UPSC Result 2023: ಕರ್ನಾಟಕದಿಂದ 28 ಅಭ್ಯರ್ಥಿಗಳು ತೇರ್ಗಡೆ
ಕನ್ನಡದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಶಾಂತಪ್ಪ ಕುರುಬರ್.;
ಕೇಂದ್ರ ಲೋಕಸೇವಾ ಆಯೋಗವು(ಯುಪಿಎಸ್‌ಸಿ) ಮಂಗಳವಾರ(ಏ.17) ರಂದು ನಾಗರಿಕ ಸೇವೆಗಳ ಅಂತಿಮ ಪರೀಕ್ಷೆ- 2023ರ ಫಲಿತಾಂಶ ಪ್ರಕಟಿಸಿದ್ದು, ಒಟ್ಟು 1,016 ಅಭ್ಯರ್ಥಿಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಆ ಪೈಕಿ ಕರ್ನಾಟಕದ 28 ಅಭ್ಯರ್ಥಿಗಳು ಯಶಸ್ಸು ಸಾಧಿಸಿದ್ದಾರೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಿಎಸ್‌ಸಿ ಅಗ್ರಿಕಲ್ಚರ್ ವಿದ್ಯಾರ್ಥಿನಿ ದಾವಣಗೆರೆಯ ಸೌಭಾಗ್ಯ ಬೀಳಗಿಮಠ 101ನೇ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಕೃಷಿ ವಿಜ್ಞಾನ ಪದವೀಧರರಾದ ದಾವಣಗೆರೆಯ ಸೌಭಾಗ್ಯ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಯಾವುದೇ ಕೋಚಿಂಗ್‌ಗಳಿಗೆ ಹೋಗದೆ ತನ್ನ ಎರಡನೇ ಪ್ರಯತ್ನದಲ್ಲಿ ನಾಗರಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಆಕೆಯ ತಂದೆ ದಾವಣಗೆರೆಯಲ್ಲಿ ನರ್ಸರಿ ನಡೆಸುತ್ತಿದ್ದರೆ, ತಾಯಿ ಗೃಹಿಣಿಯಾಗಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ತಿಮ್ಮನಾಯಕನಹಳ್ಳಿಯ ನಾಗೇಂದ್ರಬಾಬು ಕುಮಾರ್ 160ನೇ ರ್ಯಾಂಕ್ ಗಳಿಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಜಾಲವಾದದವರಾದ ವಿಜೇತಾ ಬಿ ಹೊಸಮನಿ 200ನೇ ರ‍್ಯಾಂಕ್ ಪಡೆದಿದ್ದಾರೆ.
ರಾಜ್ಯದ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರ ಪುತ್ರಿ ಸಂಸ್ಕೃತಿ ಸಿಂಗ್ 366 ರ‍್ಯಾಂಕ್ ಪಡೆದುಕೊಂಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಸೆಕ್ಷನ್ ಆಫೀಸರ್ ಆಗಿರುವ ಪ್ರಮೀಳಾ ಅವರ ಪುತ್ರಿ ಯಶಸ್ವಿನಿ ಆರ್. 379 ರ‍್ಯಾಂಕ್ ಪಡೆದುಕೊಂಡಿದ್ದಾರೆ. ಶಿವಮೊಗ್ಗದ ಐ ಎನ್ ಮೇಘನಾ 589 ನೇ ರ‍್ಯಾಂಕ್ ಪಡೆದಿದ್ದಾರೆ. ಕಳೆದ ವರ್ಷ 617 ನೇ ರ‍್ಯಾಂಕ್ ಪಡೆದಿದ್ದ ಅವರು, ಸದ್ಯ ಅವರು ಮಹಾರಾಷ್ಟ್ರ ಕೇಡರ್ ಐಪಿಎಸ್ ಅಧಿಕಾರಿಯಾಗಿ ತರಬೇತಿಯಲ್ಲಿದ್ದಾರೆ.
