ವಿನಾಶದ ಹೆಜ್ಜೆ ಇರಿಸಿದ ದುರ್ಬಲ ಹಮಾಸ್: ಎಲ್.ಟಿ.ಟಿ.ಇ.ಗೆ ಆದ ಗತಿಯೇ ಕಾದಿದೆ
ಅಂದು ಎಲ್.ಟಿ.ಟಿ.ಇ ಹಾಕಿದ ಎಲ್ಲ ಲೆಕ್ಕಾಚಾರ ತಲೆಕೆಳಗಾಗಿತ್ತು. ಇಂದು ಹಮಾಸ್ ಕೂಡ ಅದೇ ಹಾದಿಯಲ್ಲಿದೆ. ತನ್ನ ಸಾಮರ್ಥ್ಯವನ್ನು ಲೆಕ್ಕಾಚಾರ ಹಾಕುವಲ್ಲಿ ಅದು ಎಡವಿದೆ. ಎರಡೂ ದಂಡಿನ ನಾಯಕರಿಗೆ ಅಧಿಕಾರದ ದಾಹವಿತ್ತು. ಶಾಂತಿಯನ್ನು ಗಾಳಿಗೆ ತೂರಿದರು. ಯುದ್ಧಗಳಿಂದ ನಾಗರಿಕರು ಎಂದೂ ಭರಿಸಲಾಗದ ಬೆಲೆ ತೆರುವಂತೆ ಮಾಡಿದರು;
2023ರ ಅಕ್ಟೋಬರ್ ನಲ್ಲಿ ಹಮಾಸ್ ಮತ್ತು ಗಾಝಾ ಮೇಲೆ ಇಸ್ರೇಲ್ ದಾಳಿ ಮಾಡಿದ ತಕ್ಷಣ ನಾನೊಂದು ಎಚ್ಚರಿಕೆಯ ಮಾತನ್ನು ಹೇಳಿದ್ದೆ. ಅಕ್ಟೋಬರ್ 7- ಪ್ಯಾಲೆಸ್ತೀನ್ ಗುಂಪು ಇಸ್ರೇಲ್ ಗಡಿಗಳನ್ನು ಭೇದಿಸಿದ ದಿನ 2006ರಲ್ಲಿ ಎಲ್.ಟಿ.ಟಿ.ಇ.ಗೆ ಆದ ಶಾಸ್ತಿಯೇ ಆಗುತ್ತದೆ ಎಂದು!
ಈಗ ಅದೇ ರೀತಿಯ ಭವಿಷ್ಯ, ಅತಿಯಾದ ಆತ್ಮವಿಶ್ವಾಸದಲ್ಲಿರುವ ಹಮಾಸ್ ಗೂ ಕಾದಿದೆ ಎಂದು ವಿಶ್ವಾಸದಿಂದ ಹೇಳಬಹುದು.
2023ರ ಅಕ್ಟೋಬರ್ 15ರಂದು ದ ಫೆಡರಲ್ ಗೆ ಬರೆದ ‘ಇಸ್ರೇಲ್ ಮೇಲಿನ ಹಮಾಸ್ ದಾಳಿ ಎಲ್.ಟಿ.ಟಿ.ಇ.ಗೆ ಆದ ಗತಿಯ ಸನಿಹಕ್ಕೆ ತರಲಿದೆ’ ಎಂಬ ಲೇಖನದಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಿದ್ದೆ. ಯಾವುದೇ ಎರಡು ವಿದ್ಯಮಾನಗಳನ್ನು ಸಂಪೂರ್ಣವಾಗಿ ಹೋಲಿಕೆ ಮಾಡಲು ಸಾಧ್ಯವಾಗದೇ ಇದ್ದರೂ ಹಮಾಸ್ ನ ಈ ಮಾರಕ ದಾಳಿಯು 2009ರ ಅಂತ್ಯಕ್ಕೂ ಮೊದಲು ಎಲ್.ಟಿ.ಟಿ. (Liberation Tigers of Tamil Eelam)ಗೆ ಯಾವ ಪರಿಸ್ಥಿತಿ ಉಂಟಾಗಿತ್ತೋ ಅದಕ್ಕೆ ಸಮನಾಗಿದೆ ಎಂದು ಹೇಳಿದ್ದೆ. ಶ್ರೀಲಂಕಾದಲ್ಲಿ ಅಂದು ನಡೆದ ಕಟ್ಟಕಡೆಯ ಕದನದಲ್ಲಿ ಯಾರೂ ಊಹಿಸಲಾಗದಷ್ಟು ವಿದ್ವಂಸ ನಡೆದುಹೋಗಿತ್ತು. ಸತ್ತವರು ಸಾವಿರಾರು ಮಂದಿ. ಅವರಲ್ಲಿ ಅನೇಕರು ಮುಗ್ಧ ತಮಿಳು ನಾಗರಿಕರಿದ್ದರು.
