ಆಕಾಶ್ ಆನಂದ್ ಬಿಎಸ್‌ಪಿ ಪುನರುಜ್ಜೀವಗೊಳಿಸುವರೇ?

ಬಿಎಸ್ಪಿಯ ರಾಜಕೀಯ ಷೇರುಗಳು ತಳ ಮುಟ್ಟಿರುವ ಹೊತ್ತಿನಲ್ಲಿ ಆಕಾಶ್ ಆನಂದ್ ಯಾವ ರೀತಿ ಮೌಲ್ಯವರ್ಧನೆ ಮಾಡುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Update: 2024-02-05 06:30 GMT

ಆಕಾಶ್ ಆನಂದ್ ಬಿಎಸ್‌ಪಿ ಪುನರುಜ್ಜೀವಗೊಳಿಸುವರೇ?

-ಶರತ್ ಪ್ರಧಾನ್

ಬಿಎಸ್ಪಿ ನಾಯಕಿ ಮಾಯಾವತಿ̧ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ʻಉತ್ತರಾಧಿಕಾರಿʼ ಎಂದು ಘೋಷಿಸುವ ಮೂಲಕ ತಾವು ಬೇರೆ ರಾಜಕೀಯ ಪಕ್ಷಕ್ಕಿಂತ ಭಿನ್ನವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. (ಫೈಲ್ ಫೋಟೋ)

ಪಕ್ಷಗಳು ವಂಶಪಾರಂಪರ್ಯ ಪದ್ಧತಿಯನ್ನು ಅನುಸರಿಸುತ್ತಿವೆ ಎಂದು ದೂರುತ್ತಿದ್ದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಾಯಕಿ ಮಾಯಾವತಿ, ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಸ್ವಂತ ಕುಟುಂಬದಿಂದಲೇ ಆಯ್ಕೆ ಮಾಡಿದ್ದಾರೆ.

ಮಾಯಾವತಿ ಅವರು ಸೋದರಳಿಯ ಆಕಾಶ್ ಆನಂದ್ ಅವರನ್ನು ʻಉತ್ತರಾಧಿಕಾರಿʼ ಎಂದು ಹೆಸರಿಸುವ ಮೂಲಕ ತಾವು ಗಾಂಧಿ, ಯಾದವ್‌, ಕರುಣಾನಿಧಿ, ಪವಾರ್‌, ಬಾದಲ್‌, ಚೌತಾಲ ಕುಟುಂಬ ಅಥವಾ ಇನ್ನಿತರ ಪ್ರಾದೇಶಿಕ ಪಾಳೆಯಗಾರರಿಗಿಂತ ಭಿನ್ನವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಆಕಾಶ್ ಆನಂದ್ ಕೂಡ ಈಗ 'ಬುವಾ ' (ತಂದೆಯ ಚಿಕ್ಕಮ್ಮ) ಯಿಂದ ಕಾನ್ಶಿರಾಮ್‌ ಅವರು ಸ್ಥಾಪಿಸಿ, ಕ್ಷೀಣವಾದ ಪಕ್ಷದ ವಾರಸುದಾರ ರಾಗಿದ್ದಾರೆ. ಮಾಯಾವತಿ ಅವರ ರಾಜಕೀಯ ಚಂಚಲತೆ ಮತ್ತು ದುಸ್ಸಾಹಸಗಳಿಂದ ಹಾನಿಗೊಳಗಾಯಿತು. ಅವರು ದಲಿತರ ನಿರ್ವಿವಾದ ನಾಯಕರಾಗಬಹುದಾಗಿತ್ತು.

ಅಖಿಲೇಶ್ ಯಾದವ್, ಎಂ.ಕೆ. ಸ್ಟಾಲಿನ್ ಅಥವಾ ರಾಹುಲ್ ಗಾಂಧಿಯವರಿಗಿಂತ ಮಾಯಾವತಿ ಪ್ರಕರಣ ಹೇಗೆ ಭಿನ್ನವೆಂದರೆ, ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಮ್ ಅವರು ಮಾಯಾವತಿ ಅವರ ಕುಟುಂಬದೊಂದಿಗೆ ಜೈವಿಕ ಸಂಪರ್ಕ ಹೊಂದಿರಲಿಲ್ಲ. ಕಾನ್ಶಿರಾಮ್ ವಂಚಿತ ಮತ್ತು ದೀನದಲಿತ ಸಮುದಾಯಗಳಿಗೆ ರಾಜಕೀಯ ವೇದಿಕೆ ನಿರ್ಮಿಸಲು ಬೆವರು ಹರಿಸಿದ್ದರು. ಅವರು ಮಾಯಾವತಿಯನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡಿದ್ದು ಅರ್ಹತೆಯ ಮೇಲೆ.

