ELECTROL BONDS | ಸುಪ್ರೀಂ ನೇತೃತ್ವದಲ್ಲಿ ತನಿಖೆಗೆ ಮಲ್ಲಿಕಾರ್ಜುನ್ ಖರ್ಗೆ ಆಗ್ರಹ
ಕಾರ್ಯಕರ್ತರ ಮೂಲಕ ದೇಣಿಗೆ ಪಡೆದ ಕಾಂಗ್ರೆಸ್‌ನ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಲಾಗಿದೆ. ಆದರೆ, ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಸಾವಿರಾರು ಕೋಟಿ ರೂ. ಸಂಗ್ರಹಿಸಿದೆ ಎಂದು ಖರ್ಗೆ ಆರೋಪಿಸಿದ್ದಾರೆ.;
ಬೆಂಗಳೂರು: ಬಿಜೆಪಿಯು ಕಳೆದ ಐದು ವರ್ಷಗಳಲ್ಲಿ 6,060 ಕೋಟಿ ರೂಪಾಯಿಗಳನ್ನು ನಗದೀಕರಿಸಿರುವ ಚುನಾವಣಾ ಬಾಂಡ್ ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ವಿಶೇಷ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಒತ್ತಾಯಿಸಿದ್ದಾರೆ.
ತನಿಖೆ ಪೂರ್ಣಗೊಳ್ಳುವವರೆಗೆ ಬಿಜೆಪಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಕೇಂದ್ರೀಯ ಸಂಸ್ಥೆಗಳ ದಾಳಿಯನ್ನು ಎದುರಿಸಿದ ಕೆಲವೇ ದಿನಗಳಲ್ಲಿ ಹಲವಾರು ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ತನಿಖಾ ಸಂಸ್ಥೆಗಳನ್ನು ಬಳಸಿ ಕಂಪೆನಿಗಳನ್ನು ಬೆದರಿಸಲಾಗಿದೆ” ಎಂದು ಆರೋಪಿಸಿದರು.
ಕಾರ್ಯಕರ್ತರ ಮೂಲಕ ದೇಣಿಗೆ ಪಡೆದ ಕಾಂಗ್ರೆಸ್‌ನ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಲಾಗಿದೆ. ಆದರೆ, ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸಿದೆ ಎಂದು ಅವರು ಹೇಳಿದರು.
'ನಾ ಖಾವೂಂಗಾ, ನಾ ಖಾನೆ ದುಂಗಾ (ನಾನು ತಿನ್ನುವುದಿಲ್ಲ, ಇತರರನ್ನು ತಿನ್ನಲು ಬಿಡುವುದಿಲ್ಲ)' ಎಂದು ಪ್ರಧಾನಿ ಹೇಳುತ್ತಾರೆ, ಆದರೆ ಇಂದು ಬಿಜೆಪಿ ಚುನಾವಣಾ ಬಾಂಡ್‌ಗಳಿಂದ ಹಣ ಗಳಿಸಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಬಹಿರಂಗಪಡಿಸಿದೆ. ಎಸ್‌ಬಿಐ ಅಂಕಿಅಂಶಗಳು ಬಿಜೆಪಿಗೆ ಶೇ 50ರಷ್ಟು ದೇಣಿಗೆ ಹಾಗೂ ಕಾಂಗ್ರೆಸ್‌ಗೆ ಶೇ 11ರಷ್ಟು ದೇಣಿಗೆ ಬಂದಿದೆ ಸಿಕ್ಕಿದೆ ಎಂದು ತೋರಿಸುತ್ತದೆ ಎಂದು ಖರ್ಗೆ ಹೇಳಿದರು.
ಮತದಾನ ಪ್ರಮಾಣ ಗಮನಿಸಿದರೆ, ನಮಗೆ ಮೂರನೇ ಒಂದು ಪ್ರಮಾಣದಲ್ಲಿ ಮತದಾರರು ಮತ ಹಾಕಿದ್ದಾರೆ. ಬಿಜೆಪಿ ಸೇರಿದಂತೆ ಉಳಿದೆಲ್ಲಾ ಪಕ್ಷಗಳಿಗೆ ಮೂರನೇ ಎರಡು ಮತ ಬಂದಿದೆ. ಆದರೆ, ದೇಣಿಗೆಯಲ್ಲಿ ಬಿಜೆಪಿಗೆ 50% ಕ್ಕಿಂತ ಹೆಚ್ಚಿಗೆ ಬಂದಿದೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಅವರಿಗೆ ದೇಣಿಗೆ ಬರಲು ಹೇಗೆ ಸಾಧ್ಯ? ಬಂಡವಾಳ ಶಾಹಿಗಳು ಮತ್ತು ಉಳಿದ ಕಂಪೆನಿಗಳು ದೇಣಿಗೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.