ಹಮಾಸ್ ಮತ್ತು ಅದರ ಹೋರಾಟಗಾರರು ಮುನ್ನುಗ್ಗಿ ದಾಳಿ ಮಾಡುತ್ತಲೇ ಇದ್ದಾರೆ. ಅವರು ಇಸ್ರೇಲಿ ಮಿಲಿಟರಿಯ ಪ್ರಬಲ ಶಕ್ತಿಯನ್ನು ಅಸ್ಥಿರಗೊಳಿಸುವ ಸಾಧ್ಯತೆಯಿದೆ ಎಂದು ಭಾವಿಸಲಾಗಿತ್ತು. ಇದೇ ರೀತಿ ಅನೇಕ ವರ್ಷಗಳ ಕಾಲ ಶ್ರೀಲಂಕಾದ ವ್ಯವಹಾರಗಳೂ ಇದ್ದವು. ಇಂದು ಇಸ್ರೇಲಿ ಮತ್ತು ಅರಬ್ ಮಾಧ್ಯಮಗಳು ದುರ್ಬಲಗೊಂಡಿರುವ ಹಮಾಸ್ ಬಗ್ಗೆ ಗಂಭೀರ ಚರ್ಚೆ ಮಾಡುತ್ತಿವೆ. ಇಂದು ಹಮಾಸ್ ನ ಸಾವಿರಾರು ಮಂದಿ ಹೋರಾಟಗಾರರು ಜೀವ ಕಳೆದುಕೊಂಡಿದ್ದಾರೆ. ಅವರ ಕಟ್ಟಾ ನಾಯಕ ಯಾಹ್ಯಾ ಸಿನ್ವಾರ್ ಧರಾಶಾಹಿಯಾಗಿದ್ದಾನೆ. ಆತನನ್ನು ಈಗ ವೇಲುಪಿಳ್ಳೈ ಪ್ರಭಾಕರನ್ ಗೆ ಹೋಲಿಕೆ ಮಾಡಲಾಗುತ್ತಿದೆ.
ಅಮೆರಿಕ ಬೆಂಬಲಿತ ಇಸ್ರೇಲ್ ದಾಳಿ ನಿರಂತರವಾಗಿ ಮುಂದುವರಿದಿದ್ದು ಅದು ನಾಗರಿಕರ ಸಾವು-ನೋವುಗಳ ಬಗ್ಗೆ ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಂಡಿಲ್ಲ. ಹಮಾಸ್ ಸಂಪೂರ್ಣವಾಗಿ ನಿರ್ನಾಮವಾಗುವ ತನಕ ಸೇನಾ ದಾಳಿ ಮುಂದುವರಿಯಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಪುನರುಚ್ಚರಿಸಿದ್ದಾರೆ.
ಈಗಲೂ ಹಮಾಸ್ ಹಿಡಿತದಲ್ಲಿರುವ ಇಸ್ರೇಲಿ ಒತ್ತೇಯಾಳುಗಳನ್ನು ಬಿಡುಗಡೆ ಮಾಡುವುದು ನೆತನ್ಯಾಹು ಅವರಿಗೆ ಅಷ್ಟೇನು ಮುಖ್ಯವಾಗಿ ಕಾಣುತ್ತಿಲ್ಲ. ಸದ್ಯಕ್ಕೆ ಅವರಿಗೆ ಹಮಾಸ್ ಉಗ್ರರರನ್ನು ನಾಶಮಾಡುವುದಷ್ಟೇ ಮುಖ್ಯವಾಗಿದೆ.
