ಕೋವಿಡ್‌ ಉಪತಳಿ ಜೆಎನ್1 ವೈರಸ್‌ ಎಷ್ಟು ಡೇಂಜರ್? ಸೋಂಕು ಲಕ್ಷಣಗಳೇನು?

ಜೆಎನ್‌ 1 ಅತಿವೇಗವಾಗಿ ಹರಡುವ ವೈರಸ್‌;

Update: 2024-02-05 06:30 GMT

ಕೇರಳದಲ್ಲಿ 78 ವರ್ಷದ ಮಹಿಳೆಯೊಬ್ಬರಲ್ಲಿ ಕೋವಿಡ್‌ ಉಪತಳಿ ಜೆಎನ್.1 ಪತ್ತೆಯಾದ ಹಿನ್ನಲೆ ಕರ್ನಾಟಕದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಿರಿಯ ನಾಗರಿಕರು ಮತ್ತು ಅಪಾಯಕಾರಿ ಕಾಯಿಲೆ ಹೊಂದಿರುವವರು ಮಾಸ್ಕ್ ಧರಿಸಲು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಕೊಡಗಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, “ಕೋವಿಡ್‌ ಉಪತಳಿಯ ಬಗ್ಗೆ ಭಯಪಡುವ ಅಗತ್ಯವಿಲ್ಲ. ಭಾನುವಾರ ತಾಂತ್ರಿಕ ಸಭೆ ನಡೆಸಿ, ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚರ್ಚಿಸಿದ್ದೇವೆ. ಶೀಘ್ರ ಸಲಹೆ ನೀಡುತ್ತೇವೆ. ಈಗಾಗಲೇ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ ಸರ್ಕಾರಿ ಆಸ್ಪತ್ರೆಗಳಿಗೆ ಸೂಚಿಸಲಾಗಿದ್ದು, ಕೇರಳದೊಂದಿಗೆ ಗಡಿ ಹಂಚಿಕೊಳ್ಳುವ ಜಿಲ್ಲೆಗಳ ಜನರು ಹೆಚ್ಚು ಜಾಗರೂಕರಾಗಿರಬೇಕಿದೆ. ಒಂದು ವೇಳೆ ಉಸಿರಾಟದ ಸಮಸ್ಯೆ ಕಂಡುಬಂದಲ್ಲಿ ಶೀಘ್ರವೇ ಪರೀಕ್ಷೆ ಮಾಡಿಸಿಕೊಳ್ಳಬೇಕು” ಎಂದರು.

ಸೋಂಕು ಲಕ್ಷಣಗಳಿರುವ ಕೇರಳದ 79 ವರ್ಷದ ಮಹಿಳೆಯ ಗಂಟಲು ಮಾದರಿಯನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಿಗೆ ಹೊಸ ಉಪತಳಿಯ ಸೋಂಕಿರುವುದು ಪತ್ತೆಯಾಗಿತ್ತು.

ಕೋವಿಡ್‌ -19 ವೈರಸ್ಸಿನ ಜೆಎನ್‌ 1 ರೂಪಾಂತರ ಎಂದರೇನು?

ಕೋವಿಡ್-19 ವೈರಸ್ಸಿನ ಜೆಎನ್‌ 1 ರೂಪಾಂತರವು ಒಮಿಕ್ರಾನ್‌ ಉಪತಳಿ ಬಿಎ 2.86 ರ ಉಪತಳಿಯನ್ನು ಹೋಲುತ್ತದೆ. 2023ರ ಸೆಪ್ಟೆಂಬರ್‌ನಲ್ಲಿ ಅಮೆರಿಕದಲ್ಲಿ ಇದು ಮೊದಲ ಬಾರಿಗೆ ಪತ್ತೆಯಾಗಿತ್ತು. ಚೀನಾದಲ್ಲಿ ಕಳೆದ ಒಂದು ವಾರದ ಹಿಂದೆ ನಿರ್ದಿಷ್ಟ ಉಪತಳಿ ಸೋಂಕಿನ ಏಳು ಪ್ರಕರಣ ಪತ್ತೆಯಾಗಿದ್ದವು. ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ 38 ದೇಶಗಳಲ್ಲಿ ಈ ವೈರಸ್‌ ಹರಡುತ್ತಿದೆ ಎಂದು ಹೇಳಲಾಗುತ್ತಿದೆ.

ಕೋವಿಡ್ ರೂಪಾಂತರ ಜೆಎನ್‌ 1 ಸೋಂಕಿನ ಲಕ್ಷಣಗಳೇನು?

ಜ್ವರ, ನೆಗಡಿ, ಮೂಗು ಸೋರುವಿಕೆ, ಗಂಟಲು ನೋವು, ತಲೆನೋವು, ಕೆಮ್ಮು ಮತ್ತು ಕೆಲವೊಮ್ಮೆ ಲಘು ಹೊಟ್ಟೆ ನೋವು ಈ ಸೋಂಕು ಲಕ್ಷಣಗಳಲ್ಲಿ ಪ್ರಮುಖವಾದವು. ಈ ಪರಿಸ್ಥಿತಿ ಸಾಮಾನ್ಯವಾಗಿ ನಾಲ್ಕರಿಂದ ಐದು ದಿನಗಳಲ್ಲಿ ಸುಧಾರಿಸುತ್ತದೆ. ಒಂದು ವೇಳೆ ಆ ಅವಧಿಯಲ್ಲಿ ಲಕ್ಷಣಗಳು ತೀವ್ರವಾಗಿದ್ದು ಸೋಂಕು ಉಲ್ಬಣವಾದರೆ ಕೂಡಲೇ ವೈದ್ಯರನ್ನು ಕಾಣಬೇಕು.


ಜೆಎನ್‌ 1 ರ ಸೋಂಕು ತಡೆಗಟ್ಟಲು ಏನು ಮಾಡಬೇಕು?

ಜೆಎನ್‌ 1 ವೈರಸ್‌ ಅತಿವೇಗವಾಗಿ ಹರಡುವುದು ಎನ್ನಲಾಗುತ್ತಿದ್ದು, ಅದರ ಸೋಂಕು ತಡೆಯಲು ಸಾಮಾಜಿಕ ಅಂತರ, ಆಗಾಗ್ಗೆ ಕೈಗಳನ್ನು ತೊಳೆಯಲು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವಂತೆ ತಜ್ಞರು ಶಿಫಾರಸು ಮಾಡಿದ್ದಾರೆ.

ಜೆಎನ್‌ 1 ವೈರಸ್‌ ವಿರುದ್ಧ ಲಸಿಕೆ ರಕ್ಷಣೆ ನೀಡುವುದೇ?

ಜೆಎನ್‌ 1 ವೈರಸ್‌ ಅಮೆರಿಕಾ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳಲ್ಲಿ ಕಂಡುಬಂದಿದೆ. ಎಲ್ಲಾ ಅನುಮೋದಿತ ಕೋವಿಡ್‌- 19 ಲಸಿಕೆಗಳೂ ಜೆಎನ್‌ 1 ರ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ ಎಚ್‌ ಒ) ತಿಳಿಸಿದೆ.

Tags:    

Similar News