ದರ್ಶನ್‌ ಅಟ್ಟಹಾಸ ಪ್ರಕರಣ | ಚಿತ್ರದುರ್ಗದಲ್ಲಿ ಮೂವರು ಆರೋಪಿಗಳ ಬಂಧನ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ A-8 ಆರೋಪಿ ರವಿ ಚಿತ್ರದುರ್ಗದ ಡಿವೈಎಸ್ ಪಿ ಕಚೇರಿಯಲ್ಲಿ ಗುರುವಾರ (ಜೂ.13) ಶರಣಾಗಿದ್ದಾನೆ.;

Update: 2024-06-14 11:06 GMT
ನಟ ದರ್ಶನ್‌

ತನ್ನದೇ ಅಭಿಮಾನಿಯಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆಸಿರುವ ಆರೋಪದ ಮೇಲೆ ನಟ ದರ್ಶನ್‌ ಹಾಗೂ ಆತನ ಡಿ- ಗ್ಯಾಂಗನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಇದೀಗ ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ A-8 ಆರೋಪಿ ರವಿ ಎಂಬಾತ ಚಿತ್ರದುರ್ಗದ ಡಿವೈಎಸ್ ಪಿ ಕಚೇರಿಯಲ್ಲಿ ಗುರುವಾರ (ಜೂ.13) ಶರಣಾಗಿದ್ದಾನೆ. ಇದೇ ವೇಳೆ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಜಗ್ಗ ಮತ್ತು ಅನು ಎಂಬುವರನ್ನು ಕೂಡ ಶುಕ್ರವಾರ ಬಂಧಿಸಲಾಗಿದೆ.

ರವಿಯ ಬಾಡಿಗೆ ಕಾರಿನಲ್ಲೇ ಹಂತಕರು ಬೆಂಗಳೂರಿಗೆ ಹೋಗಿದ್ದು, ಆತನ ಬಾಡಿಗೆ ಕಾರಿನಲ್ಲಿ ರೇಣುಕಾಸ್ವಾಮಿ ಕಿಡ್ನಾಪ್ ಮಾಡಲಾಗಿತ್ತು. ಬಾಡಿಗೆ ಇದೆ ಎಂದು ರವಿಗೆ ನಂಬಿಸಿ ರಘು ಅಂಡ್ ಟೀಂ ಕರೆದೊಯ್ದಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಪ್ರಕರಣ ಬಯಲಾಗುತ್ತಿದ್ದಂತೆ ರವಿ ತಲೆ ಮರೆಸಿಕೊಂಡಿದ್ದ.

ಈ ಪ್ರಕರಣ ತಿಳಿಯುತ್ತಿದ್ದಂತೆಯೇ ರವಿ ಟ್ಯಾಕ್ಸಿ ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಕರೆ ಮಾಡಿ, ತನ್ನದೇ ಕಾರಿನಲ್ಲಿ ರೇಣುಕಾಸ್ವಾಮಿಯನ್ನು ಕರೆದೊಯ್ದ ವಿಚಾರ ತಿಳಿಸಿದ್ದ. ಸಿಕ್ಕಿಬೀಳುವ ಭಯ ಕಾಡುತ್ತಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿದ್ದ. ನಂತರ ರವಿಯನ್ನು ಭೇಟಿಯಾದ ಟ್ರಾಕ್ಸಿ ಮಾಲೀಕರ ಸಂಘದ ಸದಸ್ಯರು, ಪೊಲೀಸರಿಗೆ ಶರಣಾಗಿ ಎಲ್ಲ ವಿವರವನ್ನು ತಿಳಿಸುವಂತೆ ಮನವೊಲಿಸಿದ್ದರು. ಆತ ಡಿವೈಎಸ್‌ಪಿ ಕಚೇರಿಗೆ ಬಂದು ಶರಣಾದ ಎಂದು ಮೂಲಗಳು ತಿಳಿಸಿವೆ.

ಜೂ.8 ಶನಿವಾರ ಬೆಳಗ್ಗೆ ಹತ್ತು ಗಂಟೆ ವೇಳೆಗೆ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಲಾಗಿತ್ತು. ಆರೋಪಿಗಳಾದ ರಾಘವೇಂದ್ರ, ಜಗ್ಗ, ಅನು ಸೇರಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತರಲು ಪ್ಲಾನ್ ಮಾಡಿದ್ದರು. ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ಬಾರ್ ಬಳಿ ರೇಣುಕಾಸ್ವಾಮಿ ಬೈಕ್ ನಿಲ್ಲಿಸಿ ರವಿ ಕಾರಿನಲ್ಲಿ ಕರೆದೊಯ್ದಿದ್ದರು. ಜಗ್ಗ ಎಂಬಾತ ರವಿ ಬಳಿ 4000 ರೂಗೆ ಬಾಡಿಗೆ ಮಾತನಾಡಿದ್ದ. ಕಾರಲ್ಲಿ ಕರೆದೊಯ್ಯುವಾಗ ಸ್ವಲ್ಪವೂ ಅನುಮಾನ ಬರದಂತೆ ನಡೆದುಕೊಂಡಿದ್ದರು. ಆದರೆ ದರ್ಶನ್ ಆರೋಪಿಯಾಗಿ ಅರೆಸ್ಟ್ ಆಗುತ್ತಿದ್ದಂತೆ ರವಿಗೆ ಭಯ ಶುರುವಾಗಿತ್ತು. ಸ್ನೇಹಿತ ಸಂತೋಷ್‌ ಬಳಿ ನನಗೆ ಸಾಯುವಷ್ಟು ಭಯವಾಗುತ್ತಿದೆ ಎಂದು ಹೇಳಿಕೊಂಡಿದ್ದ ಎಂದು ತಿಳಿದುಬಂದಿದೆ.

ಜಗ್ಗ ಮತ್ತು ಅನು ಬಂಧನ

ಮತ್ತೊಂದು ಬೆಳವಣಿಗೆಯಲ್ಲಿ ಪ್ರಕರಣದ ಎ 6 ಮತ್ತು ಎ 7 ಆರೋಪಿಗಳಾದ ಜಗದೀಶ್‌ ಅಲಿಯಾಸ್‌ ಜಗ್ಗ ಹಾಗೂ ಅನು ಅಲಿಯಾಸ್‌ ಅನುಕುಮಾರ್‌ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಮತ್ತು ಚಿತ್ರದುರ್ಗ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಶುಕ್ರವಾರ ಬೆಳಿಗ್ಗೆ ಬಂಧಿಸಲಾಗಿದೆ.

ಹತ್ಯೆಯಾದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತರುವಲ್ಲಿ ಈ ಇಬ್ಬರು ಆರೋಪಿಗಳ ಮಾತ್ರ ಪ್ರಮುಖವಾಗಿದ್ದು, ರವಿಯ ಟ್ಯಾಕ್ಸಿ ಬುಕ್‌ ಮಾಡಿ ಅದರಲ್ಲಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಹತ್ಯೆ ನಡೆದ ಶೆಡ್‌ ಗೆ ಬಿಟ್ಟವರು ಇದೇ ಇಬ್ಬರು ಎಂದು ಪೊಲೀಸ್‌ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡಿ ಇದೀಗ ಬಂಧಿಸಲಾಗಿದೆ.

Tags:    

Similar News