ಸರ್ವನಾಶದ ಅಂಚಿನಲ್ಲಿ
ಹಮಾಸ್ ಉಗ್ರರು ಇಸ್ರೇಲಿ ಮಿಲಿಟರಿ ಜೊತೆಗೆ ತೀವ್ರ ಕಾದಾಟಕ್ಕೆ ಇಳಿದು ಸುಮಾರು 21 ತಿಂಗಳುಗಳೇ ಕಳೆದಿದ್ದು ಅದೀಗ ಗಾಝಾಪಟ್ಟಿಯಲ್ಲಿ ಶೇ.80ರಷ್ಟು ಹಿಡಿತವನ್ನು ಕಳೆದುಕೊಂಡಿದೆ. ಈಗ ನಮ್ಮ ಗುಂಪಿನ ಮಿಲಿಟರಿ ವ್ಯವಸ್ಥೆಯಲ್ಲಿ ಏನೇನೂ ಉಳಿದಂತೆ ಕಾಣುತ್ತಿಲ್ಲ ಎಂದು ಹಮಾಸ್ ನಲ್ಲಿ ಲೆಫ್ಟಿನಂಟ್ ಕರ್ನಲ್ ಆಗಿ ಕೆಲಸ ಮಾಡುತ್ತಿದ್ದ, ಈಗ ಈಜಿಪ್ಟ್ ನಲ್ಲಿ ವಾಸಮಾಡುತ್ತಿರುವ ಮಾಜಿ ಹಿರಿಯ ಅಧಿಕಾರಿ ಒಪ್ಪಿಕೊಂಡಿದ್ದಾರೆ.
2023ರ ಅಕ್ಟೋಬರ್ ನಲ್ಲಿ ಕದನ ಆರಂಭವಾದಾಗ ಗಾಯಗೊಂಡಿದ್ದ ಹೆಸರು ಹೇಳಲಿಚ್ಚಿಸದ ಅಧಿಕಾರಿ ಗಾಝಾ ಪಟ್ಟಿಯಲ್ಲಿನ ಬೆಳವಣಿಗೆಯ ಮೇಲೆ ನಿರಂತರ ಕಣ್ಣಿಟ್ಟಿದ್ದಾರೆ. “ನಾವು ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಸೂಕ್ತ. ಹಮಾಸ್ ನ ಭದ್ರತಾ ವ್ಯವಸ್ಥೆಯಲ್ಲಿ ಏನೇನೂ ಉಳಿದಿಲ್ಲ. ಬಹುತೇಕ ನಾಯಕರು, ಅಂದರೆ ಸುಮಾರು ಶೇ.95ರಷ್ಟು ಮಂದಿ ಸತ್ತಿದ್ದಾರೆ. ಸಕ್ರಿಯವಾಗಿ ತೊಡಗಿಸಿಕೊಂಡವರೆಲ್ಲ ಹತರಾಗಿದ್ದಾರೆ,” ಎಂದು ಅವರು ಬಿಬಿಸಿಯೊಂದಿಗೆ ಮಾತನಾಡುತ್ತ ತಿಳಿಸಿದ್ದರು.
ಮಾರ್ಚ್ ತಿಂಗಳಲ್ಲಿ ಕದನ ವಿರಾಮ ಮುಕ್ತಾಯವಾದ ಬಳಿಕ ಇಲ್ಲಿಯ ತನಕ ಗಾಝಾದಲ್ಲಿನ ಹಮಾಸ್ ಭದ್ರತೆ ಸಂಪೂರ್ಣ ನೆಲ ಕಚ್ಚಿದೆ. ಅಲ್ಲೀಗ ಯಾವ ನಿಯಂತ್ರಣವೂ ಇಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೆ ಹಮಾಸ್ ಸಂಕೀರ್ಣವನ್ನು ಬಿಡುವೇ ಇಲ್ಲದ ರೀತಿಯಲ್ಲಿ ಲೂಟಿಮಾಡಿರುವುದನ್ನು ಅವರು ಉಲ್ಲೇಖಿಸುತ್ತಾರೆ.
