟು ನಿಕಟವಾಗುವ ನಡೆಯನ್ನು ಭಾರತ ಇಟ್ಟಿತು.

ಅಮೆರಿಕ ಬೆಂಬಲಿತ ಅಧಿಕಾರದಿಂದ, ವಿಶೇಷವಾಗಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕಳೆದೊಂದು ದಶಕದ ಅವಧಿಯಲ್ಲಿ ಭಾರತದ ನೀತಿ ನಿರೂಪಕರು ವಿಶ್ವದ ಏಕೈಕ ಮಹಾಶಕ್ತಿಯ ಜೊತೆಯಿದ್ದರೆ, ಚೀನಾವನ್ನು ಎದುರಿಸಬಹುದು ಎಂಬ ಲೆಕ್ಕಾಚಾರ ನಡೆಸಿದರು. ಭಾರತದ ದೃಷ್ಟಿಯಲ್ಲಿ, ಅಮೆರಿಕ ಎರಡು ದ್ವೇಷಪೂರಿತ ನೆರೆಹೊರೆಗಳನ್ನು ಬೇರ್ಪಡಿಸಿದ್ದರಿಂದ ಪಾಕಿಸ್ತಾನವು ಭಾರತದ ರೇಡಾರ್ನಿಂದ ಸಂಪೂರ್ಣವಾಗಿ ಹೊರಗುಳಿಯಿತು. ಇದು ಭಾರತೀಯ ಸರ್ಕಾರಗಳ ದೀರ್ಘಕಾಲದ ಬೇಡಿಕೆಯಾಗಿತ್ತು.

ಸುಳ್ಳಾದ ನಿರೀಕ್ಷೆ

ಅಮೆರಿಕದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಕ್ಕಾಗಿ ಆತ್ಮ ಸಂತೃಪ್ತಿಯನ್ನು ಹೊಂದಿದ್ದ ಭಾರತದ ಎಲ್ಲ ನಿರೀಕ್ಷೆಗಳನ್ನು ಟ್ರಂಪ್ ತಮ್ಮ ಆಕ್ರಮಣಕಾರಿ ಸುಂಕದ ಮೂಲಕ ಧ್ವಂಸಗೊಳಿಸಿದ್ದಾರೆ. ಮೊದಲ ಮತ್ತು ಪ್ರಮುಖ ಅಂಶವೆಂದರೆ, ಭಾರತವು ಈ ಭೌಗೋಳಿಕ ರಾಜಕೀಯದಲ್ಲಿ ಉಪಯುಕ್ತವಾಗಿರುವ ವರೆಗೆ ಮಾತ್ರ ಅಮೆರಿಕ ಅದರ ಮಿತ್ರನಾಗಿರುತ್ತದೆ. ಅದು ಒಂದು ಅಲಿಖಿತ ಗಡಿಯನ್ನು ದಾಟಿದ ತಕ್ಷಣ, ಸ್ನೇಹಕ್ಕೆ ಯಾವುದೇ ವಿಶೇಷ ಮೌಲ್ಯವಿರುವುದಿಲ್ಲ.

ಇಲ್ಲಿರುವ ಇನ್ನೂ ಒಂದು ಸಂಗತಿಯನ್ನು ಗಮನಿಸಬೇಕು, ಭಾರತವು ಚೀನಾದೊಂದಿಗೆ ನೇರಾನೇರ ಸಂಬಂಧವನ್ನು ಹೊಂದಿರುವುದಕ್ಕೆ ಬದಲಾಗಿ, ಅಮೆರಿಕವನ್ನೇ ಹೆಚ್ಚು ಅವಲಂಬಿಸಿದೆ. ಅಷ್ಟೊಂದು ಕುರುಡಾಗಿ ಅವಲಂಬಿಸಲು ಮುಖ್ಯ ಕಾರಣ ಅಂತಿಮವಾಗಿ ಚೀನಾಕ್ಕೆ ಲಗಾಮು ಹಾಕುವುದು. ಈಗ ಟ್ರಂಪ್ ಅವರ ಪ್ರತಿಕಾರದ ಫಲವಾಗಿ, ಮೋದಿ ಸರ್ಕಾರ ತುರ್ತಾಗಿ ನಡೆಸಬೇಕಾದ ಕೆಲಸವೇನೆಂದರೆ ಚೀನಾ ಸರ್ಕಾರದ ಜೊತೆಗೆ ಮಾತುಕತೆಗೆ ವೇದಿಕೆ ಸಿದ್ಧಪಡಿಸುವುದು. ಅದರಲ್ಲೂ ವಿಶೇಷವಾಗಿ ಗಡಿ ವಿವಾದ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಪರಸ್ಪರರ ತೃಪ್ತಿಗೆ ತಕ್ಕುನಾಗಿ ಬಗೆಹರಿಸಿಕೊಳ್ಳುವ ಕಡೆಗೆ ದಿಟ್ಟ ಹೆಜ್ಜೆ ಇರಿಸಬೇಕಾಗಿದೆ.

