ಸಚಿವ ಮುನಿಯಪ್ಪಗೆ ಸ್ವಕ್ಷೇತ್ರದಲ್ಲೇ ರೈತರಿಂದ ಘೇರಾವ್‌

ಕೆ.ಎಚ್.ಮುನಿಯಪ್ಪ ಅವರಿಗೆ ಸ್ವಕ್ಷೇತ್ರದಲ್ಲೇ ರೈತರು ಫೇರಾವ್ ಹಾಕಿ, ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

Update: 2024-04-15 11:25 GMT
ಭೂ ಸ್ವಾಧೀನ ವಿರೋಧಿ ಹೋರಾಟನಿರತ ರೈತರು ಹಸಿರು ಬಾವುಟ ಪ್ರದರ್ಶಿಸಿ, ಘೋಷಣೆ ಕೂಗಿದರು.
Click the Play button to listen to article

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯರ ಪರ ಭಾನುವಾರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಸ್ವಕ್ಷೇತ್ರದಲ್ಲೇ ರೈತರು ಫೇರಾವ್ ಹಾಕಿ, ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಚನ್ನರಾಯಪಟ್ಟಣದಲ್ಲಿ ಮತ ಪ್ರಚಾರದ ವೇಳೆ ಮುನಿಯಪ್ಪ ಭಾಷಣ ಪ್ರಾರಂಭಿಸುತ್ತಿದ್ದಂತೆ ಭೂ ಸ್ವಾಧೀನ ವಿರೋಧಿ ಹೋರಾಟನಿರತ ರೈತರು ಹಸಿರು ಬಾವುಟ ಪ್ರದರ್ಶಿಸಿ, ಘೋಷಣೆ ಕೂಗಿದರು.

ಇದರಿಂದ ಪೇಚಿಗೆ ಸಿಲುಗಿದ ಕಾಂಗ್ರೆಸ್ ಮುಖಂಡರು ಪ್ರತಿಭಟನನಿರತ ರೈತರನ್ನು ಸಮಾಧಾನ ಮಾಡಲು ಜಿ.ಪಂ ಮಾಜಿ ಅಧ್ಯಕ್ಷ ಚನ್ನಹಳ್ಳಿ ಬಿ.ರಾಜಣ್ಣ ಅವರನ್ನು ಕಳುಹಿಸಿದರು. ಸಂಧಾನ ವಿಫಲವಾಗಿ ಹೋರಾಟ ಇನ್ನಷ್ಟು ತೀವ್ರಗೊಂಡಿತು. ಇದರಿಂದಾಗಿ ಪ್ರಚಾರ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಜತೆ ಭೂ ಸ್ವಾಧೀನ ವಿರೋಧಿ ರೈತರ ಧರಣಿ ಸ್ಥಳಕ್ಕೆ ತೆರಳಿದ ಸಚಿವ ಕೆ.ಎಚ್‌.ಮುನಿಯಪ್ಪ ರೈತರೊಂದಿಗೆ ಮಾತುಕತೆ ನಡೆಸಿದರು.

'ನನ್ನಿಂದ ತಪ್ಪಾಗಿದೆ. ನಿಮ್ಮ ವಿಚಾರದಲ್ಲಿ ವಿವಿಧ ಕಾರಣಗಳಿಂದ ತಡವಾಗಿದ್ದು, ಲೋಕಸಭಾ ಚುನಾವಣೆಯ ನಂತರ ಪ್ರಾಮಾಣಿಕವಾಗಿ ಮುಖ್ಯಮಂತ್ರಿ, ಕೈಗಾರಿಕಾ ಸಚಿವರ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು' ಎಂದು ಆಶ್ವಾಸನೆ ನೀಡಿದರು. ಚುನಾವಣೆ ಬಹಿಷ್ಕಾರ ಮಾಡದಂತೆ ಸಚಿವರು ಮನವಿ ಮಾಡಿದರು.

'ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದರೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವುದಾಗಿ ಆಶ್ವಾಸನೆ ನೀಡಿದ್ದಿರಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಪರ ನಿಲುವು ತಾಳುವುದಾಗಿ ತಿಳಿಸಿದ್ದಿರಿ. ಈಗಾಗಲೇ ನಿಮ್ಮನ್ನು 20ಕ್ಕೂ ಹೆಚ್ಚು ಬಾರಿ ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ. ನೀವು ಬಂದು ಮನವೊಲಿಸಿದ ತಕ್ಷಣ ಕಾಂಗ್ರೆಸ್ ಪಕ್ಷವನ್ನು ನಂಬಲು ಸಿದ್ಧರಿಲ್ಲ' ಎಂದು ರೈತರು ಮತ್ತು ಹೋರಾಟಗಾರ ಚೀಮಾಚನಹಳ್ಳಿ ರಮೇಶ್ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಸರ್ಕಾರದಲ್ಲಿ 72 ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ, ಪೊಲೀಸರಿಂದ ದಬ್ಬಾಳಿಕೆ ಮಾಡಲಾಯಿತು ಎಂದು ರೈತರು ಈ ವೇಳೆ ಕಣ್ಣೀರು ಹಾಕಿದರು. ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುನಿಯಪ್ಪ ಸ್ಥಳದಿಂದ ತೆರಳಿದರು.

Tags:    

Similar News