“ಹಾಗಾಗಿ ಅಲ್ಲಿನ ಭದ್ರತಾ ಸ್ಥಿತಿ ಶೂನ್ಯವಾಗಿದೆ. ಹಮಾಸ್ ನಿಯಂತ್ರಣವೂ ಝೀರೋ. ಅಲ್ಲೀಗ ನಾಯಕತ್ವವಾಗಲಿ, ನಿಯಂತ್ರಣವಾಗಲಿ, ಸಂಪರ್ಕವಾಗಲಿ ಏನೇನೂ ಇಲ್ಲ. ವೇತನವೂ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಅದು ಬಂದು ತಲುಪುವ ಹೊತ್ತಿಗೆ ಎಲ್ಲವೂ ಮುಗಿದು ಹೋಗಿರುತ್ತದೆ, ಅದನ್ನು ಬಳಸಲೂ ಸಾಧ್ಯವಾಗದ ಸ್ಥಿತಿ ಇರುತ್ತದೆ. ಅದನ್ನು ಸಂಗ್ರಹಿಸಲು ಪ್ರಯತ್ನಿಸುವ ಹೊತ್ತಿಗೆ ಅವರು ಸತ್ತೇ ಹೋಗಿರುತ್ತಾರೆ. ಒಟ್ಟಾರೆ ಎಲ್ಲವೂ ಸರ್ವನಾಶವಾಗಿದೆ” ಎಂದು ಹೇಳುತ್ತಾರೆ.
ಎಲ್.ಟಿ.ಟಿ.ಇ ಸಂಘರ್ಷದ ನೆನಪು
ಈ ಬೆಳವಣಿಗೆಯನ್ನು ಗಮನಿಸುತ್ತ ಹೋದರೆ 2008-09ರಲ್ಲಿ ಎಲ್.ಟಿ.ಟಿ.ಇ ವಿರುದ್ಧ ನಡೆದ ರಕ್ತಸಿಕ್ತ ಹೋರಾಟವನ್ನು ನೆನಪಿಸುವಂತಿದೆ. ಪುಟ್ಟ ದೇಶವಾದ ಶ್ರೀಲಂಕಾವನ್ನು ಒಡೆದು ಹೋಳು ಮಾಡಿ ಸ್ವತಂತ್ರ ತಮಿಳು ರಾಷ್ಟ್ರ ಕಟ್ಟಬೇಕು ಎನ್ನುವ ಉದ್ದೇಶದೊಂದಿಗೆ ಕಾಲು ಶತಮಾನ ಕಾಲ ನಡೆದ ಕದನ ದುರಂತ ಅಂತ್ಯ ಕಂಡಿತ್ತು.
ಒಂದು ಹಂತದಲ್ಲಿ ಶ್ರೀಲಂಕಾ ಕೂಡ ಇಕ್ಕಟ್ಟಿಗೆ ಸಿಲುಕಿತ್ತು. ತಮಿಳು ಉಗ್ರರ ಜೊತೆ ಶಾಂತಿ ಒಪ್ಪಂದಕ್ಕೂ ಸಹಿಹಾಕಿತ್ತು. ಇಸ್ರೇಲ್ ನಲ್ಲಿ ಸುದೀರ್ಘ ಕಾಲ ಪ್ರಧಾನಿಯಾಗಿರುವ ನೇತನ್ಯಾಹು ಅವರು ಕೂಡ ಗಾಝಾವನ್ನು ಆಳುತ್ತಿದ್ದ ಹಮಾಸ್ ಜೊತೆ ಒಪ್ಪಂದಕ್ಕೆ ಬಂದುಬಿಟ್ಟಿದ್ದರು. ಹಮಾಸ್ ಯಾವತ್ತಿಗೂ ಯಹೂದ್ಯರ ರಾಷ್ಟ್ರಕ್ಕೆ ಗಂಭೀರ ಬೆದರಿಕೆಯೊಡ್ಡುವುದಿಲ್ಲ ಎಂದೇ ಅವರು ಭಾವಿಸಿದ್ದರು. ಅದು 2023ರ ಅಕ್ಟೋಬರ್ ಹೊತ್ತಿಗೆ ಸುಳ್ಳಾಗಿತ್ತು.