ವಿಶೇಷ ಚೇತನರಾದ ಕೆ.ಟಿ. ಮೇಘನಾ ಈಗಾಗಲೇ ಭಾರತೀಯ ಮಾಹಿತಿ ಸೇವಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ಅವರು 721 ನೇ ರ‍್ಯಾಂಕ್ ಪಡೆದಿದ್ದಾರೆ.
ಕೆ.ಟಿ ಮೇಘನಾ
ವಿಜಯಪುರ ಜಿಲ್ಲೆಯ ವಿಜೇತಾ ಬಿ. ಹೊಸಮನಿ ಅವರಿಗೆ 200ನೇ ರ‍್ಯಾಂಕ್, ಹುಬ್ಬಳ್ಳಿಯ ಕೃಪಾ ಜೈನ್‌ಗೆ 440ನೇ ರ‍್ಯಾಂಕ್, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮದ ಶಶಾಂತ್ ಎನ್.ಎಂ 459 ರ‍್ಯಾಂಕ್ ಪಡೆದಿದ್ದಾರೆ.
ಬೆಂಗಳೂರಿನ ಅಚಾರ್ಯ ಐಎಎಸ್ ಕೋಚಿಂಗ್ ಸೆಂಟರ್‌ನ ಮೂವರು ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆ ಪಾಸ್ ಆಗಿದ್ದಾರೆ. ಬಳ್ಳಾರಿಯ ಶಾಂತಪ್ಪ ಕುರುಬರ್ (644 ರ‍್ಯಾಂಕ್), ಮೈಸೂರಿನ ಭಾನು ಪ್ರಕಾಶ್ (600 ರ‍್ಯಾಂಕ್), ಶಿವಮೊಗ್ಗ ಭರತ್ ಸಿ ಯಾರಮ್ (667 ರ‍್ಯಾಂಕ್) ಉತ್ತೀರ್ಣರಾದವರು.
ಕನ್ನಡದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಳ್ಳಾರಿಯ ಶಾಂತಪ್ಪ ಕುರುಬರ್ ಬಳ್ಳಾರಿಯಿಂದ ಬೆಂಗಳೂರಿಗೆ ವಲಸೆ ಬಂದು ವಿದ್ಯಾಭ್ಯಾಸ ಮಾಡಿದ್ದಾರೆ. ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಇವರು ಪಿಯುಸಿಯಲ್ಲಿ ಫೇಲ್ ಆಗಿದ್ದರೂ ಛಲ ಬಿಡದೇ ನಿರಂತರ ಅಧ್ಯಯನದೊಂದಿಗೆ ಪಿಎಸ್‌ಐ ಆಗಿ ನೇಮಕವಾಗಿದ್ದರು. ಇದೀಗ ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್ ಪಡೆದಿದ್ದಾರೆ.
ಶಾಂತಪ್ಪ ಕುರುಬರ್
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್‌ಸಿ) 2023 ರ ನಾಗರಿಕ ಸೇವಾ ಪರೀಕ್ಷೆ (CSE) ಅಂತಿಮ ಫಲಿತಾಂಶಗಳನ್ನು ಮಂಗಳವಾರ ( ಏಪ್ರಿಲ್ 16) ಪ್ರಕಟಿಸಿದೆ. ಆದಿತ್ಯ ಶ್ರೀವಾಸ್ತವ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ್‍ಯಾಂಕ್ ಗಳಿಸಿದ್ದಾರೆ, ಅನಿಮೇಶ್ ಪ್ರಧಾನ್ ಎರಡನೇ ರ್‍ಯಾಂಕ್ ಗಳಿಸಿದ್ದು, ಅನನ್ಯಾ ರೆಡ್ಡಿ 3ನೇ ರ್ಯಾಂಕ್ ಗಳಿಸಿದ್ದಾರೆ. ಒಟ್ಟು 1,016 ಅಭ್ಯರ್ಥಿಗಳನ್ನು UPSC ನೇಮಕಾತಿಗೆ ಶಿಫಾರಸು ಮಾಡಿದೆ.