ಉಗ್ರರಿಗೆ ಕರ್ನಾಟಕ ಬ್ರದರ್ಸ್ ಮತ್ತು ಪ.ಬಂಗಾಳ ಸಿಸ್ಟರ್ ಸಪೋರ್ಟ್: ಆರ್. ಅಶೋಕ್

ಉಗ್ರರು ಅವರಿಗೆ ರಕ್ಷಣೆ ಸಿಗುವ ರಾಜ್ಯಗಳನ್ನು ಹುಡುಕುತ್ತಿದ್ದು, ಪ.ಬಂಗಾಳಕ್ಕೆ ಹೋಗಿದ್ದಾರೆ. ಇಲ್ಲಿ ಬ್ರದರ್ಸ್‌ ಇದ್ದರೆ, ಅಲ್ಲಿ ಸಿಸ್ಟರ್ಸ್‌ ಇದ್ದಾರೆ ಎಂದು ಆರ್‌. ಅಶೋಕ್‌ ದೂರಿದ್ದಾರೆ.

Update: 2024-04-13 11:08 GMT
ಆರ್‌. ಅಶೋಕ್‌ ಪತ್ರಿಕಾಗೋಷ್ಠಿ

ದೇಶದಲ್ಲಿ ಉಗ್ರರು ಅವರಿಗೆ ರಕ್ಷಣೆ ಸಿಗುವ ರಾಜ್ಯಗಳನ್ನು ಹುಡುಕುತ್ತಿದ್ದಾರೆ. ಬ್ರದರ್ಸ್ (ಕರ್ನಾಟಕ) ರಾಜ್ಯದಲ್ಲಿ ಬಾಂಬ್ ಸ್ಫೋಟ ಮಾಡಿ, ಸಿಸ್ಟರ್ (ಪಶ್ವಿಮ ಬಂಗಾಳ) ರಾಜ್ಯದಲ್ಲಿ ಸುರಕ್ಷತೆ ಪಡೆದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻಮಂಗಳೂರು ಕುಕ್ಕರ್ ಬಾಂಬ್ ಸ್ಫೋಟವಾದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಅವರು ನಮ್ಮ ಬ್ರದರ್ಸ್ ಎಂದು ಹೇಳಿದ್ದರು. ಈಗ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಮಾಡಿದವರು ಸಿಸ್ಟರ್ ರಾಜ್ಯದಲ್ಲಿ ಅಂದರೆ, ಪಶ್ಚಿಮ ಬಂಗಾಳದಲ್ಲಿ ಹೋಗಿ ರಕ್ಷಣೆ ಪಡೆದಿದ್ದಾರೆʼ ಎಂದು ವ್ಯಂಗ್ಯವಾಡಿದರು.

ʻದಿ ರಾಮೇಶ್ವರಂ ಬಾಂಬ್‌ ಸ್ಫೋಟದಲ್ಲಿ ಭಾಗಿಯಾದವರನ್ನು ರಕ್ಷಣೆ ಮಾಡಲು ಕಾಂಗ್ರೆಸ್‌ ಮುಂದಾಗಿತ್ತು. ಕಾಂಗ್ರೆಸ್‌ ನಾಯಕರು ಸೂಚಿಸಿದ ಜಾಡಿನಲ್ಲೇ ಪೊಲೀಸರು ತನಿಖೆ ನಡೆಸಿದರು. ಹೀಗಾಗಿ, ತನಿಖೆ ಪ್ರಗತಿ ಸಾಧಿಸಲಿಲ್ಲ. ಕಾಂಗ್ರೆಸ್‌ ತುಷ್ಟೀಕರಣ ರಾಜಕೀಯದಿಂದ ಆರೋಪಿಗಳನ್ನು ಪತ್ತೆ ಮತ್ತು ಬಂಧನ ಸಾಧ್ಯವಾಗಿರಲಿಲ್ಲʼ ಎಂದು ಗಂಭೀರ ಆರೋಪ ಮಾಡಿದರು. 

ʻಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಕಾಂಗ್ರೆಸ್‌ಗೆ ಮತಬ್ಯಾಂಕ್‌ ಕಳೆದುಕೊಳ್ಳುವ ಆತಂಕ ಎದುರಾಗುತ್ತದೆ. ರಾಮೇಶ್ವರಂ ಸ್ಫೋಟ ಪ್ರಕರಣದಲ್ಲೂ ಅಲ್ಪ ಸಂಖ್ಯಾತರಿಗೆ ನೋವಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಪ್ರಾರಂಭದಲ್ಲೇ ವಿಷಯಾಂತರ ಮಾಡಿದರು. ಅಲ್ಪಸಂಖ್ಯಾತರಿಗೆ ಯಾವುದೇ ಕಾರಣಕ್ಕೂ ನೋವಾಗಬಾರದು ಎನ್ನು ವುದು ಕಾಂಗ್ರೆಸ್‌ನ ಮನಸ್ಥಿತಿ. ಬೆಂಗಳೂರಿನ ದಿ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಸಚಿವರು ಮೊದಲಿನಿಂದಲೂ ಪೊಲೀಸರು ಹಾಗೂ ರಾಜ್ಯದ ಜನರ ದಿಕ್ಕು ತಪ್ಪಿಸಿದ್ದರು. ಸಚಿವ ಡಿ.ಕೆ ಶಿವಕುಮಾರ್ ಅವರು ಸೇರಿದಂತೆ ಹಲವರು ಸಚಿವರು "ಇದು ಹೋಟೆಲ್‌ಳ ನಡುವಿನ ವ್ಯಾಜ್ಯ, ಸಣ್ಣ ವಿಷಯ" ಎಂದು ವಿಷಯಾಂತರ ಮಾಡಿದ್ದರುʼ ಎಂದು ಹೇಳಿದರು.

ʻವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿಯೇ ಇಲ್ಲ ಎಂದು ಕಾಂಗ್ರೆಸ್‌ನವರು ವಾದಿಸಿದ್ದರು. ಬಿಜೆಪಿಯಿಂದ ಎರಡು ದಿನ ಸದನದಲ್ಲಿ ಹೋರಾಟ ಮಾಡಿದ ನಂತರ ತನಿಖೆ ನಡೆಸಿದರು. ಸಚಿವ ಪ್ರಿಯಾಂಕ ಖರ್ಗೆ, "ನಿಮ್ಮದು ಕಾಮಾಲೆ ಕಣ್ಣು, ಎಫ್ಎಸ್ಎಲ್ ರಿಪೋರ್ಟ್ ಬಿಜೆಪಿ ಅವರೇ ಮಾಡಿಸಿದ್ದಾರೆ" ಎಂದಿದ್ದರು. ಈಗ ಸತ್ಯ ಬಹಿರಂಗವಾಗಿದೆʼ ಎಂದರು.

ಸೇಫ್ ರಾಜ್ಯಗಳನ್ನೇ ಹುಡುಕುತ್ತಾರೆ

ಉಗ್ರರರು ಯಾವ ರಾಜ್ಯದಲ್ಲಿದ್ದಾರೆ ಅವರಿಗೆ ರಕ್ಷಣೆ ಸಿಗುತ್ತದೆ ಎಂದು ಹುಡುಕುತ್ತಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಉಗ್ರರ ಚಲನವಲಗಳು ಕಂಡುಬರುತ್ತಿವೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಮಾಡಿದ ಉಗ್ರರು ರಾಜಸ್ಥಾನ, ಗುಜರಾತ್ ಹಾಗೂ ಮಧ್ಯಪ್ರದೇಶಕ್ಕೆ ಏಕೆ ಹೋಗಲಿಲ್ಲ ಎಂದು ಆರ್. ಅಶೋಕ್ ಪ್ರಶ್ನೆ ಮಾಡಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳು ಶೇ 90ರಷ್ಟು ಇಳಿಕೆಯಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ದಿನವೂ ಬಾಂಬ್ ಸ್ಫೋಟವಾಗುತ್ತಿತ್ತು. ಈಗ ದೇಶ ಸುಭದ್ರವಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲೂ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಒಂದೇ ವಾರದಲ್ಲಿ ಪ್ರಕರಣದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದರು. ಉಗ್ರರನ್ನು ಬಂಧಿಸಿ, ಕರ್ನಾಟಕದ ಜನ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಅವರಿಗೆ ಕರ್ನಾಟಕದ ಜನರ ಪರವಾಗಿ ಧನ್ಯವಾದ ಎಂದು ಹೇಳಿದರು.