ಈಗ ಗಾಝಾ ಪಟ್ಟಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಹಮಾಸ್ ಪಡೆಯ ಮಾಜಿ ಕಮಾಂಡರ್ ಮಾಡಿರುವ ಯುದ್ಧಾವಲೋಕನ ಹೆಚ್ಚು ಉದಾರವಾಗಿದೆ ಅನ್ನಿಸುತ್ತಿದೆ. ಯಾಕೆಂದರೆ, ಗಾಝಾ ಪಟ್ಟಿಯಲ್ಲಿ ಹಮಾಸ್ ನಿಯಂತ್ರಣದಲ್ಲಿರುವ ಪ್ರದೇಶ ಕೇವಲ ಶೇ.65ರಷ್ಟು ಭಾಗ ಮಾತ್ರ ಮತ್ತು ಇಸ್ರೇಲಿ ಸೇನೆಯು ಆವೃತವಾಗಿರುವ ಮೂರನೇ ನಾಲ್ಕು ಭಾಗದಷ್ಟು ಪ್ರದೇಶದ ಮೇಲೆ ಹಿಡಿತ ಸಾಧಿಸುವುದಕ್ಕೆ ಹತ್ತಿರದಲ್ಲಿದೆ ಎಂದು ಕೇವಲ ಒಂದು ವಾರದ ಹಿಂದೆ ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ಹೇಳಿತ್ತು.
ಅದಕ್ಕೆ ಸಾಕ್ಷಿ ಎಂಬಂತೆ ಹಮಾಸ್ ಆಗೀಗ ಇಸ್ರೇಲಿ ಪಡೆಗಳ ಮೇಲೆ ದಾಳಿ ಮಾಡುತ್ತಿದೆ ಮತ್ತು ಸೈನಿಕರ ಹತ್ಯೆ ಮಾಡುತ್ತಿದೆ. ಹಮಾಸ್ ಇನ್ನೂ ಜೀವಂತವಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಲೆಕ್ಕಾಚಾರ ತಪ್ಪಿತ್ತು, ವಿನಾಶ ಕಾದಿತ್ತು
ಎಲ್.ಟಿ.ಟಿ.ಇ ವಿಚಾರದಲ್ಲಿಯೂ ಇದು ನಿಜವಾಗಿತ್ತು. 2009ರ ಮೇ 19ರಂದು ಸೇನೆ ದಾಳಿ ಮಾಡಿ ಪ್ರಭಾಕರನ್ ಮತ್ತು ಆತನ ಕೊನೆಯ ಹೋರಾಟಗಾರರ ದಂಡನ್ನು ಬಗ್ಗುಬಡಿಯುವ ತನಕವೂ ಹೋರಾಟ ಚಾಲ್ತಿಯಲ್ಲಿತ್ತು. ಆ ಹೊತ್ತಿಗೆ ಅದರ ಸಾಮರ್ಥ್ಯ ಒಂದು ಫುಟ್ಬಾಲ್ ಮೈದಾನದಷ್ಟು ಗಾತ್ರಕ್ಕೆ ಕುಗ್ಗಿತ್ತು.
