ಪತಿಯ ಅನೈತಿಕ ಸಂಬಂಧ ; ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಗೃಹಿಣಿ

ದಂಪತಿ ಹಲವು ವರ್ಷಗಳಿಂದ ಬಾಗಲಗುಂಟೆ ಬಳಿಯ ಭುವನೇಶ್ವರಿ ನಗರದಲ್ಲಿ ನೆಲೆಸಿದ್ದರು. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ.

Update: 2025-10-10 08:08 GMT

ಸಾಂದರ್ಭಿಕ ಚಿತ್ರ

Click the Play button to listen to article

ಪತಿಯ ಅನೈತಿಕ ಸಂಬಂಧದಿಂದ ಬೇಸತ್ತು ಗೃಹಿಣಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಸಮೀಪದ ಬಾಗಲಗುಂಟೆಯ ಭುವನೇಶ್ವರಿ ನಗರದಲ್ಲಿ ನಡೆದಿದೆ. 

ರಾಯಚೂರು ಮೂಲದ ವಿಜಯಲಕ್ಷ್ಮಿ(35) ಗುರುವಾರ ತಡರಾತ್ರಿ ತನ್ನ ಇಬ್ಬರು ಮಕ್ಕಳಾದ ಭುವನ್‌(1), ಬೃಂದಾ(4) ರನ್ನು ನೇಣು ಬಿಗಿದು ಕೊಲೆ ಮಾಡಿ, ಆ ಬಳಿಕ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶುಕ್ರವಾರ ಮೂವರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೃತ ವಿಜಯಲಕ್ಷ್ಮಿ ಅವರ ಪತಿ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತಿಯ ಅನೈತಿಕ ಸಂಬಂಧ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಹಲವು ಬಾರಿ ಜಗಳವಾಡಿದ್ದರು. ಈ ಕುರಿತು ಕುಟುಂಬದ ಹಿರಿಯರು ಸಾಕಷ್ಟು ಬಾರಿ ರಾಜಿ ಸಂಧಾನ ಮಾಡಿ ಬುದ್ದಿವಾದ ಹೇಳಿದ್ದರು. ಗುರುವಾರ ರಾತ್ರಿಯೂ ಇಬ್ಬರ ನಡುವೆ ಜಗಳವಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ದಂಪತಿಯು ಹಲವು ವರ್ಷಗಳಿಂದ ಬಾಗಲಗುಂಟೆ ಬಳಿಯ ಭುವನೇಶ್ವರಿ ನಗರದಲ್ಲಿ ನೆಲೆಸಿದ್ದರು. ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಪತಿಯನ್ನು ವಶಕ್ಕೆ ಪಡೆದಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದ್ದಾರೆ.

Tags:    

Similar News