Mekedatu Project | ಮೋದಿ ಮಧ್ಯಪ್ರವೇಶಕ್ಕೆ ದೇವೇಗೌಡ ಮನವಿ
ಜನರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಮೇಕೆದಾಟು ಯೋಜನೆಯಲ್ಲಿ 5000 ಎಕರೆ ಮುಳುಗಡೆ ಆಗುವುದಿಲ್ಲ. ನೀರು ಸಂಗ್ರಹಕ್ಕೆ ಹೆಚ್ಚಿನ ಜಾಗ ಬಳಸುವುದಿಲ್ಲ. ನಾನು ಪರಿಸರವಾದಿಗಳಿಗೆ ಮನವಿ ಮಾಡ್ತೀನಿ ಎಂದು ದೇವೇಗೌಡರು ಹೇಳಿದ್ದಾರೆ.;
ಬೆಂಗಳೂರು: ʼಮೇಕೆದಾಟು ಯೋಜನೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಮಾನವೀಯತೆಯ ದೃಷ್ಟಿಕೋನದಿಂದ ನೋಡಬೇಕುʼ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡಬೇಕು. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಿ, ಕರ್ನಾಟಕದ ಕುಡಿಯುವ ನೀರಿನ ಸಂಕಷ್ಟವನ್ನು ಪರಿಹಾರ ಮಾಡಬೇಕು ಎಂದು ದೇವೇಗೌಡರು ಹೇಳಿದ್ದಾರೆ.
ʼಮೇಕೆದಾಟು ಸಂಬಂಧ ಪ್ರಧಾನಿ ಮೋದಿಗೆ ಈಗಾಗಲೇ ಪತ್ರ ಬರೆದು ಜಲಶಕ್ತಿ ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ನಾನು ಕೋರಿದ್ದೆ. ತಟಸ್ಥವಾದ ಒಂದು ಸಮಿತಿಯನ್ನು ಉಭಯ ರಾಜ್ಯಗಳಿಗೆ ಕಳುಹಿಸಿ, ವಸ್ತುನಿಷ್ಠ ಮಾಹಿತಿ ಪಡೆದುಕೊಳ್ಳಬೇಕು. ಕಾವೇರಿ ಜಲಸಂಕಷ್ಟದ ಈಗಿನ ವಾಸ್ತವಾಂಶದ ಆಧಾರದ ಮೇಲೆ ಕೇಂದ್ರ ಜಲಶಕ್ತಿ ಇಲಾಖೆಯಿಂದ ಸುಪ್ರೀಂಕೋರ್ಟ್‌ಗೆ ತಾವು ಅರ್ಜಿ ಹಾಕಬೇಕು. ಮಳೆ ಇಲ್ಲದೆ ಕಂಗಾಲಾಗಿರುವ ರಾಜ್ಯದ ರೈತರ ನೆರವಿಗೆ ಧಾವಿಸಬೇಕು ಎಂದು ಉಲ್ಲೇಖಿಸಿದ್ದೆʼ ಎಂದು ದೇವೇಗೌಡ ಅವರು ಹೇಳಿದ್ದಾರೆ.
ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು “ಕಾವೇರಿ ಜಲಾನಯನ ಪ್ರದೇಶದಲ್ಲಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಜನರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಮೇಕೆದಾಟು ಯೋಜನೆಯಲ್ಲಿ 5000 ಎಕರೆ ಮುಳುಗಡೆ ಆಗುವುದಿಲ್ಲ. ನೀರು ಸಂಗ್ರಹಕ್ಕೆ ಹೆಚ್ಚಿನ ಜಾಗ ಬಳಸುವುದಿಲ್ಲ. ನಾನು ಪರಿಸರವಾದಿಗಳಿಗೆ ಮನವಿ ಮಾಡ್ತೀನಿ, ಕುಡಿಯುವ ನೀರಿಗಾಗಿ ಮೇಕೆದಾಟು ಅವಶ್ಯಕತೆ ಇದೆ. ಪ್ರಧಾನಿಯವರು ಈ ವಿಚಾರದಲ್ಲಿ ಅಧಿಕಾರಿಗಳು ಹೇಳಿರುವ 30 ಟಿಎಂಸಿ ನೀರಿನ ಬಳಕೆಗೆ ಅವಕಾಶ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಮಳೆ ಕೊರತೆ ಕಾರಣದಿಂದ ರೈತರು ಪರದಾಡುತ್ತಿದ್ಧಾರೆ. ಕಾವೇರಿ ಕೊಳ್ಳದ ಜಲಾಶಯಗಳಿಗೆ ನೀರು ಹರಿದು ಬಂದಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಕಾವೇರಿ ನದಿ ನೀರು ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿವೆ. ಇದು ರಾಜ್ಯದ ಸಂಕಷ್ಟಕ್ಕೆ ಕಾರಣವಾಗಿದೆ” ಎಂದು ದೇವೇಗೌಡರು ಹೇಳಿದ್ದಾರೆ.
ಮೇಕೆದಾಟು ಯೋಜನೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಮಾನವೀಯತೆಯ ದೃಷ್ಟಿಕೋನದಿಂದ ನೋಡಬೇಕು ಎಂದು ಮನವಿ ಮಾಡಿದ ಅವರು, “ಕುಡಿಯುವ ನೀರಿಗಾಗಿ ಈ ಯೋಜನೆ ಅವಶ್ಯಕತೆ ಇದೆ. ಜನ 5 ತಿಂಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದು ಕಾಂಗ್ರೆಸ್, ಬಿಜೆಪಿ, ಡಿಎಂಕೆ, ಅಣ್ಣಾ ಡಿಎಂಕೆ ಪ್ರಶ್ನೆ ಅಲ್ಲ, ಇದು ಜನರ ಸಮಸ್ಯೆಯ ಪ್ರಶ್ನೆ. ಕುಡಿಯುವ ನೀರಿನ ಸಮಸ್ಯೆ, ಜನ ಕುಡಿಯುವ ನೀರಿಗೆ ತೊಂದರೆ ಪಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಚುನಾವಣೆ ಮುಗಿದ ಮೇಲೆ ಮೇಕೆದಾಟು ಕಟ್ಟಲು ಬದ್ಧ ಎಂದು ನಾವು ಪ್ರಣಾಳಿಕೆಯಲ್ಲಿ ಹಾಕುತ್ತೇವೆ ಎಂದು ಅವರು ತಿಳಿಸಿದರು.