ಶವರ್ಮ ಮಾದರಿಗಳಲ್ಲೂ ಹಾನಿಕಾರಕ ಬ್ಯಾಕ್ಟೀರಿಯಾಗಳು ಪತ್ತೆ
ಶವರ್ಮ ಮಾದರಿಗಳಲ್ಲಿ ಮಾನವನ ಆರೋಗ್ಯಕ್ಕೆ ಹಾನಿಕಾರಕ ಬ್ಯಾಕ್ಟೀರಿಯಾ ಇರುವುದನ್ನು ಕಂಡು ಹಿಡಿದಿದ್ದಾರೆ
ಆಹಾರ ಪದಾರ್ಥಗಳಲ್ಲಿ ಸಿಂಥೆಟಿಕ್ ಮತ್ತು ಕೃತಕ ಬಣ್ಣಗಳ ವ್ಯಾಪಕವಾಗಿ ಬಳಸುತ್ತಿರುವುದನ್ನು ಖಂಡಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎ) ಇಲಾಖೆ ಶನಿವಾರ ಶವರ್ಮ ಖಾದ್ಯಗಳನ್ನು ಮಾರಾಟ ಮಾಡುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮೇಲೆ ಕ್ರಮ ಕೈಗೊಂಡಿದೆ. ಶವರ್ಮ ತಯಾರಿಕೆಯ ಸಮಯದಲ್ಲಿ ಅನೈರ್ಮಲ್ಯ ಉಂಟಾಗುವ ಬಗ್ಗೆ ಎಫ್‌ಎಸ್‌ಎಸ್‌ಎ ರಾಜ್ಯದಾದ್ಯಂತ ಅನೇಕ ದೂರುಗಳನ್ನು ಸ್ವೀಕರಿಸಿದೆ.
ಈ ನಿಟ್ಟಿನಲ್ಲಿ ಅಧಿಕಾರಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ನಗರ ವ್ಯಾಪ್ತಿಯ ಹೋಟೆಲ್‌ಗಳು ಸೇರಿದಂತೆ 10 ಜಿಲ್ಲೆಗಳಿಂದ ಶವರ್ಮ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳಲ್ಲಿ ಹೆಚ್ಚಿನ ಮಾದರಿಗಳು ಕಳಪೆ ಗುಣಮಟ್ಟದ ಮತ್ತು ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಅಂಶವನ್ನು ಪತ್ತೆಹಚ್ಚಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಬಗ್ಗೆ ಅಧಿಕೃತ ಪ್ರಕಟನೆ ಹೊರಡಿಸಿ ಮಾತನಾಡಿರುವ ಎಫ್‌ಎಸ್‌ಎಸ್‌ಎಯ ಹಿರಿಯ ಅಧಿಕಾರಿಯೊಬ್ಬರು, “ನಾವು ಸಂಗ್ರಹಿಸಿದ 17 ಮಾದರಿಗಳಲ್ಲಿ 8 ಮಾದರಿಗಳು ಅನೈರ್ಮಲ್ಯ ಸ್ಥಿತಿಯಲ್ಲಿ ಕಂಡುಬಂದಿವೆ. ಶವರ್ಮದ ಈ ಮಾದರಿಗಳಲ್ಲಿ ಅನಾರೋಗ್ಯಕರ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಕಂಡುಬಂದಿದೆ, ಇದು ತೀವ್ರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಸುರಕ್ಷತಾ ಮಾನದಂಡಗಳನ್ನು ಅನುಸರಿಸದ ರೆಸ್ಟೋರೆಂಟ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
“ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಪರಿಗಣಿಸಿ, ನಾವು ಎಲ್ಲಾ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಿದ್ದೇವೆ ಮತ್ತು ಪ್ರತಿದಿನ ಶವರ್ಮವನ್ನು ತಾಜಾವಾಗಿ ತಯಾರಿಸಲು ಮತ್ತು ಎಫ್‌ಎಸ್‌ಎಸ್‌ಎಐ ಕಾಯ್ದೆಯಡಿಯಲ್ಲಿ ತಮ್ಮ ಸಂಸ್ಥೆಗಳನ್ನು ನೋಂದಾಯಿಸಲು ಮತ್ತು ಪರವಾನಗಿಗಳನ್ನು ಪಡೆಯಲು ಅವರಿಗೆ ಸಲಹೆ ನೀಡಿದ್ದೇವೆ. ಎಫ್‌ಎಸ್‌ಎಸ್‌ಎಐ ಅಡಿಯಲ್ಲಿ ಪರವಾನಗಿ ಹೊಂದಿರುವ ಹೋಟೆಲ್‌ಗಳಿಂದ ಮಾತ್ರ ಶವರ್ಮ ಖರೀದಿಸಲು ಜನರಿಗೆ ಸಲಹೆ ನೀಡಲಾಗಿದೆ ಎಂದು ಎಫ್‌ಎಸ್‌ಎಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.