Zika Virus | ಝೀಕಾಗೆ ಮೊದಲ ಬಲಿ: ಶಿವಮೊಗ್ಗದಲ್ಲಿ ವೃದ್ಧ ಸಾವು; ಸಾಗರದಲ್ಲಿ ಮತ್ತೊಂದು ಪ್ರಕರಣ

ರಾಜ್ಯದಲ್ಲಿ ಡೆಂಗ್ಯೂ ಉಲ್ಬಣಗೊಂಡಿರುವ ಬೆನ್ನಲೇ ಇದೀಗ ಶಿವಮೊಗ್ಗದಲ್ಲಿ ಅಪಾಯಕಾರಿ ಝೀಕಾ ವೈರಸ್‌ ಸೋಂಕಿಗೆ ವೃದ್ಧನೊಬ್ಬ ಬಲಿಯಾಗಿದ್ದು, ಜಿಲ್ಲೆಯ ಸಾಗರದ ಯುವಕನೊಬ್ಬನಲ್ಲಿ ಸೋಂಕು ದೃಢಪಟ್ಟಿದೆ!

Update: 2024-07-06 06:48 GMT
ಝೀಕಾ ವೈರಸ್
Click the Play button to listen to article

ಶಿವಮೊಗ್ಗದ ಗಾಂಧಿ ನಗರದಲ್ಲಿ ಝೀಕಾ ವೈರಸ್​ಗೆ 74 ವರ್ಷದ ವೃದ್ಧ ಬಲಿಯಾಗಿದ್ದಾರೆ. ಜೂನ್​​ 19ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ ಅವರಲ್ಲಿ ಝೀಕಾ ವೈರಸ್ ಇರುವುದು ಪತ್ತೆಯಾಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಡಿಸ್ಚಾರ್ಜ್​ ಮಾಡಲಾಗಿತ್ತು. ಗುರುವಾರ ಮನೆಗೆ ಕರೆದೊಯ್ದಿದ್ದರು. ಆದರೆ ನಿನ್ನೆ ಮನೆಯಲ್ಲಿ ವೃದ್ಧ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದ್ದು, ಉಲ್ಬಣಗೊಂಡಿರುವ ಸೋಂಕಿಗೆ ಸರಣಿ ಸಾವುಗಳು ಸಂಭವಸಿವೆ. ಅದರ ಬೆನ್ನಲೇ ಇದೀಗ ಶಿವಮೊಗ್ಗದಲ್ಲಿ ಝೀಕಾ ವೈರಸ್​ಗೆ 74 ವರ್ಷದ ವೃದ್ಧ ಬಲಿಯಾಗಿದ್ದಾರೆ.

ಝೀಕಾ ವೈರಸ್ ಗೆ ರಾಜ್ಯದಲ್ಲೇ ಮೊದಲ ಬಲಿ ಇದಾಗಿದ್ದು, ಜಿಲ್ಲೆಯ ಸಾಗರ ತಾಲೂಕಿನ ಯುವಕನೊಬ್ಬನಲ್ಲಿ ಝೀಕಾ ಸೋಂಕು ದೃಢಪಟ್ಟಿದ್ದು, ಮತ್ತೊಂದು ಪ್ರಕರಣವೂ ವರದಿಯಾಗಿದೆ.

ಏನಿದು ಝಿಕಾ ವೈರಸ್‌?

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ, ಝೀಕಾ ವೈರಸ್‌ ಪ್ರಾಥಮಿಕವಾಗಿ ಈಡಿಸ್‌ ಸೊಳ್ಳೆಗಳಿಂದ ಹರಡುತ್ತದೆ. ಈ ಸೊಳ್ಳೆ ಹಗಲಿನಲ್ಲಿ ಹೆಚ್ಚು ಜನರಿಗೆ ಕಚ್ಚುತ್ತದೆ. ಇದರ ರೋಗಲಕ್ಷಣಗಳು ಸೌಮ್ಯವಾಗಿರುತ್ತದೆ. ಸಾಮಾನ್ಯವಾಗಿ ದದ್ದು, ಜ್ವರ, ಮದ್ರಾಸ್‌ ಐ ಹಾಗೂ ತಲೆನೋವಿನಂತಹ ಲಕ್ಷಣಗಳನ್ನು ಹೊಂದಿರುತ್ತದೆ. 2 ರಿಂದ 7 ದಿನಗಳವರೆಗೆ ಇದರ ರೋಗಲಕ್ಷಣಗಳು ಇರುತ್ತವೆ. ಇದು ಸೋಂಕಿತ ತಾಯಿಯಿಂದ ಮಗುವಿಗೆ ಅಥವಾ ಸೋಂಕಿತರ ರಕ್ತ ಪಡೆಯುವುದರಿಂದಲೂ ಹರಡಬಹುದು. ಜ್ವರ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯಬೇಕು. ಸೂಕ್ತ ಸಮಯದಲ್ಲಿ ಪತ್ತೆ ಮತ್ತು ನಿಯಂತ್ರಣದ ಮೂಲಕ ಸೋಂಕು ಹರಡುವುದನ್ನು ತಪ್ಪಿಸಬಹುದು.

ಝೀಕಾ ವೈರಸ್ ಗಂಭೀರ ಸ್ವರೂಪ ಪಡೆದಿದ್ದು ಯಾವಾಗ?

ಝೀಕಾ ವೈರಸ್‌ ಹರಡುವ ಸೊಳ್ಳೆಗಳು ವಿಶ್ವದ ಅನೇಕ ಭಾಗಗಳಲ್ಲಿ ಇವೆ. ಆದರೆ ಇವುಗಳು ಅತ್ಯಂತ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಅಮೆರಿಕ, ಕೆರಿಬಿಯನ್, ಆಫ್ರಿಕಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ. ತುಂಬ ಹಿಂದಿನಿಂದಲೂ ಈ ವೈರಸ್ ಇದ್ದರೂ, ಮೊದಲು ಗಂಭೀರ ಸ್ವರೂಪ ಪಡೆದುಕೊಂಡಿದ್ದು 2014ರಿಂದ 2017ರವರೆಗೆ ದಕ್ಷಿಣ ಅಮೆರಿಕದಲ್ಲಿ ಈ ಸಾಂಕ್ರಾಂಮಿಕ ಹರಡಿದಾಗ. ಬ್ರಿಜಿಲ್‌ ಫುಟ್ಬಾಲ್‌ ವಿಶ್ವಕಪ್‌ ವೇಳೆ ಈ ಸೋಂಕು ಹರಡಿದ್ದು, ದೊಡ್ಡ ಮಟ್ಟದ ಆತಂಕಕ್ಕೆ ಕಾರಣವಾಗಿತ್ತು. ಆಗಿನಿಂದಲೂ ವಿಶ್ವದ ಅನೇಕ ಭಾಗಗಳಲ್ಲಿ ಝಿಕಾ ವೈರಸ್ ವ್ಯಾಪಿಸುತ್ತಿದೆ.

ಕಳೆದ ವರ್ಷ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಈ ವೈರಸ್‌ ಬಹಳಷ್ಟು ಭೀತಿಗೆ ಕಾರಣವಾಗಿತ್ತು. ಆದರೆ, ಝೀಕಾ ವೈರಸ್‌ಗೆ ಈವರೆಗೆ ಜೀವ ಬಲಿಯಾಗಿರಲಿಲ್ಲ.

Tags:    

Similar News