ಮತ್ತು ಆ ಹೊತ್ತಿಗೆ ಎಲ್.ಟಿ.ಟಿ.ಇ ಎಲ್ಲ ಅಂತಾರಾಷ್ಟ್ರೀಯ ಸಹಾನುಭೂತಿಯನ್ನು ಕಳೆದುಕೊಂಡಿತ್ತು. ಹೌದು, ಪ್ಯಾಲೆಸ್ತೀನ್ ಗುಂಪಿಗೂ ಇದೇ ಗತಿ ಕಾದಿರುವಂತಿದೆ ಎಂದು ಹಮಾಸ್ ಕಮಾಂಡರ್ ಒಪ್ಪಿಕೊಳ್ಳುತ್ತಾರೆ. “ಈ ಹೋರಾಟದಲ್ಲಿ ಇಸ್ರೇಲ್ ಕೈಮೇಲಾಗಿದೆ. ಜಗತ್ತು ಮೌನವಹಿಸಿದೆ. ಅರಬ್ ಆಡಳಿತವೂ ತುಟಿಬಿಚ್ಚುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
ಹಮಾಸ್ ನಂತೆಯೇ ಎಲ್.ಟಿ,ಟಿ.ಇ ಕೂಡ ಒಂದು ಸಂದರ್ಭದಲ್ಲಿ ತಾನು ಅಜೇಯ ಎಂದು ನಂಬಿತ್ತು. ತಮಿಳು ಹುಲಿಗಳಲ್ಲಿ ಸಾಕಷ್ಟು ಮಂದಿ ಕದನ ಕಲಿಗಳಿದ್ದರು. ಅವರಲ್ಲಿ ಅನುಭವಿಗಳೂ-ಅನನುಭವಿಗಳೂ ಇದ್ದರು. ಎರಡೂ ಗುಂಪುಗಳಲ್ಲಿ ಆತ್ಮಾಹುತಿ ದಳಗಳಿದ್ದವು.
ಹಮಾಸ್ ಗಾಝಾ ಪಟ್ಟಿಯ ಮೇಲೆ ನಿಯಂತ್ರಣ ಸಾಧಿಸಿತ್ತು. ಎಲ್.ಟಿ.ಟಿ.ಇ. ಶ್ರೀಲಂಕಾದ ಉತ್ತರ ಮತ್ತು ಪೂರ್ವ ಭಾಗದ ಎಲ್ಲ ಮೇಲೆ ಪ್ರಾಬಲ್ಯ ಹೊಂದಿತ್ತು. ಎರಡೂ ಕಡೆಗಳಲ್ಲಿ ಕರಾವಳಿ ಭಾಗವಿತ್ತು. ಎಲ್.ಟಿ.ಟಿ.ಇ. ನೌಕಾ ವಿಭಾಗ ಹೆಚ್ಚು ಘಾತಕವಾಗಿತ್ತು. ಎರಡೂ ಸಂಘಟನೆಗಳು ಶಸ್ತ್ರಸಜ್ಜಿತವಾಗಿದ್ದವು. ಹಮಾಸ್ ಪಡೆಗೆ ಇರಾನ್ ಔದಾರ್ಯದ ಹಸ್ತ ಚಾಚಿತ್ತು. ದೀರ್ಘಕಾಲದಿಂದ ಜಾಗತಿಕ ಕಳ್ಳಸಾಗಾಣಿಕೆ ಜಾಲವನ್ನು ಹೊಂದಿದ್ದ ಎಲ್.ಟಿ.ಟಿ.ಇ. ತನ್ನದೇ ಆದ ಶಸ್ತ್ರಾಸ್ತ್ರಗಳನ್ನು ಪಡೆದಿತ್ತು.
ಶತ್ರುವಿನೊಂದಿಗೆ ಮಾತುಕತೆ ಅಸಾಧ್ಯ
ಯಾಹ್ಯಾ ಸಿನ್ವಾರ್ ಇಸ್ರೇಲ್ ನ್ನು ನಾಶಮಾಡುವ ಕನಸು ಕಾಣುತ್ತಿದ್ದ. ವೇಲುಪಿಳ್ಳೆ ಪ್ರಭಾಕರನ್ ಶ್ರೀಲಂಕಾ ಈಗಾಗಲೇ ಕುಸಿಯುತ್ತಿದೆ ಎಂದೇ ಮನಗಂಡಿದ್ದ. ಇಬ್ಬರೂ ನಾಯಕರು ಮಾತುಕತೆಯ ಮೂಲಕ ಇತ್ಯರ್ಥಪಡಿಸುವುದನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದರು. ಶತ್ರುವಿನೊಂದಿಗೆ ಮಾತುಕತೆ ನಡೆಸುವುದರ ಮೇಲೆ ನಂಬಿಕೆ ಇಟ್ಟವರು ದ್ರೋಹಿಗಳು ಎಂಬುದು ಅವರಿಬ್ಬರ ಅಚಲ ನಂಬಿಕೆಯಾಗಿತ್ತು.
