Cafe Blast: NIA ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
ಮಾರ್ಚ್ 1 ರಂದು ಕೆಫೆಗೆ ಬಾಂಬ್ ಇಡಲು ಬಂದಾಗ ಕ್ಯಾಪ್ ಧರಿಸಿದ್ದ ಶಂಕಿತ ವ್ಯಕ್ತಿ ಬಳಿಕ ಹೂಡಿ ಸಮೀಪದ ಮಸೀದಿಯಲ್ಲಿ ತಾನು ಧರಿಸಿದ್ದ ಶರ್ಟ್ ಹಾಗೂ ಕ್ಯಾಪ್ ಅನ್ನು ಬಿಸಾಕಿ ಪರಾರಿಯಾಗಿದ್ದನು.;
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡಕ್ಕೆ ಶಂಕಿತನ ಜಾಡು ಸಿಕ್ಕಿದೆ. ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಶಂಕಿತ ಪರಾರಿಯಾಗಿದ್ದಾನೆ. ಇನ್ನೂ ಸ್ಫೋಟಕ್ಕೂ ಮುನ್ನ 2 ತಿಂಗಳು ಇತ ತಮಿಳುನಾಡಿನಲ್ಲಿದ್ದ ಎನ್ನಲಾಗಿದೆ.
ಶಂಕಿತನ ಸುಳಿವು ನೀಡಿದ ಟೋಪಿ
ಮಾರ್ಚ್ 1 ರಂದು ಕೆಫೆಗೆ ಬಾಂಬ್ ಇಡಲು ಬಂದಾಗ ಕ್ಯಾಪ್ ಧರಿಸಿದ್ದ ಶಂಕಿತ ವ್ಯಕ್ತಿ ಬಳಿಕ ಹೂಡಿ ಸಮೀಪದ ಮಸೀದಿಯಲ್ಲಿ ತಾನು ಧರಿಸಿದ್ದ ಶರ್ಟ್ ಹಾಗೂ ಕ್ಯಾಪ್ ಅನ್ನು ಬಿಸಾಕಿ ಪರಾರಿಯಾಗಿದ್ದನು. ಮಸೀದಿಯಲ್ಲಿ ಸಿಕ್ಕ ಟೋಪಿ ಹಿಡಿದು ಶಂಕಿತನ ಬೆನ್ನತ್ತಿದ ಎನ್ಐಎಗೆ ಬಹುಮುಖ್ಯ ಸುಳಿವು ಲಭ್ಯವಾಗಿದೆ.
ಶಂಕಿತ ಧರಿಸಿದ್ದ ಟೋಪಿಯ ಮೂಲ ಪತ್ತೆ ಹಚ್ಚಿದ್ದ ಎನ್ಐಎಗೆ ಇದನ್ನು ತಮಿಳುನಾಡಿನ ಮಾಲ್ವೊಂದರಲ್ಲಿ ಖರೀದಿಸಲಾಗಿರುವ ಮಾಹಿತಿ ದೊರೆತಿದ್ದು, ಜೊತೆಗೆ ಟೋಪಿ ಖರೀದಿ ವೇಳೆ ಶಂಕಿತನ ಜೊತೆಗೆ ಮತ್ತೋರ್ವ ವ್ಯಕ್ತಿ ಇರುವುದು ಮಾಲ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಪತ್ತೆಯಾದ ಕ್ಯಾಪ್ನಲ್ಲಿ ಶಂಕಿತನ ಕೂದಲು ಪತ್ತೆಯಾಗಿದ್ದು, ಎನ್ಐಎ ಅಧಿಕಾರಿಗಳು ಡಿಎನ್ಎ ಟೆಸ್ಟ್ಗೆ ನೀಡಿದ್ದಾರೆ.
ಶಂಕಿತರು ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು
ಶಂಕಿತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವ ಎಂದು ಗೊತ್ತಾಗಿದ್ದು, ಜನವರಿಯಿಂದ ಚೆನ್ನೈನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ತಂಗಿದ್ದ ಎಂದು ತಿಳಿದುಬಂದಿದೆ. ಶಂಕಿತನನ್ನು ಮುಸಾವೀರ್ ಹುಸೇನ್ ಶಜೀಬ್ ಎಂದು ಗುರುತಿಸಲಾಗಿದೆ. ಆತ ಹಾಕಿಕೊಂಡ ಟೋಪಿಯನ್ನು ಆತನ ಸಹಾಯಕ ಚೆನ್ನೈನ ಆರ್‌ಕೆ ಸಲಾಯ್ ಮಾಲ್‌ನಲ್ಲಿ ಖರೀದಿಸಿದ್ದಾನೆ. ಇಬ್ಬರು ಕೂಡ ಚೆನ್ನೈನ ಟ್ರಿಪ್ಲಿಕೇನ್‌ನಲ್ಲಿ ತಿಂಗಳಿಗೂ ಹೆಚ್ಚು ಕಾಲ ತಂಗಿದ್ದರು ಎಂದು ತಿಳಿದುಬಂದಿದೆ. ಮುಸಾವೀರ್ ಹುಸೇನ್ ಶಜೀಬ್‌ನ ಸಹಾಯಕನನ್ನು ಅಬ್ದುಲ್ ಮಾಥರ್ನ್ ತಹಾ ಎಂದು ಗುರುತಿಸಲಾಗಿದ್ದು, ಆತ ಕೂಡ ತೀರ್ಥಹಳ್ಳಿಯವನಾಗಿದ್ದು, ಶಿವಮೊಗ್ಗ ಐಸಿಸ್ ಮಾಡ್ಯೂಲ್‌ನ ಭಾಗವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮಾರ್ಚ್ 1ರಂದು ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಈ ಬಾಂಬ್ ಸ್ಫೋಟದಿಂದ 9 ಜನ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.13 ರಂದು ಎನ್ಐಎ ತಂಡ ಬಳ್ಳಾರಿಯಲ್ಲಿ ಓರ್ವನನ್ನು ಅರೆಸ್ಟ್ ಮಾಡಿದ್ದರು. ಶಬ್ಬೀರ್ ಎಂಬಾತನನ್ನು ಎನ್ಐಎ ಆಧಿಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು. ಜೊತೆಗೆ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಬಗ್ಗೆ ಸುಳಿವು ನೀಡಿದ್ರೆ 10 ಲಕ್ಷ ಬಹುಮಾನ ನೀಡುವುದಾಗಿ NIA ಘೋಷಣೆ ಮಾಡಿತ್ತು.