ವಿದ್ಯಾರ್ಥಿ ಸ್ನೇಹಿ ಪದಕ್ಕೂ ಪರೀಕ್ಷಾ ಪ್ರಾಧಿಕಾರಕ್ಕೂ ಸಂಬಂಧವೇ ಇಲ್ಲ: ಎಸ್. ಸುರೇಶ್ ಕುಮಾರ್ ಆಕ್ರೋಶ
ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿ ಸ್ನೇಹಿ ಆಗಿರಬೇಕು. ಆದರೆ, ಆ ಪದಕ್ಕೂ ಪರೀಕ್ಷಾ ಪ್ರಾಧಿಕಾರಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ ಎಂದು ಎಸ್. ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ;
ವಿದ್ಯಾರ್ಥಿ ಸ್ನೇಹಿ ಎನ್ನುವುದಕ್ಕೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೂ ಸಂಬಂಧವೇ ಇಲ್ಲ ಎನ್ನುವಂತಾಗಿದೆ ಎಂದು ಮಾಜಿ ಸಚಿವ, ಶಾಸಕ ಎಸ್. ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಇಟಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಪರೀಕ್ಷಾ ಪ್ರಾಧಿಕಾರ ಇರುವುದು ಪರೀಕ್ಷೆಗಳನ್ನು ನಡೆಸುವುದಕ್ಕೆ, ವಿದ್ಯಾರ್ಥಿಗಳಿಗೆ ಅನವಶ್ಯಕ ತೊಂದರೆ ಕೊಡುವುದಕ್ಕಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪರೀಕ್ಷಾ ಪ್ರವೇಶ ಪತ್ರಿಕೆ ಪಡೆದುಕೊಳ್ಳುವುದಕ್ಕೂ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿರುವ ವಿಷಯವನ್ನು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ.
ಏಪ್ರಿಲ್ 18 ಮತ್ತು 19ರಂದು ನಡೆಯಲಿರುವ ಸಿಇಟಿ ಪರೀಕ್ಷೆಗಳಿಗೆ ತಡವಾಗಿ ಅರ್ಜಿ ಸಲ್ಲಿಸಿರುವ ಹಲವು ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರವನ್ನು ವಿವೇಚನಾರಹಿತವಾಗಿ ನಿಗದಿ ಮಾಡಲಾಗಿದೆ. ಈ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರ ಹಲವು ಕಿ.ಮೀ ದೂರದಲ್ಲಿದ್ದು, ವಿದ್ಯಾರ್ಥಿಗಳು ಬಿಸಿಲಿನಲ್ಲಿ ಸಮೀಪದ ಪರೀಕ್ಷಾ ಕೇಂದ್ರಗಳನ್ನು ಬಿಟ್ಟು, ದೂರದ ಕೇಂದ್ರಗಳಿಗೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಚುನಾವಣಾ ಪ್ರಚಾರದ ಕಾರ್ಯಕ್ರಮಗಳು ಸಹ ನಡೆಯುತ್ತಿದ್ದು, ದೂರದ ಪರೀಕ್ಷಾ ಕೇಂದ್ರಗಳಿಗೆ ತಲುಪುವುದಕ್ಕೆ ಅಡ್ಡಿ ಎದುರಾಗಬಹುದು ಎಂದು ಹೇಳಿದ್ದಾರೆ.
ರಾಜ್ಯದ ಸಚಿವರೊಬ್ಬರು ಪರೀಕ್ಷಾ ಕೇಂದ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೇಲೆ ಅವರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರ ಅವರ ಜಿಲ್ಲೆಯಲ್ಲಿಯೇ ಪರೀಕ್ಷೆ ಬರೆಯುವುದಕ್ಕೆ ರಿಯಾಯಿತಿ ನೀಡಿರುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ತಾರತಮ್ಯ ಮಾಡದೆ, ಕೂಡಲೇ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಬೇಕು. ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕರ್ತವ್ಯ. ಪರೀಕ್ಷೆಗಳಲ್ಲಿ ಅಕ್ರಮವನ್ನು ತಡೆಗಟ್ಟುವುದಕ್ಕೂ ಹಲವು ಕಿ.ಮೀ ದೂರದಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿ ಮಾಡುವುದು ಪರಿಹಾರವಲ್ಲ. ಪರೀಕ್ಷಾ ನಿರ್ವಹಣೆ ವಿಧಾನವನ್ನು ಬದಲಾಯಿಸಬೇಕು. ಪರೀಕ್ಷಾ ಮೇಲ್ವಿಚಾರಕ ಶಿಕ್ಷಕರನ್ನು ಬದಲಾಯಿಸಬೇಕು ಎಂದು ಸಲಹೆ ನೀಡಿದ್ದಾರೆ.