ಒಳ ಮೀಸಲಾತಿ ಜಾರಿ ವೈಫಲ್ಯ: ಸಚಿವ ಎಚ್.ಸಿ. ಮಹದೇವಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಕೆಲವೆಡೆ ಆದಿ ದ್ರಾವಿಡ ಎಂದು ಪ್ರವರ್ಗ ʼಎʼ ಮೀಸಲಾತಿ ಪಡೆದು, ಆದಿ ಕರ್ನಾಟಕ ಎಂದು ಹೇಳಿ ಪ್ರವರ್ಗ ʼಬಿʼಯ ಅಡಿಯಲ್ಲಿ ಮೀಸಲಾತಿ ಪಡೆಯುತ್ತಾರೆ. ಇಲ್ಲಿ ಮೀಸಲು ದುರುಪಯೋಗವಾಗುತ್ತದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

Update: 2025-10-10 14:26 GMT

ಒಳಮೀಸಲಾತಿ ಹೋರಾಟ ಸಮಿತಿವತಿಯಿಂದ ಪ್ರತಿಭಟನೆ ನಡೆಸಲಾಯಿತು.

Click the Play button to listen to article

ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶದಂತೆ ಶೋಷಿತ ವರ್ಗಗಳಿಗೆ ಒಳ ಮೀಸಲಾತಿ ನೀಡಲು ವಿಫಲವಾಗಿದೆ ಮತ್ತು ಆದಿ ದ್ರಾವಿಡ ಹಾಗೂ ಆದಿ ಕರ್ನಾಟಕ ಸಮುದಾಯಗಳ ಮೂಲ ಜಾತಿಗಳನ್ನು ವಿಂಗಡಿಸಿ ಪ್ರಮಾಣಪತ್ರ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ, 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮಿತಿ' ಸದಸ್ಯರು ಶುಕ್ರವಾರ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಸವರಾಜ ಕೌತಾಳ ಮಾತನಾಡಿ, "ಮಾದಿಗ ಸಮುದಾಯವು ನಾಲ್ಕು ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಡುತ್ತಿದೆ. ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ ರಚನೆಯಾಗಿ ವರದಿ ಸಲ್ಲಿಕೆಯಾಯಿತು. ಆದರೆ ಸರ್ಕಾರ ವರದಿಯನ್ನು ಮಾರ್ಪಾಡು ಮಾಡಿ ಮೀಸಲಾತಿ ಹಂಚಿಕೆ ಮಾಡಿದ್ದರಿಂದ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ," ಎಂದು ಆರೋಪಿಸಿದರು.

"ಕೆಲವೆಡೆ ಆದಿ ದ್ರಾವಿಡ (ಪ್ರವರ್ಗ 'ಎ') ಎಂದು, ಇನ್ನು ಕೆಲವೆಡೆ ಆದಿ ಕರ್ನಾಟಕ (ಪ್ರವರ್ಗ 'ಬಿ') ಎಂದು ಪ್ರಮಾಣಪತ್ರ ಪಡೆದು ಮೀಸಲಾತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಸರ್ಕಾರ ಈ ಗೊಂದಲವನ್ನು ತಕ್ಷಣವೇ ಬಗೆಹರಿಸಬೇಕು. ಇಲ್ಲದಿದ್ದರೆ, ಸಚಿವ ಎಚ್.ಸಿ. ಮಹದೇವಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು," ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಚಿವರ ಮನೆಗೆ ನುಗ್ಗಲು ಯತ್ನಿಸಿದ ಹೋರಾಟಗಾರರನ್ನು ಪೊಲೀಸರು ತಡೆದು, ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಏನಿದು ಒಳ ಮೀಸಲಾತಿ ವಿವಾದ?

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಸಮಿತಿಯ ವರದಿಯನ್ನು ಆಧರಿಸಿ, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ನಿಗದಿಯಾಗಿದ್ದ ಶೇ.17ರ ಮೀಸಲಾತಿಯನ್ನು ಒಳವರ್ಗೀಕರಣ ಮಾಡಿತ್ತು. ಇದರ ಅನ್ವಯ, ಪ್ರವರ್ಗ 'ಎ'ಗೆ ಶೇ.6, ಪ್ರವರ್ಗ 'ಬಿ'ಗೆ ಶೇ.6, ಹಾಗೂ ಪ್ರವರ್ಗ 'ಸಿ'ಗೆ ಶೇ.5 ರಷ್ಟು ಮೀಸಲಾತಿ ಹಂಚಿಕೆ ಮಾಡಿ ಆದೇಶಿಸಿತ್ತು. ಸರ್ಕಾರದ ಈ ನಿರ್ಧಾರವನ್ನು ಕೆಲವು ದಲಿತ ಸಂಘಟನೆಗಳು ಸ್ವಾಗತಿಸಿದರೆ, ಅಲೆಮಾರಿ ಸಮುದಾಯಗಳು ಸೇರಿದಂತೆ ಹಲವು ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ ದೆಹಲಿಯವರೆಗೂ ಹೋರಾಟ ನಡೆಸಿದ್ದವು. 

Tags:    

Similar News