2006ರಲ್ಲಿ ನಾಲ್ಕನೇ ಈಳಂ ಯುದ್ಧ ಶುರುವಾದಾಗ ಶ್ರೀಲಂಕಾದಲ್ಲಿ ಸದ್ದಿಲ್ಲದೇ ಆರಂಭವಾದ ಮಿಲಿಟರಿ ಅಸಮತೋಲನವನ್ನು ಅರ್ಥಮಾಡಿಕೊಳ್ಳುವಲ್ಲಿ ಎಲ್.ಟಿ.ಟಿ.ಇ. ವಿಫಲವಾಗಿತ್ತು. ಅದೇ ರೀತಿ ತನ್ನ 2023ರ ಅಕ್ಟೋಬರ್ ತಿಂಗಳ ದಾಳಿ ಮತ್ತು ಕ್ರೂರತೆಯಿಂದ ಇಸ್ರೇಲ್ ದುರ್ಬಲವಾಗುತ್ತದೆ ಎಂದು ಹಮಾಸ್ ತಪ್ಪು ಲೆಕ್ಕಾಚಾರ ಹಾಕಿತ್ತು.
ಇಸ್ರೇಲ್ ತೀವ್ರತರದಲ್ಲಿ ನಲುಗಿ ಹೋಗಿತ್ತು ಎಂಬುದು ನಿಜ. ಆದರೆ ಅದು ಪ್ರತೀಕಾರ ತೀರಿಸಿಕೊಳ್ಳಲು ಶುರುಮಾಡಿದಾಗ ಹೋರಾಟಗಾರರು ಮತ್ತು ಮುಗ್ಧ ನಾಗರಿಕರ ನಡುವಿನ ವ್ಯತ್ಯಾಸವನ್ನು ಗುರುತಿಸಲಿಲ್ಲ. ಅಂದು ಶ್ರೀಲಂಕಾ ಕೂಡ ಇದೇ ನೀತಿಯನ್ನು ಅನುಸರಿಸಿತ್ತು.
ಈ ಎರಡೂ ಪ್ರಕರಣಗಳಲ್ಲಿ ಸಾವಿರಾರು ಮಂದಿ ಮುಗ್ಧ ನಾಗರಿಕರು ತಾವು ಬಯಸದೇ ಇದ್ದ ಯುದ್ಧದಿಂದಾಗಿ ಬಹಳ ದೊಡ್ಡ ಬೆಲೆ ತೆರುವಂತಾಯಿತು. ಪ್ಯಾಲೆಸ್ತೀನಿ ನಾಗರಿಕರ ಸಾವು-ನೋವು, ನರಮೇಧದ ವರೆಗಿನ ಕೃತ್ಯಗಳಿಗೆ ಇಸ್ರೇಲ್ ನ್ನು ದೂಷಿಸುವುದು ಸುಲಭ. ಆದರೆ ಈ ಹೇಯ ಕೃತ್ಯ ಮತ್ತು ವಿನಾಶಕ್ಕೆ ಹಮಾಸ ಕೂಡ ಅಷ್ಟೇ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಶ್ರೀಲಂಕಾ ಸೇನೆ ಮತ್ತು ಎಲ್.ಟಿ.ಟಿ.ಇ ವಿಷಯದಲ್ಲಿಯೂ ಇದು ನಿಜ.
ರೋಸಿಹೋದ ಜನ
ಮಾಧ್ಯಮದ ವರದಿಗಳನ್ನು ನಂಬುವುದೇ ಆದರೆ ಹಮಾಸ್ ಮಾಡುತ್ತಿರುವ ಈ ದುಸ್ಸಾಹಸದಿಂದ ಅಪಾರ ಸಂಖ್ಯೆಯ ಜನ ಬೇಸತ್ತು ಹೋಗಿದ್ದಾರೆ. ಹಾಗಿದ್ದೂ ಇಸ್ರೇಲ್ ನಲ್ಲಿ ಈಗಲೂ ಪಟ್ಟು ಬಿಡದೇ ಹೋರಾಟ ಮಾಡುತ್ತಿರುವ ಹಮಾಸ್ ಪಡೆಗೆ ಸೆಲ್ಯೂಟ್ ಹೊಡೆಯುವ ಪ್ಯಾಲೆಸ್ತೀನಿಯರ ಸಂಖ್ಯೆಯೇನೂ ಕಡಿಮೆಯಿಲ್ಲ.
