ಗ್ರಾಮಸ್ಥರಿಂದ ಧ್ವಂಸಗೊಂಡ ಇಂಡಿನಗತ್ತ ಮತಗಟ್ಟೆಯಲ್ಲಿ ಸೋಮವಾರ ಮರು ಮತದಾನ
ಮೂಲ ಸೌಕರ್ಯವನ್ನು ಕಲ್ಪಿಸಲಾಗಿಲ್ಲ ಎಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಜನರು ಮತದಾನ ಬಹಿಷ್ಕರಿಸಿದ್ದರು.;
ರಾಜ್ಯದಲ್ಲಿ ಮೊದಲನೆಯ ಹಂತದ ಚುನಾವಣೆ ಸಂದರ್ಭದಲ್ಲಿ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯನ್ನೇ ಧ್ವಂಸಗೊಳಿಸಲಾಗಿದ್ದು, ಈ ಮತಗಟ್ಟೆಯಲ್ಲಿ ಸೋಮವಾರ (ಏಪ್ರಿಲ್ 29) ಮರು ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.
ಚಾಮರಾಜನಾಗರದ ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕರಿಸಲಾಗಿದ್ದರೆ, ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯನ್ನೇ ಧ್ವಂಸ ಮಾಡಿರುವ ಘಟನೆ ಶುಕ್ರವಾರ ನಡೆದಿತ್ತು.
ಮೂಲ ಸೌಕರ್ಯವನ್ನು ಕಲ್ಪಿಸಲಾಗಿಲ್ಲ ಎಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಜನರು ಮತದಾನ ಬಹಿಷ್ಕರಿಸಿ ಮತದಾನದಿಂದ ದೂರ ಉಳಿದಿದ್ದರು.
ಆದರೆ, ಮನವೊಲಿಸಿ ಮತದಾನ ಮಾಡಿಸಲು ಅಧಿಕಾರಿಗಳು ಹಾಡಿ ಜನರನ್ನು ಮತಗಟ್ಟೆಗೆ ಕರೆದುಕೊಂಡು ಬರುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು, ಇಂಡಿಗನತ್ತ ಗ್ರಾಮದ ಮತಗಟ್ಟೆಯನ್ನು ಸುತ್ತುವರಿದಿದ್ದು, ಮೂಲಸೌಕರ್ಯ ಕಲ್ಪಿಸುವವರೆಗೆ ಮತದಾನ ಮಾಡಬೇಡಿ ಎಂದು ಪಟ್ಟು ಹಿಡಿದಿದ್ದರು. ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಮತಗಟ್ಟೆ ಮೇಲೆ ದಾಳಿ ಮಾಡಿ, ಮೇಜು, ಕುರ್ಚಿ, ಇವಿಎಂ ಧ್ವಂಸ ಮಾಡಿದ್ದರು.
ಉದ್ರಿಕ್ತ ಜನರು ಪೊಲೀಸರ ಮೇಲೆ ಕಲ್ಲು ತೂರಿದ್ದು, ಸಾರ್ವಜನಿಕರು ಸೇರಿ ಅಧಿಕಾರಿಗಳೂ ಗಾಯಗೊಂಡಿದ್ದರು. ಈ ವೇಳೆ ಉದ್ರಿಕ್ತ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿ ಸಿಟಿ ಶಿಲ್ಪಾ ನಾಗ್ ಹಾಗೂ ಸಾಮಾನ್ಯ ವೀಕ್ಷಕ ಪಾರ್ಥ ಗುಪ್ತ ಅವರು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದು, ವರದಿ ಆಧಾರದ ಮೇಲೆ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 58(2) ಹಾಗೂ 58 ಎ(2) ಅಡಿಯಲ್ಲಿ ಮರು ಮತದಾನ ಕಲ್ಪಿಸಲಾಗಿದೆ.
ಶುಕ್ರವಾರ ನಡೆದ ಘರ್ಷನೆಗೆ ಸಂಬಂಧಿಸಿದಂತೆ ಪೊಲೀಸರು 41 ಗ್ರಾಮಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಹೆಚ್ಚಿನ ಬಂದೋಬಸ್ತ್ ನಡಿಯಲ್ಲಿ ಸೋಮವಾರ ಮರು ಮತದಾನ ನಡೆಯಲಿದೆ ಎಂದು ತಿಳಿದು ಬಂದಿದೆ.