ಐಸಿಎಂಆರ್ ಡೇಟಾ ಸೋರಿಕೆ: ನಾಲ್ವರ ಬಂಧನ

ಡಾರ್ಕ್ ವೆಬ್‌ನಲ್ಲಿ 81 ಕೋಟಿಗೂ ಹೆಚ್ಚು ಭಾರತೀಯರ ವೈಯಕ್ತಿಕ ವಿವರ ಮಾರಾಟ

Update: 2024-02-05 06:30 GMT

ಡಾರ್ಕ್ ವೆಬ್‌ನಲ್ಲಿ ಆಧಾರ್ ಮತ್ತು ಪಾಸ್‌ಪೋರ್ಟ್ ದಾಖಲೆಗಳಂತಹ ಖಾಸಗಿ ಮಾಹಿತಿಯನ್ನು ಪತ್ತೆ ಮಾಡಿದಾಗ ತನಿಖಾ ಸಂಸ್ಥೆಗಳು ಅಕ್ಟೋಬರ್‌ನಲ್ಲಿ ಭದ್ರತಾ ಲೋಪವನ್ನು ಪತ್ತೆಹಚ್ಚಿದವು.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಡಾರ್ಕ್ ವೆಬ್‌ನಲ್ಲಿ 81 ಕೋಟಿಗೂ ಹೆಚ್ಚು ಭಾರತೀಯರ ವೈಯಕ್ತಿಕ ವಿವರಗಳನ್ನು ಮಾರಾಟ ಮಾಡಿದ್ದಕ್ಕಾಗಿ ಇವರನ್ನು ಬಂಧಿಸಲಾಗಿದೆ.

ಐಸಿಎಂಆರ್‌ನ ಡೇಟಾ ಬ್ಯಾಂಕ್‌ನಿಂದ 81 ಕೋಟಿಗೂ ಹೆಚ್ಚು ಭಾರತೀಯರ ವೈಯಕ್ತಿಕ ವಿವರಗಳು ಸೋರಿಕೆಯಾಗಿದ್ದು, ಇವುಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಗಳು ಕಂಡುಕೊಂಡಿದ್ದು, ಈ ಹಿನ್ನಲೆಯಲ್ಲಿ ಒಡಿಶಾದ ಬಿ.ಟೆಕ್‌ ಪದವೀಧರ ಹಾಗೂ ಹರಿಯಾಣದ ಇಬ್ಬರು ಮತ್ತು ಝಾನ್ಸಿಯ ಒಬ್ಬರನ್ನು ಕಳೆದ ವಾರ ಬಂಧಿಸಲಾಗಿದೆ. ಅವರನ್ನು ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಶಂಕಿತರು ಪೊಲೀಸ್‌ ವಿಚಾರಣೆ ಸಂದರ್ಭದಲ್ಲಿ ತಾವು ಮೂರು ವರ್ಷಗಳ ಹಿಂದೆ ಗೇಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಭೇಟಿಯಾಗಿ ಸ್ನೇಹಿತರಾಗಿರುವುದಾಗಿ ತಿಳಿಸಿದ್ದಾರೆ. ಹಣ ಗಳಿಸಲು ನಿರ್ಧರಿಸಿ ಈ ಕೃತ್ಯಕ್ಕೆ ಕೈ ಹಾಕಿರುವುದಾಗಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಡೇಟಾಗಳನ್ನು ಹೇಗೆ ಕದ್ದಿದ್ದಾರೆ ಎಂಬುದನ್ನು ಕಂಡುಹಿಡಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಫೆಬ್ರವರಿಯಿಂದ ಐಸಿಎಂಆರ್ ಅನೇಕ ಸೈಬರ್ ದಾಳಿಯ ಪ್ರಯತ್ನಗಳನ್ನು ಎದುರಿಸುತ್ತಿದೆ. ಐಸಿಎಂಆರ್ ಸರ್ವರ್‌ಗಳನ್ನು ಹ್ಯಾಕ್ ಮಾಡಲು ಕಳೆದ ವರ್ಷ 6,000 ಕ್ಕೂ ಹೆಚ್ಚು ಪ್ರಯತ್ನಗಳನ್ನು ಮಾಡಲಾಗಿದೆ.

Tags:    

Similar News