ಬೆಂಗಳೂರಿನಲ್ಲಿ ಈ ಬಾರಿಯೂ ಹೆಚ್ಚಾಗಲಿಲ್ಲ ಮತ ಪ್ರಮಾಣ
ಬೆಂಗಳೂರಿನಲ್ಲಿ ಎಂದಿನಂತೆ ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ.;
ಬೆಂಗಳೂರಿನಲ್ಲಿ ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಕರ್ನಾಟಕ ಚುನಾವಣಾ ಆಯೋಗವು 5.30ರ ವೇಳೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಬೆಂಗಳೂರು ಉತ್ತರದಲ್ಲಿ ಶೇ. 50.04, ಬೆಂಗಳೂರು ಕೇಂದ್ರದಲ್ಲಿ ಶೇ. 48.61 ಹಾಗೂ ಬೆಂಗಳೂರು ದಕ್ಷಿಣದಲ್ಲಿ ಶೇ. 49.37 ಪ್ರಮಾಣದ ಮತದಾನ ಆಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಶೇ.53.47, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೇ.54.66 ಮತ್ತು ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಶೇ.52.28ರಷ್ಟು ಮತದಾನ ಆಗಿರುವುದು ವರದಿಯಾಗಿತ್ತು. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲೂ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದರು.
ಪ್ರಚಾರ, ಜಾಗೃತಿ ಮಾಡಿದರೂ ಮತದಾನ ಪ್ರಮಾಣ ಹೆಚ್ಚಾಗಲಿಲ್ಲ
ಬೆಂಗಳೂರಿನಲ್ಲಿ ಕರ್ನಾಟಕ ಚುನಾವಣಾ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಮತದಾನದ ಜಾಗೃತಿ ನಡೆಸಿದರೂ, ಮತದಾನ ಪ್ರಮಾಣ ಹೆಚ್ಚಳವಾಗಿಲ್ಲ. ಬೆಂಗಳೂರಿನಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡುವುದಕ್ಕೆ ನಗರದ ಪ್ರಮುಖ ಹೋಟೆಲ್‌ಗಳು ವೋಟ್ ಮಾಡಿ – ಊಟ ಮಾಡಿ ಎನ್ನುವಂತ ವಿನೂತನ ಅಭಿಯಾನಗಳನ್ನು ಹಮ್ಮಿಕೊಂಡಿದ್ದವು. ಬಿಬಿಎಂಪಿ ಸಹ ಜಾಗೃತಿ ಜಾಥಾ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಮತದಾನ ಆಗಿಲ್ಲ.
ವಾರಾಂತ್ಯವೂ ಒಂದು ಕಾರಣ
ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಇಳಿಕೆಯಾಗುವುದಕ್ಕೆ ವಾರಾಂತ್ಯವೂ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಏಪ್ರಿಲ್ 26ರಂದು (ಶುಕ್ರವಾರ) ಬೆಂಗಳೂರಿನಲ್ಲಿ ಮತದಾನ ನಡೆದಿದೆ. ಐಟಿ ಉದ್ಯೋಗಿಗಳು ಹಾಗೂ ವಿವಿಧ ಕಂಪನಿಗಳಲ್ಲಿ ಉದ್ಯೋಗ ಮಾಡುವವರು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಶನಿವಾರ ಹಾಗೂ ಭಾನುವಾರ ವಾರಾಂತ್ಯ ಹಾಗೂ ಶುಕ್ರವಾರದ ರಜೆಯೊಂದಿಗೆ ಪ್ರವಾಸದ ಯೋಜನೆ ರೂಪಿಸಿಕೊಂಡಿರುವ ಸಾಧ್ಯತೆ ಇದೆ.