ಮೂರನೇ ಸಂಗತಿ ಏನೆಂದರೆ, ಭಾರತವು ಈತನಕ ರಷ್ಯಾವನ್ನು ಹಗುರವಾಗಿ ಪರಿಗಣಿಸಿ, ಅಗತ್ಯವಿದ್ದಾಗ ಬಳಸಿಕೊಂಡರಾಯಿತು ಎಂಬ ಧೋರಣೆಯನ್ನು ಹೊಂದಿತ್ತು. ಅಮೆರಿಕ ಎಲ್ಲಿಯವರೆಗೆ ಆಕ್ಷೇಪದ ಸ್ವರವನ್ನು ಎತ್ತುವುದಿಲ್ಲವೋ ಅಲ್ಲಿಯ ತನಕ ಭಾರತವು ರಷ್ಯಾದಿಂದ ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳಲು ಯಾವುದೇ ಅಡ್ಡಿ ಇರುವುದಿಲ್ಲ. ಆದರೆ ಈಗ ಟ್ರಂಪ್ ಅವರ ಸುಂಕದ ಕ್ರಮವು ರಷ್ಯಾದೊಂದಿಗೆ ಭಾರತ ಹೊಂದಿರುವ ಸಂಬಂಧಕ್ಕೆ ಅಗ್ನಿಪರೀಕ್ಷೆಯಾಗಿದೆ.

ಚೀನಾ ಕಡೆಗೆ ಒಲವು?

ಈಗ ಟ್ರಂಪ್ ಭಾರತದ ಬೆನ್ನಿಗೆ ಗಧಾಪ್ರಹಾರ ಮಾಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಏಳು ವರ್ಷಗಳ ಬಳಿಕ ಚೀನಾಕ್ಕೆ ಭೇಟಿ ನೀಡುವ ಸಿದ್ಧತೆ ನಡೆಸಿದ್ದಾರೆ ಎಂದು ವರದಿಗಳು ಹೇಳುತ್ತವೆ.

ಖಾಲಿಸ್ತಾನ ವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕದ ಜೊತೆಗಿನ ಸಂಬಂಧ ಹದಗೆಟ್ಟಾಗ, ಅಂದರೆ ಹಿಂದಿನ ಜೋ ಬೈಡನ್ ಆಡಳಿತ ಕೊನೆಯ ಹಂತದಿಂದ ಭಾರತವು ಚೀನಾದೊಂದಿಗಿನ ಸಂಬಂಧದಲ್ಲಿ ಮೃಧು ಧೋರಣೆ ತಳೆದಿತ್ತು. ಇದಕ್ಕೆ ಪ್ರತಿಯಾಗಿ ಚೀನಾವೂ ಸ್ಪಂದಿಸಿತು. ಫಲವಾಗಿ ಉಭಯ ದೇಶಗಳ ನಡುವಿನ ವಿವಾದಿತ ನೈಜ ಗಡಿ ನಿಯಂತ್ರಣ ರೇಖೆಯಲ್ಲಿನ ಉದ್ವಿಗ್ನ ವಾತಾವರಣ ತಕ್ಕಮಟ್ಟಿಗೆ ತಗ್ಗಿತು. ಈ ಹೊತ್ತಿನಲ್ಲಿ ಎರಡೂ ದೇಶಗಳ ನಡುವಿನ ಸಂಬಂಧಗಳು ಸ್ಥಿರವಾಗಿರುವುದು ಉತ್ತಮ ಬೆಳವಣಿಗೆಯೇ ಆಗಿದೆ.