ಮಾಯಾವತಿ ಅವರ ಉದಯ

ಕಾನ್ಶಿ ರಾಮ್ ಅವರು 80 ರ ದಶಕದಲ್ಲಿ ದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಹಿಂದುಳಿದವರ ಸಮಾವೇಶದಲ್ಲಿ ಮಾಡಿದ ಭಾಷಣವನ್ನು ಕೇಳಿದ ನಂತರ ಮಾಯಾವತಿಯನ್ನು ಆಯ್ಕೆ ಮಾಡಿದರು. ಕಾನ್ಶಿ ರಾಮ್ ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟ (ಬಾಮ್ಸೆ‌ಫ್)‌ ವನ್ನು ದಲಿತ ಜಾತಿಗಳಿಗೆ ಸೇರಿದ ಸರ್ಕಾರಿ ಉದ್ಯೋಗಿಗಳನ್ನು ಸಂಘಟಿಸಲು ಸ್ಥಾಪಿಸಿದರು ಮತ್ತು ಡಿಎಸ್‌-4 ಅಥವಾ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಜೊತೆಗೆ ಇದು ಬಿಎಸ್ಪಿ ಎಂದು ಕರೆಯಲ್ಪಡುವ ರಾಜಕೀಯ ಸಂಘಟನೆಯಾಯಿತು.

ಮಹಾತ್ಮ ಗಾಂಧಿಯವರು ಅಸ್ಪೃಶ್ಯರನ್ನು ʻಹರಿಜನರುʼ ಎಂದು ಉಲ್ಲೇಖಿಸಿದ್ದನ್ನು ಮಾಯಾವತಿ ಪ್ರಶ್ನಿಸಿದ ಕಾರಣ ಎಲ್ಲರ ಗಮನ ಸೆಳೆದಿದ್ದರು. ʻಅಗರ್ ಹಮ್ ಭಗವಾನ್ ಕೆ ಬಚ್ಚೇ ಹೈ ತೋ ಕ್ಯಾ ಔರ್ ಲೋಗ್ ಡೇಯಿಂ ಕೆ ಬಚ್ಚೇ ಹೈಂ? (ನಾವು ದೇವರ ಮಕ್ಕಳಾಗಿದ್ದರೆ, ಉಳಿದವರು ದೆವ್ವದ ಮಕ್ಕಳೇ) ಎಂದು ಕಾನ್ಸ್ಟಿಟ್ಯೂಶನ್ ಕ್ಲಬ್ ಸಭೆಯಲ್ಲಿ ವಾದಿಸಿದರು. ಗಾಂಧೀಜಿ ದಲಿತ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದರು.

ಗಾಂಧಿ ಅವರ ಟೀಕೆ ಮಾಯಾವತಿಯವರಿಗೆ ಒಂದು ವಿಭಿನ್ನ ಗುರುತು ನೀಡಿತು. ಸಾಂಪ್ರದಾಯಿಕವಲ್ಲದ, ಗಟ್ಟಿ ಧ್ವನಿಯ ದಲಿತ ರಾಜಕಾರಣಿ ಎಂದು ಸ್ಥಾಪಿಸಿಕೊಳ್ಳಲು ನೆರವಾಯಿತು. 22 ವರ್ಷಗಳ ಹಿಂದೆ, 2001 ರಲ್ಲಿ, ಕಾನ್ಶಿರಾಮ್ ಅವರು ಮಾಯಾವತಿ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. ಮಾಯಾವತಿ ಈಗ ತನ್ನ ಸೋದರಳಿಯನನ್ನು ರಾಜಕೀಯ ಉತ್ತರಾಧಿಕಾರಿಯಾಗಿ ಮತ್ತು ಬಿಎಸ್‌ಪಿಯ ಭವಿಷ್ಯದ ನಾಯಕನನ್ನಾಗಿ ಸ್ಥಾಪಿಸಿದ್ದಾರೆ. ಮಾಯಾವತಿ ಅವರು ಕಾನ್ಶಿ ರಾಮ್ ಅವರ ಇಡೀ ಕುಟುಂಬವನ್ನು ಅಧಿಕಾರದಿಂದ ದೂರವಿಡಲು ಆಕಾಶಭೂಮಿ ಒಂದು ಮಾಡಿದ್ದರು.

