ಇಡಿಯಿಂದ ಕೆ.ಜಿ.ಗಟ್ಟಲೇ ಚಿನ್ನ ಜಪ್ತಿ; ಬಿಹಾರ ಚುನಾವಣೆಗೆ ಫಂಡಿಂಗ್‌ ಮಾಡಲು ಒಪ್ಪಿದ್ದ ವೀರೇಂದ್ರ ಪಪ್ಪಿ?

ಶಾಸಕ ವಿರೇಂದ್ರ ಪಪ್ಪಿ ಹಾಗೂ ಅವರ ಸಂಬಂಧಿಕರಿಂದ ಇದುವರೆಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಒಟ್ಟು 61 ಕೆ.ಜಿ ಚಿನ್ನ, ಐಷಾರಾಮಿ ಕಾರುಗಳು ಸೇರಿ 150 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Update: 2025-10-10 07:29 GMT

ಶಾಸಕ ವಿರೇಂದ್ರ ಪಪ್ಪಿ ಅವರ ಬ್ಯಾಂಕ್‌ನಿಂದ ವಶಪಡಿಸಿಕೊಂಡಿರುವ ಚಿನ್ನ

Click the Play button to listen to article

ಬಿಹಾರ ಚುನಾವಣೆ ವಿವಿಧ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಚುನಾವಣೆಯಲ್ಲಿ ಹಣದ ಹೊಳೆ ಹರಿಯುವ ಸಾಧ್ಯತೆಯೂ ಇದೆ. ಚುನಾವಣೆ ಅವಧಿಯಲ್ಲಿ ಹೆಚ್ಚಾಗಿ ನಡೆಯುವ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ಮೇಲೆ ಜಾರಿ ನಿರ್ದೇಶನಾಲಯ ಕಣ್ಣಿಟ್ಟಿದೆ. ಹಲವರ ಮೇಲೆ ದಾಳಿಗೂ ತಯಾರಿ ಆರಂಭಿಸಿದೆ. 

ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತರಾಗಿರುವ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ, ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಫಂಡಿಂಗ್ ಮಾಡಲು ಒಪ್ಪಿಕೊಂಡಿದ್ದ ಎಂಬ ಸಂಗತಿ ಬಯಲಾಗಿದೆ.

ಬಿಹಾರ ಚುನಾವಣೆಗೆ ಫಂಡಿಂಗ್‌ ಮಾಡಿದರೆ ಅದಕ್ಕೆ ಪ್ರತಿಯಾಗಿ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಇದರ ಸುಳಿವು ಆಧರಿಸಿಯೇ ಜಾರಿ ನಿರ್ದೇಶನಾಲಯದ ದಾಳಿ ನಡೆಸಿ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಯನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.

ಕೆ.ಜಿ.ಗಟ್ಟಲೇ ಚಿನ್ನ ವಶ 

ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ. ವಿರೇಂದ್ರ ಪಪ್ಪಿ ಮತ್ತು ಇತರರ ಮೇಲೆ ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ 50.33 ಕೋಟಿ ರೂ. ಮೌಲ್ಯ 40 ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.

ಚಳ್ಳಕೆರೆಯ ಫೆಡರಲ್‌ ಬ್ಯಾಂಕ್‌ ಮತ್ತು ಕೋಟಕ್‌ ಮಹಿಂದ್ರಾ ಬ್ಯಾಂಕ್‌ ಖಾತೆಯ ಲಾಕರ್‌ಗಳಲ್ಲಿ ಇಟ್ಟಿದ್ದ 40 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಿದ್ದಾರೆ. 

ಈ ಹಿಂದೆ ಕೂಡ 21 ಕೆ.ಜಿ. ಚಿನ್ನವನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಅದರಂತೆ ಈವರೆಗೆ ಒಟ್ಟು 61 ಕೆ.ಜಿ. ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ಐಷಾರಾಮಿ ಕಾರುಗಳು ಸೇರಿ ಒಟ್ಟು 150 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. 

ತನಿಖೆಯ ಉದ್ದೇಶವೇನು?

ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ, ಹಣದ ಮೂಲ ಮತ್ತು ಹರಿವನ್ನು ಪತ್ತೆಹಚ್ಚಲು ಇ.ಡಿ. ದಾಳಿ ನಡೆಸಿದೆ.  ಶಾಸಕರ ಖಾತೆಗಳಿಗೆ ಜಮೆಯಾಗಿರುವ ಹಣದ ಮೂಲ, ದೊಡ್ಡ ಮೊತ್ತದ ವರ್ಗಾವಣೆ ಹಾಗೂ ಅನುಮಾನಾಸ್ಪದ ಎನಿಸುವ ಪ್ರತಿಯೊಂದು ವ್ಯವಹಾರದ ವಿವರಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಾಹಿತಿಯು ಪ್ರಕರಣದ ತನಿಖೆಗೆ ಮಹತ್ವದ ಸಾಕ್ಷ್ಯವಾಗುವ ಸಾಧ್ಯತೆಯಿದೆ.


ಏನಿದು ಪ್ರಕರಣ ?

ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹಾಗೂ ಅವರ ಸಹೋದರನಿಗೆ ಸೇರಿದ 30 ಕ್ಕೂ ಹೆಚ್ಚುಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಆಗಸ್ಟ್‌ನಲ್ಲಿ ದಾಳಿ ನಡೆಸಿದ್ದರು. ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು, ಹುಬ್ಬಳ್ಳಿ, ಮುಂಬೈ, ಜೋದ್‌ಪುರ ಹಾಗೂ ಗೋವಾದ 5 ಕ್ಯಾಸಿನೋ ಸೇರಿ ಒಟ್ಟು 30 ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಅಕ್ರಮ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಬೆಟ್ಟಿಂಗ್ ನೆಟ್‌ವರ್ಕ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ದಾಳಿಯಲ್ಲಿ, ಕಿಂಗ್ 567, ರಾಜಾ 567, ಪಪ್ಪಿಸ್ 003, ರತ್ನ ಗೇಮಿಂಗ್ ತಾಣಗಳು ಹಾಗೂ ಕೆ.ಸಿ. ತಿಪ್ಪೇಸ್ವಾಮಿಗೆ ಸೇರಿದ ದುಬೈನ ಡೈಮಂಡ್ ಸಾಫ್ಟೆಕ್, ಟಿಆರ್‌ಎಸ್‌ ಟೆಕ್ನಾಲಜಿಸ್, ಪ್ರೈಮ್ 9 ಟೆಕ್ನಾಲಜಿಸ್, ಕಾಲ್ ಸೆಂಟರ್ ಸರ್ವೀಸ್ ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದರು.

2016ರಲ್ಲಿಯೂ ದಾಳಿ

20ಕ್ಕೂ ಹೆಚ್ಚು ವಾಹನಗಳಲ್ಲಿ ಬಂದ 40ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ದಾಳಿ ನಡೆಸಿದ್ದು, ಹಲವಾರು ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು ವಶಕ್ಕೆ ಪಡೆದಿರುವ ಮಾಹಿತಿ ಪಡೆದಿದ್ದರು. 2016ರ ಡಿಸೆಂಬರ್‌ನಲ್ಲಿ ಕೂಡ ಕೆ.ಸಿ. ವೀರೇಂದ್ರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಆಗ ಮನೆಯ ಬಾತ್‌ರೂಮ್‌ನಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ನಗದು, 30 ಕೆ.ಜಿ ಚಿನ್ನ ಪತ್ತೆಯಾಗಿತ್ತು.

Tags:    

Similar News