ಹಾಗಂತ, ಭಾರತದ ಇಂತಹ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಚೀನಾ ನೆರವಿಗೆ ಬರುತ್ತದೆ ಅಥವಾ ಸಹಕರಿಸುತ್ತದೆ ಎಂದು ನಿರೀಕ್ಷಿಸುವುದು ಕೂಡ ಅಪಾಯಕಾರಿ. ಚೀನಾಕ್ಕೆ ಎಂದೆಂದಿಗೂ ಪಾಕಿಸ್ತಾನವೇ ಪರಮಮಿತ್ರ. ಭಾರತಕ್ಕೇನಾದರೂ ಚೀನಾ ಸಹಾಯಮಾಡಿದರೆ ಅದಕ್ಕೆ ಏನನ್ನಾದರೂ ಪ್ರತಿಫಲವಾಗಿ ಬಯಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಡಕತ್ತರಿಯಲ್ಲಿ ಭಾರತ

ರಾಜತಾಂತ್ರಿಕ ದೃಷ್ಟಿಕೋನದಿಂದ ಹೇಳುವುದಾದರೆ, ಭಾರತವು ನಿಜಕ್ಕೂ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಟ್ರಂಪ್ ಅಥವಾ ಪುಟಿನ್ ಅವರಲ್ಲಿ ಯಾರಾದರೂ ಒಬ್ಬರೊಂದಿಗೆ ಮೈತ್ರಿ ಬೆಳೆಸಿಕೊಂಡು ಇನ್ನೊಬ್ಬರೊಂದಿಗೆ ದ್ವೇಷ ಸಾಧಿಸಲು ಸಾಧ್ಯವಿಲ್ಲ. ಅದೇ ಹೊತ್ತಿನಲ್ಲಿ ಇಬ್ಬರನ್ನೂ ಸಂತೋಷಪಡಿಸುವುದೂ ಆಗದ ಕೆಲಸ. ಒಂದು ವೇಳೆ ರಷ್ಯಾದಿಂದ ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದರೆ ಟ್ರಂಪ್ ಭಾರತದ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ವಿಧಿಸಬಹುದು. ಹಾಗಂತ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿಬಿಟ್ಟರೆ ಪುಟಿನ್ ಭಾರತವನ್ನು ಎಂದಿಗೂ ಕ್ಷಮಿಸುವುದಿಲ್ಲ. ಇದರಿಂದ ಉಂಟಾಗುವ ಪರಿಣಾಮ ಗಂಭೀರ. ಯಾಕೆಂದರೆ ಇದು ದೀರ್ಘಕಾಲದ ಮತ್ತು ವಿಶ್ವಾಸಾರ್ಹ ಪಾಲುದಾರರನ್ನು ಅಗ್ನಿಪರೀಕ್ಷೆಗೆ ಒಳಪಡಿಸವುದಂತೂ ನಿಶ್ಚಿತ.

ಟ್ರಂಪ್ ಅವರ ಸುಂಕದಾಟವನ್ನು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿ ಪರಿಗಣಿಸುತ್ತದೆ ಮತ್ತು ಸುಂಕವನ್ನು ನೇರವಾಗಿ ಎದುರಿಸುತ್ತದೆ ಎಂದು ಸರ್ಕಾರ ಸ್ಪಷ್ಟಮಾತುಗಳಲ್ಲಿ ಹೇಳಿದೆ. ಮಾತಿನಲ್ಲಿ ಇದನ್ನು ಹೇಳುವುದು ಸುಲಭ ಮತ್ತು ಸರಳ. ಆದರೆ ಪ್ರಾಯೋಗಿಕವಾಗಿ ಅನಿರೀಕ್ಷಿತ ಸವಾಲುಗಳು ಹಾಗೂ ಅಪಾಯಗಳನ್ನು ಮೈಮೇಲೆ ಎಳೆದುಕೊಂಡಂತೆ.

ಇಂತಹುದೊಂದು ಅತ್ಯಪರೂಪದ ಸನ್ನಿವೇಶವನ್ನು ನಿಭಾಯಿಸುವ ಸಾಮರ್ಥ್ಯವನ್ನು ಭಾರತವು ನಿಜಕ್ಕೂ ಹೊಂದಿದೆಯೇ ಎಂಬುದಕ್ಕೆ ಮುಂದಿನ ತಿಂಗಳುಗಳು ಉತ್ತರ ಹೇಳಲಿವೆ.


Tags:    

Similar News