CAFE BLAST CASE | ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬೆಂಗಳೂರಿನ ಇಬ್ಬರು ವಶಕ್ಕೆ
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಇಬ್ಬರು ಶಂಕಿತರನ್ನು ಎನ್‌ಐಎ ವಿಚಾರಣೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.;
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಇಬ್ಬರು ಶಂಕಿತರನ್ನು ಎನ್‌ಐಎ ವಿಚಾರಣೆ ನಡೆಸಿದೆ.
ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸ್ಫೋಟಕ ಇಟ್ಟವನಿಗಾಗಿ ಎನ್‌ಐಎ (NIA) ತೀವ್ರ ಹುಡುಕಾಟ ನಡೆಸುತ್ತಿದೆ. ಶಂಕಿತನ ಸಂಪರ್ಕ ಹೊಂದಿದ್ದ ಅನುಮಾನದ ಮೇಲೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದೆ. ಶಂಕಿತ ಬಾಂಬರ್ ಜೊತೆಗೆ ಸಂಪರ್ಕ ಹೊಂದಿದ್ದ ಶಂಕೆಯ ಮೇರೆಗೆ ಬೆಂಗಳೂರು ಮೂಲದ ಇಬ್ಬರು ಶಂಕಿತರನ್ನು ಎನ್ ಐಎ ವಿಚಾರಣೆ ಮಾಡುತ್ತಿದೆ. ಶನಿವಾರ ಸಂಜೆ ಶಂಕಿತರನ್ನು ಎನ್ಐಎ ವಶಕ್ಕೆ ಪಡೆದುಕೊಂಡಿದ್ದು, ಇಬ್ಬರಿಂದ ಬಾಂಬರ್ ಕುರಿತು ಮಾಹಿತಿ ಸಂಗ್ರಹ ಮಾಡ್ತಿದ್ದಾರೆ. ಶಂಕಿತರನ್ನು ಕೇವಲ ವಿಚಾರಣೆ ನಡೆಸುತ್ತಿದ್ದು, ಬಂಧಿಸಿಲ್ಲ ಎಂದು ಎನ್ಐಎ ಮೂಲಗಳು ಮಾಹಿತಿ ನೀಡಿವೆ.
ಬಾಂಬ್ ಇಟ್ಟವನ ಗುರುತು ಪತ್ತೆ ಮಾಡಿದ್ದ ಎನ್ಐಎ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿದ್ದ ಎನ್ಐಎ, ಶಂಕಿತನ ಗುರುತು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ಆತನಿಗೆ ಬಾಂಬ್ ಇಡಲು ಸಹಾಯ ಮಾಡಿದ್ದ ಕೆಲ ಶಂಕಿತರನ್ನು ಅಧಿಕಾರಿಗಳ ತಂಡ ಗುರುತಿಸಿತ್ತು.
ತನಿಖೆ ವೇಳೆ ಶಂಕಿತ ಧರಿಸಿದ್ದ ಟೋಪಿಯೇ ಎನ್ಐಎ ಅಧಿಕಾರಿಗಳಿಗೆ ಆರೋಪಿತನ ಬಗ್ಗೆ ಸುಳಿವು ನೀಡಿತ್ತು. ಶಂಕಿತನನ್ನು ಶಿವಮೊಗ್ಗ ಜಿಲ್ಲೆಯ ಮುಸಾವೀರ್ ಹುಸೇನ್ ಶಜೀದ್ ಎಂದು ಗುರುತಿಸಲಾಗಿದೆ. ಆದರೆ ಈತನೇ ಸ್ಫೋಟ ನಡೆಸಿದ್ದಾನಾ ಎಂದು ಇದುವರೆಗೂ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.