ಕಾಂಗ್ರೆಸ್‌ನವರಿಗೆ ಕಾಮನ್‌ಸೆನ್ಸ್‌ ಇಲ್ಲ

ಕಾಂಗ್ರೆಸ್ ನಾಯಕರಿಗೆ ಸಾಮಾನ್ಯ ಜ್ಞಾನ ಇಲ್ಲ ಎಂದು ಆರ್. ಅಶೋಕ್ ಕಿಡಿಕಾರಿದರು. ಕಾಂಗ್ರೆಸ್‌ನವರಿಗೆ ದೇಶದ ಭದ್ರತೆಯ ಬಗ್ಗೆ ಕಾಳಜಿ ಇಲ್ಲ. ರಾಮೇಶ್ವರಂ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತ ಸಾಯಿ ಪ್ರಸಾದ್ ಸಾಕ್ಷಿದಾರನಾಗಿದ್ದು, ಅವರ ಸಾಕ್ಷಿಯಿಂದ ಎನ್ಐಎಗೆ ಹಲವು ಮಾಹಿತಿ ಲಭ್ಯವಾಗಿದೆ. ಸಚಿವ ದಿನೇಶ್ ಗೂಂಡುರಾವ್‌ಗೆ ಕಾಮನ್‌ಸೆನ್ಸ್‌ ಇಲ್ಲ. ಮಂತ್ರಿಗಳಿಗೆ ಕನಿಷ್ಠ ಕಾಮನ್‌ಸೆನ್ಸ್‌ ಇರಬೇಕು. ಸಾಕ್ಷಿಯ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಸಾಕ್ಷಿದಾರರಿಗೆ ಅಪಾಯ ಎದುರಾದರೆ ಯಾರು ಹೊಣೆ, ಉಗ್ರರ ಬಗ್ಗೆ ಮಾಹಿತಿ ನೀಡಿದವರ ಜೀವಕ್ಕೆ ಕಾಂಗ್ರೆಸ್ ಕುತ್ತು ತಂದಿದೆ. ದೇಶದ ಬಗ್ಗೆ ನಿಜವಾಗಿಯೂ ಕಾಳಜಿ ಇದಿದ್ದರೆ ಕಾಂಗ್ರೆಸ್‌ನವರು ಈ ಕೆಲಸ  ಮಾಡುತ್ತಿರಲಿಲ್ಲ ಎಂದರು.

ಲೂಟಿ ಮಾಡುವುದಕ್ಕೆ ಕಾಂಗ್ರೆಸ್‌ನವರಿಗೆ ಇನ್ನೊಂದು ದೇಶ ಬೇಕಾಗಿದೆ. ಅದಕ್ಕೆ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ದೇಶ ವಿಭಜನೆಯ ಮಾತನಾಡಿದ್ದಾರೆ. ಲೂಟಿ ಮಾಡುವುದೇ ಇವರ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಮೆಚ್ಚಿದ ನಾಯಕ, ವಿಶ್ವವೇ ಮೋದಿ ಅವರ ನಾಯಕತ್ವವನ್ನು ಮೆಚ್ಚಿಕೊಂಡಿದೆ. ಅವರನ್ನು ಹಿಟ್ಲರ್, ವಸೂಲಿಗಾರ ಹಾಗೂ ಸರ್ವಾಧಿಕಾರಿ ಎಂದು ವೈಯಕ್ತಿಕ ಟೀಕೆ ಮಾಡಲಾಗುತ್ತಿದೆ. ಚುನಾವಣೆ ಸಮಯದಲ್ಲಿ ವೈಯಕ್ತಿ ಆರೋಪ ಮಾಡುವುದು ಅಪರಾಧಕ್ಕೆ ಸಮಾನವಾಗಿದ್ದು, ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ತಿಳಿಸಿದರು. 

Tags:    

Similar News