ಬಿಬಿಎಂಪಿಯಿಂದ ಬಿಲ್ ಬಾಕಿ: ಬೆಂಗಳೂರಿನಲ್ಲಿ ಎಲ್ಲ ಕಾಮಗಾರಿ ನಿಲ್ಲಿಸುವುದಾಗಿ ಗುತ್ತಿಗೆದಾರರ ಸಂಘ ಎಚ್ಚರಿಕೆ

Update: 2024-07-03 05:36 GMT
ಬಿಬಿಎಂಪಿ

ಬೆಂಗಳೂರಿನಲ್ಲಿ ಗುತ್ತಿಗೆ ಆಧಾರದ ಮೇಲೆ ನಡೆದಿರುವ ಕಾಮಗಾರಿಗಳ ಬಿಲ್ (ಹಣ) ಪಾವತಿ ಮಾಡುವುದು ಸೇರಿದಂತೆ ಗುತ್ತಿಗೆದಾರರ ವಿವಿಧ ಬೇಡಿಕೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಡೇರಿಸಿಲ್ಲ. ಹೀಗಾಗಿ, ಜುಲೈ 8ರಿಂದ ಬೆಂಗಳೂರಿನಾದ್ಯಂತ ಕಾಮಗಾರಿಗಳನ್ನು ನಿಲ್ಲಿಸಲಾಗುವುದು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನಡೆಯುವ ಕಾಮಗಾರಿಗಳಿಗೆ ಸಕಾಲದಲ್ಲಿ ಬಿಲ್ ಪಾವತಿ ಮಾಡುತ್ತಿಲ್ಲ. ಬಾಕಿ ಉಳಿದಿರುವ ಬಿಲ್‌ಗಳನ್ನು ಕಾಲಮಿತಿಯಲ್ಲಿ ಪಾವತಿ ಮಾಡಬೇಕು ಎಂದು ಬಿಬಿಎಂಪಿಯ ಗುತ್ತಿಗೆದಾರರ ಸಂಘವು ಹಲವು ತಿಂಗಳುಗಳಿಂದ ಬೇಡಿಕೆ ಸಲ್ಲಿಸುತ್ತಿದೆ.

ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಗುತ್ತಿಗೆದಾರರ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದರೂ, ಸ್ಪಂದಿಸಿಲ್ಲ. ಗುತ್ತಿಗೆದಾರರ ಬೇಡಿಕೆಗಳನ್ನು ಈಡೇರಿಸುವಂತೆ ಎರಡು ತಿಂಗಳಿನಿಂದ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಲಾಗಿತ್ತು. ಆದರೆ, ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್ ಹೇಳಿದ್ದಾರೆ.

ಗುತ್ತಿಗೆದಾರರ ಬೇಡಿಕೆಗಳನ್ನು ಈಡೇರಿಸದೆ ಇರುವ ಹಿನ್ನೆಲೆಯಲ್ಲಿ ಜುಲೈ 8ರಿಂದ ಬೆಂಗಳೂರಿನ ವಾರ್ಡ್ ಕಾಮಗಾರಿ, ರಸ್ತೆಗಳು, ವೈಟ್ ಟಾಪಿಂಗ್, ರಾಜಕಾಲುವೆ, ಯೋಜನೆ, ಕೆರೆ ಹಾಗೂ ತೋಟಗಾರಿಕೆ ವಿಭಾಗ ಸೇರಿದಂತೆ ಎಲ್ಲ ಮಾದರಿಯ ಕಾಮಗಾರಿಗಳನ್ನು ನಿಲ್ಲಿಸಲಾಗುವುದು. ಇದಕ್ಕೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಗುತ್ತಿಗೆದಾರರ ಸಂಘದ ಬೇಡಿಕೆಗಳೇನು ?

ಗುತ್ತಿಗೆದಾರರ ಸಂಘದಿಂದ ಪ್ರಮುಖ 9 ಬೇಡಿಕೆಗಳನ್ನು ಈಡೇರಿಸುವಂತೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಸಲ್ಲಿಸಿದೆ. ಇದರಲ್ಲಿ ಪ್ರಮುಖವಾಗಿ ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್ಲುಗಳನ್ನು ಪಾವತಿ ಮಾಡುವ ಸಂದರ್ಭದಲ್ಲಿ ತಡೆಹಿಡಿಯಲಾಗಿರುವ ಶೇ 25 ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಳೆದ ಎರಡು ವರ್ಷದಲ್ಲಿ ಕಾಮಗಾರಿಗಳ ಬಾಕಿ ಬಿಲ್ಲು ಅಂದಾಜು 1,600 ಕೋಟಿ ಪಾವತಿ ಬಾಕಿ ಇದೆ. ಇದರಲ್ಲಿ ಕನಿಷ್ಠ 12 ತಿಂಗಳ ಎಲ್ಒಸಿ ಬಿಡುಗಡೆ ಮಾಡಬೇಕು. ಗುತ್ತಿಗೆದಾರರಿಗೆ ಬಿಲ್ ಸಲ್ಲಿಸುವುದಕ್ಕೆ ಸರಳ ಮಾದರಿಯನ್ನು ಅನುಸರಿಸಬೇಕು. ಬಿಬಿಎಂಪಿಯ ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯಿಂದ ಬಿಲ್ ಪಾವತಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗಿದೆ.

Tags:    

Similar News