ಊಟ ಮಾಡುತ್ತಾ ಸಿನೆಮಾ ನೋಡಿ; ಬೆಂಗಳೂರಿನಲ್ಲಿ ಭಾರತದ ಮೊದಲ 'ಡೈನ್-ಇನ್' ಥಿಯೇಟರ್ ಶುರು !
ಬೆಂಗಳೂರಿನ ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಬಳಿಯ M5 eCity ಮಾಲ್‌ನಲ್ಲಿರುವ PVR ಐನಾಕ್ಸ್ ಥಿಯೇಟರ್‌ನಲ್ಲಿ ಈ ವಿಶಿಷ್ಟ ಸೇವೆ ಲಭ್ಯವಿದೆ.
'ಡೈನಿಂಗ್ ಟೇಬಲ್'
ಸಿನಿಮಾ ಪ್ರಿಯರಿಗೆ ಇನ್ನು ಮುಂದೆ ಪಾಪ್‌ಕಾರ್ನ್, ಕಾಫಿ ತಿಂಡಿಗಳಿಗೆ ಸೀಮಿತವಾಗಬೇಕಿಲ್ಲ. ಚಲನಚಿತ್ರವನ್ನು ವೀಕ್ಷಿಸುತ್ತಲೇ ತಮ್ಮ ನೆಚ್ಚಿನ ಭೋಜನವನ್ನು ಸವಿಯುವ, ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಪರಿಚಯಿಸಲಾದ 'ಡೈನ್-ಇನ್' ಥಿಯೇಟರ್ ಅನುಭವ ಈಗ ಬೆಂಗಳೂರಿನಲ್ಲಿ ಲಭ್ಯವಾಗಿದೆ. ನಗರದ ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಬಳಿಯ M5 ಇ-ಸಿಟಿ ಮಾಲ್‌ನಲ್ಲಿರುವ PVR ಐನಾಕ್ಸ್ ಥಿಯೇಟರ್ ಈ ವಿನೂತನ ಸೌಲಭ್ಯಕ್ಕೆ ನಾಂದಿ ಹಾಡಿದೆ.
ಏನಿದು 'ಡೈನ್-ಇನ್' ಥಿಯೇಟರ್?
ಸಾಮಾನ್ಯವಾಗಿ ಥಿಯೇಟರ್‌ಗಳಲ್ಲಿ ಹೊರಗಿನಿಂದ ಆಹಾರ ತರಲು ಅವಕಾಶವಿರುವುದಿಲ್ಲ ಮತ್ತು ಅಲ್ಲಿ ಲಭ್ಯವಿರುವ ಸಿದ್ಧ ತಿಂಡಿಗಳನ್ನೇ ಸೇವಿಸಬೇಕಾದ ಅನಿವಾರ್ಯತೆ ಇರುತ್ತದೆ. ಈ ಕೊರತೆಯನ್ನು ನೀಗಿಸಲು, ಪಿವಿಆರ್ ಐನಾಕ್ಸ್ 'ಡೈನ್-ಇನ್' ಪರಿಕಲ್ಪನೆಯನ್ನು ಪರಿಚಯಿಸಿದೆ. ಇಲ್ಲಿ, ಆರಾಮದಾಯಕವಾದ ಸೋಫಾ ಮಾದರಿಯ ಆಸನಗಳ ಜೊತೆಗೆ ಡೈನಿಂಗ್ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರೇಕ್ಷಕರು ಸಿನಿಮಾ ನೋಡುತ್ತಲೇ, ತಮ್ಮ ಆಸನದಲ್ಲೇ ಕುಳಿತು, ವಿಶೇಷವಾಗಿ ಸಿದ್ಧಪಡಿಸಿದ ಮೆನುವಿನಿಂದ ತಮ್ಮ ಇಷ್ಟದ ಆಹಾರವನ್ನು ಆರ್ಡರ್ ಮಾಡಿ ಸವಿಯಬಹುದು. ಇದರಿಂದ, ಆಹಾರಕ್ಕಾಗಿ ಮಧ್ಯದಲ್ಲಿ ಎದ್ದು ಹೊರಗೆ ಹೋಗುವ ಪ್ರಮೇಯವೇ ಬರುವುದಿಲ್ಲ.
ಮೆನುವಿನಲ್ಲಿ ಏನೆಲ್ಲಾ ಇದೆ?
ಈ 'ಡೈನ್-ಇನ್' ಅನುಭವಕ್ಕಾಗಿ ವೈವಿಧ್ಯಮಯ ಮೆನುವನ್ನು ಸಿದ್ಧಪಡಿಸಲಾಗಿದೆ. ತಂಪು ಪಾನೀಯ, ಚಹಾ, ಕಾಫಿ ಜೊತೆಗೆ ಕ್ರೋಸ್ಟಾ, ಸಿನಿ ಕೆಫೆ, ಡೈನ್-ಇನ್, ಸ್ಟೀಮೆಟ್ರಿ, ವೋಕ್‌ಸ್ಟಾರ್, ಇನ್-ಬಿಟ್ವೀನ್, ಫ್ರೈಟೋಪಿಯಾ, ಡಾಗ್‌ಫಾದರ್ ಮತ್ತು ಲೋಕಲ್ ಸ್ಟ್ರೀಟ್ ನಂತಹ ವಿಭಿನ್ನ ಶೈಲಿಯ ಆಹಾರದ ಆಯ್ಕೆಗಳಿವೆ. ಪಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್‌ಗಳಿಂದ ಹಿಡಿದು, ಸ್ಟೀಮ್ಡ್ ಮತ್ತು ಕರಿದ ತಿಂಡಿಗಳು ಹಾಗೂ ಬೆಂಗಳೂರು ಮತ್ತು ಕರ್ನಾಟಕದ ಜನಪ್ರಿಯ ಸ್ಥಳೀಯ ಖಾದ್ಯಗಳವರೆಗೆ ಎಲ್ಲವೂ ಇಲ್ಲಿ ಲಭ್ಯ.
ಈ ಕುರಿತು ಮಾತನಾಡಿದ ಪಿವಿಆರ್ ಐನಾಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಬಿಜ್ಲಿ, "ನಮ್ಮ ಹೊಸ ಮಲ್ಟಿಪ್ಲೆಕ್ಸ್ ಅನ್ನು M5 ಇ-ಸಿಟಿ ಮಾಲ್‌ನಲ್ಲಿ ಪ್ರಾರಂಭಿಸಿದ್ದು, ಸಿನಿಮಾವನ್ನು ಹೊಸ ರೀತಿಯಲ್ಲಿ ಆನಂದಿಸಲು ಇದನ್ನು ಸಾರ್ವಜನಿಕರಿಗೆ ತಂದಿದ್ದೇವೆ. ಇದು ಭಾರತದ ಮೊದಲ ಡೈನ್-ಇನ್ ಆಡಿಟೋರಿಯಂ ರೆಸ್ಟೋರೆಂಟ್ ಆಗಿದ್ದು, ಇದು ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿಯೇ ಮೊಟ್ಟಮೊದಲು ಪರಿಚಯಿಸಲಾದ ಈ 'ಡೈನ್-ಇನ್' ಅನುಭವವು, ಬೆಂಗಳೂರಿನ ಚಲನಚಿತ್ರ ಪ್ರೇಮಿಗಳಿಗೆ ಸಿನಿಮಾ ವೀಕ್ಷಣೆಯ ಜೊತೆಗೆ ಭೋಜನದ ಆನಂದವನ್ನೂ ಒದಗಿಸಲಿದೆ.