ಆಕಾಶ್ ಆನಂದ್

ಮಾಯಾವತಿ ಅವರು ಪಕ್ಷದ ಉಪಾಧ್ಯಕ್ಷರಾಗಿ ಹಾಗೂ ದೇಶದ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯದ ಮುಖ್ಯಮಂತ್ರಿ ಯಾಗಿ ಎರಡು ಅಲ್ಪಾವಧಿ ಆಡಳಿತ ನಡೆಸಿದವರು. ಆಕಾಶ್ ಆನಂದ್ ಇಂಥ ಯಾವುದೇ ಅಧಿಕಾರ ನಿರ್ವಹಿಸಿಲ್ಲ. ಅವರು 2017 ರಲ್ಲಿ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು ಮತ್ತು 2022 ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದರು. ಬಿಎಸ್ಪಿ ಅತ್ರಾಯಂತ ಕಳಪೆ ಸಾಧನೆ ಮಾಡಿ, 403 ರಲ್ಲಿ ಕೇವಲ ಒಂದು ಸ್ಥಾನ ಗೆದ್ದುಕೊಂಡಿತು.

ಅವರ ತಂದೆ ಆನಂದ್ ಕುಮಾರ್, ಮಾಯಾವತಿಯವರ ಕಿರಿಯ ಸಹೋದರ. ಮಾಯಾವತಿ ಮುಖ್ಯಮಂತ್ರಿಯಾಗಿದ್ದಾಗ ನ್ಯೂ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ನೋಯ್ಡಾ) ಕಚೇರಿಯಲ್ಲಿ ಕೆಳ ದರ್ಜೆಯ ಉದ್ಯೋಗಿಯಾಗಿ ವೃತ್ತಿಜೀವನ ಪ್ರಾರಂಭಿಸಿದರು. ಜಾರಿ ಪ್ರಾಧಿಕಾರಗಳು ಅವರ ಭಾರಿ ಆಸ್ತಿಯ ಮೂಲವನ್ನು ಶೋಧಿಸಿದಾಗ, ಅವರ ಹೆಸರು ಕೇಳಿಬಂತು; ಕೆಳ ದರ್ಜೆಯ ಉದ್ಯೋಗಿ ಹೇಗೆ ಇದ್ದಕ್ಕಿದ್ದಂತೆ ಬಿಲಿಯನೇರ್ ಉದ್ಯಮಿ ಮತ್ತು ರಿಯಲ್ ಎಸ್ಟೇಟ್ ಬಿಲ್ಡರ್-ಡೆವಲಪರ್ ಆದರು ಎಂದು.

ಕರುಣಾಜನಕ ಪ್ರದರ್ಶನ

ಇತ್ತೀಚೆಗೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಚತ್ತೀಸ್‌ಗಢದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿಯ ಸಾಧನೆ ನೀರಸವಾಗಿದೆ. ರಾಜಸ್ಥಾನದ 200 ಸ್ಥಾನಗಳ ಪೈಕಿ ಎರಡರಲ್ಲಿ ಗೆಲುವು ಹೊರತುಪಡಿಸಿ, ಮಧ್ಯಪ್ರದೇಶ ಅಥವಾ ಚತ್ತೀಸ್‌ಗಢದಲ್ಲಿ ಯಾವುದೇ ಗುರುತು ಮೂಡಿಸುವಲ್ಲಿ ವಿಫಲವಾಗಿದೆ. ಆದರೂ ಮಾಯಾವತಿ ಈ ರಾಜ್ಯಗಳ ಶೇ.80 ರಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು ಮತ್ತು ಪ್ರಚಾರ ಕೈಗೊಂಡಿದ್ದರು. ಅವರೊಟ್ಟಿಗೆ ಆಗಾಗ ಆಕಾಶ್ ಪಾಲ್ಗೊಂಡಿದ್ದರು.

ಮಾಯಾವತಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಹೊರತುಪಡಿಸಿ, ಬೇರೆ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಯನ್ನು ಆಕಾಶ್ ಅವರಿಗೆ ವಹಿಸಿದ್ದಾರೆ. ಮಾಯಾವತಿ ಸ್ವತಃ ವಿಫಲವಾಗಿರುವಲ್ಲಿ ಆಕಾಶ್‌ ಜಯಶಾಲಿಯಾಗುವರೇ ಎಂಬ ಪ್ರಶ್ನೆ ಮೂಡಿದೆ.

2022 ರ ಪ್ರಚಾರದ ವೇಳೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಪಕ್ಷವನ್ನು ತಂದಿರುವುದು ಆಕಾಶ್ ಅವರ ಏಕೈಕ ಸಾಧನೆ. ಮಾಯಾವತಿಯವರ ಆಸ್ತಿಯಲ್ಲಿ ಹೆಚ್ಚಳವಾಗಿದ್ದರೂ, ರಾಜಕೀಯ ಷೇರುಗಳು ಕುಸಿದಿರುವ ಸಂದರ್ಭದಲ್ಲಿ ಆಕಾಶ ಏನು ಮಾಡಬಲ್ಲರು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.


Similar News