ಗಾಝಾದಲ್ಲಿ ಇಸ್ರೇಲಿ ಬೆಂಬಲವನ್ನು ಪಡೆದ ಶಸ್ತ್ರಸಜ್ಜಿತ ಪಡೆಗಳು ಹಮಾಸ್ ಬಂದೂಕುದಾರಿಗಳನ್ನು ಸದೆಬಡಿಯುವ ಕೆಲಸವನ್ನು ಶುರುಹಚ್ಚಿಕೊಂಡಿವೆ. ಹಮಾಸ್ ಪಡೆಗೆ ಪರಿಸ್ಥಿತಿ ನಿಜಕ್ಕೂ ಗಂಭೀರವಾಗಿದೆ.
ಹಿಂದಿರುಗಿ ನೋಡಿದರೆ, ಪ್ಯಾಲೆಸ್ತೇನಿಯ ಜಾತ್ಯತೀತ ನಾಯಕ ಯಾಸರ್ ಅರಾಫತ್ ಅವರ ಇಸ್ರೇಲ್ ಜೊತೆಗಿನ ಮಾತುಕತೆ ನಡೆಸುವ ನಿಲುವು ಸೂಕ್ತವಾದುದೇ ಆಗಿತ್ತು. ಆ ಮೂಲಕ ಅವರು ಎರಡು ರಾಷ್ಟ್ರಗಳ ನಡುವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಯಸಿದ್ದರು. ಅವರು ಅನುಸರಿಸಿದ ವಿಧಾನಗಳಲ್ಲಿ ಯಾವುದೇ ದೋಷಗಳಿದ್ದರೂ ಕೂಡ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜಗತ್ತಿನ ವಿದ್ಯಮಾನಗಳನ್ನು ಅರ್ಥಮಾಡಿಕೊಂಡಿದ್ದರು.
ಅಂದು ಅರಾಫತ್ ಅವರನ್ನು ‘ಶತ್ರುವಿನ ಮಿತ್ರ’ ಎಂದು ಕರೆದು ರಾಜಕೀಯವಾಗಿ ಅವರನ್ನು ದುರ್ಬಲಗೊಳಿಸಿದ ಹಮಾಸ್ ಮತ್ತು ಇತರರು ಇಂದು ಯುದ್ಧೋತ್ಸಾಹಿ ಡೋನಾಲ್ಡ್ ಟ್ರಂಪ್ ಮತ್ತು ನಿರ್ದಯಿ ನೆತನ್ಯಾಹು ಅವರನ್ನು ಎದುರಿಸಬೇಕಾಗಿದೆ. ಪ್ಯಾಲೆಸ್ತೇನಿನ ಇಡೀ ಗಾಝಾ ಪಟ್ಟಿಯನ್ನು ತೆರವು ಮಾಡುವ ಮೂಲಕ ಯುದ್ಧವನ್ನು ಕೊನೆಗೊಳಿಸುವ ಹೊತ್ತಿಗೆ ಯಾರು ಬದುಕಿ ಉಳಿಯುತ್ತಾರೆ ಎಂಬುದರ ಬಗ್ಗೆ ತಿಲಮಾತ್ರದ ಕಾಳಜಿ ಇಲ್ಲ.
---
ಕ್ಯಾಪ್: ಗಾಝಾ ಪಟ್ಟಿಯಲ್ಲಿ ಹಮಾಸ್ ಹಿಡಿದಿಟ್ಟುಕೊಂಡಿರುವ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಯುದ್ಧವನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರದ ವಿರುದ್ಧ ಟೆಲ್ ಅವಿವ್ ನಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ಜನರು.