ಬಲವಂತದ ಭಿಕ್ಷಾಟನೆ; 47 ಮಕ್ಕಳ ರಕ್ಷಣೆ

6 ಮಕ್ಕಳು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, 12 ಮಕ್ಕಳು ಒಂದರಿಂದ ಮೂರು ವರ್ಷ ವಯಸ್ಸಿನರಾಗಿದ್ದಾರೆ ಎಂದು ತಿಳಿದು ಬಂದಿದೆ.;

Update: 2024-04-13 11:04 GMT
ಬಲವಂತದ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ರಕ್ಷಿಸಲಾಗಿದೆ.
Click the Play button to listen to article

ಬೆಂಗಳೂರು: ಭಿಕ್ಷಾಟನೆಯಲ್ಲಿ ತೊಡಗಿದ್ದ 47 ಅಪ್ರಾಪ್ತ ಮಕ್ಕಳನ್ನು ನಗರ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಇದರಲ್ಲಿ 6 ಮಕ್ಕಳು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, 12 ಮಕ್ಕಳು ಒಂದರಿಂದ ಮೂರು ವರ್ಷ ವಯಸ್ಸಿನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಶುಕ್ರವಾರ (ಏಪ್ರಿಲ್‌ 12) ಬೆಳಗ್ಗೆ 6.30ಕ್ಕೆ ಮಹಿಳಾ ರಕ್ಷಣಾ ವಿಭಾಗ (ಡಬ್ಲ್ಯುಪಿಡಬ್ಲ್ಯು) ಮತ್ತು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ವಿಶೇಷ ತನಿಖಾ ದಳದ ಅಧಿಕಾರಿಗಳು ಪುಲಕೇಶಿನಗರ ಉಪವಿಭಾಗದ ಪೊಲೀಸರೊಂದಿಗೆ ಸೇರಿ ಅಪ್ರಾಪ್ತರನ್ನು ರಕ್ಷಿಸಿದ್ದಾರೆ. ಪುಲಕೇಶಿನಗರದ ಹಾಜೀ ಸರ್ ಇಸ್ಮಾಯಿಲ್ ಸೇಟ್ ಮಸೀದಿ ಬಳಿ ಮಕ್ಕಳು ಭಿಕ್ಷೆ ಬೇಡುತ್ತಿದ್ದರು.

ಮಕ್ಕಳನ್ನು ಭಿಕ್ಷಾಟನೆಗೆ ತಳ್ಳಿದ ಆರೋಪದಲ್ಲಿ 36 ಮಹಿಳೆಯರನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ರಕ್ಷಿಸಲಾದ ಮಕ್ಕಳನ್ನು ಕೌನ್ಸೆಲಿಂಗ್ ಮತ್ತು ಪುನರ್ವಸತಿಗಾಗಿ ಸಿಡಬ್ಲ್ಯೂಸಿಗೆ (Concerned for Working Children) ಹಸ್ತಾಂತರಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಸುತ್ತಿದ್ದು, ರಕ್ಷಿಸಿದ ಮಕ್ಕಳ ಹಿನ್ನೆಲೆಯನ್ನು ಪರಿಶೀಲಿಸಲು ಬಂಧಿತ ಮಹಿಳೆಯರನ್ನು ಪ್ರಶ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮೂರರಿಂದ ಆರು ವರ್ಷದೊಳಗಿನ ಆರು ಮಕ್ಕಳನ್ನು, ಆರರಿಂದ 10 ವರ್ಷದೊಳಗಿನ 16 ಮತ್ತು 10 ವರ್ಷಕ್ಕಿಂತ ಮೇಲ್ಪಟ್ಟ ಏಳು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಅಧಿಕಾರಿಗಳು 19 ಹುಡುಗರು ಮತ್ತು 28 ಹುಡುಗಿಯರನ್ನು ರಕ್ಷಿಸಿದ್ದಾರೆ.

Tags:    

Similar News